ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಹಿಂಸಾಚಾರವನ್ನು ಟೀಕಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಮಾನವೀಯತೆಯು ಎಚ್ಚರಗೊಳ್ಳುವುದು ಯಾವಾಗ?” ಎಂದು ಪ್ರಶ್ನಿಸಿದ್ದಾರೆ.
ಪ್ಯಾಲೇಸ್ತನ್ ಮೇಲೆ ಇಸ್ರೇಲ್ ದಾಳಿ ತೀವ್ರಗೊಳಿಸಿದ್ದು, ಕಳೆದ 20 ದಿನಗಳಲ್ಲಿ 7,000 ಕ್ಕೂ ಹೆಚ್ಚು ಫೆಲೆಸ್ತೀನಿಯನ್ನರು ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂದು ಗಾಝಾ ಆರೋಗ್ಯ ಇಲಾಖೆ ಹೇಳಿದೆ.
ಈ ಬಗ್ಗೆ ಎಕ್ಸಾನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ”ಗಾಝಾದಲ್ಲಿ 7,000 ಜನರನ್ನು ಕೊಂದ ನಂತರವೂ ರಕ್ತಪಾತ ಮತ್ತು ಹಿಂಸಾಚಾರದ ಚಕ್ರ ನಿಂತಿಲ್ಲ. ಈ 7,000 ಜನರಲ್ಲಿ 3,000 ಮುಗ್ಧ ಮಕ್ಕಳು” ಎಂದು ಪ್ರಿಯಾಂಕಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.
”ಇನ್ನೂ ಎಷ್ಟು ಜೀವಗಳನ್ನು ಕಳೆದುಕೊಂಡ ನಂತರ, ಮಾನವೀಯತೆಯ ಸಾಮೂಹಿಕ ಪ್ರಜ್ಞೆಯು ಅಂತಿಮವಾಗಿ ಜಾಗೃತವಾಗುತ್ತದೆ? ಅಥವಾ ಅಂತಹ ಪ್ರಜ್ಞೆಯು ಈಗ ಉಳಿದಿಲ್ಲವೇ?” ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಹಮಾಸ್ ಗಾಝಾದಲ್ಲಿ 200ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿದೆ.
ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನಾದಾಳಿ ತೀವ್ರಗೊಂಡಿದ್ದು, ನಿನ್ನೆ ತಡರಾತ್ರಿ ಗಾಜಾಪಟ್ಟಿಗೆ ನುಗ್ಗಿದ್ದ ಇಸ್ರೇಲ್ ಸೇನಾ ಟ್ಯಾಂಕರ್ ಗಳು ಹಮಾಸ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ವಾಪಸ್ ಆಗಿವೆ.
ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್), ಗಿವಾಟಿ (ಕಾಲಾಳುಪಡೆ) ಬ್ರಿಗೇಡ್‌ನ ನೇತೃತ್ವದಲ್ಲಿ ರಾತ್ರೋರಾತ್ರಿ ಉತ್ತರ ಗಾಜಾ ಪಟ್ಟಿಯ ಪ್ರದೇಶದಲ್ಲಿ ಟ್ಯಾಂಕ್‌ಗಳನ್ನು ಬಳಸಿಕೊಂಡು ಉದ್ದೇಶಿತ ದಾಳಿಯನ್ನು ನಡೆಸಿತು. ಇದು ಮುಂದಿನ ಹಂತದ ಯುದ್ಧಕ್ಕಾಗಿ ಪ್ರದೇಶವನ್ನು ಸಿದ್ಧಪಡಿಸುವ ಅಂದರೆ ಗಾಜಾಪಟ್ಟಿಗೆ ಸೇನೆ ನುಗ್ಗಿಸುವ ಭಾಗವಾಗಿದೆ ಎಂದು IDF ಹೇಳಿದೆ.
ಕಾರ್ಯಾಚರಣೆಯ ಭಾಗವಾಗಿ, IDF, ಪಡೆಗಳು ಅನೇಕ ಭಯೋತ್ಪಾದಕರನ್ನು ಪತ್ತೆ ಮಾಡಿ ದಾಳಿ ಮಾಡಿತು. ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಿತು, ಟ್ಯಾಂಕ್ ವಿರೋಧಿ ಕ್ಷಿಪಣಿ ಉಡಾವಣೆ ಸ್ಥಾನಗಳನ್ನು ನಾಶಪಡಿಸಿತು ಮತ್ತು ಭವಿಷ್ಯದ ಕಾರ್ಯಾಚರಣೆಗಳಿಗೆ ಪ್ರದೇಶವನ್ನು ಸಿದ್ಧಪಡಿಸುವ ಕೆಲಸವನ್ನು ನಡೆಸಿತು. ಕಾರ್ಯಾಚರಣೆಯ ಕೊನೆಯಲ್ಲಿ IDF ಪಡೆಗಳು ಪ್ರದೇಶವನ್ನು ತೊರೆದು ಇಸ್ರೇಲ್ ಗಡಿಗೆ ವಾಪಸ್ ಆದವು.
ಇದೇ ವೇಳೆ ‘ಇಸ್ರೇಲ್ ತನ್ನ ಅಸ್ತಿತ್ವಕ್ಕಾಗಿ ಯುದ್ಧದಲ್ಲಿದೆ’ ಎಂಬ ತನ್ನ ಮಾತುಗಳನ್ನು ಪುನರುಚ್ಚರಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಯುದ್ಧದ ವಿರುದ್ಧ ತನ್ನ ಗುರಿ ‘ದೇಶವನ್ನು ಉಳಿಸುವುದು’ ಮತ್ತು ಗಾಜಾದಲ್ಲಿ ಹಮಾಸ್ ಅನ್ನು ನಾಶಮಾಡುವ ನೆಲದ ಆಕ್ರಮಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ಬುಧವಾರ ವರದಿ ಮಾಡಿದೆ.
ಇದನ್ನೂ ಓದಿ: ಇಸ್ರೇಲ್ ದಾಳಿಗೆ ಅಲ್ ಜಝೀರಾ ಬ್ಯೂರೋ ಮುಖ್ಯಸ್ಥರ ಕುಟುಂಬದ ನಾಲ್ವರು ಬಲಿ


