Homeಚಳವಳಿವಿಮಲಮ್ಮನವರ ಕಣ್ಣಲ್ಲಿ ಪತಿ ಗದ್ದರ್

ವಿಮಲಮ್ಮನವರ ಕಣ್ಣಲ್ಲಿ ಪತಿ ಗದ್ದರ್

- Advertisement -
- Advertisement -

ಒಳ್ಳೆಯ ಮನುಷ್ಯ

ಪಾರ್ಟಿಯಿಂದ ಸಸ್ಪೆಂಡ್ ಮಾಡಿದ ನಂತರ ಗದ್ದರ್ ತುಂಬಾ ನೊಂದುಕೊಂಡರು. ಪಕ್ಷ ಆತನನ್ನು ಅರ್ಥಮಾಡಿಕೊಳ್ಳಲಿಲ್ಲ. ಪಕ್ಷದ ವಿಷಯದಲ್ಲಿ ಸುಮ್ಮನೆ ನೊಂದುಕೊಳ್ಳುತ್ತಿದ್ದರೆ, “ಏಕೆ ನೊಂದುಕೊಳ್ಳುತ್ತಿರುವೆ? ರಾಜೀನಾಮೆ ಕೊಟ್ಟುಬಿಡು” ಎಂದು ಹೇಳಿದರೂ, ಆನಂತರ ಆತ ರಾಜೀನಾಮೆ ಕೊಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗೆ ಆತನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅಂತಹ ಒಳ್ಳೆಯ ಮನುಷ್ಯನೊಂದಿಗೆ ಕೂಡಿ ಬಾಳಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ.

ಆತನ ಹಾಡಿಗೆ ಆಕೆ ರಾಗ. ಆತನ ಧ್ವನಿಗೆ ಆಕೆಯೇ ಜೀವ, “ಪ್ರಜಾಯುದ್ಧನೌಕೆ”ಯಾಗಿ ಜನರ ಹೃದಯದಲ್ಲಿ ಜಯಕೇತನವಾಗಿ ಹಾರಾಡುವುದರಲ್ಲಿ ಆಕೆಯ ತ್ಯಾಗ ಅಮೂಲ್ಯವಾದುದು. ಪ್ರಜಾಗಾಯಕ ಗದ್ದರ್ ಜೀವನ ಸಂಗಾತಿ ವಿಮಲರೊಂದಿಗೆ “ನವ್ಯ” ಮಾಡಿದ ಸಂಭಾಷಣೆ ಇದು.

“ಕೆಲವು ಲಕ್ಷ ಜನರ ಅಭಿಮಾನ ಸಂಪಾದಿಸಿ ಗದ್ದರ್ ನಮಗೆ ಕೊಟ್ಟು ಹೋಗಿದ್ದಾರೆ. ಮನುಷ್ಯ ಸತ್ತ ನಂತರ ಆತನ ಬೆಲೆ ಗೊತ್ತಾಗುವುದೆಂದು ಹೇಳುವರಲ್ಲವೇ! ಆ ರೀತಿ ಅವರ ಅಂತಿಮ ಯಾತ್ರೆಗೆ ಧಾವಿಸಿ ಬಂದ ಜನಸಾಗರವನ್ನು ನೋಡಿದ ನಂತರ ಯಾರಿಗಾಗಿ ಇಷ್ಟು ವರ್ಷ ಹೋರಾಡಿದನೋ, ಅವರಿಗಾಗಿ ಇನ್ನೂ ಕೆಲವು ದಿನ ಬದುಕಿದ್ದರೆ ಚೆನ್ನಾಗಿರುತ್ತಿತ್ತು” ಎಂದು ಅನಿಸಿದೆ. ಆಸ್ಪತ್ರೆಯಿಂದ ಗುಣಮುಖನಾಗಿ ಬಂದ ಮೇಲೆ ಒಂದು ತಿಂಗಳು ವಿಶ್ರಾಂತಿ ಪಡೆಯುವೆ, ಆ ನಂತರ “ಕಾರ್ಯಕ್ರಮಗಳಿಗೆ ಹೋಗುವೆ” ಎಂದರು. ಆಸ್ಪತ್ರೆಗೆ ಹೋಗುವುದಕ್ಕಿಂತ ಮೊದಲು ಏಕೋ ಹೋಗಲು ಇಷ್ಟವಾಗುವುದಿಲ್ಲವೆಂದನು. ಹೋಗಲಿ ಎರಡು ದಿನಗಳ ನಂತರ ಹೋಗು ಎಂದೆ. ಆದರೂ ಮನಸ್ಸಿಲ್ಲದೆ ಎಲ್ಲಾ ವಸ್ತುಗಳನ್ನು ಕಾರಿನಲ್ಲಿಟ್ಟರು. ಚಿಕ್ಕ ಮಗನ ಫೋಟೊಗೆ ಮುತ್ತುಕೊಟ್ಟು ಹೋಗಿಬಿಟ್ಟ. ಆ ನಂತರ ಆಸ್ಪತ್ರೆಯಲ್ಲಿಯೂ ನಮ್ಮ ಅಳಿಯನೊಂದಿಗೆ ಹಾಸ್ಯ ಚಟಾಕಿ ಹಾರಿಸುತ್ತಾ, ನಗುತ್ತಾ ಚೆನ್ನಾಗಿಯೇ ಇದ್ದರು. ಸರ್ಜರಿಯ ನಂತರ ಐಸಿಯುನಲ್ಲಿಯೂ ವೈದ್ಯರೊಂದಿಗೆ, ನರ್ಸ್‌ಗಳೊಂದಿಗೆ ಮಾತನಾಡುತ್ತ, ನನ್ನನ್ನು ತೋರಿಸಿ “ಆಕೆ ಇರುವುದರಿಂದಲೇ ಐವತ್ತು ವರ್ಷ ಬದುಕಿದ್ದೇನೆ” ಎಂದು ಹೇಳುತ್ತಿದ್ದರೆ, ನಾನು “ಹಾಗೆ ಹೇಳಬೇಡಿ” ಎನ್ನುತ್ತಿದ್ದೆ. ನಿಮ್ಸ್ ವೈದ್ಯರನ್ನು ಪರಿಚಯ ಮಾಡಿಕೊಂಡ. ವೈದ್ಯರ ಮೇಲೆ, ನರ್ಸಗಳ ಮೇಲೆ ಹಾಡುತ್ತಾ, ನಗುತ್ತಾ, ನಗಿಸುತ್ತ “ನನಗೇನೂ ಆಗುವುದಿಲ್ಲ ಡೋಂಟ್ ವರಿ… ನಾನು ಚೆನ್ನಾಗಿದ್ದೇನೆ” ಎಂದೂ ಸಹ ಹೇಳಿದ. ಅಂತಹುದರಲ್ಲಿ ಇನ್ನು ಮೇಲೆ ವಾಪಸು ಬರುವುದಿಲ್ಲವೆಂಬುದನ್ನು ನೆನಪಿಸಿಕೊಂಡಾಗ ದುಃಖ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಮದುವೆಗೆ ಮುಂಚೆಯೇ ಕೇಳಿದರು…

ನಾನು ಹುಟ್ಟಿ ಬೆಳೆದದ್ದೆಲ್ಲಾ ಹೈದರಾಬಾದಿನ ಕಾಚಿಗೊಡದಲ್ಲಿಯೇ. ನಮ್ಮದು ಕಡುಬಡವ ಕುಟುಂಬ. ನಾವು ನಾಲ್ಕು ಜನ ಅಕ್ಕತಂಗಿಯರು. ನಮ್ಮ ತಂದೆ ರಾಜಲಿಂಗಂ ಕಟ್ಟಡ ಕೆಲಸದ ಮೇಸ್ತ್ರಿ. ನನ್ನ ಎರಡನೆಯ ಅಕ್ಕನಿಗೆ ಮಾವನಾದ ರಾಮಸ್ವಾಮಿಯ ಮೂಲಕ ಗದ್ದರ್‌ನೊಂದಿಗೆ ನನ್ನ ಮದುವೆ ನಿಶ್ಚಯವಾಯಿತು. “ನಾನು ಕಮ್ಯುನಿಸ್ಟ್ ಪಾರ್ಟಿಯೊಳಗೆ ಹೋಗುವುದು ನಿನಗೆ ಸಮ್ಮತವೇ” ಎಂದು ಅವರು ನನ್ನನ್ನು ಕೇಳಿದರು. “ನನಗೆ ಒಪ್ಪಿಗೆ” ಎಂದೆ. ಮುಹೂರ್ತಗಳು, ಲಗ್ನಪತ್ರಿಕೆಯಂತವುಗಳು ಯಾವುವು ಇಲ್ಲದೆ, ಎರಡು ಕುಟುಂಬಗಳ ಹಿರಿಯರ ಸಮಕ್ಷಮದಲ್ಲಿ, ಹಿಮಾಯತನಗರದ ಹನುಮನ ದೇವಸ್ಥಾನದ ಆವರಣದಲ್ಲಿ 1975 ನವಂಬರ್ 9 ರಂದು ಒಬ್ಬರಿಗೊಬ್ಬರು ಹಾರಗಳನ್ನು ಬದಲಾಯಿಸಿಕೊಂಡು ಒಂದಾದೆವು. ಮದುವೆಗೆ ಗದ್ದರ್ ಹೊಸ ಬಟ್ಟೆಗಳನ್ನು ಸಹ ಕೊಂಡುಕೊಳ್ಳಲಿಲ್ಲ. ಅದನ್ನು ಗಮನಿಸಿದ ನಮ್ಮ ತಾತ ಒಮ್ಮಿಂದೊಮ್ಮೆಲೆ ತನ್ನ ಗಾಂಧಿ ಟೋಪಿಯನ್ನು ತೆಗೆದು ಅವರ ತಲೆಯ ಮೇಲಿಟ್ಟ. ನಮ್ಮನ್ನು ಆಶೀರ್ವದಿಸಲು ಬಂದ ಅತಿಥಿಗಳಿಗೆ ಚಹಾ, ಬಿಸ್ಕೆಟ್‌ಗಳನ್ನು ಕೊಟ್ಟೆವು. ಈ ರೀತಿ ನಮ್ಮ ಮದುವೆಗಾದ ಖರ್ಚು 40 ರೂಪಾಯಿಗಳಿಗಿಂತ ಕಡಿಮೆ. ಅದಕ್ಕಿಂತ ಮೂರು ದಿನಗಳ ಮೊದಲು ಕೆನರಾ ಬ್ಯಾಂಕಿನಲ್ಲಿ ಕ್ಲರ್ಕ್ ಆಗಿ ಸೇರಲು ಆಜ್ಞೆ ಬಂದಿತ್ತು. ಆ ವಿಷಯವನ್ನು ನನ್ನ ಬಂಧುಗಳಿಗೆ ತಿಳಿಸಿದರೆ “ಹಾಡುಗಳನ್ನು ಹಾಡುತ್ತಾ ತಿರುಗುವ ನಿನಗೆ ನೌಕರಿ ಯಾವಾಗ ದೊರೆಯಿತು” ಎಂದು ಎಲ್ಲರೂ ನಕ್ಕರು.

 

ಚಿಕ್ಕ ಕೋಣೆಯಲ್ಲಿ ಸಂಸಾರ…

ಮದುವೆಯ ನಂತರ ನಮ್ಮ ನಾದಿನಿಯ ಮನೆಯಲ್ಲಿ ಎರಡು ದಿನ ಇದ್ದೆವು. ಆನಂತರ ನೌಕರಿ ಮಾಡುವ ಸ್ಥಳಕ್ಕೆ ಹತ್ತಿರದಲ್ಲಿರಬೇಕೆಂದು ಮಾರೆಡುಪಲ್ಲಿಯಲ್ಲಿ ಚಿಕ್ಕ ಕೋಣೆಯನ್ನು ಬಾಡಿಗೆಗೆ ಪಡೆದುಕೊಂಡೆವು. ಅದು ಮೆಟ್ಟಿಲುಗಳ ಕೆಳಗೆ ಇತ್ತು. ಅದರಲ್ಲಿಯೇ ನಮ್ಮ ಸಂಸಾರ ಜೀವನ ಆರಂಭವಾಯಿತು. ಆಗ ನಮ್ಮಲ್ಲಿದ್ದ ಸಾಮಾನುಗಳೆಂದರೆ ಒಂದು ಚಾಪೆ, ಸೀಮೆ ಎಣ್ಣೆ ಸ್ಟವ್, ಎರಡು ಅಡುಗೆ ಪಾತ್ರೆಗಳು ಅಷ್ಟೇ, ಆಗಲೇ ನಾನು ಎರ್ರಗಡ್ಡ ಮೀಟರು ಕಾರ್ಖಾನೆಯಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದೆ. ಆಗ ನನ್ನ ಸಂಬಳ ಹನ್ನೆರಡು ರೂಪಾಯಿಗಳು. ನಾನು ಓದಿದ್ದು ಎಂಟನೆಯ ತರಗತಿಯವರೆಗೆ. ಬಡತನದ ಕಾರಣದಿಂದ ನನ್ನ 16ನೆಯ ವಯಸ್ಸಿಗೆ ಆ ಕಾರ್ಖಾನೆ ನೌಕರಿಗೆ ಸೇರಿದೆ. ಗದ್ದರ್ ಮೇಲೆ ಕೊಲೆ ಪ್ರಯತ್ನ ನಡೆದ ನಂತರ ನಾನು ವಿ.ಆರ್.ಎಸ್ ತೆಗೆದುಕೊಂಡೆ.

ತುಂಬು ಗರ್ಭಿಣಿಯಾಗಿದ್ದಾಗ…

ಎಮರ್ಜೆನ್ಸಿ ಸಮಯದಲ್ಲಿ ಒಂದು ದಿನ ಹಠಾತ್ತಾಗಿ ಗದ್ದರನ್ನು ಬಂಧಿಸಿ ತೆಗೆದುಕೊಂಡು ಹೋದರು. ಆದರೆ ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆಂಬುದು ಯಾರಿಗೂ ಗೊತ್ತಾಗಲಿಲ್ಲ. ಆಗ ನನ್ನ ದೊಡ್ಡ ಮಗ ಸೂರ್ಯ ಗರ್ಭದಲ್ಲಿದ್ದ. ತುಂಬು ಗರ್ಭಿಣಿ ನಾನು. ಆ ಸಂದರ್ಭದಲ್ಲಿ ಏನು ಮಾಡಬೇಕೆಂದು ತೋಚದೆ, ನಮ್ಮ ಕುಟುಂಬಕ್ಕೆ ಅತ್ಯಂತ ಆಪ್ತನಾದ ಜೆ.ಬಿ ರಾಜು ಅವರಲ್ಲಿಗೆ ಹೋಗಿ ನಡೆದ ಘಟನೆಯನ್ನು ತಿಳಿಸಿದೆ. ಆತನ ಸೂಚನೆಯ ಮೇರೆಗೆ ಐ.ಪಿ.ಎಸ್ ಅಧಿಕಾರಿ ಆಂಜನೇಯರೆಡ್ಡಿಯನ್ನು, ಆಗ ನಮ್ಮ ಶಾಸಕರಾಗಿದ್ದ ಸೈದುಲನ್ನು ಭೇಟಿಯಾಗಿ ನನ್ನ ಗಂಡನನ್ನು ಬಿಡುಗಡೆ ಮಾಡಿಸಬೇಕೆಂದು ಬೇಡಿಕೊಂಡೆ. ಅಲ್ಲಿಯತನಕ ಜನರು ಗದ್ದರ್ ಅಜ್ಞಾತವಾಗಿ ಹೋಗಿದ್ದಾನೆಂದು ಹೇಳುತ್ತಿದ್ದರು. ಅವರೊಂದಿಗೆ ನಾನು ಭೇಟಿಯಾದ ನಂತರ ಆಂಜನೇಯರೆಡ್ಡಿಯವರು ಅಂದಿನ ಸರಕಾರದ ಹಿರಿಯರ ಮೇಲೆ ಒತ್ತಡ ಹಾಕಿ ಹತ್ತು ದಿನಗಳಲ್ಲಿ ಗದ್ದರ್‌ನ್ನು ಬಿಡುಗಡೆ ಮಾಡಿದರು. ಅದಕ್ಕಿಂತ ಎರಡು ದಿನ ಮೊದಲು ನನಗೆ ಹೆರಿಗೆಯಾಯಿತು. ಆಸ್ಪತ್ರೆಯಿಂದ ನೇರವಾಗಿ ಅವರ ಹತ್ತಿರ ಹೋಗಿ ಕೈಯಲ್ಲಿ ಮಗುವನ್ನಿಟ್ಟೆನು. ಆಗಲೇ ಅವರ ಮೇಲೆ ಥರ್ಡ್ ಡಿಗ್ರಿ ಪ್ರಯೋಗಿಸಿದ್ದರಂತೆ. ನಾನು ಹೋಗುವುದು ಒಂದು ದಿನ ತಡವಾಗಿದ್ದರೂ, ಆತನನ್ನು ಎನ್‌ಕೌಂಟರ್ ಮಾಡುತ್ತಿದ್ದರೆಂದು ಗದ್ದರ್ ಹೇಳುತ್ತಿದ್ದಾಗ ಕೇಳಿಸಿಕೊಂಡಿದ್ದೇನೆ.

ನನ್ನ ಮೇಲೆ ದಾಳಿ…

ಕೆಲವು ದಿನಗಳ ನಂತರ ಗದ್ದರ್ ಕೆನರಾ ಬ್ಯಾಂಕ್ ನೌಕರಿಗೆ ರಾಜೀನಾಮೆ ನೀಡಿದ. ಆಗ ಫಿರೋಜಗುಡ ಹತ್ತಿರ ಒಂದು ಚಿಕ್ಕ ಗುಡಿಸಲಿನಲ್ಲಿ ಸ್ವಲ್ಪ ದಿನ ಇದ್ದೆವು. ಅಲ್ಲಿದ್ದ ಸರಕಾರಿ ಸ್ಥಳದಲ್ಲಿ ಕೇರಿಯ ಜನರೆಲ್ಲಾ ಸೇರಿ ಮಕ್ಕಳಿಗೆ ಉಚಿತ ಪಾಠಶಾಲೆ ನಡೆಸಲು ಮುಂದಾಗಿದ್ದರು. ಅದನ್ನು ಗೂಂಡಾಗಳು ಕಬ್ಜಾ ಮಾಡಿಕೊಂಡರು. “ಇದೇನು ಮಾಡುತ್ತಿದ್ದೀರಿ” ಎಂದು ಕೇರಿಯ ನಿವಾಸಿಗಳು ಪ್ರಶ್ನೆ ಮಾಡಿದಾಗ, ಆ ಕೇರಿಯವರ ಮೇಲೆಯೇ ದಾಳಿ ನಡೆಸಿದರು. ಆಗ ಅವರೆಲ್ಲಾ ಸೇರಿ ಗದ್ದರ್‌ಗೆ ಹೇಳಿದರೆ, ಆತನು ಹೋಗಿ ಅವರೊಂದಿಗೆ ಹೊಡೆದಾಡಿದನು. ಆ ಸಿಟ್ಟಿನಿಂದ ಒಂದು ದಿನ ಅವರೆಲ್ಲ ಗುಂಪುಗೂಡಿ ನನ್ನ ಗುಡಿಸಲಿನ ಕಡೆಗೆ ಬಂದರು. ಅವರೊಂದಿಗೆ ಬಂದ ಕೆಲವು ಹೆಣ್ಣುಮಕ್ಕಳು, ತಡಿಕೆಗಳಿಂದ ಕಟ್ಟಿದ ಸ್ನಾನದ ಕೋಣೆಯಲ್ಲಿದ್ದ ನನ್ನನ್ನು ಕೂದಲು ಹಿಡಿದು ಎಳೆದುಕೊಂಡು ಬಂದು, ನೆಲದ ಮೇಲೆ ತಳ್ಳಿ ಹೊಡೆದರು. ಅಡ್ಡ ಬಂದ ಮೂರು ವರ್ಷದ ಸೂರ್ಯನನ್ನೂ ಸಹ ಹೊಡೆದರು. ಅಲ್ಲಿಗೆ ಬಿಡದೆ ಗುಡಿಸಲಿಗೆ ಬೆಂಕಿ ಹಚ್ಚಲು ಮುಂದಾದಾಗ, ಅಕ್ಕಪಕ್ಕದ ಜನರೆಲ್ಲಾ ಸೇರಿ ಅವರನ್ನು ತಡೆದರು. ಇನ್ನು ಆ ಸ್ಥಳದಲ್ಲಿರುವುದು ನಮ್ಮ ಪ್ರಾಣಕ್ಕೆ ಅಪಾಯಕಾರಿಯೆಂದು ತಿಳಿದು ಅಲ್ವಾಲ ವೆಂಕಟಾಪುರದ ಬಾಡಿಗೆ ಮನೆಯಲ್ಲಿ ಬಹಳ ವರ್ಷಗಳವರೆಗೆ ಇದ್ದೆವು. ಆ ನಂತರ ನನ್ನ ಪಿ.ಎಫ್ ಹಣದಿಂದ ಮನೆ ಕಟ್ಟಿಕೊಂಡೆವು. ಅದಕ್ಕೂ ಹೆಚ್ಚಿನ ಆಸ್ತಿಪಾಸ್ತಿಗಳು ನಮಗೇನೂ ಇರಲಿಲ್ಲ.

ಸಿ.ಐ.ಡಿ ದಾಳಿಗಳು…

ಅವರು ಅಜ್ಞಾತದಲ್ಲಿದ್ದಾಗ ಮೂರು ಸಲ ಸಿ.ಐ.ಡಿ ಅಧಿಕಾರಿಗಳು ಮನೆಯ ಮೇಲೆ ದಾಳಿ ಮಾಡಿದರು. ಆಗ, ನಾನು ನನ್ನ ಮಗಳೂ ವೆನ್ನೆಲ ಇರುತ್ತಿದ್ದೆವು. ಒಂದು ದಿನ ಮಾತ್ರ ಅರ್ಧ ರಾತ್ರಿ 12.00 ಗಂಟೆಗೆ ಆರು ಜನ ಪೊಲೀಸರು ಬಂದು ಮಲಗಿರುವ ಮಗಳನ್ನು ದಾಟುತ್ತಾ ಹೋಗಿ ಮನೆಯೆಲ್ಲಾ ಹುಡುಕಾಡಿದರು. ಸಾಮಾನುಗಳೆಲ್ಲವನ್ನು ಮನ ಬಂದಂತೆ ದಿಕ್ಕಾಪಾಲಾಗಿ ಬಿಸಾಡಿದರು. ಆ ರೀತಿ ರಾತ್ರಿ 3.00 ಗಂಟೆಯವರೆಗೆ ಹಿಂಸೆ ನೀಡಿದರು. ಅಲ್ಲಿಗೆ ನಿಲ್ಲದೆ “ವಿಪ್ಲವ ರಾಜಕೀಯಗಳನ್ನು ಬಿಟ್ಟುಕೊಡು ಎಂದು ನೀನಾದರೂ ನಿನ್ನ ಗಂಡನಿಗೆ ಹೇಳಬಾರದೆ?” ಎಂದು ನನ್ನನ್ನು ನಿಷ್ಠುರವಾಗಿ ಕೇಳಿದರು. ಆಗ ನಾನು ಹೇಳಿದೆ “ಅವರವರ ಹುಚ್ಚು ಅವರಿಗೇ ಆನಂದ, ನಾನು ಹೇಳಿದರೆ ಕೇಳುವರೇ?” ಅದನ್ನು ಕೇಳಿ ಅವರು ಕಂಗಾಲಾದರು. ಮತ್ತೊಬ್ಬ ಪ್ರತಿದಿನ ಮುಂಜಾನೆ ನನ್ನ ಮನೆಯ ಹತ್ತಿರವಿದ್ದ ಬಸ್‌ಸ್ಟಾಪ್‌ನಿಂದ ಪ್ರಾರಂಭಿಸಿ ಎರ್ರಗಡ್ಡ ಮೀಟರು ಕಾರ್ಖಾನೆಯವರೆಗೆ ನಾಲ್ಕು ವರ್ಷಗಳವರೆಗೆ ಹಿಂಬಾಲಿಸುತ್ತಿದ್ದ. ಕೊನೆಗೆ ನನಗೆ ಕೋಪ ಬಂದು “ನೀನ್ಯಾರು” ಎಂದು ಪ್ರಶ್ನಿಸಿದೆ. ಆತನ ಹೆಸರು ಬಾಲರಾಜು, ಸಿ.ಐ.ಡಿ ಪೊಲೀಸ್ ಎಂದು ಆಗ ಗೊತ್ತಾಯಿತು. ಈ ರೀತಿ ಒಂದಾ.. ಎರಡಾ… ನರಕವನ್ನೇ ಅನುಭವಿಸಿದೆ.

ನನಗೆ ಇಷ್ಟವಾದ ಹಾಡು

ಆತನು ಏನು ಹಾಡುತ್ತಿದ್ದನೋ, ಏನು ಬರೆಯುತ್ತಿದ್ದನೋ ನನಗೆ ಗೊತ್ತಿಲ್ಲ. “ನೀನು ಎಲ್ಲಿಗೆ ಹೋಗುತ್ತಿರುವೆ? ಯಾವಾಗ ಬರುತ್ತೀಯಾ?” ಎಂದು ಒಮ್ಮೆಯೂ ಕೂಡ ಕೇಳಿದ ನೆನಪು ನನಗಿಲ್ಲ. ಹಾಗೆ ಹೋಗಬಾರದೆಂದೂ ಸಹ ಅನ್ನಲಿಲ್ಲ. ಆತನು ಏನಾದರೂ ಗಂಭೀರವಾದ ಕೆಲಸದಲ್ಲಿದ್ದರೆ, ಆತನ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಆತನಿಗೆ ತೊಂದರೆಯಾಗುವುದೆಂದು ಭಾವಿಸುತ್ತಿದ್ದೆ. ಪ್ರಾರಂಭದಿಂದಲೂ ಆತನ ಮನಸ್ಸನ್ನು ಅರ್ಥಮಾಡಿಕೊಂಡು ನಡೆದಿದ್ದೇನೆ. ನಾವು ಮಾತನಾಡಿಕೊಂಡಿದ್ದು, ಹರಟೆ ಹೊಡೆದದ್ದು ಸಹ ಅತ್ಯಂತ ಕಡಿಮೆ. ನಾನು ಮನೆಯಲ್ಲಿ ಕೆಲಸ ಮಾಡುತ್ತಾ ಆಕಡೆ, ಈಕಡೆ ತಿರುಗಾಡುತ್ತಿದ್ದರೆ, ಆತ ಟೇಬಲನ್ನು ಬಾರಿಸುತ್ತಾ, ನನ್ನ ಮೇಲೆ ಬರೆದ ಹಾಡನ್ನು ಹಾಡುತ್ತಿದ್ದ. ಎಲ್ಲರ ಮೇಲೆ ಹಾಡುಗಳನ್ನು ಬರೆಯುತ್ತಿದ್ದನಲ್ಲವೇ… ಹಾಗೆಯೇ ನನ್ನ ಮೇಲೆಯೂ ಹಾಡು ಬರೆದಿರಬಹುದೆಂದುಕೊಂಡೆ. ಗದ್ದರ್ ಕಾರ್ಯಕ್ರಮಗಳಲ್ಲಿ ಒಂದೆರಡು ಸಭೆಗಳಿಗೆ ಮಾತ್ರ ಹೋಗಿದ್ದೆ. ಆದರೆ, ನನ್ನ ಸೊಸೆ ನನ್ನನ್ನು “ಜೈ ಬೊಲೋ ತೆಲಂಗಾಣ” ಸಿನಿಮಾಕ್ಕೆ ಕರೆದುಕೊಂಡು ಹೋದಳು. ಅದರಲ್ಲಿ “ಉದಯಿಸುತ್ತಿರುವ ಹೊತ್ತಿನ ಮೇಲೆ ನಡೆಯುತ್ತಿರುವ ಕಾಲವೇ…” ಎಂಬ ಹಾಡು ಬಂದಾಗ ಥಿಯೇಟರ್‌ನಲ್ಲಿರುವ ಜನರೆಲ್ಲಾ ಎದ್ದು ನಿಂತು ಹೆಜ್ಜೆ ಹಾಕುತ್ತಾ ಧೂಂ.. ಧಾಂ.. ಮಾಡುತ್ತಿದ್ದರು. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಹಾಡನ್ನು ತುಂಬಾ ಚೆನ್ನಾಗಿ ಬರೆದಿದ್ದಾನೆ ಎನಿಸಿತು. ನನಗೆ ಇಷ್ಟವಾದದ್ದು ಕೂಡ ಅದೇ ಹಾಡು. “ಅಬ್ಬಾ!… ಏನು ಬರೆದಿರುವನಲ್ಲವೇ” ಎಂದು ಜನರೆಲ್ಲಾ ಅಂದುಕೊಳ್ಳುತ್ತಿದ್ದರೆ, ಕೇಳಿ ಸಂತೋಷಗೊಂಡೆ.

ವಿಮಲಮ್ಮ

ಆಗ ಸಂಕಷ್ಟಗಳನ್ನು ಅನುಭವಿಸಿದೆ…

ಗದ್ದರ್ ಅಜ್ಞಾತಕ್ಕೆ ಹೋಗುವುದಕ್ಕಿಂತ ಮೊದಲು 1985ರ ಸಮಯದಲ್ಲಿ ಇಬ್ಬರು ಗಂಡುಮಕ್ಕಳನ್ನು “ಆಕ್ಸ್‌ಫರ್ಡ್ ಗ್ರಾಮರ್ ಸ್ಕೂಲ್ ಹಾಸ್ಟೆಲ್”ನಲ್ಲಿ ಸೇರಿಸಿದ. ಈ ರೀತಿ ಹೋಗುತ್ತಿರುವನೆಂದು ಸಹ ಹೇಳಲಿಲ್ಲ. ನಾನು ಸಹ ಆತ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾನೆ, ಇಂದು ಬರುವನು, ನಾಳೆ ಬರುವನು ಎಂದು ದಾರಿ ಕಾಯುತ್ತಾ ದಿನ ಕಳೆದೆ. “ಕನಿಷ್ಟ ಇಂತಹ ಸ್ಥಳದಲ್ಲಿರುವನೆಂದು” ಒಂದು ಪತ್ರವನ್ನು ಸಹ ಬರೆಯುವುದಾಗಲಿ, ಸುದ್ದಿ ಕಳುಹಿಸುವುದಾಗಲಿ ಮಾಡಲಿಲ್ಲ. ಆ ಸಮಯದಲ್ಲಿ ನಾನಾ ಕಷ್ಟಗಳನ್ನು ಅನುಭವಿಸಿದೆ. ಬಂಧುಗಳು ಸಹ ಆ ಸಮಯದಲ್ಲಿ ನನ್ನನ್ನು ಮಾತನಾಡಿಸಲೂ ಭಯ ಪಡುತ್ತಿದ್ದರು. ಪರಿಚಯದವರು ನನ್ನನ್ನು ನೋಡಿ ಮುಖ ತಿರುಗಿಸುತ್ತಿದ್ದರು. ಆದರೂ ಸಹ ಒಬ್ಬರ ಮುಂದೆ ಕೈಚಾಚದೆ ಕಷ್ಟಪಟ್ಟು ನನ್ನ ಮಕ್ಕಳನ್ನು ಬೆಳೆಸಿದ್ದೇನೆ. ಅದೂ ತಂದೆ ಜೊತೆಗಿಲ್ಲವೆಂಬ ಕೊರತೆ ಅವರಿಗೆ ಎಂದೂ ಬಾರದಂತೆ ಕಾಪಾಡಿದೆ. ನಾನು ಊಟ ಮಾಡಿಯೋ, ಮಾಡದೆಯೋ ಅವರಿಗೆ ಮಾತ್ರ ಯಾವ ಕೊರತೆಯಿಲ್ಲದಂತೆ ನೋಡುತ್ತಿದ್ದೆ. ಹಬ್ಬಗಳು ಬಂದರೆ ಮಕ್ಕಳು ಬಾಯಿಬಿಟ್ಟು ಕೇಳುವುದಕ್ಕಿಂತ ಮೊದಲೇ ಹೊಸ ಬಟ್ಟೆಗಳನ್ನು ಕೊಂಡು ತರುತ್ತಿದ್ದೆ. ನಮಗೆ ಊಟ, ಮಕ್ಕಳ ಶಾಲೆಯ ಫೀಸ್, ಪುಸ್ತಕಗಳು ಹೀಗೆ ದಿನ ದೂಡಿಕೊಂಡು ಬರುವುದಕ್ಕಾಗಿ ಡ್ಯೂಟಿಗೆ ಪ್ರತಿದಿನ ಮುಂಜಾನೆ ಹೋದರೆ, ರಾತ್ರಿ 8 ಗಂಟೆಯವರೆಗೆ ಓವರ್‌ಟೈಂ ಕೆಲಸ ಸಹ ಮಾಡುತ್ತಿದ್ದೆ. ದಸರಾ ದೀಪಾವಳಿ ರಜೆಗಳಲ್ಲಿಯೂ ಸಹ ಕೆಲಸಕ್ಕೆ ಹೋಗುತ್ತಿದ್ದೆ.

ಐದು ವರ್ಷಗಳ ನಂತರ…

ಅಜ್ಞಾತದಲ್ಲಿದ್ದಾಗಲೇ ಗದ್ದರ್ ಬಗ್ಗೆ ಪತ್ರಿಕೆಯಲ್ಲಿ ಏನಾದರು ಸುದ್ದಿ ಬಂದರೆ ಮಕ್ಕಳನ್ನು ಹತ್ತಿರ ಕುಳ್ಳಿರಿಸಿಕೊಂಡು, ಆ ವಾರ್ತೆಯನ್ನು ಅವರಿಂದಲೇ ಓದಿಸುತ್ತಿದ್ದೆ. ಐದು ವರ್ಷಗಳ ನಂತರ 1990 ಫೆಬ್ರವರಿ 17ರಂದು ಅವರು ಬರುತ್ತಾರೆಂದು ತಿಳಿದು, ಮಕ್ಕಳನ್ನು ಕರೆದುಕೊಂಡು ಬಷೀರ್‌ಬಾಗ್ ಪ್ರೆಸ್‌ಕ್ಲಬ್‌ಗೆ ಹೋದೆ. ಅಲ್ಲಿ ಅವರನ್ನು ದೂರದಿಂದಲೇ ನೋಡುತ್ತಾ ಕಣ್ಣಿನ ನೋಟದಿಂದಲೇ ಮಾತನಾಡಿಸಿದೆ. ಪ್ರೆಸ್‌ಮೀಟ್ ಮುಗಿದಮೇಲೆ ನನ್ನ ಹತ್ತಿರ ಬಂದು “ಮಕ್ಕಳೆಲ್ಲಿ?” ಎಂದು ಕೇಳಿದ. ನನ್ನ ಪಕ್ಕದಲ್ಲಿಯೇ ಸೂರ್ಯಂ, ಚಂದ್ರಂ, ವೆನ್ನೆಲ್ಲ ಇದ್ದರೂಹಿ॒ರಿಯ ಮಗನನ್ನು ಗುರುತಿಸಿದ. ಆದರೆ ಉಳಿದ ಇಬ್ಬರನ್ನು ಗುರುತಿಸಲಿಲ್ಲ. ಐದು ವರ್ಷಗಳ ನಂತರ ಅವರು ನೋಡಿದ್ದು ಈಗಲೇ. ಆಗ ಚಿಕ್ಕವರಿಬ್ಬರನ್ನು ಹತ್ತಿರ ಕರೆದು ಪರಿಚಯ ಮಾಡಿಸಿದೆ.

ಇದನ್ನೂ ಓದಿ: ಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

ಹೊಣೆಯನ್ನು ಹೊತ್ತುಕೊಂಡೆ…

ಗದ್ದರ್ ಎಂದೂ ಬಜಾರಿಗೆ ಹೋಗಿ ಚಪ್ಪಲಿಗಳನ್ನಾಗಲಿ, ಬಟ್ಟೆಗಳನ್ನಾಗಲಿ ತಂದುಕೊಂಡಿಲ್ಲ. ವಾಸ್ತವವಾಗಿ ಅಂಗಡಿಗಳ ಬಗ್ಗೆಯೂ ಗೊತ್ತಿಲ್ಲ. ಆತನಿಗೆ ಬೇಕಾದ ಪ್ರತಿ ಪದಾರ್ಥವನ್ನು ನಾನೇ ಕೊಳ್ಳುವವಳು. “ಮನೆಯಲ್ಲಿ ಅಕ್ಕಿಯಿರಲಿಲ್ಲ, ಕಾರದ ಪುಡಿಯಿರಲಿಲ್ಲ ಎಂಬ ವಿಷಯದ ಬಗ್ಗೆಯೂ ಅವರಿಗೆ ಕಾಳಜಿಯಿರಲಿಲ್ಲವೆಂದು ನಾನೆಂದಿಗೂ ಭಾವಿಸಿಲ್ಲ. ಆತನ ಲೋಕವೆಲ್ಲಾ ಜನರೇ. ಇದರಿಂದ ಕುಟುಂಬದ ಹೊಣೆಯೊಂದಿಗೆ, ಅವರ ಕಡೆಯ ಬಂಧು ಬಗಳಗದವರ, ನನ್ನ ಕಡೆಯ ಬಂಧುಬಳಗದವರ ಒಳಿತು ಕೆಡುಕುಗಳನ್ನು ಸಹ ನಾನೇ ನೋಡುತ್ತಿದ್ದೆ. ಊಟದ ವಿಷಯದಲ್ಲಿಯೂ ಸಹ ಇದೇ ಬೇಕು ಅದನ್ನೇ ತಿನ್ನಬೇಕು ಎಂದು ಅವರು ಬಾಯಿ ಬಿಟ್ಟು ಕೇಳಲಿಲ್ಲ. ಕಾರದಪುಡಿಯೊಂದಿಗೆ ಎಣ್ಣೆ, ಉಪ್ಪು ಹಾಕಿಕೊಂಡು ಅದನ್ನೇ ಅನ್ನದೊಂದಿಗೆ ಬೆರೆಸಿ ತಿನ್ನುತ್ತಿದ್ದ.

ಜೊತೆಗೆ ಹೋಗಿದ್ದು ಎಂದರೆ…

ನಾವೆಂದೂ ಜೊತೆಗೆ ಯಾವುದೇ ಸಮಾರಂಭಕ್ಕೆ ಹೋಗಿಲ್ಲ. ಸಿನಿಮಾಗಳಿಗೆ ಹೋಗಿಲ್ಲ. ಅದನ್ನು ನಾನೆಂದಿಗೂ ಕೊರತೆಯೆಂದು ಭಾವಿಸಿಲ್ಲ. ಏಕೆಂದರೆ “ಅವರು ನಂಬಿದ ಸಿದ್ಧಾಂತಕ್ಕಾಗಿ ಕೆಲಸ ಮಾಡುತ್ತಾರೆ. ನಾನೇಕೆ ಅವರಿಗೆ ತೊಂದರೆ ಕೊಡಲಿ?” ಎಂದುಕೊಳ್ಳುತ್ತಿದ್ದೆ. ಅವರು ಪ್ರಾಣಾಪಾಯದಿಂದ ಪಾರಾಗಿ ನಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದನಂತರ ಒಂದು ತಿಂಗಳಿನ ಮೇಲೆ ದೆಹಲಿ ಪ್ರಯಾಣ ಮಾಡಿದೆವು. ಆಗ ಅವರ ಜೊತೆಯಲ್ಲಿ ಹೋದೆ. ಅಲ್ಲಿಯೂ ಸಹ ನನ್ನನ್ನು ಪರಿಚಯದವರ ಮನೆಯಲ್ಲಿ ಬಿಟ್ಟು ತನ್ನ ಕಾರ್ಯಕ್ರಮಗಳಿಗೆ ಹೋದರು. ಹದಿನೈದು ದಿನಗಳ ನಂತರ ದಿಲ್ಲಿಯಿಂದ ಕೊಲ್ಕತ್ತಾಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬರ ಮನೆಯಲ್ಲಿ ನನ್ನನ್ನು ಬಿಟ್ಟುಹೋದರು. ನಾನು ಅವರೊಂದಿಗೆ ಒಂದು ತಿಂಗಳು ವಾಸವಾಗಿದ್ದೆ. ನನಗೆ ಅವರ ಭಾಷೆ ಬರುತ್ತಿರಲಿಲ್ಲ. ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದರೆ, ಅವರು ನಗುತ್ತಿದ್ದರು. ಅಲ್ಲಿದ್ದಾಗಲೇ ಒಂದು ದಿನ ಕಿಷನ್ ಬಂದು “ವಿಮಲಕ್ಕ ಚೆನ್ನಾಗಿದ್ದೀಯ” ಎಂದು ವಿಚಾರಿಸಿದ. ವಾಪಸು ಪ್ರಯಾಣ ಮಾಡುವುದಕ್ಕಿಂತ ಒಂದು ದಿನ ಮೊದಲು ಬಂದು ಹೈದರಾಬಾದಿಗೆ ಕರೆದುಕೊಂಡು ಬಂದ. ಅವರ ಜೊತೆಗೂಡಿ ಪ್ರಯಾಣಿಸಿದ್ದು ಎಂದರೆ ಅದು ಮಾತ್ರ.

ಮನೆಯ ಪಟ್ಟಾ ಕೊಡಿಸಿದ್ದೇನೆ…

ಯಾದಮ್ಮ ನಗರದ ರೈಲ್ವೇ ಲೈನ್ ಬದಿಯಲ್ಲಿ ಕೆಲವು ಬಡವರು ಗುಡಿಸಲು ಹಾಕಿಕೊಂಡು ಬದುಕುತ್ತಿರುವರು. ರೈಲ್ವೇಯವರು ಆ ಗುಡಿಸಲುಗಳನ್ನು ಖಾಲಿಗೊಳಿಸುತ್ತಾರೆಂದು ಗೊತ್ತಾಯಿತು. ಅದೇ ಸಮಯದಲ್ಲಿ ಆಗಿನ ಮುಖ್ಯಮಂತ್ರಿ ಎನ್.ಟಿ.ಆರ್ ಅಲ್ಲಿಗೆ ಬರುತ್ತಾರೆಂದು ತಿಳಿದು, ನಾನು ಹೋಗಿ ಅವರನ್ನು ಭೇಟಿಯಾಗಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಸ್ಥಳಗಳನ್ನು ಕೊಡಬೇಕೆಂದು ಬೇಡಿಕೊಂಡೆನು. “ಧೈರ್ಯದಿಂದ ಬಂದು ಮಾತನಾಡಿದಿರಿ” ಎಂದು ನನ್ನನ್ನು ಅಭಿನಂದಿಸುತ್ತಾ, ಅಲ್ಲಿಂದಲೇ ಎನ್.ಟಿ.ಆರ್ ಕಲೆಕ್ಟರ್‌ನೊಂದಿಗೆ ಮಾತನಾಡಿ 300 ಜನ ಬಡವರಿಗೆ ಮನೆ ಕಟ್ಟಿಕೊಳ್ಳಲು ಸ್ಥಳಗಳನ್ನು ಮಂಜೂರು ಮಾಡಬೇಕೆಂದು ಆದೇಶಿಸಿದರು. ಆ ನಂತರ ಅವರಿಗೆ ಮನೆಯ ಪಟ್ಟಾಗಳನ್ನು ಸಹ ಹಂಚಿದರು.

ನಮ್ಮ ಮಕ್ಕಳ ಪರಿಸ್ಥಿತಿ ಇದು…

ನಮ್ಮ ಹಿರಿಯ ಮಗ ಸೂರ್ಯನದು ಪ್ರೇಮ ವಿವಾಹ. ನನ್ನ ಸೊಸೆ ಸರಿತ. ಕಾಂಗ್ರೆಸ್ ನಾಯಕ ವೆಂಕಟಸ್ವಾಮಿಗೆ ನಾದಿನಿಯ ಮಗಳು. ಪ್ರಸ್ತುತ ನನ್ನ ಮಗ “ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ”ಯಲ್ಲಿ ಸಂಶೋಧಕ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಕಿರಿಯ ಮಗ ಚಂದ್ರಂ ಕೆಲವು ವರ್ಷಗಳ ಹಿಂದೆ ಎಂಬಿಬಿಎಸ್ ಫೈನಲ್ ವರ್ಷದಲ್ಲಿದ್ದಾಗ ಅನಾರೋಗ್ಯದಿಂದ ಕಣ್ಣುಮುಚ್ಚಿದ. ಮಗಳು ವೆನ್ನೆಲ ಬಡ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ “ಮಹಾಬೋಧಿ ವಿದ್ಯಾಲಯ”ದಲ್ಲಿ ಪಾಠಶಾಲೆಯ ನಿರ್ವಾಕಿಹಯಾಗಿ ಕೆಲಸ ಮಾಡುತ್ತಿದ್ದಾಳೆ. ನಮ್ಮ ಮಕ್ಕಳು ಎಂದೂ ಬೇರೆ ದೇಶವಲ್ಲ, ಪಕ್ಕದ ರಾಜ್ಯಗಳಿಗೂ ಸಹ ಹೋಗಿಲ್ಲ.

(ಕೃಪೆ: ಆಂಧ್ರಜ್ಯೋತಿ, ತೆಲುಗು ದಿನಪತ್ರಿಕೆ, 13.08.2023)

ಕನ್ನಡಕ್ಕೆ: ಸಿದ್ರಾಮರೆಡ್ಡಿ, ಇಟಗಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...