HomeUncategorizedಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

ಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

- Advertisement -
- Advertisement -

ಗದ್ದರ್ ಇನ್ನಿಲ್ಲ ಎಂದು ಪತ್ರಿಕೆಗಳಲ್ಲಿ-ಟಿವಿಗಳಲ್ಲಿ ಹೇಳ್ತಿದ್ದಾರೆ. ಆದರೆ ಅವರ ಹಾಡುಗಳು ಅದನ್ನು ಸುಳ್ಳು ಮಾಡುತ್ತವೆ. ಈ ನೆಲದಲ್ಲಿ ತಮ್ಮ ಸಹಜೀವಿಗಳಿಗಾಗಿ ಅವರ ಹಕ್ಕುಗಳಿಗಾಗಿ ಹೋರಾಡಿ ಹುತಾತ್ಮರಾದ ಎಷ್ಟೋ ಜನರನ್ನು ಅವರ ಹಾಡುಗಳು ಅಮರರನ್ನಾಗಿಸಿವೆ. ಜೀವನ ಪೂರ್ತಿ ಹಾಡಿ, ತಾನೇ ಹಾಡಾದ ಆ ಸ್ವರ ಗದ್ದರ್; ಜನರ ಕ್ರಾಂತಿ ಬಯಸುವ ಯಾರಿಗೇ ಆದರೂ ಗದ್ದರ್ ಸತ್ತಿಲ್ಲ ಎಂದೇ ಅನಿಸುತ್ತದೆ.

ಕಾರ್ಮಿಕರ ದಿನಗೂಲಿ ಹೆಚ್ಚಿಸಿ ಎಂದು ಕರ್ನಾಟಕದಲ್ಲಿ ಹೋರಾಟ ಕಟ್ಟಿದ ಪಾರ್ವತಿ ಹಾಜಿಮಾರನ್ನು ಕೊಂದ ಸಂದರ್ಭದಲ್ಲಿ ಮೆಣಸಿನ ಹಾಡ್ಯಕ್ಕೆ ಬಂದ ಗದ್ದರ್ ಅಲ್ಲಿಯೇ ಅವರಿಬ್ಬರ ತ್ಯಾಗವನ್ನು ಹಾಡು ಕಟ್ಟಿ ಹಾಡಿ ಅಮರರನ್ನಾಗಿಸಿದ್ದು ಈ ತಕ್ಷಣಕ್ಕೆ ನೆನಪಾಗುತ್ತಿದೆ.

ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಸಿ, ನಕ್ಸಲ್ ಹೋರಾಟದಲ್ಲಿ ಆಸಕ್ತಿ ತಳೆದಿದ್ದ ಅವರು ಹಿರಿಯ ಹೋರಾಟಗಾರ ಕೊಂಡಪ್ಪಲ್ಲಿ ಸೀತರಾಮಯ್ಯನವರಿಂದ ಪ್ರಭಾವಿತರಾಗಿ ಚಳವಳಿಗೆ ಧುಮುಕಿದರು. ಗದ್ದರ್‌ರವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್. ತಂದೆ ಗುಮ್ಮಡಿ ಶೇಷಯ್ಯ, ತಾಯಿ ಲಚ್ಚುಮ್ಮಮ್ಮ.

ಗದ್ದರ್ ಒಬ್ಬ ಅಸಾಮಾನ್ಯ ಕಲಾವಿದರಾಗಿದ್ದರು. ತಮ್ಮೊಳಿಗಿನ ಆ ಕಲಾಪ್ರತಿಭೆಯನ್ನು ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಬಳಸಿದ್ದರು. ತಮ್ಮ ಹಾಡುಗಳ ಮೂಲಕವೇ ಕೋಟ್ಯಾಂತರ ಜನರ ಗಮನ ಸೆಳೆದವರು ಗದ್ದರ್. ವೇದಿಕೆಯಲ್ಲಿ ಗದ್ದರ್‌ರವರು ಜನರ ಭಾಷೆಯಲ್ಲಿ, ಜಾನಪದ ಶೈಲಿಯಲ್ಲಿ, ಹಾಡುತ್ತಾ-ಕುಣಿಯುತ್ತ ಅಬ್ಬರಿಸುತ್ತಿದ್ದರೆ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ನೆರೆಯುತ್ತಿದ್ದರು. ಅನ್ಯಾಯ ನಡೆದ ಸ್ಥಳದಲ್ಲಿಯೇ ಹಾಡು ಕಟ್ಟಿ ತಮ್ಮದೇ ಟ್ಯೂನ್ ಹಾಕಿ ಹಾಡುತ್ತಿದ್ದರು. ತೆಲಂಗಾಣದ ಸ್ವರ ಅವರದ್ದಾಗಿತ್ತು.

ಆಂಧ್ರ ಪ್ರದೇಶದಲ್ಲಿ ಜನನಾಟ್ಯ ಮಂಡಳಿಯೆಂಬ ಬಹುದೊಡ್ಡ ಸಾಂಸ್ಕೃತಿಕ ಸಂಘಟನೆ ಕಟ್ಟಿದ್ದ ಗದ್ದರ್ ಆ ಮೂಲಕ ನಕ್ಸಲ್ ಚಳವಳಿಯ ಸಿದ್ಧಾಂತವನ್ನು ಪ್ರಚಾರ ಮಾಡಿದರು. ಅದಕ್ಕಾಗಿ ಅವರು 8 ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತು. ಪೊಲೀಸರು ಹಲವಾರು ಬಾರಿ ಅವರ ಮೇಲೆ ದಾಳಿ ನಡೆಸಿದ್ದರು. ಒಂದು ಗುಂಡು ಅವರ ದೇಹವೊಕ್ಕಿತ್ತು. ಅದನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.

ಗದ್ದರ್ ಅವರಿಗೆ ಮೀನು ಎಂದರೆ ಪಂಚಪ್ರಾಣ. ಅವರಿಗೆ ಮೂವರು ಮಕ್ಕಳಿದ್ದರು. ಸೂರ್ಯ, ಚಂದ್ರ ಮತ್ತು ವೆನೆಲ್ಲ (ಬೆಳದಿಂಗಳು) ಎಂಬ ಹೆಸರಿಟ್ಟಿದ್ದರು. ಮಕ್ಕಳು ತಮ್ಮಂತೆಯೇ ಹೋರಾಟದಲ್ಲಿ ತೊಡಗಿಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು.

ಮನುಷ್ಯರನ್ನು ಮನುಷ್ಯರನ್ನಾಗಿಯೇ ನೋಡಬೇಕು. ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎಂದು ಜಾತಿ-ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ವಾದಿಸುತ್ತಿದ್ದರು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಮನಸ್ಥಿತಿ ನಿರ್ಮಾಣವಾಗುವುದೇ ತನ್ನ ಹೋರಾಟಕ್ಕೆ ಸಿಕ್ಕುವ ಅಂತಿಮ ಫಲಶ್ರುತಿ ಎಂದು ಅವರು ನಂಬಿದ್ದರು.

1975ರಲ್ಲಿ ಮೊದಲ ಬಾರಿಗೆ ನಾನು ಗದ್ದರ್‌ರವರನ್ನು ಭೇಟಿ ಮಾಡಿದೆ. ಆನಂತರ ಎಷ್ಟೋ ಬಾರಿ ಅವರೊಟ್ಟಿಗೆ ಚರ್ಚೆ ನಡೆಸಿದ್ದಿದೆ. ಬಾಬಾಬುಡನ್ ಗಿರಿ ಸೌಹಾರ್ದ ಹೋರಾಟಕ್ಕೆ ಗದ್ದರ್ ಕರ್ನಾಟಕಕ್ಕೆ ಬಂದಿದ್ದರು. ಗೌರಿ ಲಂಕೇಶ್ ಅವರನ್ನು ಪ್ರೀತಿಯಿಂದ ಆಹ್ವಾನಿಸಿದ್ದರು. ಒಮ್ಮೆ ಗದ್ದರ್ ಅವರಿಗೆ ಕರ್ನಾಟಕದಲ್ಲಿ ದೊರೆತ ಪ್ರಶಸ್ತಿ ಮೊತ್ತ 1 ಲಕ್ಷ ರೂಗಳನ್ನು ಕರ್ನಾಟಕದ ಚಳವಳಿಗೆ ಬಳಸಿಕೊಳ್ಳಿ ಎಂದು ಕೊಟ್ಟು ಹೋಗಿದ್ದರು. ನಾನು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಅವರನ್ನು ಬೆಂಗಳೂರು ವಿವಿಗೆ ಕರೆಸಿದ್ದೆ. ಅವರ ಹಾಡು-ಮಾತುಗಳನ್ನು ಕೇಳಿದ ವಿದ್ಯಾರ್ಥಿಗಳು ಪುಳಕಿತರಾಗಿದ್ದರು.

ಇದನ್ನೂ ಓದಿ: ’ದ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ಎತ್ತುವ ಅಹಿತಕರ ಪ್ರಶ್ನೆಗಳು

ದಲಿತರು ದಮನಿತರ ಮೇಲಿನ ಹಲ್ಲೆ ದೌರ್ಜನ್ಯಗಳನ್ನು ಕಟು ಪದಗಳಲ್ಲಿ ಟೀಕಿಸಿ ಹಾಡು ಬರೆದು ಹಾಡುತ್ತಿದ್ದರು. ಆ ಕೆಚ್ಚು ಅವರಲ್ಲಿತ್ತು, ರಾಗ ಅವರದ್ದೇ ಆಗಿರುತ್ತಿತ್ತು. ಜೀವನದುದ್ದಕ್ಕೂ ಜನರನ್ನು ಎಚ್ಚರಗೊಳಿಸುವುದಕ್ಕೆ ತಮ್ಮ ಪ್ರತಿಭೆಯನ್ನು ಬಳಸಿದರು. ತಮ್ಮ ಹಾಡಿನ ಮೂಲಕ ಅವರು ಜನರಿಗೆ ಮುಟ್ಟಿಸಿದ ವಿಚಾರಗಳನ್ನು ನೂರಾರು ಭಾಷಣ-ಬರಹಗಳಿಂದಲೂ ಮುಟ್ಟಿಸಲು ಸಾಧ್ಯವಿಲ್ಲ ಎನ್ನುವಮಟ್ಟಿಗೆ ಅವರ ಹಾಡುಗಳು ಖ್ಯಾತಿ ಗಳಿಸಿದ್ದವು.

ಖಾಸಗಿ ಆಸ್ತಿ ಮಾಡಬಾರದೆನ್ನುವ ಪಕ್ಷದ ತೀರ್ಮಾನ ಅವರಿಗೆ ಹಿಡಿಸಿರಲಿಲ್ಲ. ಹಾಗಾಗಿ ಹೊರಬಂದು ಕೊನೆಗಾಲಕ್ಕೆ ಆರ್ಥಿಕ ಸಮಸ್ಯೆಗಳನ್ನು ನೀಗಿಸಿಕೊಂಡಿದ್ದರು. ಸತ್ಯಂ ಎನ್ನುವ ಅವರ ಅಕ್ಕನ ಮಗ ಅವರನ್ನು ನೋಡಿಕೊಳ್ಳುತ್ತಿದ್ದರು.

8 ತಿಂಗಳ ಹಿಂದೆ ಅವರನ್ನು ನೋಡಲು ಹೈದರಾಬಾದ್‌ನ ಅವರ ಮನೆಗೆ ಹೋಗಿದ್ದೆ. ಅವರು ತಮ್ಮ ಬಗೆಗಿನ ಟೀಕೆಗಳಿಗೆ ಉತ್ತರಿಸಿದ್ದು ಹೀಗೆ: “ನಾನು ಹೋರಾಟದ ಹಾದಿ ಬಿಟ್ಟಿದ್ದೇನೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನಾನು ಕ್ರಾಂತಿಯ ಧ್ಯೇಯವನ್ನು ಕೈಬಿಟ್ಟಿಲ್ಲ. ನಾನು ಕಲಾವಿದ. ಹಗ್ಗದ ಮೇಲೆ ನಡೆಯುತ್ತಿದ್ದೇನೆ. ಜನ ನನ್ನನ್ನು ನೋಡಿ ಬೀಳುತ್ತಿದ್ದಾನೆ ಅಂದುಕೊಳ್ಳುತ್ತಿರಬಹುದು. ಆದರೆ ಆ ಕಡೆ ಈ ಕಡೆ ವಾಲುತ್ತಿದ್ದೇನೆ, ಬ್ಯಾಲೆನ್ಸ್ ಮಾಡುತ್ತಿದ್ದೇನೆಯೇ ಹೊರತು ಬೀಳುವುದಿಲ್ಲ.. ಕೊನೆಗೆ ನಾನು ಅದೇ ಝಂಡ ಹಿಡಿಯುತ್ತೇನೆ ನೋಡುತ್ತಿರಿ” ಎಂದಿದ್ದರು. ’ನಗರಿ ಬಾಬಯ್ಯನವರ ತಮ್ಮ ಗದ್ದರ್’ ಎಂದು ಕರ್ನಾಟಕ ಪೊಲೀಸ್ ದಾಖಲೆಯಲ್ಲಿ ಬರೆದಿದ್ದಾರೆ. ಅಷ್ಟರಮಟ್ಟಿಗೆ ಅವರಿಗೂ ನನಗೂ ಸಂಬಂಧವಿತ್ತು.

ಕಾರಂಚೇಡು ಘಟನೆಗಳ ನಂತರ ಜಾತಿ ಪದ್ಧತಿಯಿಂದ ರೋಸಿಹೋಗಿದ್ದ ಗದ್ದರ್‌ರವರು ಬೌದ್ಧ ಧರ್ಮವನ್ನು ಅಪ್ಪಿಕೊಂಡಿದ್ದರು. ಆ ಆಚರಣೆಯಂತೆಯೇ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ.

ಪ್ರಪಂಚದ ನಾಲ್ಕನೇ ಮೂರರಷ್ಟು ಜನರು ಇಂದಿಗೂ ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನರ ಪರಿಸ್ಥಿತಿ ಬದಲಾಗಲಿಲ್ಲ. ಅವು ಅಧಿಕಾರಕ್ಕೆ ಹವಣಿಸುತ್ತವೆಯೇ ಹೊರತು ಜನರ ನಿಜವಾದ ಕಷ್ಟಗಳನ್ನು ಅರಿಯುವ ಯತ್ನ ಮಾಡುತ್ತಿಲ್ಲ ಅನ್ನುವ ಕೊರಗು ಗದ್ದರ್‌ರವರಿಗೆ ಕೊನೆಯವರೆಗೂ ಇತ್ತು. ಈಗ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಹಾಡುಗಳ ಮೂಲಕ ಎಂದೆಂದಿಗೂ ಜೀವಂತವಿದ್ದಾರೆ. ಅವರ ಹೋರಾಟವನ್ನು ಮುಂದುವರಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.

– ನಗರಿ ಬಾಬಯ್ಯ

ಗದ್ದರ್ ಅವರ ಒಂದು ಹಾಡು..

ಮಲ್ಲಿಗೆ ಬಳ್ಳಿಗೆ ಚಪ್ಪರದಂತೆ ಮಬ್ಬುಕತ್ತಲಲ್ಲಿ ಬೆಳದಿಂಗಳಂತೆ
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..

ಮುಳ್ಳಬಳ್ಳಿಯಮ್ಮ ಬೇಲಿಯ ಮೇಲೆ ಸೀರೆ ಹಾಕಿದರೆ ಬರಲೆ ಇಲ್ಲಮ್ಮ
ಹೆಣ್ಣುಮಗುವನ್ನು ರೆಪ್ಪೆ ರೆಪ್ಪೆ ತೆಗೆದು ನೋಡಿದರೆ ತಪ್ಪಮ್ಮಾ
ದೊಡ್ಡವಳಾಗಿ ಅರಳಿದಾಗ ಹೆಣ್ಣಿನ ಮೇಲಿನ ಬಯಕೆಗಳೆಷ್ಟೋ
ನೋಡುವುದನ್ನು ನೋಡಬೇಡೆನ್ನುವರು ನಗುವ ಕಡೆ ನಗಬೇಡೆನ್ನುವರು
ಆ ರೀತಿಯ ಅಣ್ಣನು ನಾನಲ್ಲ ತಂಗ್ಯಮ್ಮಾ.

ನಿನ್ನ ಬಾಲ್ಯದ ಸ್ನೇಹಿತನು ನಾನು ತಂಗ್ಯಮ್ಮಾ॒॒
ಅಡವಿಯಲ್ಲಿನ ನವಿಲಿನಂತೆ ತಂಗ್ಯಮ್ಮಾ.
ಆಟ ಆಡುನೀ ಹಾಡನ್ನೂ ಹಾಡು ನೀ ತಂಗ್ಯಮ್ಮಾ
ಗದ್ದರ್ ಹಾಡು

ಕನ್ನಡಕ್ಕೆ: ಅನಿಲ್ ಚಿಕ್ಕದಾಳವಟ್ಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...