ಇಸ್ರೇಲ್ ದಾಳಿಯಿಂದ ಪ್ಯಾಲೇಸ್ತೀನ್‌ನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಬೆಂಗಳೂರಿನ ರಂಗಶಂಕರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇಂದು (ನ.29) ಸಂಜೆ 5:30ಕ್ಕೆ ಕಾವ್ಯಗೋಷ್ಠಿ, ಕಿರು ನಾಟಕ ಸೇರಿದಂತೆ ಪ್ಯಾಲೇಸ್ತೀನ್‌ನಲ್ಲಿ ನಡೆಯುತ್ತಿರುವ ಮಾರಣಹೋಮ ಖಂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಲಾವಿದರಾದ ಎಂ.ಡಿ ಪಲ್ಲವಿ, ಶ್ವೇತಾಂಶು ಬೋರ, ರಮಣೀಕ್ ಸಿಂಗ್ ಇದರ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮ ರದ್ದಾಗಿರುವ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಗಾಯಕಿ ಎಂ.ಡಿ ಪಲ್ಲವಿ, “ಕಾರ್ಯಕ್ರಮ ರದ್ದಾಗಿದೆ. ಪೊಲೀಸರು ಅನುಮತಿ ನಿರಾಕರಿಸಿದ್ದಾರೆ” ಎಂದು ತಿಳಿಸಿದ್ದಾರೆ.

“ಖ್ಯಾತ ರಂಗಭೂಮಿ ಕಲಾವಿದರಾದ ಪಲ್ಲವಿ ಎಂ.ಡಿ ಮತ್ತು ಶ್ವೇತಾಂಶು ಬೋರಾ ಜೊತೆ ನಾವು ಕವಿತೆಗಳನ್ನು ಓದಲು ನಿರ್ಧರಿಸಿದ್ದೆವು. ಈ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ರಂಗಶಂಕರದಂತಹ ಸಂಸ್ಥೆಯನ್ನು ಬೆದರಿಸುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಮೇಲಿನ ತನ್ನ ಬದ್ಧತೆ ಕೊರತೆಯನ್ನು ಮತ್ತೊಮ್ಮೆ ತೋರಿಸಿದೆ” ಎಂದು ಕಲಾವಿದ ರಮಣೀಕ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ಯಾಲೇಸ್ತೀನ್ ಜೊತೆ ಒಗ್ಗಟ್ಟು ಪ್ರದರ್ಶಿಸಿ ಒಂದು ಸಣ್ಣ ನಾಟಕ ಮಾಡಲು ಮತ್ತು ಕವನ ವಾಚಿಸಲು ನಾವು ನಿರ್ಧಿಸಿದ್ದೆವು. ನಮ್ಮದು ಒಳಾಂಗಣ ಕಾರ್ಯಕ್ರಮವಾಗಿದೆ. ಇದಕ್ಕೆ ಪೊಲೀಸರ ಅನುಮತಿ ಪಡೆಯುವ ಅಗತ್ಯ ಇಲ್ಲ. ಆದರೂ, ಪೊಲೀಸರು ನಮ್ಮ ಕಾರ್ಯಕ್ರಮದ ಸಂಪೂರ್ಣ ಮಾಹಿತಿ, ಕಲಾವಿದರ ವಿವರಗಳು ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ಕೇಳಿದ್ದರು. ನಾವು ಆಧಾರ್ ಕಾರ್ಡ್ ಪ್ರತಿಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಒದಗಿಸಿದ್ದೇವೆ. ಆದರೆ, ಅವರು ರಂಗಶಂಕರದ ಮೇಲೆ ಒತ್ತಡ ಹೇರಿದ್ದಾರೆ. ಪರಿಣಾಮ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಪೊಲೀಸರು ಒತ್ತಡ ಹೇರಿದ ಕಾರಣ ಕಾರ್ಯಕ್ರಮ ರದ್ದಾಗಿದೆ. ಆದರೆ, ಒಂದಂತು ತಿಳಿದುಕೊಳ್ಳಿ, ಇದು ಒಳಾಂಗಣ ಕಾರ್ಯಕ್ರಮ ಪೊಲೀಸರ ಅನುಮತಿ ಅಗತ್ಯವಿಲ್ಲ. ಬೆಂಗಳೂರು ಪೊಲೀಸರು ಮತ್ತು ಕರ್ನಾಟಕ ಸರ್ಕಾರಕ್ಕೆ ನಾಚಿಕೆಯಾಗಬೇಕು. ದಯವಿಟ್ಟು ಇದನ್ನು ವ್ಯಾಪಕವಾಗಿ ಪ್ರಚಾರ ಮಾಡಿ. ಪ್ರೇಕ್ಷಕರನ್ನು ಸೇರಿಸಲು ನಮಗೆ ಸಹಾಯ ಮಾಡಿ. ನಾವು ಪ್ಯಾಲೇಸ್ತೀನ್ ಬಗ್ಗೆ ಕವನ ಓದುತ್ತೇವೆ. ಕಿರು ನಾಟಕ ಪ್ರದರ್ಶನ ಮಾಡುತ್ತೇವೆ” ಎಂದು ರಮಣೀಕ್ ಸಿಂಗ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ನಾನು ಗೌರಿ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಎಂ.ಡಿ ಪಲ್ಲವಿ, “ರಂಗಶಂಕರದವರು ಕಾರ್ಯಕ್ರಮ ರದ್ದುಗೊಳಿಸುವಂತೆ ಹೇಳಿದ್ದಾರೆ. ಪೊಲೀಸರು ಇಂತಹ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ ಎಂದು ಅವರಿಗೆ ತಿಳಿಸಿದ್ದಾರಂತೆ. ನಮನ್ನು ನೇರವಾಗಿ ಪೊಲೀಸರು ಸಂಪರ್ಕಿಸಿಲ್ಲ ಎಂದಿದ್ದಾರೆ. ಮುಂದಿನ ನಿರ್ಧಾರದ ಕುರಿತು ಅವರು ಮಾಹಿತಿ ನೀಡಿಲ್ಲ.
ರಂಗಶಂಕರದ ಕಡೆಯಿಂದ ಮಾಹಿತಿ ಪಡೆಯಲು ನಾನು ಗೌರಿ ಪ್ರಯತ್ನಿಸಿದರೂ, ಸಂಬಂಧಪಟ್ಟವರು ಕರೆ ಸ್ವೀಕರಿಸಿಲ್ಲ.
ಇದನ್ನೂ ಓದಿ : ಗೋವಾ ಚಲನಚಿತ್ರೋತ್ಸವದಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಪ್ರತಿಭಟಿಸಿದ ಇಬ್ಬರು ವಶಕ್ಕೆ


