ಬೆಂಗಳೂರಿನ ಹೇರೊಹಳ್ಳಿ ರಸ್ತೆಯಲ್ಲಿ ಭಾರೀ ಗುಂಡಿಗಳು ಇದ್ದರೂ ಬಿಬಿಎಂಪಿ ಅತ್ತ ತಲೆ ಹಾಕಿರಲಿಲ್ಲ. ಜನ ಆ ರಸ್ತೆಯಲ್ಲಿ ಸಂಚರಿಸಲು ತೀವ್ರ ಕಷ್ಟಪಡುತ್ತಿದ್ದರು. ಈಗ ಆ ರಸ್ತೆ ಒಂದೇ ದಿನದಲ್ಲಿ ರಿಪೇರಿಯಾಗುತ್ತಿದೆ. ಇದಕ್ಕೆ ಕಾರಣವೇನು ಎಂದು ಕೇಳಿದರೆ ನೀವು ಅಚ್ಚರಿ ಪಡುತ್ತೀರಿ.
ಈ ಕೆಟ್ಟ ರಸ್ತೆಯ ಕುರಿತು ಮೈಸೂರಿನ ಕಲಾವಿದ ಬಾದಲ್ ನಂಜುಂಡಸ್ವಾಮಿಯವರು ವಿಶೇಷ ವಿಡಿಯೊವೊಂದನ್ನು ಮಾಡಿದ್ದರು. ರಾತ್ರಿವೇಳೆ ಗಗನಯಾತ್ರಿಯೊಬ್ಬ ನಿಧಾನಕ್ಕೆ ಹೆಜ್ಜೆ ಇಡುತ್ತಾ ಬರುತ್ತಿರುವ ಅದನ್ನು ಬಹುತೇಕರು ಚಂದ್ರನಲ್ಲಿ/ಮಂಗಳ ಗ್ರಹದಲ್ಲಿ ಮನುಷ್ಯ ಕಾಲಿಟ್ಟ ಕ್ಷಣ ಎಂಬ ಶೀರ್ಷಿಕೆ ಕೊಟ್ಟಿದ್ದರು. ಮೊದಲ ನೋಟಕ್ಕೆ ಅದು ಬೇರೆ ಗ್ರಹದಂತೆಯೇ ಕಾಣುತ್ತಿತ್ತು. ನಂತರ ರಸ್ತೆಯಲ್ಲಿ ಆಟೋ ಮತ್ತು ಕಾರುಗಳು ಓಡಾಡಿದಾಗಲೇ ಅದು ಬೆಂಗಳೂರು ಎಂದು ಗೊತ್ತಾಗುತ್ತಿತ್ತು.

ಈ ವಿಡಂಬನಾತ್ಮಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾವಿರಾರು ಜನ ಇದನ್ನು ನೋಡಿ ಷೇರ್ ಮಾಡಿದ್ದರು. ಬಿಬಿಎಂಪಿಗೆ ಚೀಮಾರಿ ಸಹ ಹಾಕಿದ್ದರು. ಇದರಿಂದ ಕೂಡಲೇ ಎಚ್ಚುತ್ತಕೊಂಡ ಬಿಬಿಎಂಪಿ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆಯೇ ಜಿಸಿಬಿಯನ್ನು ಕಳಿಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಮತ್ತು ರಸ್ತೆಯನ್ನು ರಿಪೇರಿ ಮಾಡುವ ಕೆಲಸ ಮಾಡುತ್ತಿದೆ.
ಅಂದರೆ ಜಡವಾಗಿದ್ದ ಬಿಬಿಎಂಪಿ ಇಲಾಖೆಗೆ ಕಲಾವಿದ ಕೊಟ್ಟ ಛಾಟಿ ಏಟು ಸರಿಯಾಗಿಯೇ ತಾಗಿದೆ. ಹಾಗಾಗಿ ಕೆಲಸ ಬೇಗ ಆಗುತ್ತಿದೆ. ಅಂದರೆ ಕಲಾವಿದನೊಬ್ಬನ ಸೃಜನಶೀಲತೆ ಎಷ್ಟರಮಟ್ಟಿಗೆ ಪರಿಣಾಮಬೀರಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.


