ಇಸ್ರೇಲ್-ಹಮಾಸ್ ಸಂಘರ್ಷದ ಸಂದರ್ಭದಲ್ಲಿ ಗಾಝಾದಲ್ಲಿ ಹತರಾದ ಸಹೋದ್ಯೋಗಿಗಳ ಸ್ಮರಣಾರ್ಥ ವಿಶ್ವಸಂಸ್ಥೆಯ ಸಿಬ್ಬಂದಿಗಳು 1 ನಿಮಿಷ ಮೌನಾಚರಣೆ ಮಾಡಿದ್ದು, ಏಷ್ಯದಾದ್ಯಂತ ವಿಶ್ವಸಂಸ್ಥೆಯ ಕಾಂಪೌಂಡ್ಗಳಲ್ಲಿ ಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ.
ವಿಶ್ವಸಂಸ್ಥೆಯ ನೀಲಿ ಮತ್ತು ಬಿಳಿ ಬಣ್ಣದ ಧ್ವಜವನ್ನು ಬ್ಯಾಂಕಾಕ್, ಟೋಕಿಯೊ ಮತ್ತು ಬೀಜಿಂಗ್ನಲ್ಲಿರುವ ಕಚೇರಿಗಳಲ್ಲಿ ಸ್ಥಳೀಯ ಸಮಯ ಬೆಳಿಗ್ಗೆ 9:30ಕ್ಕೆ ಅರ್ಧಕ್ಕೆ ಇಳಿಸಲಾಗಿದೆ.
ಪ್ಯಾಲೆಸ್ತೀನ್ ನಾಗರಿಕರಿಗೆ ಪರಿಹಾರ ಕಲ್ಪಿಸುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿ ಯುಎನ್ಆರ್ಡಬ್ಲ್ಯುಎ, ಗಾಝಾದಲ್ಲಿ ಯುದ್ಧ ಸಮಯದಲ್ಲಿ ವಿಶ್ವಸಂಸ್ಥೆಯ 100ಕ್ಕೂ ಹೆಚ್ಚು ಸಿಬ್ಬಂದಿಗಳು ಹತರಾಗಿದ್ದಾರೆ ಎಂದು ಹೇಳಿದೆ.
ಅ.7ರಂದು ಇಸ್ರೇಲ್ ಮೇಲೆ ಹಮಾಸ್ ರಾಕೆಟ್ ದಾಳಿ ನಡೆಸಿದ ನಂತರ ಇಸ್ರೇಲ್ ಯುದ್ಧ ಘೋಷಿಸಿದೆ. ಯುದ್ಧ 1 ತಿಂಗಳು ಕಳೆದಿದ್ದು, ಗಾಝಾ ಪಟ್ಟಿ ಮೇಲಿನ ಇಸ್ರೇಲ್ ಬಾಂಬ್ ದಾಳಿ ಮುಂದುವರಿದಿದೆ.
ಇಸ್ರೇಲ್ ಅಧಿಕಾರಿಗಳ ಪ್ರಕಾರ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,200 ಜನರು ಮೃತಪಟ್ಟಿದ್ದಾರೆ. 240 ಜನರನ್ನು ಒತ್ತೆಯಾಳುಗಳಾಗಿ ಇಡಲಾಗಿದೆ.
ಗಾಝಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತರ ಸಂಖ್ಯೆ 11,078ಕ್ಕೆ ತಲುಪಿದೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತರಲ್ಲಿ 4,506 ಮಕ್ಕಳು, 3,027 ಮಹಿಳೆಯರು, 6,78 ವಯಸ್ಕರು ಸೇರಿದ್ದಾರೆ. ಇದೇ ವೇಳೆ 27,490ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಇಸ್ರೇಲ್ ದಾಳಿಯಿಂದ ನೆಲಸಮವಾದ ಕಟ್ಟಡಗಳ ಅವಶೇಷಗಳಡಿಯಲ್ಲಿ 1,500 ಮಕ್ಕಳು ಸೇರಿದಂತೆ 2,700 ಜನರು ಸಿಲುಕಿಕೊಂಡಿದ್ದಾರೆ. ಇಸ್ರೇಲ್ ಆಕ್ರಮಣಕ್ಕೆ 198 ವೈದ್ಯಾಧಿಕಾರಿಗಳು ಮೃತಪಟ್ಟಿದ್ದಾರೆ. 53 ಆಂಬ್ಯುಲೆನ್ಸ್ಗಳನ್ನು ಧ್ವಂಸಗೊಳಿಸಲಾಗಿದೆ. ಇಸ್ರೇಲ್ 135 ಆರೋಗ್ಯ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು 21 ಆಸ್ಪತ್ರೆಗಳು ಮತ್ತು 47 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಮಾಡುವಂತಾಗಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ಹೇಳಿದ್ದಾರೆ.
ಪ್ಯಾಲೆಸ್ತೀನ್ನ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್ನ ವಸಾಹತು ಚಟುವಟಿಕೆ ಖಂಡಿಸಿ ವಿಶ್ವಸಂಸ್ಥೆಯು, ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಿದೆ. ಗುರುವಾರ ಮಂಡನೆಯಾದ ಈ ನಿರ್ಣಯದ ಪರ ಭಾರತ ಸೇರಿದಂತೆ 145 ರಾಷ್ಟ್ರಗಳು ಮತ ಚಲಾಯಿಸಿವೆ. ಇದರ ವಿರುದ್ಧ 7 ದೇಶಗಳು ಮತ ಚಲಾಯಿಸಿವೆ. 18 ದೇಶಗಳು ದೂರ ಉಳಿದಿವೆ.
ಪೂರ್ವ ಜೆರುಸಲೇಂ ಹಾಗೂ ಸಿರಿಯಾದ ಗೋಲನ್ ಸೇರಿದಂತೆ ಪ್ಯಾಲೆಸ್ಟೀನ್ನ ಆಕ್ರಮಿತ ಪ್ರದೇಶದಲ್ಲಿ ಇಸ್ರೇಲ್ ವಸಾಹತು ಚಟುವಟಿಕೆ ಶೀರ್ಷಿಕೆಯಡಿ ಕರಡು ನಿರ್ಣಯ ಸಿದ್ಧಪಡಿಸಲಾಗಿತ್ತು. ವಿಶ್ವಸಂಸ್ಥೆಯ ವಿಶೇಷ ರಾಜಕೀಯ ಹಾಗೂ ವಸಾಹತು ವಿಮೋಚನಾ ಸಮಿತಿಯು ಇದಕ್ಕೆ ಅನುಮೋದನೆ ನೀಡಿತ್ತು.
ಸೌದಿ ಅರೇಬಿಯಾದ ರಿಯಾದ್ನಲ್ಲಿ ಶನಿವಾರ ನಡೆದ ಶೃಂಗಸಭೆಯಲ್ಲಿ ಇರಾನ್ ಮತ್ತು ಸೌದಿ ಅರೇಬಿಯಾ ನಾಯಕರು ಗಾಝಾ ಪಟ್ಟಿಯಲ್ಲಿ ತಕ್ಷಣದ ಕದನ ವಿರಾಮಕ್ಕೆ ಆಗ್ರಹಿಸಿದ್ದು, ಮಾನವೀಯ ನೆರವಿಗೆ ಆಗ್ರಹಿಸಿದ್ದರು. ಜೊತೆಗೆ ಯುದ್ಧ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಅಂತರಾಷ್ಟ್ರೀಯ ಸಮುದಾಯವನ್ನು ದೂಷಿಸಿದ್ದರು.
ಇದನ್ನು ಓದಿ: ಗಾಝಾದಲ್ಲಿ ನಾಗರಿಕರ ಹತ್ಯಾಕಾಂಡ: ಅಂತರಾಷ್ಟ್ರೀಯ ಸಮುದಾಯವನ್ನು ದೂಷಿಸಿದ ಸೌದಿ, ಇರಾನ್


