ಮಥುರಾ ನ್ಯಾಯಾಲಯದಲ್ಲಿ ಬಾಕಿ ಇರುವ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಲ್ಲಾ ವಿಷಯಗಳನ್ನು ತನಗೆ ವರ್ಗಾಯಿಸುವಂತೆ ಸೂಚಿಸಿದ ಅಲಹಾಬಾದ್ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠ, ಎರಡೂ ಕಡೆಯ ವಾದವನ್ನು ಆಲಿಸದೆ ಹೈಕೋರ್ಟ್ ಈ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದೆ. ಈ ವಿಷಯದಲ್ಲಿ ಹೈಕೋರ್ಟ್‌ನಲ್ಲಿ 18 ಅರ್ಜಿಗಳು ಬಾಕಿ ಉಳಿದಿವೆ ಎಂದು ಸುಪ್ರೀಂಕೋರ್ಟ್ ಗಮನಿಸಿದೆ.
ಮುಸ್ಲಿಂ ಪರ ವಕೀಲ ಫುಜೈಲ್ ಅಹ್ಮದ್ ಅಯೂಬ್ಬಿ, ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು ಪ್ರಕರಣದ ವರ್ಗಾವಣೆಗೆ ವಿರೋಧಿಸಿದ್ದಾರೆ. ವರ್ಗಾವಣೆಗೆ ಯಾವುದೇ ಕಾರಣವಿಲ್ಲ. 1968ರಲ್ಲಿ ರಾಜಿ ಮಾಡಿಕೊಂಡ 49 ವರ್ಷಗಳ ನಂತರ ಫಿರ್ಯಾದುದಾರರು ಮೊಕದ್ದಮೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದ್ದರು.
ಮುಸ್ಲಿಂ ಪರ ಮತ್ತೊಬ್ಬ ವಕೀಲರು, ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡುವಂತೆ ಪೀಠವನ್ನು ಕೋರಿದ್ದಾರೆ. ಎರಡೂ ಕಡೆಯ ವಾದವನ್ನು ಆಲಿಸದೆ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಪೀಠ ಹೇಳಿದೆ.
ಶಾಹಿ ಮಸೀದಿ ಈದ್ಗಾ ಮ್ಯಾನೇಜ್‌ಮೆಂಟ್ ಟ್ರಸ್ಟ್ ಕಮಿಟಿಯನ್ನು ಪ್ರತಿನಿಧಿಸುವ ವಕೀಲರು, ಮಥುರಾದಿಂದ ಅಲಹಾಬಾದ್ ಹೈಕೋರ್ಟ್ 600 ಕಿಲೋಮೀಟರ್‌ಗಿಂತ ಹೆಚ್ಚು ದೂರವಿರುವುದರಿಂದ ಮಥುರಾಗೆ ಪ್ರಯಾಣಿಸಲು ಕಕ್ಷಿದಾರರಿಗೆ ಆರ್ಥಿಕ ಸಂಪನ್ಮೂಲವಿಲ್ಲ ಮತ್ತು ದಾವೆಗಳನ್ನು ದೆಹಲಿಗೆ ವರ್ಗಾಯಿಸಲು ನ್ಯಾಯಾಲಯವನ್ನು ಕೋರಿದರು.
ದೆಹಲಿಯ ನ್ಯಾಯಾಲಯಕ್ಕೆ ಈಗಾಗಲೇ ಹೆಚ್ಚಿನ ಹೊರೆ ಇರುವುದರಿಂದ ಈ ವಾದವನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ ಎಂದು ಪೀಠವು ಉತ್ತರಿಸಿದೆ.
ನೀವು ದೆಹಲಿಗೆ ಬರಬಹುದು ಆದರೆ ಅಲಹಾಬಾದ್‌ಗೆ ಹೋಗಲಿಕ್ಕೆ ಆಗಲ್ಲ ಎಂಬುದು ನಮಗೆ ಸ್ವೀಕಾರಾರ್ಹವಲ್ಲ ಎಂದು ಪೀಠವು ಹೇಳಿತು. ಈ ವಿಷಯವನ್ನು ಆಲಿಸಬೇಕು ಮತ್ತು ಹೈಕೋರ್ಟ್ ನೀಡಿದ ಆದೇಶವನ್ನು ಪರೀಕ್ಷಿಸಬೇಕು ಎಂದು ಹೇಳಿದ ಪೀಠವು ಈ ಕುರಿತು ಸಂಕ್ಷಿಪ್ತ ಸಾರಾಂಶವನ್ನು ಸಲ್ಲಿಸಲು ಎರಡೂ ಕಡೆಯವರನ್ನು ಕೇಳಿದೆ ಮತ್ತು ಜ.9ರಂದು ವಿಚಾರಣೆಯನ್ನು ನಿಗದಿಪಡಿಸಿದೆ.
ಮಥುರಾ ನ್ಯಾಯಾಲಯದ ಮುಂದೆ ಬಾಕಿ ಇರುವ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವರ್ಗಾಯಿಸಿಕೊಂಡು ಆದೇಶಿಸಿದ ಅಲಹಬಾದ್ ಹೈಕೋರ್ಟ್‌ನ ಮೇ 26ರ ಆದೇಶವನ್ನು ಮ್ಯಾನೇಜ್‌ಮೆಂಟ್ ಟ್ರಸ್ಟ್ ಶಾಹಿ ಮಸೀದಿ ಈದ್ಗಾ ಸಮಿತಿಯು ಪ್ರಶ್ನಿಸಿದೆ.
ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ನ 13.37 ಎಕರೆ ಜಾಗದಲ್ಲಿ ಶಾಹಿ ಮಸೀದಿ ಈದ್ಗಾವನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಕಡೆಯವರು ಹೇಳಿಕೊಂಡಿದ್ದರು. ಈದ್ಗಾವನ್ನು ಸ್ಥಳಾಂತರಿಸುವಂತೆ ಕೋರ್ಟ್‌ಗೆ ಆಗ್ರಹಿಸಿದ್ದರು.
ಇದನ್ನು ಓದಿ: ಉತ್ತರಪ್ರದೇಶ: ಮುಸ್ಲಿಂ ಬಾಲಕನಿಗೆ ಕಪಾಳಮೋಕ್ಷ ಪ್ರಕರಣ; ಸರಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ


