1982ರ ಸಮಯ. ಆಂಧ್ರಪ್ರದೇಶದಲ್ಲಿ 5 ವರ್ಷದಲ್ಲಿ 5 ಬಾರಿ ಮುಖ್ಯಮಂತ್ರಿಗಳು ಬದಲಾಗಿದ್ದರು. ಕಾಂಗ್ರೆಸ್ಸಿನ ಹೈಕಮಾಂಡ್ ಸಂಸ್ಕೃತಿಯ ಉತ್ತುಂಗ. ಆಗ ಒಂದು ಸಲ ಕಾಂಗ್ರೆಸ್ ಪಕ್ಷದ ನಾಯಕ ಹೈದ್ರಾಬಾದಿನ ಏರ್‌ಪೋರ್ಟಿಗೆ ಬಂದಿಳಿದಿದ್ದರು. ಅವರನ್ನು ಸ್ವಾಗತಿಸಲು ಆಗಿನ ಮುಖ್ಯಮಂತ್ರಿ ಟಿ. ಆಂಜಯ್ಯ ಸುರಕ್ಷಾ ಗೆರೆಯನ್ನು ದಾಟಿ ಬಂದಿರುತ್ತಾರೆ. ಅದರಿಂದ ಸಿಟ್ಟಿಗೆದ್ದ ರಾಜೀವ್, ಅಲ್ಲಿಯೇ ಸಾರ್ವಜನಿಕರೆದುರು ಅವರಿಗೆ ಬಯ್ಯುತ್ತಾರೆ. ಮುಖ್ಯಮಂತ್ರಿಯನ್ನು ಬಫೂನ್ ಎಂದು ಕರೆಯುತ್ತಾರೆ. ಕೆಲವೇ ದಿನಗಳ ನಂತರ ಮುಖ್ಯಮಂತ್ರಿಯನ್ನು ಬದಲಿಸಲಾಗುತ್ತೆ. ಆಗ ಶುರುವಾಗಿದ್ದು ತೆಲುಗುವಾರಿ ಆತ್ಮಗೌರವಂ ಎಂಬ ನಡೆ. ದಶಕಗಳ ಕಾಂಗ್ರೆಸ್ ಆಳ್ವಿಕೆ ಕೊನೆಗೊಳ್ಳುತ್ತದೆ.

2021ರ ಕರ್ನಾಟಕದಲ್ಲಿ, ಕಾಂಗ್ರೆಸ್‌ನ ಹೈಕಮಾಂಡ್ ಸಂಸ್ಕೃತಿಯನ್ನು ಟೀಕಿಸುತ್ತಲೇ ಅಧಿಕಾರಕ್ಕೆ ಬಂದ ಬಿಜೆಪಿಯ ಮುಖ್ಯಮಂತ್ರಿ ಬದಲಾವಣೆಯ ಪ್ರಹಸನ ನಡೆಯುತ್ತಿದೆ. ಯಡಿಯೂರಪ್ಪನವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿ ಪಟ್ಟ ವಹಿಸಿಕೊಂಡಾಗಲೇ ಅವರಿಗೆ ವಯಸ್ಸು 75 ಮೀರಿತ್ತು, ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂಬ ಪಟ್ಟವನ್ನೂ ಆಗಲೇ ಪಡೆದಿದ್ದರು. ಹಾಗಾಗಿ ಈ ಕಾರಣಗಳನ್ನಂತೂ ಒಪ್ಪಲು ಸಾಧ್ಯವಿಲ್ಲ, ಹಾಗಾದರೆ ಏನು ಕಾರಣ? ಅದು ’ಹೈಕಮಾಂಡ್ಗೆ ಮಾತ್ರ ಗೊತ್ತು. ಮುಂದಿನ ಮುಖ್ಯಮಂತ್ರಿ ಯಾರು ಎಂಬುದೂ ಕೇವಲ ’ಹೈಕಮಾಂಡ್ಗೆ ಗೊತ್ತು. ಈಗ ಶಾಸಕರ ಸಭೆ ಎಂಬ ಪ್ರಹಸನ ನಡೆಯುತ್ತಲಿದೆ. ಈ ನಮ್ಮ ಚುನಾಯಿತ ಶಾಸಕರು ತಮಗೆ ಒಪ್ಪಿಸಿದ ವರದಿಯನ್ನು ಓದಿ, ಮುಂದಿನ ಮುಖ್ಯಮಂತ್ರಿ ಯಾರು ಎಂದು ಘೋಷಿಸಲಿದ್ದಾರೆ. ಈ ಶಾಸಕರ ಯಾವ ಮಾತೂ ನಡೆಯುವುದಿಲ್ಲ ಎಂಬುದು ಬಹಿರಂಗ ಸತ್ಯ. ಇತ್ತೀಚಿನ ಸುದ್ದಿಯ ಪ್ರಕಾರ ಶಿಗ್ಗಾಂವದ ಶಾಸಕರಾದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಲಾಗಿದೆ. ಆದರೆ ಈ ಹೊಸ ಮುಖ್ಯಮಂತ್ರಿಯಿಂದ ಏನನ್ನಾದರೂ ಸಾಧಿಸಬಹುದೇ, ಸಾಧನೆಯ ಅಪೇಕ್ಷೆಗಳನ್ನು ಅವರ ವಿರೋಧಿಗಳನ್ನು ಬಿಡಿ, ಅವರ ಸಮರ್ಥಕರೂ ಅದರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ.

ಇನ್ನೂ ಮುಖ್ಯಮಂತ್ರಿಯಾಗಲು ಮಾನದಂಡಗಳೇನು ಎಂಬ ಚರ್ಚೆ ಬಂದಾಗ ಕೇಳಿಬರುತ್ತಿರುವ ಮಾತುಗಳು; ಸಂಭವನೀಯ ಮುಖ್ಯಮಂತ್ರಿಗಳ ಸಾಧನೆಯನ್ನು ಪರಿಗಣಿಸಲಾಗುತ್ತಿದೆಯೇ? ಅವರು ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ, ನೀರಾವರಿ, ಉದ್ಯೋಗ ಸೃಷ್ಟಿಯ ವಿಚಾರಗಳಲ್ಲಿ ಅದ್ಭುತವಾದ ಕೆಲಸ ಮಾಡಿದ್ದಾರೆಯೇ? ತಮ್ಮ ತಮ್ಮ ಇಲಾಖೆಗಳಲ್ಲಿ ಉತ್ತಮ ಆಡಳಿತ ನೀಡಿದ ಚರ್ಚೆಯಾಗುತ್ತಿದೆಯೇ? ಇಲ್ಲ, ಚರ್ಚೆ ಆಗುತ್ತಿರುವುದು ಜಾತಿ ಲೆಕ್ಕಾಚಾರ!

ಈಗ ಜನರು ಕೇಳಬೇಕಿರುವ/ಕೇಳಿಕೊಳ್ಳಬೇಕಿರುವ ಪ್ರಶ್ನೆ: ಇದು ರಾಜಕಾರಣವಾ? ಇದನ್ಯಾಕೆ ನಾವು ಸಹಿಸಿಕೊಳ್ಳಬೇಕು? ಅಧಿಕಾರದಲ್ಲಿರುವವರು ಉದ್ಯೋಗ ಸೃಷ್ಟಿಯ ಬಗ್ಗೆ ಚರ್ಚೆ ಹುಟ್ಟುಹಾಕಿದ್ದಾರೆಯೇ? ನಿರುದ್ಯೋಗ ಹೆಚ್ಚುತ್ತಿರುವ ಸಮಯದಲ್ಲಿ ಅದನ್ನು ಒಂದು ಸಮಸ್ಯೆ, ಆದ್ಯತೆಯ ವಿಷಯ ಎಂದು ಸರ್ಕಾರದವರು ಪರಿಗಣಿಸಿದ್ದಾರೆಯೇ? ಕಳೆದ ಒಂದೂವರೆ ವರ್ಷದಿಂದ ಕೊರೊನಾದಿಂದ, ಲಾಕ್‌ಡೌನ್‌ನಿಂದ ರಾಜ್ಯ ತತ್ತರಿಸಿದ್ದರೂ ಆರೋಗ್ಯ ಸೇವೆಯಲ್ಲಿ ಯಾವ ಬದಲಾವಣೆ ಆಗಬೇಕು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೇಗೆ ಸುಧಾರಿಸಬೇಕು ಎಂಬದು ಚರ್ಚೆಯಾಗುತ್ತಿದೆಯೇ? ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆಗಳು ಸುದ್ದಿಯೂ ಆಗದ ಪರಿಸ್ಥಿತಿಗೆ ಯಾಕೆ ಬಂದೆವು ನಾವು? ಮರ್ಯಾದೆಗೇಡು ಹತ್ಯೆಗಳು, ಜಾತಿ ದೌರ್ಜನ್ಯಗಳು ಹೆಚ್ಚುತ್ತಲೇ ಇರುವಾಗ, ಇವುಗಳನ್ನು ನಿಲ್ಲಿಸಲು ಏನಾದರೂ ಕಾರ್ಯಕ್ರಮ ಬೇಕಲ್ಲವೇ?
ಇವ್ಯಾವದನ್ನೂ ಮಾಡದೇ ಇರುವ ರಾಜಕಾರಣವನ್ನು ಕನ್ನಡಿಗರು ನೋಡುತ್ತಿದ್ದಾರೆ. ಲಕ್ಷಾಂತರ ಜನರು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟು ಗಳಿಸಿದ ಪ್ರಜಾಪ್ರಭುತ್ವದ ಅಳಿವಿಗೆ ಶ್ರಮಿಸುತ್ತಿರುವ ಸಂದರ್ಭದಲ್ಲಿ ಭ್ರಮನಿರಸನ ಮಡುಗಟ್ಟಿದೆ ಎಂದು ಕಾಣುತ್ತಿದೆ. ಎಲ್ಲರೂ ಭ್ರಷ್ಟರು, ಯಾರಿಂದ ಏನೂ ಆಗುವುದಿಲ್ಲ ಎಂಬ ಸಿನಿಕತೆಯ ಪ್ರಚಲಿತವಾಗಿದೆ ಎಂದು ಕಾಣುತ್ತಿದೆ. ಆದರೆ ಇದು ನಿಜವೇ?

This is battle of perception! ಈ ಪ್ರಶ್ನೆಗೆ ಅವರವರ ಗ್ರಹಿಕೆ, ಚಿಂತನೆ, ಅವರ ಸುತ್ತಲೂ ಇರುವವರ ಚಿಂತನೆಯ ಮೇಲೆ ಉತ್ತರ ಸಿಗುವುದು.

ನನಗಂತೂ ಉತ್ತರ ಸ್ಪಷ್ಟವಾಗಿ ಕಾಣಿಸುತ್ತಿದೆ; ಇಂದಿನ ಸಿನಿಕತೆ ತಾತ್ವಿಕ ಸಿಟ್ಟಾಗಿ ಹೊರಹೊಮ್ಮಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಮಾಧ್ಯಮಗಳು ನಿರಂತರವಾಗಿ ಬಿತ್ತರಿಸುತ್ತಿರುವ ಸುಳ್ಳುಗಳು ಸುಳ್ಳುಗಳೆಂದು ತಿಳಿಯದೇ ಇರುವುದಿಲ್ಲ. ಈಗಾಗಲೇ ಈ ಸುಳ್ಳು ಹೇಳುತ್ತಿರುವ ಮಾಧ್ಯಮಗಳು ತಮ್ಮ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಅಲ್ಲವಾದರೂ ಬಹುಮಟ್ಟಿಗೆ ಕಳೆದುಕೊಂಡಿವೆ. ಈ ದೇಶದ ಜನತೆಯೊಂದಿಗೆ ಕನ್ನಡಿಗರೂ ಬದಲಾಗಬಹುದು ಎಂಬುದನ್ನು ಈ ಮುನ್ನ ಅನೇಕ ಬಾರಿ ತೋರಿಸಿದ್ದಾರೆ. ಹೊಸದೊಂದು ರಾಜಕಾರಣ ಹುಟ್ಟುವ ಸಾಧ್ಯತೆಗಳು ಖಂಡಿತವಾಗಿಯೂ ಇವೆ.

ಆದರೆ, ಇದು ಎಷ್ಟೇ ಅನಿವಾರ್ಯವಾಗಿದ್ದರೂ ತನ್ನಿಂತಾನೆ ಆಗುವ ಪ್ರಕ್ರಿಯೆಯಲ್ಲ. ರಾಜ್ಯದ ಜನರೆಲ್ಲರೂ ಈ ಹೊಸ ರಾಜಕಾರಣದ ಸಾಧ್ಯಾಸಾಧ್ಯತೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿದೆ. ಅದಕ್ಕಿಂತ ಮುಖ್ಯವಾಗಿ ಈ ಸಿನಿಕತೆಯ ಕಾರ್ಮೋಡಗಳನ್ನು ಬದಿಗೆ ತಳ್ಳುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕಿದೆ. ರಾಜಕೀಯ ಎಂಬ ಕ್ಷೇತ್ರವು ಕೇವಲ ನೋಡಿ ಟೀಕಿಸಲು, ಭ್ರಮನಿರಸನಗೊಳ್ಳಲು ಇರುವ ಕ್ಷೇತ್ರವಲ್ಲ ಎಂಬುದನ್ನು ಪದೇಪದೇ ನಮಗೆ ನಾವು ಹೇಳಿಕೊಳ್ಳಬೇಕಿದೆ. ರಾಜ್ಯ ಎದುರಿಸಿದ ಎಲ್ಲಾ ಪ್ರಕೃತಿ ವಿಕೋಪಗಳಲ್ಲಿ, ಕೊರೊನಾ ಮತ್ತು ಲಾಕ್‌ಡೌನ್ ತಂದಿಟ್ಟ ಸಂಕಷ್ಟಗಳಲ್ಲಿ ಸಾವಿರಾರು ಜನರು ಸಂಕಷ್ಟದಲ್ಲಿರುವವರಿಗೆ ಶಕ್ತಿಮೀರಿ ಸಹಾಯ ಮಾಡಿದ್ದನ್ನು ನಾವು ನೋಡಿದ್ದೇವೆ. ಇತರರಿಗೆ ಸಹಾಯ ಮಾಡುವ ಒಳ್ಳೆಯತನ ನಮ್ಮೆಲ್ಲರಲ್ಲಿದೆ, ಆ ಒಳ್ಳೆಯತನವನ್ನು ರಾಜಕಾರಣಕ್ಕೂ ಬಳಸಬಹುದು ಎಂಬ ನಂಬಿಕೆಯನ್ನು ಗಟ್ಟಿಗೊಳಿಸಬೇಕಿದೆ.

ತತ್ವಶಾಸ್ತ್ರದ ಒಂದು ವಾದದ ಪ್ರಕಾರ, 15ನೇ ಶತಮಾನದಲ್ಲಿ ಯುರೋಪಿನಲ್ಲಿ ನೀವು ಹುಟ್ಟಿದ್ದರೆ ನೀವು ನಾಸ್ತಿಕರಾಗುವ ಸಾಧ್ಯತೆಯೇ ಇದ್ದಿಲ್ಲವಂತೆ. ಅಂದರೆ ನಮ್ಮ ವಿಚಾರಧಾರೆಯೆಲ್ಲವೂ ನಮ್ಮ ಸುತ್ತಲಜನರ ವಿಚಾರಧಾರೆಯ ಅನುಗುಣವಾಗಿಯೇ ರೂಪುಗೊಳ್ಳುತ್ತದೆ. ಇದನ್ನು ಇಂದು ನಮ್ಮನ್ನು ಆಳುತ್ತಿರುವ ಅರೆಫ್ಯಾಸಿಸ್ಟ್ ಆಡಳಿತಗಳು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿವೆ. ದೃಶ್ಯ ಮಾಧ್ಯಮವನ್ನು ಕಬಳಿಸಿ, ನಿರಂತರವಾಗಿ ಸುಳ್ಳುಗಳನ್ನು ಹೇಳುತ್ತ, ನಾವು ಯೋಚಿಸಬಾರದ ವಿಷಯಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತ, ಇದೇ ಸತ್ಯ ಎಂಬಂತೆ ಮರಳು ಮಾಡುತ್ತಿದ್ದಾರೆ. ಈ ಕೆಲಸದಲ್ಲಿ ಅವರು ಅದ್ಭುತ ಯಶಸ್ಸನ್ನು ಗಳಿಸಿದ್ದಾರೆ. ಈಗ, ಅದನ್ನು ಮೆಟ್ಟಿ ನಿಲ್ಲಲು, ಹೊಸ ರಾಜಕಾರಣವನ್ನು ಕಟ್ಟಬೇಕಾದರೆ, ಹೊಸ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಅದು ಅಸಾಧ್ಯವಲ್ಲ. ಅದಕ್ಕೆ ನಮ್ಮ ಚಿಂತಕರು ಮೊದಲ ಪ್ರಮುಖ ಹೆಜ್ಜೆಯನ್ನಿಡಬೇಕಿದೆ. ಇವರು ಬರೆಯುವ ಪ್ರತಿಯೊಂದು ಪದ, ಆಡುವ ಪ್ರತಿಯೊಂದು ಮಾತಿನ ಹಿಂದೆ ಈ ಜನವಿರೋಧಿ, ಪ್ರಜಾಪ್ರಭುತ್ವವಿರೋಧಿ ಆಡಳಿತವನ್ನು ಕೊನೆಗಾಣಿಸುವ ಮತ್ತು ಹೊಸ ರಾಜಕಾರಣವನ್ನು ಹುಟ್ಟುಹಾಕುವ ಜವಾಬ್ದಾರಿ ಇರಬೇಕಿದೆ. ಆ ಜವಾಬ್ದಾರಿಯೇ ಕರ್ನಾಟಕದ ಮುಂದಿನ ರಾಜಕೀಯ ನಡೆಯನ್ನು ರೂಪಿಸುವಂತಾಗುವುದು.

ರಾಜಶೇಖರ್ ಅಕ್ಕಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
 ರಾಜಶೇಖರ್ ಅಕ್ಕಿ

LEAVE A REPLY

Please enter your comment!
Please enter your name here