ಕಲರ್ಸ್ ಕನ್ನಡ ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ತನಿಷಾ ಕುಪ್ಪುಂಡ ವಿರುದ್ಧ ಬೋವಿ ಜನಾಂಗದ ಬಗ್ಗೆ ಅವಮಾನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಖಿಲ ಕರ್ನಾಟಕ ಬೋವಿ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಅವರು ತನಿಷಾ ಕುಪ್ಪುಂಡ ವಿರುದ್ಧ ದೂರನ್ನು ನೀಡಿದ್ದು, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ಜೊತೆ ತನಿಷಾ ಅವರು ಮಾತನಾಡುವಾಗ ಬೋವಿ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಸಮುದಾಯದ ಭಾವನೆಗೆ ಧಕ್ಕೆ ತಂದಿದ್ದು, ಅವರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಪದ್ಮಾ ಅವರು ದೂರಿನಲ್ಲಿ ಒತ್ತಾಯಿಸಿದ್ದರು.
ನ.8ರಂದು ರಾತ್ರಿ ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ತನಿಷಾ ಕುಪ್ಪಂಡ ಡ್ರೋನ್ ಪ್ರತಾಪ್ ಅವರ ಬಗ್ಗೆ ಮಾತನಾಡುವಾಗ ಭೋವಿ ಜನಾಂಗದ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ‘ಒಡ್ಡನೋ ನೀನು ಒಡ್ಡನ ತರ ಆಕ್ಟ್ ಮಾಡ್ತಿದೀಯಾ’ ಎಂಬ ಪದ ಬಳಕೆ ಮಾಡಿದ್ದಾರೆ. ಇವರು ಕರ್ನಾಟಕ ರಾಜ್ಯದ ಎಲ್ಲಾ ಭೋವಿ ಸಮುದಾಯದ ಜನಾಂಗವನ್ನು ಅವಮಾನ ಮಾಡಿದ್ದಾರೆ. ತನಿಶಾ ಕುಪ್ಪಂಡರವರಿಗೆ ಭೋವಿ ಜನಾಂಗದ ಕುರಿತು ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಇವರ ಪರಿಶಿಷ್ಟ ಜಾತಿಯವರು ಎಂದು ತಿಳಿದು ಉದ್ದೇಶಪೂರ್ವಕವಾಗಿ ಅವಮಾನಕರವಾಗಿ ಮಾತನಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್‌ನ್ನು ಈ ಮೊದಲು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಒಂದು ವಾರಗಳ ಕಾಲ ಜೈಲಿಗೆ ಕಳುಹಿಸಿದ್ದರು. ಇದೀಗ ಬಿಗ್ ಬಾಸ್‌ನ ಇನ್ನೋರ್ವ ಸ್ಪರ್ಧಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ; ಆರೋಪಿ ಅರೆಸ್ಟ್


