ರಾಜಸ್ಥಾನದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಕೇವಲ 48 ಗಂಟೆಗಳಲ್ಲಿ ಸಿ-ವಿಜಿಲ್ ಆ್ಯಪ್‌ನಲ್ಲಿ 500ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಗಳು 134 ದೂರುಗಳನ್ನು ಸತ್ಯವೆಂದು ಕಂಡು ಹಿಡಿದಿದ್ದು, ನಿಗದಿತ ಸಮಯದಲ್ಲಿ ಕ್ರಮ ಕೈಗೊಂಡಿದ್ದಾರೆ. 115 ದೂರುಗಳನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದು, 6 ದೂರುಗಳು ಪರಿಶೀಲನೆಗೆ ಬಾಕಿ ಉಳಿದಿವೆ ಎಂದು ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.
ಉಳಿದ 242 ದೂರುಗಳನ್ನು ಜಿಲ್ಲಾ ನಿಯಂತ್ರಣ ಕೊಠಡಿಯು ತಿರಸ್ಕರಿಸಿದೆ. ಜೈಪುರ ಜಿಲ್ಲೆಯಿಂದ ಗರಿಷ್ಠ ಎಂದರೆ 79 ದೂರುಗಳು ಬಂದಿವೆ. ಸಿ-ವಿಜಿಲ್ ಅಪ್ಲಿಕೇಶನ್‌ನಲ್ಲಿ ದೂರು ಸ್ವೀಕರಿಸಿದ 100 ನಿಮಿಷಗಳಲ್ಲಿ ದೂರುಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಗುಪ್ತಾ ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ರಾಜಸ್ಥಾನ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಬುಧವಾರ ಬದಲಿಸಿತ್ತು. ಮೊದಲು ನಿಗದಿಪಡಿಸಿದ ದಿನಕ್ಕಿಂತ ಎರಡು ದಿನ ತಡವಾಗಿ ಚುನಾವಣೆ ನಡೆಸಲು ನಿರ್ಧರಿಸಿದೆ.
ನವೆಂಬರ್ 23ರಂದು ರಾಜಸ್ಥಾನ ವಿಧಾನಸಭೆ ಚುನಾವಣೆಗೆ ದಿನ ನಿಗದಿಪಡಿಸಲಾಗಿತ್ತು. ಆದರೆ ಆ ದಿನ ವ್ಯಾಪಕ ಮದುವೆ ಸಮಾರಂಭಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಆಯೋಜನೆಯಾಗಿರುವುದರಿಂದ ನವೆಂಬರ್ 25ಕ್ಕೆ ಮತದಾನ ಮುಂದೂಡಲಾಗಿದೆ.
ಮಂಗಳವಾರ ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ಚುನಾವಣಾಗೆ ದಿನಾಂಕ ಘೋಷಣೆ ಮಾಡಿತ್ತು. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಡ ಮತ್ತು ಮಿಜೋರಾಮ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದೆ.
ಇದನ್ನು ಓದಿ: ಬಿಹಾರ: ಹಳಿ ತಪ್ಪಿದ ನಾರ್ತ್ ಈಸ್ಟ್ ಸೂಪರ್‌ಫಾಸ್ಟ್ ರೈಲು: ನಾಲ್ವರು ಸಾವು, 100 ಮಂದಿಗೆ ಗಾಯ


