HomeUncategorizedಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

- Advertisement -
- Advertisement -

ದೊರೆಸ್ವಾಮಿಯವರ ಮೊದಲ ಮುಖಾಮುಖಿಯಾಗಿದ್ದು ಶಿವಮೊಗ್ಗೆಯ ರೈತಸಂಘದ ಸಭೆಯಲ್ಲಿ. ನಾನಂದು ಆಹಾರದ ಹಕ್ಕಿನ ವಿಷಯದಲ್ಲಿ ಮಾತಾಡಿದೆ. ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ದೊರೆಸ್ವಾಮಿಯವರಿಗೆ
ನನ್ನ ಉಪನ್ಯಾಸ ಹಿಡಿಸಲಿಲ್ಲ. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಗೆ ವಿದೇಶದಲ್ಲಿ ಆಹಾರಕ್ಕಾಗಿ ದನಗಳನ್ನು ಕೊಬ್ಬಿಸಿ ಬೆಳೆಸಲಾಗುತ್ತದೆ. ವಧಾಗೃಹಗಳಲ್ಲಿ ನಿರ್ದಯವಾಗಿ ಕೊಲ್ಲಲಾಗುತ್ತದೆ ಎಂದು ವಿವರಿಸಿದರು. ಅವರ ಮಾತಿನ ದನಿ ದನದಮಾಂಸ ಸೇವಿಸುವರ ಬಗ್ಗೆ ಹೇವರಿಕೆ
ಹುಟ್ಟಿಸುವಂತಿತ್ತು. ಅವರು ದನವನ್ನು ದೇವರೆಂದೇನೂ ಹೇಳಲಿಲ್ಲ. ಪ್ರಾಣಿದಯೆ ಮತ್ತು ಅಹಿಂಸೆಯ ಹಿನ್ನೆಲೆಯಲ್ಲಿ ಮಾತಾಡಿದರು. ದೊರೆಸ್ವಾಮಿಯವರಿಗೆ ಹೋಲಿಸಿದರೆ ಗಾಂಧಿಯವರೇ ವಾಸಿಯೆನಿಸಿತು. ಅವರು ‘ನಾನು ಪೂಜಿಸುವ ಹಸುವನ್ನು ಬಿಟ್ಟುಬಿಡು ಎಂದು ವಿನಂತಿಸುತ್ತೇನೆ. ಸೋದರನು ತಮ್ಮ ಕೋರಿಕೆ ನಿರಾಕರಿಸಿದರೆ, ಪಶುವನ್ನು ಕೊಂಡುಹೋಗಲು ಬಿಟ್ಟುಬಿಡುವೆ’ ಎಂದು ಉದಾರತೆ ತೋರಬಲ್ಲವರಾಗಿದ್ದರು. ಆದರೆ ಹಿಂಸೆಯನ್ನು ಧಾರ್ಮಿಕ ಶ್ರದ್ಧೆ-ನಂಬಿಕೆ ದೃಷ್ಟಿಯಿಂದಲೊ, ಅಹಿಂಸೆ-ಕೃಷಿ ಸಂಸ್ಕೃತಿ-ಕ್ಷೀರ ಕ್ಷಾಮದ ಹೆಸರಲ್ಲ್ಲೊ ವಿಶ್ಲೇಷಿಸುವ ಎಲ್ಲರಿಗೂ, ತಾವು ಸಮುದಾಯಗಳ ಪಾರಂಪರಿಕ ಆಹಾರದ ವಿಷಯದಲ್ಲಿ ಮಾಡುವ ಸಾಂಸ್ಕೃತಿಕ ಹಿಂಸೆ ಅರಿವಾಗುವುದಿಲ್ಲ. ವಿಚಿತ್ರವೆಂದರೆ, ಇವರ ಅಹಿಂಸೆಯ ಚರ್ಚೆ ಕುರಿಕೋಳಿಗಳಿಗೆ ವಿಸ್ತರಣೆಯಾಗದೆ ದನಕ್ಕೆ ನಿಂತುಬಿಡುವುದು. ಪ್ರಾಣಿ ಸಾಕಣೆದಾರರೂ ಮಾರುಗರೂ ಇವರ ವಾದವನ್ನು ಒಪ್ಪುವುದಿಲ್ಲ. ಸಭೆಯಲ್ಲಿದ್ದ ರೈತರು ದೊರೆಸ್ವಾಮಿಯವರನ್ನು ಒಪ್ಪಲಿಲ್ಲ. ನನಗೆ ದೊರೆಸ್ವಾಮಿಯವರ ಬಗ್ಗೆ ಆಸಕ್ತಿ ಉಳಿಯಲಿಲ್ಲ.

ಸಾರ್ವಜನಿಕ ಭ್ರಷ್ಟಾಚಾರದ ವಿಷಯದಲ್ಲಿ ರಾಜಿರಹಿತ ಹೋರಾಟ ಮಾಡುವ, ವೈಯಕ್ತಿಕ ಬದುಕಿನಲ್ಲಿ ಸರಳರೂ ಪ್ರಾಮಾಣಿಕರೂ ಆಗಿರುವ, ಮೇಲ್ಜಾತಿ ಹಿನ್ನೆಲೆಯಿಂದ ಬಂದ ಹೆಚ್ಚಿನ ಗಾಂಧಿವಾದಿಗಳ ಸಾಮಾಜಿಕ ಚಿಂತನಾ ಕ್ರಮದಲ್ಲಿ ಕೆಲವು ತಾತ್ವಿಕ ಸಮಸ್ಯೆಗಳಿವೆ. ಅವೆಂದರೆ-ಸಾಮೂಹಿಕ ಹೋರಾಟಕ್ಕೆ ಬದಲು ವ್ಯಕ್ತಿಕೇಂದ್ರಿತ ಹೋರಾಟಕ್ಕೆ ಆದ್ಯತೆ ಕೊಡುವುದು; ತಳಸ್ತರದ ಸಮುದಾಯಗಳ ಆಹಾರ-ಪಾನೀಯ ವಿಷಯದಲ್ಲಿ ಅಸೂಕ್ಷ್ಮವಾಗಿರುವುದು; ಅಸ್ಪೃಶ್ಯತೆ ಸಮಸ್ಯೆಯನ್ನು ಹಕ್ಕುಪ್ರಜ್ಞೆಯ ಹೋರಾಟದ ಮಾರ್ಗಕ್ಕೆ ಬದಲಾಗಿ ಸವರ್ಣೀಯರ ಮನವೊಲಿಸುವ ವಿಧಾನದಲ್ಲಿ ನಿವಾರಿಸುವುದಕ್ಕೆ ಒತ್ತುಕೊಡುವುದು; ಭಿನ್ನಮತಗಳನ್ನು ಹಿಂಸೆಯ ಮೂಲಕ ಬಗೆಹರಿಸಬೇಕೆಂದು ಭಾವಿಸುವ ಬಹುಸಂಖ್ಯಾತವಾದವನ್ನು, ಧಾರ್ಮಿಕ ಅಭಿವ್ಯಕ್ತಿ ಎಂದು ಪರಿಭಾವಿಸುವುದು. ಹೀಗಾಗಿಯೇ ಅನೇಕ ಗಾಂಧಿವಾದಿಗಳು ೯೦ರ ದಶಕದ ನಂತರ ಕೋಮುವಾದಿ ನುಡಿಗಟ್ಟಲ್ಲಿ ಮಾತಾಡಿದರು. ‘ಮಸೀದಿ ಕೆಡವಿದ್ದು ಸರಿ’ ಎಂದು ಕಾಂಗ್ರೆಸ್ ಮುಖಂಡ ಹಾರನಹಳ್ಳಿ ರಾಮಸ್ವಾಮಿ ಬಹಿರಂಗವಾಗಿ ಸಮರ್ಥಿಸಿದರು.

ಆದರೆ ಮುಂಬಂದ ವರ್ಷಗಳಲ್ಲಿ ದೊರೆಸ್ವಾಮಿಯವರು ತೊಡಗಿಸಿಕೊಂಡ ಸಾರ್ವಜನಿಕ ಹಿತಾಸಕ್ತಿಯ ಚಳವಳಿಗಳನ್ನು ನೋಡುವ, ಅವರ ಜತೆಗೂಡಿ ಕೆಲಸ ಮಾಡುವ ಕಿಂಚಿದವಕಾಶ ಸಿಕ್ಕಿತು. ಆಗವರ ವ್ಯಕ್ತಿತ್ವದ ಮತ್ತೊಂದು ಆಯಾಮ ಅರಿವಾಯಿತು. ಅವರು ಮತೀಯವಾದಿ ರಾಜಕಾರಣದ ವಿರುದ್ಧ ಖಚಿತ ನಿಲುವನ್ನು ತಳೆದಿದ್ದರು. ಭೂರಹಿತರ ಪರವಾಗಿ ನಿಂತರು. ಹೊಸತಲೆಮಾರಿನ ಹುಡುಗ ಹುಡುಗಿಯರೇ ಇರುವ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದರು. ಚಿಂತಕರ ಹತ್ಯೆಯನ್ನು ವಿರೋಧಿಸಿದರು. ಅನಂತಮೂರ್ತಿ, ಕಾರ್ನಾಡ್, ದೊರೆಸ್ವಾಮಿಯವರು ಬಾಳಿನ ಕೊನೆಯ ದಿನಗಳಲ್ಲಿ ಮತೀಯವಾದದ ವಿಷಯದಲ್ಲಿ ತಳೆದ ನಿಲುವು ಚಾರಿತ್ರಿಕ ಮಹತ್ವದ್ದಾಗಿತ್ತು. ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಹೋರಾಟಗಾರರನ್ನು ಅನಗತ್ಯ ಶಂಕಿಸುವ ಅಸೂಕ್ಷ್ಮಮತಿಗಳ ಮುಂದೆ ದೊರೆಸ್ವಾಮಿ ದೊಡ್ಡವರು ಅನಿಸಿತು. ದೇಶವನ್ನು ಕಾಡುವ ಸಮಸ್ಯೆಯನ್ನೆತ್ತಿಕೊಂಡು ಸಾಮೂಹಿಕ ಆಂದೋಲನ ಶುರುವಾದಾಗ, ಅದು ವಿಭಿನ್ನ ಧಾರೆಗಳಿಂದ ಸಮಾನ ಮನಸ್ಕರನ್ನು ಒಳಗೊಳ್ಳುತ್ತದೆ. ಆಗ ಕೆಲವು ವಿಷಯಗಳಲ್ಲಿರುವ ತಾತ್ವಿಕ ಭಿನ್ನಮತವನ್ನು ಪಕ್ಕಕ್ಕಿಟ್ಟೊ ಮಂದೂಡಿಯೊ ಒಗ್ಗೂಡಬೇಕಾಗುತ್ತದೆ. ಇದು ರಾಜಿಯ ಮಾತಲ್ಲ. ದೊಡ್ಡ ಯುದ್ಧಗಳಲ್ಲಿ ತಳೆಯಬೇಕಾದ ವಾಸ್ತವವಾದಿ ಯುದ್ಧನೀತಿ. ಎಂತಲೇ ದೊರೆಸ್ವಾಮಿ, ಗೌರಿ, ಕನ್ಹಯ್ಯಾ, ಜಿಗ್ನೇಶ್, ಉಮರ್ ಖಾಲಿದ್ ಒಟ್ಟಿಗೆ ಭಾಗವಹಿಸುವ ಸಭೆಗಳು ಸಾಧ್ಯವಾದವು.

ದೊರೆಸ್ವಾಮಿಯವರಲ್ಲಿ ನಾನು ಕಂಡ ಮುಖ್ಯ ಆದರ್ಶಗಳಿವು:
ತನಗಾಗಿ ಬದುಕುವುದಲ್ಲ, ಲೋಕದ ಹದುಳಕ್ಕಾಗಿ ಬದುಕುವುದು; ಅಧಿಕಾರಸ್ಥರನ್ನು ಎದುರುಹಾಕಿಕೊಂಡು ತುಳಿಯಲ್ಪಟ್ಟವರ ಹಕ್ಕುಗಳಿಗಾಗಿ ತುಡಿಯುವುದು; ಗಂಭೀರ ಸಮಸ್ಯೆಗಳ ಪರಿಹಾರದಲ್ಲಿ ತೊಡಗಿರುವಾಗಲೂ ಹಾಸ್ಯಪ್ರಜ್ಞೆ ಕಳೆದುಕೊಳ್ಳದಿರುವುದು; ಮಾರುಕಟ್ಟೆ ಎಕಾನಮಿ ಸೃಷ್ಟಿಸಿರುವ ಸ್ವಕೇಂದ್ರಿತ ಏಳಿಗೆ ಮತ್ತು ಅಸಹ್ಯಕರವಾದ ಸಿರಿವಂತಿಕೆ ಪ್ರದರ್ಶನದ ವಾತಾವರಣದಲ್ಲಿ, ಸೋಜಿಗಪಡುವಷ್ಟು ಸರಳತೆಯಲ್ಲಿ ಬದುಕುವುದು; ಹೊಸತಲೆಮಾರಿನ ಜತೆ ಬೆರೆತು ತನ್ನ ಮುಪ್ಪನ್ನು ಮರೆಯುವುದು; ನೇರವಾಗಿ ಪ್ರಾಮಾಣಿಕವಾಗಿ ಭಿನ್ನಮತವನ್ನು ವ್ಯಕ್ತಪಡಿಸುವುದು ಮತ್ತು ಆಲಿಸುವುದು; ಸಾವಿನ ಕೊನೆಯ ಗಳಿಗೆಯವರೆಗೂ ಸಮಾಜದ ಋಣವನ್ನು ಹಿಂತಿರುಗಿಸುವಂತೆ ಕೆಲಸ ಮಾಡುವುದು.

ಅರ್ಥಪೂರ್ಣ ದೀರ್ಘಾಯುಷ್ಯಕ್ಕೆ ಸಂಬಂಧಿಸಿದಂತೆ ಉಪನಿಷತ್ತಿನ ಪ್ರಸಿದ್ಧ
ಮಾತಿದೆ- ‘ಕುರ್ವನ್ನೇವಹ ಜಿಜೀವಿಷೇತ್ ಶತಂ ಸಮಾಃ’. ಲೋಕಹಿತಕ್ಕೆ ದುಡಿಮೆ ಮಾಡುತ್ತಲೇ ಶತಮಾನ ಕಳೆವ ಹಾದಿಯನ್ನು ಆರಿಸಿಕೊಳ್ಳುವುದಕ್ಕೆ ಪ್ರೇರೇಪಿಸುವ ಮಾತಿದು. ಎಚ್ಚರಿಕೆಯಿಂದ ಆರೋಗ್ಯ ಕಾಪಾಡಿಕೊಂಡು ಬದುಕಿದ ಶತಾಯುಷಿಗಳು ಇದ್ದರು. ಅವರಲ್ಲಿ ಕೆಲವರು ಬೌದ್ಧಿಕ ನಿಷ್ಕ್ರಿಯತೆಯಿಂದ, ಕೇಡಿನ ಶಕ್ತಿಗಳಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದೂ ಉಂಟು. ಆದರೆ ವೈಚಾರಿಕ ಸ್ಪಷ್ಟತೆಯಿದ್ದ ದೊರೆಸ್ವಾಮಿಯವರು ಹೆಗಲ ಮೇಲಿನ ವಸ್ತ್ರವನ್ನು ಮಲಿನವಾಗಗೊಡಲಿಲ್ಲ. ಮೊದಲನೇ ಮಹಾಯುದ್ಧದ ಕಾಲದಲ್ಲಿ ಹುಟ್ಟಿದ ಅವರು ಅಘೋಷಿತ ಮೂರನೇ ಮಹಾಯುದ್ಧದ ಈ ಕಾಲದಲ್ಲಿ ತೀರಿಕೊಳ್ಳುವ ನಡುವೆ, ದೊಡ್ಡ ಬಾಳ್ವೆಯನ್ನು ಮಾಡಿದರು.

ಕರ್ನಾಟಕದ ಕಳೆದೆರಡು ದಶಕಗಳಲ್ಲಿ, ಸಾರ್ವಜನಿಕ ಬದುಕು ಹದಗೆಟ್ಟ ಗಳಿಗೆಯಲ್ಲೆಲ್ಲ, ಅನೇಕ ಆದರ್ಶವಾದಿ ನೈತಿಕಪ್ರಜ್ಞೆಯುಳ್ಳ ವ್ಯಕ್ತಿಗಳು ಚಳವಳಿಗಾರರಾಗಿ ರೂಪಾಂತರಗೊಂಡು ತಮ್ಮ ದನಿ ಮೊಳಗಿಸಿದರು. ಇವರಲ್ಲೆಲ್ಲ ವಿಶಾಲ ನೆಲೆಯ ಚಳುವಳಿಗಳ ಭಾಗವಾದವರು ಮತ್ತು ತಮ್ಮ ಚಿಂತನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದುಕೊಂಡವರು ದೊರೆಸ್ವಾಮಿಯವರು. ಗಾಂಧೀವಾದದ ಸೈದ್ಧಾಂತಿಕ ರೂಪಾಂತರಕ್ಕೆ ಅವರೊಂದು ಪ್ರತೀಕ. ಡೆಮಾಕ್ರಸಿಗೆ ಅರ್ಥಬರುವುದು ಬಲಿಷ್ಠತೆಯ ಹೆಸರಿನಿಂದ ಮೆರೆವ ಸರ್ವಾಧಿಕಾರಿಗಳಿಂದಲ್ಲ; ನಮ್ರತೆಯಿಂದ ಬಾಗುವ ಮತ್ತು ನೈತಿಕ ಕಠೋರತೆಯಿಂದ ಸೆಟೆದು ನಿಲ್ಲುವ ದೊರೆಸ್ವಾಮಿಯವರಂತಹ
ಧೀಮಂತರಿಂದ.

ದೊರೆಸ್ವಾಮಿಯವರ ಜತೆ ಗೌರಿಸ್ಮಾರಕ ಟ್ರಸ್ಟಿನಲ್ಲಿ ಕೆಲಸ ಮಾಡುವಾಗ, ಅವರಿಗಿದ್ದ ಸಮಯಪ್ರಜ್ಞೆ, ಕಾನೂನಿನ ತಿಳಿವಳಿಕೆ, ಸಭೆ ನಡೆಸುವಲ್ಲಿನ ಡೆಮಾಕ್ರಟಿಕ್ ಗುಣ, ಸರಳತೆ ಕಂಡು ಬೆರಗಾಗುತ್ತಿತ್ತು. ಅವರೊಮ್ಮೆ ಗಾಂಧಿಭವನದಲ್ಲಿ ನನ್ನ ಮತ್ತೆ ಜಿಗ್ನೇಶರ ಹೆಗಲಮೇಲೆ ಕೈಹಾಕಿ ನಡೆದಿದ್ದು ನೆನಪಾಗುತ್ತಿದೆ. ಅವರ ಸರಳತೆ ನಿಷ್ಠುರತೆ ಪ್ರಾಮಾಣಿಕತೆಗಳ ಸಮೀಪಕ್ಕೂ ಹೋಗಲಾರದ ನನ್ನಂತಹವರಿಗೆ ಅದೊಂದು ಹರಕೆಯ ಕೈ; ಆದರೆ
ಹಾಗೆ ಬದುಕಲಾರದ ಕಾರಣಕ್ಕೆ ಅತಿಭಾರದ ಕೈಸ್ಪರ್ಶ. ಆರಡಿ ಎತ್ತರದ ಮನುಷ್ಯ ತಮ್ಮ ಗೆಯ್ಮೆಯಿಂದ ಮಾತ್ರವಲ್ಲ, ನನ್ನ ತಲೆಮಾರಿನವರ ದೌರ್ಬಲ್ಯಗಳಿಂದಲೂ ಮತ್ತಷ್ಟು ಎತ್ತರವಾಗಿ ಕಂಡರೋ ಏನೊ?

ಕಡಲ ತಡಿಗೆ ಹೋದಾಗಲೆಲ್ಲ ಕುಮುಟಾದಲ್ಲಿದ್ದ ಕವಿ ಸನದಿಯವರನ್ನು ಕಾಣುವ ರೂಢಿ ಇರಿಸಿಕೊಂಡಿದ್ದೆ. ಮುಂಬೈನಿಂದ ಮರಳಿದ್ದ ಅವರು ಹಳೆಯ ತೋಟದ ಮನೆಯೊಂದನ್ನು ಖರೀದಿಸಿ ವಾಸವಾಗಿದ್ದರು. ಮನೆಯಲ್ಲಿ ಕೆಲವು ಮಾರ್ಪಾಡು ಮಾಡಿಕೊಂಡಿದ್ದರು. ಆದರೆ ಎದುರಿನ ತುಳಸಿಕಟ್ಟೆ ಮತ್ತು ಮಾವಿನಮರವನ್ನು ಹಾಗೆಯೇ ಉಳಿಸಿಕೊಂಡಿದ್ದರು. ಆ ಮರವೋ ನೂರು ವರ್ಷ ಬಾಳಿದ ಹಳೆಯ ಬೃಹದಾಕಾರ. ಎಷ್ಟೊ ಕಡಲಗಾಳಿಯನ್ನೂ ಮುಸಲಧಾರೆಯನ್ನೂ ಕುದಿಯನ್ನೂ ಎದುರಿಸಿ ದೀಪಸ್ತಂಭದಂತೆ ನಿಂತಿತ್ತು. ಅಗಸಕ್ಕೆ ಚಾಚಿದ ತೋಳುಗಳಂತಿದ್ದ ತುದಿ ಟೊಂಗೆಗಳು ಒಣಗುತ್ತಿದ್ದವು. ಹಸಿರಿದ್ದ ಕೊಂಬೆಗಳಲ್ಲಿ ಗೊಂಚಲು ಫಲ ಬಿಡುತ್ತಿತ್ತು. ಫಲವನ್ನು ಮರಹತ್ತಿ ಕೀಳುವುದು ಸಾಧ್ಯವಿರಲಿಲ್ಲ. ಅವೇ ಮಾಗಿ ತೊಟ್ಟು ಕಳಚಿ ಉದುರಿದಾಗ ಹೆಕ್ಕಿಕೊಳ್ಳಬೇಕಿತ್ತು. ಸಿಹಿಯಾದ ಸುವಾಸನೆಯ ಬಾದಾಮಿ ಹಣ್ಣು. ದೊರೆಸ್ವಾಮಿಯವರನ್ನು ನೆನೆಯುವಾಗ ಈ ಮರ ಕಣ್ಮುಂದೆ ಬರುತ್ತದೆ. ಫರಕೆಂದರೆ, ದೊರೆಸ್ವಾಮಿ ಅವರಿಂದ ಅನುಭವ ಚಿಂತನೆ ಹೋರಾಟಪ್ರಜ್ಞೆ ಎಂಬ ಹಣ್ಣನ್ನು ಪಡೆಯಲು, ಮರವೇರುವ ತ್ರಾಸವಿರಲಿಲ್ಲ. ಚಿಕ್ಕಮಕ್ಕಳೂ ಕೈಚಾಚಿ ಕಿತ್ತುಕೊಳ್ಳುವಂತೆ ಅದು ಕೊಂಬೆಯನ್ನು ನೆಲಕ್ಕೆ ಬಾಗಿಸಬಲ್ಲದಾಗಿತ್ತು.

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...