2010ರಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪದ ಮೇಲೆ ಲೇಖಕಿ ಅರುಂಧತಿ ರಾಯ್ ಮತ್ತು ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಶೇಖ್ ಶೋಕತ್ ಹುಸೇನ್ ಅವರನ್ನು ವಿಚಾರಣೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮಂಗಳವಾರ ಅನುಮತಿ ನೀಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ರಾಯ್ ಮತ್ತು ಹುಸೇನ್ ವಿರುದ್ಧ ಐಪಿಸಿ ಸೆಕ್ಷನ್ 153A, 153B ಮತ್ತು 505 ರ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಸೆಕ್ಷನ್ 153A ಎಂದರೆ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪೂರ್ವಾಗ್ರಹ ಪಡಿಸುವ ಕಾರ್ಯಗಳನ್ನು ಮಾಡುವುದಾಗಿದೆ. ಸೆಕ್ಷನ್ 153B ಎಂದರೆ ಆಪಾದನೆಗಳು, ರಾಷ್ಟ್ರೀಯ-ಏಕೀಕರಣಕ್ಕೆ ಪ್ರತಿಕೂಲವಾದ ಪ್ರತಿಪಾದನೆಗಳನ್ನೊಳಗೊಂಡಿದೆ. ಸೆಕ್ಷನ್ 505 ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ವ್ಯವಹರಿಸುತ್ತದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 196ರ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಇದು ದ್ವೇಷ ಭಾಷಣ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ, ದ್ವೇಷದ ಅಪರಾಧಗಳು, ದೇಶದ್ರೋಹ, ಮತ್ತು ದ್ವೇಷವನ್ನು ಉತ್ತೇಜಿಸುವ ಅಪರಾಧಗಳಲ್ಲಿ ಕಾನೂನು ಕ್ರಮ ಜರುಗಿಸುವ ಪ್ರಕರಣವಾಗಿದೆ.
ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಎಂದು ಗುರುತಿಸಲಾದ ಸುಶೀಲ್ ಪಂಡಿತ್ ಅವರು ಅಕ್ಟೋಬರ್ 28, 2010 ರಂದು ಸಲ್ಲಿಸಿದ ದೂರಿನ ಆಧಾರದ ಮೇಲೆ ರಾಯ್ ಮತ್ತು ಹುಸೇನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 21, 2010 ರಂದು ”ಆಜಾದಿ – ಏಕೈಕ ಮಾರ್ಗ” ಎಂಬ ಬ್ಯಾನರ್ ಅಡಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ವಿವಿಧ ಭಾಷಣಕಾರರು ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂದು ಪಂಡಿತ್ ಆರೋಪಿಸಿದ್ದಾರೆ.
ಈ ಸಮಾವೇಶದಲ್ಲಿ ”ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸುವ ಬಗ್ಗೆ ಚರ್ಚಿಸಲಾಗಿದೆ, ಇದು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರಬಹುದು” ಎಂದು ಅವರು ಆರೋಪಿಸಿದ್ದಾರೆ.
”ಕಾಶ್ಮೀರವು ಎಂದಿಗೂ ಭಾರತದ ಭಾಗವಾಗಿರಲಿಲ್ಲ, ಅದು ಭಾರತೀಯ ಸೇನೆಯಿಂದ ಬಲವಂತವಾಗಿ ಆಕ್ರಮಿಸಿಕೊಂಡಿದೆ ಮತ್ತು ಭಾರತದಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಸ್ವತಂತ್ರಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು” ಎಂದು ರಾಯ್ ಹೇಳಿರುವುದಾಗಿ ಪಂಡಿತ್ ದೂರಿದ್ದಾರೆ.
ಅವರ ದೂರಿನಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಶಾ ಗಿಲಾನಿ ಮತ್ತು ದೆಹಲಿ ವಿಶ್ವವಿದ್ಯಾಲಯದ ಉಪನ್ಯಾಸಕ ಸೈಯದ್ ಅಬ್ದುಲ್ ರಹಮಾನ್ ಗಿಲಾನಿ ಅವರ ಹೆಸರೂ ಇದೆ, ಅವರು ಇಬ್ಬರೂ ಇದೀಗ ಜೀವಂತವಾಗಿಲ್ಲ.
ರಾಯ್ ಮತ್ತು ಹುಸೇನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಸೆಕ್ಷನ್ 13 ರ ಅಡಿಯಲ್ಲಿ ದೆಹಲಿ ಪೊಲೀಸರು ಅನುಮತಿ ಕೋರಿದ್ದಾರೆ. ಆದರೆ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಯ ಹಿಜಾಬ್ ಹರಿದು ಹಾಕಿದ್ದ ಶಿಕ್ಷಕನ ಬಂಧನ


