Homeಅಂಕಣಗಳು’ದ ಹಂಟ್ ಫಾರ್ ವೀರಪ್ಪನ್' ಸಾಕ್ಷ್ಯಚಿತ್ರ ಎತ್ತುವ ಅಹಿತಕರ ಪ್ರಶ್ನೆಗಳು

’ದ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ಎತ್ತುವ ಅಹಿತಕರ ಪ್ರಶ್ನೆಗಳು

- Advertisement -
- Advertisement -

ಒಟಿಟಿ ವೇದಿಕೆಯೊಂದರಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ವೀರಪ್ಪನ್ ಬಗೆಗಿನ ಸಾಕ್ಷ್ಯಚಿತ್ರ ’ದ ಹಂಟ್ ಫಾರ್ ವೀರಪ್ಪನ್, ’ದಂತಚೋರ’, ’ಶ್ರೀಗಂಧ ಕಳ್ಳಸಾಗಣೆದಾರ’, ’ಅಪಹರಣಕಾರ’ ’ಕೊಲೆಗಾರ’ನನ್ನು ಹಿಡಿಯಲು ಪೊಲೀಸರು ನಡೆಸುವ ತಥಾಕಥಿತ ’ವೀರಗಾಥೆ’ಗಳಿಗಷ್ಟೇ ಸೀಮಿತವಾಗುವ ಹತ್ತರಲ್ಲಿ ಒಂದು ಫಿಲ್ಮ್ ಆಗದೆ, ವೀರಪ್ಪನ್ ಕ್ರೌರ್ಯದ ಜೊತೆಜೊತೆಗೇ ಪೊಲೀಸರು ನಡೆಸಿದ ದೌರ್ಜನ್ಯಗಳನ್ನು ಜಕ್ಸ್ಟಪೋಸ್ ಮಾಡುವ ಮೂಲಕ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತದೆ ಮತ್ತು ವೀರಪ್ಪನ್ ಬದುಕಿನ ಎಪಿಸೋಡ್‌ನಲ್ಲಿ ಇಲ್ಲಿಯವರೆಗೂ ದಾಖಲಾಗದ ಕೆಲವು ಸಂಗತಿಗಳನ್ನು ನಿರೂಪಿಸಿ ಗಮನ ಸೆಳೆಯುತ್ತದೆ.

ಗಮನ ಸೆಳೆಯುವ ಎರಡನೇ ಎಪಿಸೋಡ್‌ನಲ್ಲಿ ಶಂಕರ್ ಬಿದರಿ ಎಸ್‌ಟಿಎಫ್ (ವೀರಪ್ಪನ್ ವಿರುದ್ಧದ ಸ್ಪೆಷಲ್ ಟಾಸ್ಕ್ ಫೋರ್ಸ್) ಮುಖ್ಯಸ್ಥರಾಗಿ ಬರುವ ಸಂದರ್ಭದ ಬಗ್ಗೆ ಇದೆ; ಇಲ್ಲಿಯವರೆಗೂ ಗಟ್ಟಿಯಾಗಿ ಮಾತಾಡಲು ಹಿಂಜರಿಯುತ್ತಿದ್ದ ವಿಷಯಗಳನ್ನು ಪ್ರಸ್ತುತಪಡಿಸಿ ನಿರ್ದೇಶಕ ವೀಕ್ಷಕರನ್ನು ವಿಚಲಿತಗೊಳಿಸುತ್ತಾರೆ: “ವರ್ಕ್‌ಶಾಪ್ ಅಂದರೆ ಸೈಕಲ್ ಅಥವಾ ಬಸ್ ರಿಪೇರಿ ಮಾಡುವುದಲ್ಲ. ಮನುಷ್ಯರಿಗೆ ಟಾರ್ಚರ್ ಕೊಡುವಂತಹ ವರ್ಕ್‌ಶಾಪ್‌ಅನ್ನ ರೆಡಿ ಮಾಡಿದ್ರು. ವರ್ಕ್‌ಶಾಪ್ ಅಂದರೆ ಎಂಟೈರ್ ತಮಿಳುನಾಡೇ ಭಯಪಡುವಂತಹ ಸಿಚುವೇಶನ್ ತಂದಿಟ್ಟುಬಿಟ್ಟ ಶಂಕರ್ ಬಿದರಿ. ಅವರು ಸುಪ್ರೀಂ ಕೋರ್ಟ್ ಜಡ್ಜ್ ಇದ್ದಂಗೆ ಎಂಎಂ ಹಿಲ್ಸ್‌ನಲ್ಲಿ. ಅವರು ಏನು ಹೇಳ್ತಾರೆ ಅದೇ ವೇದವಾಕ್ಯ…”; “ಎರಡನೇ ಯಮಲೋಕ. ಯಮಲೋಕದ ಬಗ್ಗೆ ದೊಡ್ಡವರು ಕಥೆ ಹೇಳ್ತಾರೆ, ಕಾದ ಎಣ್ಣೆ ಹಾಕ್ತಾರೆ. ಜೀವಂತವಾಗಿ ಇರೋವ್ರನ್ನ ಬೆಂಕಿಗೆ ಬಿಸಾಕ್ತಾರೆ. ಆದರೆ ನಾವು ಇಲ್ಲೇ ಎಂಎಂಹಿಲ್ಸ್ ವರ್ಕ್‌ಶಾಪ್‌ನಲ್ಲಿ ಎಲ್ಲಾ ನೋಡಿಬಿಟ್ಟಿದ್ದೇವೆ. ದೊಡ್ಡ ಹಾಲ್. ಒಂದು 15 ಜನ 20, 50 ಜನ ಬರ್ತಾರೆ. ಒಂದು ಬಸ್ ಮಾಡ್ಕಂಡು. ಅಲ್ಲಿ ಎರಡು ಭಾಗ ಮಾಡ್ಕೊಂಡವರೆ. ಇವರಿಗೆ ಇಷ್ಟ ಆದವರು ಒಂದು ಕಡೆ. ಇವರಿಗೆ ಇಷ್ಟ ಇಲ್ಲದವರು ಒಂದು ಕಡೆ. ಅವಾಗ ಬಿದರಿಯವರು ತಮ್ಮ ಮೂರನೇ ಕಣ್ಣನ್ನ ತೆಗೆದರು. ಮೂರನೇ ಕಣ್ಣು ಏನು, ಭಸ್ಮಾಸುರ. ಉಚ್ಚೆ ಕುಡ್ಸೋದು. ನೇಕೆಡ್ ಆಗಿ ಗಂಡುಸ್ರು ಮುಂದೆ ಹೆಂಗಸನ್ನು ಕೂಡ್ಸೋದು. ಇದು ಶಂಕರ್ ಬಿದರಿ ಟಾರ್ಚರ್.”- ಈ ಮಾತುಗಳನ್ನು ಸಾಕ್ಷ್ಯಚಿತ್ರದಲ್ಲಿ ಹೇಳುವವವರು ಯಾರೋ ಮಾನವ ಹಕ್ಕುಗಳ ಕಾರ್ಯಕರ್ತನಲ್ಲ; ಬದಲಿಗೆ ಕರ್ನಾಟಕ ವಿಶೇಷ ಕಾರ್ಯಪಡೆಯಲ್ಲಿ ಸೇವೆ ಸಲ್ಲಿಸಿದ್ದ ಪುಟ್ಟಮಲ್ಲಾಚಾರ್ ಅವರು! ವೀರಪ್ಪನ್ ಕ್ರೌರ್ಯದ ಬಗ್ಗೆ ಇಲ್ಲಿಯವರೆಗೂ ಬಹಳಷ್ಟು ದಾಖಲಿಸಿದ ಬರಹಗಾರರಿಗೆ, ಸಿನಿಮಾ ನಿರ್ದೇಶಕರಿಗೆ, ಅದರ ಹತ್ತನೇ ಒಂದು ಭಾಗದಷ್ಟಾದರೂ ಪೊಲೀಸರ (ನಿರ್ದಿಷ್ಟವಾಗಿ ಬಿದರಿಯ ’ವರ್ಕ್‌ಶಾಪ್’) ಕ್ರೌರ್ಯವನ್ನು ದಾಖಲಿಸಬೇಕೆನ್ನುವ ಬಗ್ಗೆ ಕಾಳಜಿ ಇರದೆ ಹೋಗಿರುವುದು ನಮ್ಮಗಳ ದುರಂತ. ಪೊಲೀಸರ ಕ್ರೌರ್ಯವನ್ನೂ ತೆರೆಯ ಮೇಲೆ ಕಾಣಿಸಿರುವ ಸೆಲ್ವಮಣಿ ಸೆಲ್ವರಾಜ್ ಇಲ್ಲಿಯವರೆಗೂ ವೀರಪ್ಪನ್ ಬಗ್ಗೆ ಪುಸ್ತಕಗಳನ್ನು ಬರೆದಿರುವವರ ಮತ್ತು ಸಿನಿಮಾಗಳನ್ನು ಮಾಡಿರುವವರ ನಡುವೆ ವಿಭಿನ್ನವಾಗಿ ನಿಲ್ಲುತ್ತಾರೆ.

ಶಂಕರ್ ಬಿದರಿ

ಪೊಲೀಸರ ಕ್ರೌರ್ಯ ಬರೀ ಚಿತ್ರಹಿಂಸೆಗೆ ನಿಲ್ಲುವುದಿಲ್ಲ. ಬಿದರಿ ಸಮಯದಲ್ಲಿಯೇ ವೀರಪ್ಪನ್ ಪೊಲೀಸರ ತಂಡದ ಮೇಲೆ ದಾಳಿ ನಡೆಸುತ್ತಾನೆ. ಆಗ ಆ ಸ್ಥಳಕ್ಕೆ ಧಾವಿಸಿದ ಬಿದರಿ ಪರಿಶೀಲನೆ ನಡೆಸುತ್ತಾರೆ. ಮುಂದೆ ಪುಟ್ಟಮಲ್ಲಾಚಾರ್ ಅವರ ಮಾತುಗಳನ್ನು ಕೇಳಿ: “ಪುಟ್ಟು ಬಾ ಇಲ್ಲಿ ಅಂದರು. ಆ ಮನುಷ್ಯನ ಮೈಂಡ್ ಹೆಂಗೆ ಅಂದರೆ ವರ್ಕ್‌ಶಾಪ್‌ನಲ್ಲಿ ಇರುವ ಎಲ್ಲರ ಹೆಸರನ್ನೂ ಹೇಳ್ತಾ ಇದ್ದರು. ಹೋಗು ಜೀಪ್ ತಗೊಂಡು, ಮೊದಲು ಆ ಎಂಟು ಜನನ ಎತ್ತಾಕ್ಕೊಂಡು ಬಾ ಹೋಗು ಅಂದರು. ಎಲ್ಲಾರ್ನು ತಗೊಂಡು ಹೋಗಿ ಒಂದೊಂದು ಮರದ ಹತ್ರ ನಿಲ್ಸು ಅಂದ್ರು.”- ಆಗ ಆರು ಬಡಕಲು ದೇಹದ ಹೆಣಗಳು ಪರದೆಯಲ್ಲಿ ಕಾಣಿಸುತ್ತವೆ. “ಅದನ್ನ ನೋಡಿ ನನಗೆ ಎಷ್ಟು ಅಸಹ್ಯ ಆಯ್ತು, ಮನಸ್ಸಿಗೆ ನೋವಾಯ್ತು ಅಂದರೆ ನನ್ನದು ಪೊಲೀಸ್ ವೃತ್ತಿನೇ ಅಲ್ಲ, ನಾವು ಒಬ್ರು ಡಕಾಯಿತ್ರೇನೋ” ಅಂತಾರೆ ಪುಟ್ಟಮಲ್ಲಾಚಾರ್. ಮತ್ತೊಂದು ಸಂದರ್ಭದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಸೆರೆಸಿಕ್ಕಾಗ ಬಿದರಿ ಅಲ್ಲಿಗೆ ಬರುವುದು- ಆಗ ಸ್ಕ್ರೀನ್ ಒಂದುಕ್ಷಣ ಕಪ್ಪಾಗಿ ಬ್ಲಾಂಕ್ ಆಗುವುದು- ನಂತರ ವರ್ಕ್‌ಶಾಪ್‌ನಲ್ಲಿ ಮರ್ಮಾಂಗಗಳಿಗೆ ಶಾಕ್ ಕೊಟ್ಟ ಬಗ್ಗೆ ಮುತ್ತುಲಕ್ಷ್ಮಿ ನಿವೇದಿಸಿಕೊಳ್ಳುವುದು, ಇವೆಲ್ಲಾ ವೀಕ್ಷಕರನ್ನು ವಿಚಲಗೊಳಿಸದೆ ಇರದು. ದರೋಡೆಕೋರನ ವಾಯ್ಲೆನ್ಸ್ ಮತ್ತು ಸ್ಟೇಟ್ ಪ್ರಾಯೋಜಿತ ವಾಯ್ಲೆನ್ಸ್ ಎರಡೂ ಅಮಾಯಕರನ್ನು ಕೊಲ್ಲುವ-ಹಿಂಸಿಸುವ ಬಗ್ಗೆ ಯೋಚಿಸುವಂತೆ ಮಾಡುತ್ತದೆ.

ಈ ಸಾಕ್ಷ್ಯಚಿತ್ರದಲ್ಲಿ ಸಂದರ್ಶನಗೊಳ್ಳುವ ಬಹುತೇಕ ಎಲ್ಲ ಪೊಲೀಸ್ ಅಧಿಕಾರಿಗಳು ಒಂದಲ್ಲ ಒಂದು ರೀತಿಯಲ್ಲಿ ಅಧಿಕಾರವನ್ನು ಎಕ್ಸೆಸ್ ಆಗಿ ಬಳಸಿರುವ, ದುರುಪಯೋಗ ಮಾಡಿರುವ ಬಗ್ಗೆ ಒಪ್ಪಿಕೊಳ್ಳುತ್ತಾರೆ. ನಲ್ಲೂರು ಎಂಬ ಗ್ರಾಮದಲ್ಲಿ ವೀರಪ್ಪನ್ ಅಡಗಿಕೊಂಡಿರುತ್ತಾನೆಂಬ ಟಿಪ್ಸ್ ಎಸ್‌ಟಿಎಫ್‌ಗೆ ಸಿಗುತ್ತದೆ. ಅದಕ್ಕೂ ಮೊದಲು ರಾಮಪುರ ಪೊಲೀಸ್ ಠಾಣೆಯ ಮೇಲೆ ವೀರಪ್ಪನ್ ಅಟ್ಯಾಕ್ ಮಾಡಿ ಪೊಲೀಸ್ ಸಾವಿಗೆ ಕಾರಣನಾಗಿರುತ್ತಾನೆ. ಎಸ್‌ಟಿಎಫ್‍ನ ಅಶೋಕ್ ಕುಮಾರ್‌ಗೆ ಈ ಸೀರೀಸ್‌ನ ಸಂದರ್ಶಕ ನೀವು ನಲ್ಲೂರಿಗೆ ಹೋಗಿದ್ದಿರಾ ಎಂದು ಕೇಳುತ್ತಾರೆ; ಅದಕ್ಕೆ ‘ಬೇಕಾದಷ್ಟು ಸಾರಿ ಹೋಗಿದ್ದೇನೆ’ ಎಂದು ಅಶೋಕ್ ಉತ್ತರಿಸುತ್ತಾರೆ. ‘ಅಲ್ಲಿ ಜನ ಹೇಗೆ ಇದ್ದರು’ ಅನ್ನುವ ಪ್ರಶ್ನೆಗೆ, ‘ಯಾರೂ ಸಹರಿಸಲಿಲ್ಲ, ಎಲ್ಲರೂ ಅಡಾಮೆಂಟ್ ಆಗಿದ್ದರು’ ಎಂಬ ಉತ್ತರ. ‘ನಲ್ಲೂರಿನಲ್ಲಿ ಇಡೀ ಊರಿನ ಎಲ್ಲಾ ಗುಡಿಸಲುಗಳನ್ನು ಸುಟ್ಟುಹಾಕಲಾಯಿತಲ್ಲವೇ’ (ಪೊಲೀಸರಿಂದ) ಎಂಬ ಪ್ರಶ್ನೆಗೆ, ‘ಆ ರೀತಿಯಲ್ಲಿ ಏನೋ ಆಯಿತು.. ಈಗ ಸ್ಪಷ್ಟವಾಗಿ ನೆನಪಿಲ್ಲ’ ಎನ್ನುತ್ತಾರೆ ಅಶೋಕ್. ತೆರೆಯ ಮೇಲೆ ಸುಟ್ಟು ಕರುಕಲಾದ ಊರಿನ ಫೋಟೋಗಳು ಕಾಣಿಸಿಕೊಳ್ಳುತ್ತವೆ.

ವೀರಪ್ಪನ್ 80ರ ದಶಕದಿಂದ 90ರ ದಶಕದವರೆಗೆ ಪೊಲೀಸರ ಮೇಲೆ ಮೃಗೀಯ ರೀತಿಯಲ್ಲಿ ದಾಳಿ ನಡೆಸುವ ಕಥೆಗಳೊಂದಿಗೆ ಹಾಗೂ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಯವರು ಘಟನೆಗಳನ್ನು ತಾವು ಕಂಡಂತೆ ಕಟ್ಟಿಕೊಡುವ ನರೆಟಿವ್‌ನೊಂದಿಗೆ ಮೊದಲ ಎರಡು ಎಪಿಸೋಡ್‌ಗಳು ಸಾಗುತ್ತವೆ. (ವೀರಪ್ಪನ್ ಸಹಚರ ಮತ್ತು ಪತ್ರಕರ್ತನೊಬ್ಬರ ಸಂದರ್ಶನ ಕೂಡ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.) ಇದರಲ್ಲಿ ವೀರಪ್ಪನ್ ಊರಾದ ಗೋಪಿನಾಥಂನಲ್ಲಿ ವಾಸಿಸಿ ಅಲ್ಲಿನ ಜನರ ವಿಶ್ವಾಸ ಗಳಿಸಿ, ವೀರಪ್ಪನ್ ಶರಣಾಗತಿಗೆ ಪ್ರಯತ್ನಿಸುವ ಶ್ರೀನಿವಾಸ್ ಅವರ ಕೊಲೆಯೂ ಚಿತ್ರಿತವಾಗಿದೆ. ಆದರೆ ಶ್ರೀನಿವಾಸ್ ಅವರನ್ನು ಸಂಧಾನಕ್ಕೆ ಕರೆದು ವೀರಪ್ಪನ್ ಕೊಂದ ಎಂಬ ಪ್ರಚಾರದಲ್ಲಿರುವ ಮಾಹಿತಿಯ ಬಗ್ಗೆ ಸಾಕ್ಷ್ಯಚಿತ್ರ ಏನನ್ನೂ ಹೇಳದೆ ಹೋಗಿದೆ. ಶ್ರೀನಿವಾಸ್ ಅವರು ಹಳ್ಳಿಯ ಹೆಂಗಸರ ಹೆರಿಗೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಣ್ಣಸಣ್ಣ ಸಹಾಯವನ್ನು ಆ ಭಾಗದ ಜನ ಇಂದಿಗೂ ಸ್ಮರಿಸುತ್ತಾರೆಂಬ ಅಂಶ ಹಲವು ವಾಸ್ತವಗಳನ್ನು ಒಟ್ಟಿಗೇ ನುಡಿಯುತ್ತದೆ. ಅತಿ ಹಿಂದುಳಿದ ಜಿಲ್ಲೆಗಳಲ್ಲಿ ಸೇರಿಕೊಳ್ಳುವ ಕೊಳ್ಳೆಗಾಲ-ಚಾಮರಾಜನಗರದ ಜನ ಸಣ್ಣಪುಟ್ಟ ಸಹಾಯವನ್ನು ಸ್ಮರಿಸುವ ಬಗೆ, ಅವರಲ್ಲಿ ಹಲವರು ವೀರಪ್ಪನ್‌ಗೂ ಏಕೆ ಆ ಮಟ್ಟದ ಬೆಂಬಲವನ್ನಿತ್ತರು ಎಂಬುದನ್ನು ತಿಳಿಯಲು ಸಹಕರಿಸೀತು!

ಸೆಲ್ವಮಣಿ ಸೆಲ್ವರಾಜ್

ಮೂರನೇ ಎಪಿಸೋಡ್ ರಾಜಕುಮಾರ್ ಅಪಹರಣದ ಬಗೆಗಿದ್ದು, ಆಗ ತನ್ನ ಬೇಡಿಕೆಗಳ ಮೂಲಕ ಕರ್ನಾಟಕ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸಿದ ಚಿತ್ರಣವಿದೆ. ಇದೇ ಸಮಯದ ಆಸುಪಾಸಿನಲ್ಲಿಯೇ ತಮಿಳು ಪ್ರತ್ಯೇಕವಾದಿಗಳ ಪರಿಚಯ ವೀರಪ್ಪನ್‌ಗೆ ಆಗುವುದು ಮತ್ತು ಆ ಮಾತುಕತೆಗಳು ಆತನ ಬೇಡಿಕೆಗಳಲ್ಲಿ ಪ್ರತಿಫಲಿಸುವುದು. ಆ ಬೇಡಿಕೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಲು ಕೊಳತ್ತೂರ್ ಮಣಿಯಂತಹ ತಮಿಳು ಪ್ರತ್ಯೇಕವಾದಿ ಕಾರ್ಯಕರ್ತರೇ ಹೋಗಬೇಕಾಗಿ ಬರುವುದು ಹೀಗೆ ಸರಣಿ ಕಥೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಈ ಮೊದಲಿಗೆ ವೀರಪ್ಪನ್ ಮತ್ತು ತಮಿಳು ಪ್ರತ್ಯೇಕವಾದಿಗಳ ಜತೆಗಿನ ಸಂಬಂಧದ ಬಗೆಗಿನ ಮಾಹಿತಿ ವದಂತಿಗಳಂತೆ ಹರಿದಾಡುತ್ತಿತ್ತು. ಈ ಸಾಕ್ಷ್ಯಚಿತ್ರ ಅದಕ್ಕೆ ಕೆಲವು ಸಾಕ್ಷ್ಯಗಳನ್ನು ನೀಡಿದೆ. ಇದು ವೀರಪ್ಪನ್‌ನನ್ನು ಹೇಗೆ ಬದಲಿಸತು? ಆದರೆ ಆತನ ಕಿಡ್ನಾಪ್‌ಗಳು ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇದ್ದವು.

ಇದನ್ನೂ ಓದಿ:  ಫೇಕ್ ನ್ಯೂಸ್ ತಡೆಗಟ್ಟುವಿಕೆಗೆ ಕ್ರಮಗಳು ಅಗತ್ಯ- ಬೆಕ್ಕಿಗೆ ಗಂಟೆ ಕಟ್ಟುವವರ್‍ಯಾರು? ಹೇಗೆ?

ಕೊನೆಯ ಎಪಿಸೋಡ್ ತಮಿಳುನಾಡಿನ ಎಸ್‌ಟಿಎಫ್ ನೇತೃತ್ವದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿ, ಗೂಢಚಾರಿಯನ್ನು ವೀರಪ್ಪನ್ ಬಳಿಗೆ ನುಸುಳುವಂತೆ ಮಾಡಿ ವೀರಪ್ಪನ್‌ನನ್ನು ಕೊಲ್ಲುವುದರ ಸುತ್ತ ಹೆಣೆಯಲಾಗಿದೆ. ಅಲ್ಲಿ ಕೂಡ ಪೊಲೀಸರ ಕಾರ್ಯಾಚರಣೆಗಳನ್ನು ನಿರ್ದೇಶಕ ಗುಮಾನಿಯಿಂದಲೇ ಕಾಣುತ್ತಾರೆ. ದಂತಚೋರ ವೀರಪ್ಪನ್ ತನ್ನ ಡಕಾಯತಿ ಕೆಲಸವನ್ನು ಸಲೀಸಾಗಿ ಮಾಡುವುದಕ್ಕೋಸ್ಕರ ಹಾಗು ಸೇಡಿನ ಸಲುವಾಗಿ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಪದೇಪದೇ ದಾಳಿಗಳನ್ನು ನಡೆಸುತ್ತಾ, ಕೊಲ್ಲುತ್ತಾ ಎರಡೂ ರಾಜ್ಯಗಳಿಗೆ ಹೇಗೆ ಕಾಡಿದ ಎಂಬುದನ್ನು ಅಂದು ಆತನ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರ, ಬದುಕುಳಿದಿರುವ ಆತನ ಸಹಚರರ, ಪತ್ರಕರ್ತರ ಹಾಗೂ ಮುತ್ತುಲಕ್ಷ್ಮಿಯವರ ಮಾತುಗಳ ಮೂಲಕ ನಿರ್ದೇಶಕ ಕಟ್ಟಿಕೊಡುತ್ತಾರೆ. ವೀರಪ್ಪನ್‌ನನ್ನು ಯಾವುದೇ ಹಂತದಲ್ಲಿಯೂ ನಿರ್ದೇಶಕ ಸಮರ್ಥಿಸಿಕೊಳ್ಳಲು ಹೋಗಿಲ್ಲ. ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಈ ಸಾಕ್ಷ್ಯಚಿತ್ರ ಪೊಲೀಸ್ ಪಡೆಯನ್ನು ಅದರಲ್ಲಿಯೂ ಕರ್ನಾಟಕ ಎಸ್‌ಟಿಎಫ್‌ಅನ್ನು (ಕರ್ನಾಟಕ ಎಸ್‌ಟಿಎಫ್ ಹೆಚ್ಚು ಅಟ್ರಾಸಿಟಿಗಳನ್ನು ನಡೆಸಿದೆ ಎಂಬುದು ತಿಳಿಯದೆ) ನೆಗೆಟಿವ್ ಆಗಿ ತೋರಿಸಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆ ಕಾರಣ ಮಾನವ ಹಕ್ಕುಗಳ ಬಗ್ಗೆ ಹಾಗು ಸ್ಟೇಟ್ ವಾಯ್ಲೆನ್ಸ್ ಬಗ್ಗೆ ಇರುವ ಅವಜ್ಞೆಯೂ ಕಾರಣ. ಸ್ಟೇಟ್ ವಾಯ್ಲೆನ್ಸ್ ಬಗ್ಗೆ ತನಿಖೆ ನಡೆಸಿ ಆರೋಪಿತರನ್ನು ಕಟಕಟೆಗೆ ನಿಲ್ಲಿಸುವ ವ್ಯವಸ್ಥೆ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಇನ್ನೂ ರೂಪುಗೊಂಡಿಲ್ಲ ಎಂಬುದು ಖೇದದ ಸಂಗತಿ.

ಮುತ್ತುಲಕ್ಷ್ಮಿ

ಇನ್ನು ವೀರಪ್ಪನ್ ಬಗೆಗಿನ ಸಮಗ್ರ ಚಿತ್ರಣವನ್ನು ಹೆಣೆಯಲು ಈ ಸಾಕ್ಷ್ಯಚಿತ್ರ ಸೋತಿದೆ. ವೀರಪ್ಪನ್ ಬಾಲ್ಯ, ಯೌವ್ವನ ಮತ್ತು ಆತ ಕಾಡುಗಳ್ಳ ಆಗಿದ್ದು ಹೇಗೆ ಎಂಬಂತಹ ಸಂಗತಿಗಳನ್ನು ಶೋಧಿಸಲು ಈ ಸಾಕ್ಷ್ಯಚಿತ್ರಕ್ಕೆ ಸಾಧ್ಯವಾಗಿಲ್ಲ. ಅದೇರೀತಿ ವೀರಪ್ಪನ್ ಜೊತೆಗೆ ಕಾಡಿನ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದವರು ಯಾರು ಎಂಬುದನ್ನೂ ಎಸ್ಟಾಬ್ಲಿಷ್ ಮಾಡಲು ಸಾಧ್ಯವಾಗಿಲ್ಲ. ವೀರಪ್ಪನ್‌ನನ್ನು ಒಮ್ಮೆ ಅರೆಸ್ಟ್ ಮಾಡಿ ಆತ ತಪ್ಪಿಸಿಕೊಂಡಿದ್ದು, ಕೃಪಾಕರ-ಸೇನಾನಿ ಅಪಹರಣ, ಕರ್ನಾಟಕದ ಮಾಜಿ ಮಂತ್ರಿ ಎಚ್ ನಾಗಪ್ಪ ಅಪಹರಣ ಮತ್ತು ಸಾವು, ಇನ್ನೂ ಹಲವರ ಅಪಹರಣಗಳು- ಇವ್ಯಾವುವೂ ಸಾಕ್ಷ್ಯಚಿತ್ರದಲ್ಲಿ ಜಾಗ ಪಡೆಯದೆ ಅಸಮಗ್ರ ಚಿತ್ರಣ ಎಂದೆನಿಸುತ್ತದೆ. ಆದರೂ ಇಲ್ಲಿಯವರೆಗೆ ವೀರಪ್ಪನ್ ಬಗೆಗೆ ಬಂದಿರುವ ಚಿತ್ರಣಗಳಲ್ಲಿ ವಿಭಿನ್ನವಾಗಿ ನಿಲ್ಲುವ ’ಹಂಟ್ ಫಾರ್ ವೀರಪ್ಪನ್’, ವೀರಪ್ಪನ್ ಅಥವಾ ಪೊಲೀಸ್ ಪಡೆಗಳ ಪಕ್ಷವನ್ನು ವಹಿಸದೆ, ಎರಡೂ ಬದಿಯ ಹಿಂಸೆಯನ್ನು ಕಟ್ಟಿಕೊಡುವ ಕೆಲಸ ಮಾಡಿದೆ. ಕೆಲವು ವರ್ಷಗಳ ಹಿಂದೆ ರಾಮ್ ಗೋಪಾಲ್ ವರ್ಮಾ ಎಂಬ ತೆಲುಗು ನಿರ್ದೇಶಕ ’ಕಿಲ್ಲಿಂಗ್ ವೀರಪ್ಪನ್’ ಎಂಬ ಅವಾಸ್ತವಿಕ ಹಾಗೂ ಪೊಲೀಸರನ್ನು ವಿಜೃಂಭಿಸುವ ಸಿನಿಮಾವೊಂದನ್ನು ಮಾಡಿದ್ದರು. ಸರಿಯಾದ ರಿಸರ್ಚ್ ಇಲ್ಲದೆ ಮಾಡಿದ್ದ ಅಂತಹ ಸಿನಿಮಾಗಳು ಹುಟ್ಟಿಸಿರಬಹುದಾದ ತಪ್ಪು ಕಲ್ಪನೆಗಳನ್ನು ಹೊಡೆಯುವಲ್ಲಿ ಕೂಡ ಸದರಿ ಸಾಕ್ಷ್ಯಚಿತ್ರ ಸಹಕರಿಸಲಿದೆ. ವೀರಪ್ಪನ್ ಬಗೆಗೆ ಇನ್ನಷ್ಟು ಶೋಧನೆ ಅಗತ್ಯವಿದೆ ಎಂಬುದನ್ನು ಕೂಡ ಈ ಸಾಕ್ಷ್ಯಚಿತ್ರ ಮನಗಾಣಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ರಾಹುಲ್ ಗಾಂಧಿಯನ್ನು ಟೀಕಿಸಿರುವ ಉದ್ಧವ್ ಠಾಕ್ರೆಯ ಭಾಷಣ 2019ರದ್ದು

0
ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ರಾಹುಲ್ ಗಾಂಧಿಯನ್ನು ನಾಲಾಯಕ್ (ನಿಷ್ಪ್ರಯೋಜಕ) ಎಂದು ಕರೆದಿರುವುದಲ್ಲದೆ, ಅವರಿಗೆ ಹೊಡೆಯಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಠಾಕ್ರೆ ಅವರು"...