ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಬಂದಾ ಜೈಲಿನಲ್ಲಿ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಯ ಹತ್ಯೆಗೆ ಸಂಚು ರೂಪಿಸಿದೆ ಎಂದು ಆರೋಪಿಸಿ ಅನ್ಸಾರಿ ಕಟುಂಬ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಅನ್ಸಾರಿ ಅವರ ಕಿರಿಯ ಮಗ ಉಮರ್ ಅನ್ಸಾರಿ ಅವರು ಸುಪ್ರೀಂಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಬಂದಾ ಜೈಲಿನಿಂದ ಸ್ಥಳಾಂತರಿಸಿ ತಮ್ಮ ತಂದೆಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ. ಉತ್ತರಪ್ರದೇಶದ ಬಂದಾ ಜೈಲಿನಲ್ಲಿ ಮುಖ್ತಾರ್ ತನ್ನ ಜೀವಕ್ಕೆ ಗಂಭೀರ ಬೆದರಿಕೆಯನ್ನು ಎದುರಿಸುತ್ತಾರೆ ಎಂದು ಉಮರ್ ಸುಪ್ರೀಂಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಉತ್ತರ ಪ್ರದೇಶದ ಪೂರ್ವ ಮೌ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ಮಾಜಿ ಶಾಸಕ ಮುಖ್ತಾರ್, ಅವರ ಕುಟುಂಬಸ್ಥರು, ಬೆಂಬಲಿಗರ ಮೇಲೆ 2017ರಲ್ಲಿ ಯೋಗಿ ಅಧಿಕಾರಕ್ಕೆ ಬಂದ ನಂತರ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರವು ಮುಖ್ತಾರ್‌ನನ್ನು ದರೋಡೆಕೋರ ಮತ್ತು ಗ್ಯಾಂಗ್ IS191ನ ಮುಖ್ಯಸ್ಥ ಎಂದು ಹೇಳಿಕೊಂಡಿದ್ದು ಮುಖ್ತಾರ್ ಮತ್ತು ಅವನ ಮಕ್ಕಳು, ಹಾಲಿ ಶಾಸಕ ಅಬ್ಬಾಸ್ ಅನ್ಸಾರಿ, ಸಹೋದರ ಮತ್ತು ಮಾಜಿ ಸಂಸದ ಅಫ್ಜಲ್ ಅನ್ಸಾರಿ ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದೆ.
ಕಟ್ಟುನಿಟ್ಟಾದ ದರೋಡೆಕೋರರ ಕಾಯಿದೆಯಡಿಯಲ್ಲಿ ಅನ್ಸಾರಿ ಕುಟುಂಬಕ್ಕೆ ಸೇರಿದ ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಸರ್ಕಾರವು ವಶಪಡಿಸಿಕೊಂಡಿದೆ ಮತ್ತು ನೆಲಸಮಗೊಳಿಸಿದೆ.
ಅರ್ಜಿದಾರರಾದ ಉಮರ್ ಅನ್ಸಾರಿ ಅವರು ತಮ್ಮ ತಂದೆಯ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಮಾಜಿ ಲೋಕಸಭಾ ಸಂಸದ ಮತ್ತು ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗುವಾಗ ಪೊಲೀಸರ ತಂಡದ ಎದುರು ಪತ್ರಕರ್ತನ ಸೋಗಿನಲ್ಲಿ ಬಂದು ಹತ್ಯೆಗೈದ ಬಗ್ಗೆ ಉಲ್ಲೇಖಿಸಲಾಗಿದೆ. ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಬಂಧಿತ ಅತೀಕ್ ರಕ್ಷಣೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ಮುಖ್ತಾರ್ ಅವರ ಪುತ್ರ ಉಮರ್ ಅವರು ತಮ್ಮ ಅರ್ಜಿಯಲ್ಲಿ, ಆದಿತ್ಯನಾಥ್ ಸರ್ಕಾರವು ಮುಖ್ತಾರ್‌ನ್ನು ಜೈಲಿನಲ್ಲಿ ಹತ್ಯೆಗೆ ದೊಡ್ಡ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬೆದರಿಕೆಯ ಆರೋಪವು ವಿಶ್ವಾಸಾರ್ಹ ಮಾಹಿತಿಯನ್ನು ಆಧರಿಸಿದೆ. ತಂದೆಯ ಜೀವವು ಗಂಭೀರ ಅಪಾಯದಲ್ಲಿದೆ. ಬಂದಾ ಜೈಲಿನಲ್ಲಿ ಅವರನ್ನು ಹತ್ಯೆಗೆ ಸಂಚು ರೂಪಿಸಲಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ್ ರೈ ಅವರ ಹತ್ಯೆಯ ಆರೋಪದಲ್ಲಿ ಮುಕ್ತಾರ್ ಅವರನ್ನು ಈ ವರ್ಷದ ಆರಂಭದಲ್ಲಿ 10 ವರ್ಷಗಳ ಶಿಕ್ಷೆಗೆ ಗುರಿಪಡಿಸಲಾಯಿತು. ರೈ ಹತ್ಯೆ ಆರೋಪಿಗಳ ಪೈಕಿ ಈಗಾಗಲೇ ನಾಲ್ವರನ್ನು ಕೊಲೆ ಮಾಡಲಾಗಿದೆ. 2006ರಲ್ಲಿ ಫಿರ್ದೌಸ್‌ನನ್ನು ಎಸ್‌ಟಿಎಫ್ ಗುಂಡಿಕ್ಕಿ ಕೊಂದರೆ, ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಬಜರಂಗಿಯನ್ನು 2018ರಲ್ಲಿ ಬಾಗ್‌ಪತ್ ಜೈಲಿನಲ್ಲಿ ಇನ್ನೊಬ್ಬ ಅಪರಾಧಿ ದರೋಡೆಕೋರ ಸುನಿಲ್ ರಾಠಿ ಕೊಲೆ ಮಾಡಿದ್ದಾನೆ. ಆತನ ಹತ್ಯೆಗೆ ಒಂದು ವಾರಕ್ಕೂ ಮುನ್ನ ಬಜರಂಗಿಯ ಪತ್ನಿ ಸೀಮಾ ಸಿಂಗ್ ಲಕ್ನೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆಲವು ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಸೇರಿ ಪತಿಯ ಕೊಲೆಗೆ ಜೈಲಿನ ಹೊರಗೆ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಝಾನ್ಸಿ ಜೈಲಿನಲ್ಲಿದ್ದ ಸಮಯದಲ್ಲಿ ಆಕೆಯ ಪತಿಗೆ ವಿಷ ಕೊಡುವ ಪ್ರಯತ್ನ ನಡೆದಿತ್ತು ಎಂದು ಸಿಂಗ್ ಹೇಳಿಕೊಂಡಿದ್ದರು.
ಮುಖ್ತಾರ್ ಅವರ ಇನ್ನೊಬ್ಬ ಸಹಾಯಕ ರಾಕೇಶ್ ಪಾಂಡೆಯನ್ನು 2020ರ ಆಗಸ್ಟ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಕೊಲೆ ಮಾಡಲಾಗಿದೆ. ಮುಖ್ತಾರ್‌ನ ನಿಕಟನಾಗಿದ್ದ ಸಂಜೀವ್ ಮಹೇಶ್ವರಿ ಅಲಿಯಾಸ್ ಜೀವಾ ಅವರನ್ನು ಜೂ.2023ರಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾಗ ಲಕ್ನೋದ ನ್ಯಾಯಾಲಯದ ಕೊಠಡಿಯೊಳಗೆ ಗುಂಡಿಕ್ಕಿ ಕೊಲ್ಲಲಾಯಿತು. ಬಿಜೆಪಿ ನಾಯಕ ಬ್ರಹ್ಮದತ್ ದ್ವಿವೇದಿ ಹತ್ಯೆ ಪ್ರಕರಣದಲ್ಲೂ ಜೀವಾ ಆರೋಪಿಯಾಗಿದ್ದ.
ತನ್ನ ಅರ್ಜಿಯಲ್ಲಿ ಉಮರ್ ಅನ್ಸಾರಿ, ವಿಶ್ವಾಸಾರ್ಹ ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ ತಂದೆಯನ್ನು ಹತ್ಯೆ ಮಾಡುವ ಉದ್ದೇಶದಿಂದ ಕೊಲೆಗಾರ ವ್ಯಕ್ತಿಗಳನ್ನು ಪೊಲೀಸರು ಬಂಧಿಸುತ್ತಾರೆ. ನಂತರ ಅವರನ್ನು ಪ್ರಸ್ತುತ ತಂದೆ ಇರುವ ಬಂದಾ ಜೈಲಿಗೆ ಕರೆದೊಯ್ಯಲಾಗುತ್ತದೆ. ಈ ಬಾಡಿಗೆ ಕೊಲೆಗಾರರಿಗೆ ಜೈಲಿನೊಳಗೆ ಶಸ್ತ್ರಾಸ್ತ್ರಗಳನ್ನು ನೀಡಿ ಕೃತ್ಯ ನಡೆಸಲಾಗುತ್ತದೆ. ಆದರೆ ಸಂಪೂರ್ಣ ಘಟನೆಯನ್ನು ಗ್ಯಾಂಗ್-ವಾರ್ ಎಂದು ದಾರಿ ತಪ್ಪಿಸಲಾಗುತ್ತದೆ ಎಂದು ಕೋರ್ಟ್ ಗಮನಕ್ಕೆ ತರಲಾಗಿದೆ.
ಮುಖ್ತಾರ್ ಅವರು 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರು ಆರು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಇದರಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಅವರ ಸಹೋದರ ಅವದೇಶ್ ರೈ ಹತ್ಯೆಗೆ ಸಂಬಂಧಿಸಿದಂತೆ ವಾರಣಾಸಿ ನ್ಯಾಯಾಲಯವು ಜೂನ್‌ನಲ್ಲಿ ಅವರಿಗೆ ನೀಡಿದ್ದ ಜೀವಾವಧಿ ಶಿಕ್ಷೆ ಕೂಡ ಸೇರಿದೆ.


