ಪೊಲೀಸ್ ಠಾಣೆಯ ಮುಂದೆ ಹಸುವನ್ನು ಕರೆದೊಯ್ದು ರೈತರು. Photo Courtesy: NDTV

ಹರಿಯಾಣದ ಜೆಜೆಪಿ ಶಾಸಕರ ಮನೆ ಮುತ್ತಿಗೆ ಹಾಕಿದ್ದಕ್ಕಾಗಿ ಬಂಧಿಸಲಾಗಿದ್ದ ಇಬ್ಬರು ರೈತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಫತೇಬಾದ್‌ನ ತೋಹಾನ ಪೊಲೀಸ್‌ ಠಾಣೆಯಲ್ಲಿ ಹಸುವನ್ನು ಸೇರಿಸಿಕೊಂಡು ರೈತರು ರಾತ್ರಿಯಿಡೀ ಧರಣಿ ನಡೆಸಿದ್ದಾರೆ. ಕೊನೆಗೆ ಪೊಲೀಸರು ರೈತರನ್ನು ಬಿಡುಗಡೆ ಮಾಡಿದ್ದಾರೆ.

ರೈತರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ರೈತ ಹೋರಾಟಗಾರ ರಾಕೇಶ್‌ ಟಿಕಾಯತ್‌ ನೇತೃತ್ವದಲ್ಲಿ ಪೊಲೀಸ್‌ ಠಾಣಾ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ರೈತರೊಬ್ಬರು ಹಸುವೊಂದನ್ನು ಠಾಣೆಗೆ ಕರೆತಂದು, ಇದು ರೈತರ ಬಂಧನವನ್ನು ನೋಡಿದ `41ನೇ ಸಾಕ್ಷಿ’ ಎಂದು ಹೇಳಿದ್ದಾರೆ.

ಪ್ರತಿಭಟನೆ ಭುಗಿಲೆದ್ದ ನಂತರ ಬಂಧನಕ್ಕೊಳಗಾಗಿದ್ದ ಇಬ್ಬರು ರೈತರನ್ನು ಭಾನುವಾರ ತಡರಾತ್ರಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ರೈತರು ಬಿಡುಗಡೆಯಾಗಿದ್ದರಿಂದ, ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿದ್ದ ತೋಹಾನದಲ್ಲಿ ಪೊಲೀಸ್‌ ಠಾಣೆಗಳನ್ನು ಮುತ್ತಿಗೆ ಹಾಕುವ ಯೋಜನೆಯನ್ನು ರದ್ದುಗೊಳಿಸಿದೆ. ಆದರೆ ಪ್ರತಿಭಟನೆ ಮುಂದುವರೆದಿದೆ.

Photo Courtesy: ANI

ಹಸುವಿಗೆ ಆಹಾರ ಮತ್ತು ನೀರು ನೀಡುವ ಜವಾಬ್ದಾರಿ ಪೊಲೀಸ್‌ ಅಧಿಕಾರಿಗಳ ಮೇಲಿದೆ ಎಂದು ರೈತರು ಆಗ್ರಹಿಸಿದ್ದಾರೆ. ಹಸುವನ್ನು ಪೊಲೀಸ್‌ ಠಾಣೆಯ ಆವರಣದಲ್ಲಿ ಕಂಬಕ್ಕೆ ಕಟ್ಟಿಹಾಕಲಾಗಿದ್ದು, ಅದರ ಮುಂದೆ ಹುಲ್ಲು ಮತ್ತು ನೀರು ಇಡಲಾಗಿದೆ.

`ಆಡಳಿತಾರೂಢ ಸರ್ಕಾರ ತನ್ನನ್ನು ಹಸು ಆರಾಧಕರು ಅಥವಾ ಹಸು ಪ್ರಿಯರ ಸರ್ಕಾರವೆಂದು ಪರಿಗಣಿಸುತ್ತದೆ. ನಾವು ಆ ಪವಿತ್ರ ಪ್ರಾಣಿಯನ್ನು ಪ್ರತಿಭಟನೆಯ ಸಂಕೇತವಾಗಿ ತಂದಿದ್ದೇವೆ. ಏಕೆಂದರೆ ಅದನ್ನು ಶುದ್ಧ ಮತ್ತು ಧರ್ಮನಿಷ್ಠವೆಂದು ಪರಿಗಣಿಸಲಾಗಿದೆ. ಅದರ ಉಪಸ್ಥಿತಿಯಲ್ಲಿ ಸರ್ಕಾರ ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ನೀಡಲು ಅದು ಸಹಾಯ ಮಾಡುತ್ತದೆ’ ಎಂದು ಪ್ರತಿಭಟನಾಕಾರ ರೈತರೊಬ್ಬರು ತಿಳಿಸಿದ್ದಾರೆ.

ರೈತ ಹೋರಾಟಗಾರ ರಾಕೇಶ್‌ ಟಿಕಾಯತ್‌ ನೇತೃತ್ವದಲ್ಲಿ ಪೊಲೀಸ್‌ ಠಾಣೆಯಲ್ಲಿ ಧರಣಿ ನಡೆದಿದ್ದು, ರೈತ ಮುಖಂಡರು ಮತ್ತು ಜಿಲ್ಲಾಡಳಿತದ ನಡುವೆ ಭಾನುವಾರ ನಡೆದ ಸಭೆಯಲ್ಲಿ ಒಮ್ಮತ ಮೂಡಿಬರದಿದ್ದರಿಂದ ಪ್ರತಿಭಟನೆ ಮುಂದುವರೆಸುವ ನಿರ್ಧಾರವನ್ನು ಸಂಯುಕ್ತ ಕಿಸಾನ್ ಮೋರ್ಚಾ ಕೈಗೊಂಡಿತ್ತು.

ಆಡಳಿತಾರೂಢ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಜೆಪಿಯ ಹರಿಯಾಣದ ಶಾಸಕ ದೇವೇಂದ್ರ ಸಿಂಗ್‌ ಬಾಬ್ಲಿ ಅವರ ನಿವಾಸವನ್ನು ಮುತ್ತಿಗೆ ಹಾಕಿದ್ದ ಕಾರಣಕ್ಕಾಗಿ ರೈತ ಮುಖಂಡರಾದ ವಿಕಾಸ್‌ ಸಿಸಾರ್‌ ಮತ್ತು ರವಿ ಆಜಾದ್ ಅವರನ್ನು ಬಂಧಿಸಲಾಗಿತ್ತು. ‌ರೈತ ಹೋರಾಟ ಆರಂಭವಾದಾಗಿನಿಂದಲೂ ಬಿಜೆಪಿ-ಜೆಜೆಪಿ ಶಾಸಕರ ಸಾರ್ವಜನಿಕ ಕಾರ್ಯಕ್ರಮಗಳನ್ನು ವಿರೋಧಿಸುತ್ತಲೇ ಬಂದಿರುವ ಹರಿಯಾಣದ ರೈತ ಸಂಘಟನೆಗಳು, ಪಕ್ಷಗಳ ಜನಪ್ರತಿನಿಧಿಗಳು ಕಂಡಲ್ಲೆಲ್ಲಾ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.

ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಬಾಬ್ಲಿ ಅವರು ಅವಾಚ್ಯ ಶಬ್ದಗಳ ಮೂಲಕ ನಿಂದನೆ ಮಾಡಿದ್ದರು ಎಂಬ ಆರೋಪದ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ರೈತರು ಆಗ್ರಹಿಸಿದ್ದರು. ಈ ಕುರಿತು ಪ್ರತಿಭಟನಾ ನಿರತ ರೈತರ ಹತ್ತಿರ ಕ್ಷಮೆ ಕೋರಿದ್ದ ಬಾಬ್ಲಿ ಅವರು ಜನಪ್ರತಿನಿಧಿಯಾಗಿ ಅವಾಚ್ಯ ಪದಗಳನ್ನು ಬಳಸಿದ್ದಕ್ಕಾಗಿ ವಿಷಾಧಿಸುತ್ತೇನೆ ಎಂದಿದ್ದರು.


ಇದನ್ನೂ ಓದಿ: ರೈತ ಹೋರಾಟದಿಂದ ನಾವು ಸ್ಥಳೀಯ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಿದ್ದೇವೆ: ಪಂಜಾಬ್ ಬಿಜೆಪಿ ಮುಖಂಡ ಅನಿಲ್ ಜೋಶಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here