Homeಮುಖಪುಟಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ, ಸಿ ಕೆ ನಾಣು ಉಚ್ಚಾಟನೆ

ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ, ಸಿ ಕೆ ನಾಣು ಉಚ್ಚಾಟನೆ

- Advertisement -
- Advertisement -

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ ನಾಣು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ ಭವನದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್‌.ಡಿ ದೇವೆಗೌಡರು, ಕಾರ್ಯಕಾರಿಣಿಗೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ನಾಯಕರು ಹೊರತುಪಡಿಸಿ, ಹರಿಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಬಿಹಾರ ರಾಜ್ಯಗಳ ನಾಯಕರು ಆಗಮಿಸಿದ್ದರು. ಸಭೆಯಲ್ಲಿ ಎರಡು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಅವರನ್ನು ಅಮಾನತ್ತು ಮಾಡಲಾಗಿತ್ತು. ಇಂದು ಉಚ್ಚಾಟನೆ ಮಾಡಲಾಗಿದೆ. ಅದೇ ರೀತಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ ನಾಣು ರಾಷ್ಟ್ರೀಯ ಅಧ್ಯಕ್ಷರು ಜೀವಂತ ಇರುವಾಗಲೇ ಪ್ರತ್ಯೇಖ ಸಭೆ ಕರೆದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಹಾಗಾಗಿ, ಅವರನ್ನೂ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದರು.

ಪಕ್ಷದ ಬಲ ವರ್ಧನೆಗೆ ಬಿಜೆಪಿ ಜೊತೆ ಮೈತ್ರಿ

ಪಕ್ಷ ಸಂಘಟನೆ ಮಾಡಲು, ಬಲವರ್ಧಿಸಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂದು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಲು ಪಕ್ಷದ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಅಧಿಕಾರ ನೀಡಲು ನಿರ್ಧರಿಸಲಾಗಿದೆ ಎಂದು ದೇವೇಗೌಡು ಹೇಳಿದರು.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಡೆದ ಆರಂಭಿಕ ಸಭೆಗಳಲ್ಲಿ ಸಿಎಂ ಇಬ್ರಾಹಿಂ ಇದ್ದರು. ಬಳಿಕ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಈ ಕಾರಣಕ್ಕೆ ರಾಜ್ಯಾಧ್ಯಕ್ಷರನ್ನೊಳಗೊಂಡ ಜೆಡಿಎಸ್ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಜೆಡಿಎಸ್ ಸಂವಿಧಾನದ ಸೆಕ್ಷನ್ 10ರ ಅನ್ವಯ ನವೆಂಬರ್ 19ರಿಂದ ಅನ್ವಯವಾಗುವಂತೆ ವಿಸರ್ಜನೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ದೇವೇಗೌಡರು ತಿಳಿಸಿದರು.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದ ಸಿಎಂ ಇಬ್ರಾಹಿಂ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ, ತನ್ನ ಬೆಂಬಲಿಗರು ಮತ್ತು ಅಲ್ಪ ಸಂಖ್ಯಾತ ನಾಯಕರ ಪ್ರತ್ಯೇಖ ಸಭೆ ನಡೆಸಿದ್ದರು. ಈ ಬೆಳವಣಿಗೆ ಬಳಿಕ ಸಭೆ ನಡೆಸಿದ ದೇವೇಗೌಡರು ಇಬ್ರಾಹಿಂ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಅಮಾನತ್ತು ಮಾಡಿದ್ದರು.

ಪಕ್ಷದಿಂದ ಅಮಾನತ್ತಾದರೂ, ಸಿಎಂ ಇಬ್ರಾಹಿಂ ಮಾತ್ರ ಜೆಡಿಎಸ್ ಪಕ್ಷ ದೇವೇಗೌಡರು, ಕುಮಾರಸ್ವಾಮಿಗೆ ಮಾತ್ರ ಸೇರಿದ್ದಲ್ಲ. ನಾನು ರಾಜ್ಯಾಧ್ಯಕ್ಷ ಎನ್ನುತ್ತಿದ್ದರು. ಸಿಎಂ ಇಬ್ರಾಹಿಂ ಅವರಿಗೆ ಜೆಡಿಎಸ್‌ನ ಕೆಲ ರಾಷ್ಟ್ರೀಯ ನಾಯಕರು ಬೆಂಬಲ ವ್ಯಕ್ತಪಡಿಸಿದ್ದರು. ಈ ಪೈಕಿ ಸಿ.ಕೆ ನಾಣು ಒಬ್ಬರು.

ಡಿಸೆಂಬರ್ 11ರಂದು ನಾಣು ಅವರು ಜೆಡಿಎಸ್ ಕಾರ್ಯಕಾರಿಣಿ ಸಭೆ ಕರೆದಿರುವುದಾಗಿ ಸಿಎಂ ಇಬ್ರಾಹಿಂ ಶುಕ್ರವಾರ ಮಾಹಿತಿ ನೀಡಿದ್ದರು. ಈ ಬೆನ್ನಲ್ಲೇ ಇಬ್ಬರನ್ನೂ ದೇವೇಗೌಡರು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಇದನ್ನೂ ಓದಿ : ಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು ‘ಬಕೆಟ್ ಜನತಾ ಪಾರ್ಟಿ’: ಕಾಂಗ್ರೆಸ್ ವ್ಯಂಗ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read