ರಾಜಸ್ಥಾನ ಅಲ್ವಾರ್‌ನ ತಿಜಾರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬಾ ಬಾಲಕನಾಥ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಬುಡಕಟ್ಟು ಜನರನ್ನು ಸೋಲಿಸಬೇಕು, ಇದರಿಂದ ಅವರು ಭವಿಷ್ಯದಲ್ಲಿ ಎಂದು ಸನಾತನ ಧರ್ಮದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಚುನಾವಣೆಯನ್ನು ಪಾಕಿಸ್ತಾನ-ಭಾರತ ಪಂದ್ಯಕ್ಕೆ ಹೋಲಿಕೆ ಮಾಡಿದ್ದಾರೆ.
ಭಿವಾಂಡಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಬಾಬಾ ಬಾಲಕನಾಥ್, ಬುಡಕಟ್ಟು ಜನರು ಒಗ್ಗೂಡಿದ್ದಾರೆ ಮತ್ತು ನಾವು ಅವರನ್ನು ಹೆಚ್ಚಿನ ಮತದಾನದ ಮೂಲಕ ಸೋಲಿಸಬೇಕು. ಇದರಿಂದ ಭವಿಷ್ಯದಲ್ಲಿ ಅವರು ನಮ್ಮ ಸನಾತನ ಧರ್ಮದ ವಿರುದ್ಧ ಒಗ್ಗೂಡಲು ಮತ್ತು ಪಿತೂರಿ ಮಾಡಲು ಧೈರ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ನ.25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಅವರು ಕ್ಷೇತ್ರದ ಮತದಾರರಿಗೆ ಕರೆ ನೀಡಿದ್ದು, ಚುನಾವಣೆಯನ್ನು ಭಾರತ-ಪಾಕಿಸ್ತಾನ ಪಂದ್ಯಕ್ಕೆ ಹೋಲಿಸಿದ್ದಾರೆ.
ಇದು ಭಾರತ – ಪಾಕಿಸ್ತಾನ ಕ್ರಿಕೆಟ್ ಪಂದ್ಯದಂತೆ, ಇದು ಗೆಲುವಿಗಾಗಿ ಮಾತ್ರ ಇರುವ ಹೋರಾಟವಲ್ಲ, ಗೆಲುವಿನ ಅಂತರದ ಬಗ್ಗೆ ಇರುವ ಹೋರಾಟವಾಗಿದೆ. ಶೇಕಡಾವಾರು ಮತದಾನದ ಹೋರಾಟವಾಗಿದೆ ಎಂದು ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ತನ್ನ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಬಾಬಾ ಬಾಲಕನಾಥ್, ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಜನರನ್ನು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ಪ್ರೋತ್ಸಾಹಿಸುತ್ತಿದ್ದೇನೆ. ಅಲ್ಪಸಂಖ್ಯಾತ ಮತದಾರರ ಮತದಾನದ ಪ್ರಮಾಣ ಹೆಚ್ಚಿದ್ದರೆ, ಹಿಂದೂ ಮತಗಳ ಶೇಕಡಾವಾರು ಮತದಾನ ಪ್ರಮಾಣ ಕೂಡ ಹೆಚ್ಚಳವಾಗಬೇಕಿದೆ ಎಂದು ಹೇಳಿದ್ದಾರೆ.
ರಾಜಸ್ಥಾನದ ಎಲ್ಲಾ 200 ವಿಧಾನಸಭಾ ಕ್ಷೇತ್ರಕ್ಕೆ ನ.25ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನ ಮತ ಎಣಿಕೆ ಡಿ.3 ರಂದು ನಡೆಯಲಿದೆ.
ಇದನ್ನು ಓದಿ; ದಲಿತರಿಗೆ ಬಿಜೆಪಿಯಲ್ಲಿ ಅವಕಾಶ ಸಿಗುವುದಿಲ್ಲ: ಅಸಮಾಧಾನ ಹೊರಹಾಕಿದ ಬಿಜೆಪಿ ಸಂಸದ


