ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸರ್ಕಾರಿ ಬಾಲಕಿಯರ ಶಾಲೆಯ ಶಿಕ್ಷಕರೊಬ್ಬರು ತರಗತಿಯೊಳಗೆ ಬಲವಂತವಾಗಿ ಹಿಜಾಬ್ ತೆಗೆದು ಹರಿದಿದ್ದಾರೆ ಎಂದು ವಿದ್ಯಾರ್ಥಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಳು. ಆ ದೂರಿನ ಮೇಲೆ ಮಂಗಳವಾರ ಶಿಕ್ಷಕನನ್ನು ಬಂಧಿಸಲಾಗಿದೆ.
ಶಿರಸ್ತ್ರಾಣವನ್ನು ಧರಿಸಿದ್ದಕ್ಕಾಗಿ ಈ ಶಿಕ್ಷಕನು ತನ್ನನ್ನು ಮತ್ತು ಇತರ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
ಶಿಕ್ಷಕನು ಪದೇ ಪದೇ ಕಿರುಕುಳ ನೀಡುತ್ತಿರುವ ಬಗ್ಗೆ ಶಾಲೆಯ ಪ್ರಾಚಾರ್ಯರು ಮತ್ತು ಇತರ ಬೋಧಕ ಸಿಬ್ಬಂದಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾಗಿ ವಿದ್ಯಾರ್ಥಿನಿ ಸ್ಪಷ್ಟಪಡಿಸಿದ್ದಾರೆ.
ಈ ಸಮಸ್ಯೆಯ ಬಗ್ಗೆ ಆಕೆ ತನ್ನ ಪೋಷಕರೊಂದಿಗೆ ಚರ್ಚಿಸಿದ್ದಾಳೆ. ಈ ಸಮಸ್ಯೆ ಬಗೆಹರಿಸುವ ಸಲುವಾಗಿ ತಾಯಿ ಶಾಲೆಗೆ ಭೇಟಿ ನೀಡಿದ ವೇಳೆ ನಡೆದ ಘಟನೆಯನ್ನು ವಿದ್ಯರ್ಥಿನಿಯು ವಿವರಿಸಿದ್ದಾಳೆ.
”ಶಿಕ್ಷಕ ಉದ್ದೇಶಪೂರ್ವಕವಾಗಿಯೇ ಜಗಳ ಮಾಡಿದ್ದಾರೆ. ಶಾಲೆಯ ಆವರಣದಲ್ಲಿ ನನ್ನ ತಾಯಿ ಕಾಣಿಸಿಕೊಂಡಿದ್ದನ್ನು ಪ್ರಶ್ನಿಸಿದ್ದಲ್ಲದೇ ಏರುಧ್ವನಿಯಲ್ಲಿ ಮಾತನಾಡಿದ್ದಾರೆ” ಎಂದು ಆರೋಪಿಸಲಾಗಿದೆ.
ಈ ದೂರಿನ ಹಿನ್ನೆಲೆಯಲ್ಲಿ ಶಿಕ್ಷಕನ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 354 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 9/10ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಹಮಾಸ್‌ನ ವಿತ್ತ ಸಚಿವರನ್ನು ಹತ್ಯೆ ಮಾಡಿದ್ದೇವೆ: ಇಸ್ರೇಲ್ ಹೇಳಿಕೆ


