ರಾಜ್ಯಸಭೆಯಲ್ಲಿ ಸೋಮವಾರ ಅಂಚೆ ಕಚೇರಿ ಮಸೂದೆ 2023 ಅಂಗೀಕಾರವಾಗಿದ್ದು, 125 ವರ್ಷಗಳಷ್ಟು ಹಳೆಯದಾದ ಭಾರತೀಯ ಅಂಚೆ ಕಚೇರಿ ಕಾಯಿದೆಯನ್ನು ರದ್ದುಪಡಿಸಿ ದೇಶದಲ್ಲಿ ಅಂಚೆ ಕಚೇರಿಗಳಿಗೆ ಸಂಬಂಧಿಸಿದ ಕಾನೂನನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.
ಪ್ರಸ್ತಾವಿತ ಶಾಸನದ ಪ್ರಕಾರ, ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಯಾವುದೇ ಅಧಿಕಾರಿಗೆ ರಾಜ್ಯದ ಭದ್ರತೆ, ಸೌಹಾರ್ದ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ, ತುರ್ತುಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಯಾವುದೇ ವಸ್ತುವನ್ನು ತಡೆಹಿಡಿಯಲು, ತೆರೆಯಲು ಅಥವಾ ಪರಿಶೀಲಿಸಲು, ವಶಪಡಿಸಿಕೊಳ್ಳಲು ಅಧಿಕಾರ ನೀಡುತ್ತದೆ.
1898ರಲ್ಲಿ ಜಾರಿಗೆ ಬಂದಿದ್ದ ಭಾರತೀಯ ಅಂಚೆ ಕಚೇರಿ ಕಾಯ್ದೆಯನ್ನು ರದ್ದುಗೊಳಿಸುವ ಗುರಿಯನ್ನು ನೂತನ ಮಸೂದೆಯು ಹೊಂದಿದ್ದು, ಅಂಚೆ ಸೇವೆಗಳ ಮಹಾನಿರ್ದೇಶಕರಿಗೆ ಆ ಸೇವೆಗಳಿಗೆ ಸಂಬಂಧಿಸಿದ ನಿಯಮ ರೂಪಿಸಲು ಮತ್ತು ಅದಕ್ಕೆ ಶುಲ್ಕವನ್ನು ನಿಗದಿಪಡಿಸಲು ಅಧಿಕಾರವನ್ನು ನೀಡುತ್ತದೆ. ಅಂಚೆ ಕಚೇರಿಗಳು ಮತ್ತು ಅಂಚೆ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. ನೂತನ ಮಸೂದೆ ಅಂಚೆ ಕಚೇರಿಗಳನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಲಾಗಿದೆ.
ಸಂಸತ್ತಿನ ಮೇಲ್ಮನೆಯಲ್ಲಿ ಮಸೂದೆ ಕುರಿತ ಚರ್ಚೆ ವೇಳೆ ಉತ್ತರಿಸಿದ ಸಚಿವ ಅಶ್ವಿನಿ ವೈಷ್ಣವ್, ಮಸೂದೆಯ ನಿಬಂಧನೆಯನ್ನು ವಿವರಿಸಿದ್ದಾರೆ. ಸಂಕೀರ್ಣವಾದ ಮತ್ತು ವೈವಿಧ್ಯಮಯವಾಗಿರುವ ಸಮಾಜದಲ್ಲಿ ಕಷ್ಟಕರವಾದ ಸಮಯಗಳಲ್ಲಿ, ಪ್ರತಿಬಂಧಕವನ್ನು ಮಾಡುವುದು ಬಹಳ ಮುಖ್ಯ. ಈ ರೀತಿಯ ನಿಬಂಧನೆಯನ್ನು ರಾಷ್ಟ್ರೀಯ ಭದ್ರತೆಗಾಗಿ ಮಾಡಲಾಗುತ್ತದೆ. ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಮಸೂದೆಗೆ ತಿದ್ದುಪಡಿ ಮಾಡಲಾಗಿದೆ. ಅಂಚೆಕಚೇರಿಗಳು, ಪೋಸ್ಟ್ ಮ್ಯಾನ್‌ಗಳು ಕೇವಲ ಅಂಚೆಗಳಲ್ಲಿ ಬಂದ ಕಾಗದ ವಿತರಣೆ ಮಾಡುವ ಕಾಲ ಈಗಿಲ್ಲ. ಕಳೆದ 9 ವರ್ಷಗಳಲ್ಲಿ ಅಂಚೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಗಿತ್ತು. ಈಗ ಲೋಕಸಭೆಯಲ್ಲಿ ಅಂಗೀಕಾರ ಪಡೆದು ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಬೇಕಿದೆ.


