ನಾಟಕ ಪ್ರದರ್ಶನಗಳು ಉತ್ಕೃಷ್ಟವಾಗಿ ಪ್ರೇಕ್ಷಕರನ್ನು ತಲುಪುವಂತೆ ಗುಬ್ಬಿ ವೀರಣ್ಣವನ್ನು ವಿನ್ಯಾಸಗೊಳಿಸಿ, ‘ಬಯಲು ಸೀಮೆ ರಂಗಾಯಣ’ ಸ್ಥಾಪಿಸಿ ಎಂದು ತುಮಕೂರು ರಂಗ ಕಲಾವಿದರ ಒಕ್ಕೂಟವು ಒತ್ತಾಯಿಸಿದೆ.
ತುಮಕೂರು ಜಿಲ್ಲೆಯಲ್ಲಿ ಬಹಳ ಹಿಂದಿನಿಂದಲೂ ಕ್ರೀಯಾಶೀಲ ರಂಗಭೂಮಿಯನ್ನು ಒಳಗೊಂಡ ಜಿಲ್ಲೆಯಾಗಿದೆ. ಇಲ್ಲಿ ಜನಪದ ರಂಗಭೂಮಿಯಾದ ಮೂಢಲಪಾಯ, ಬಯಲಾಟ, ಪೌರಾಣಿಕ ನಾಟಕಗಳು ಮತ್ತು ಆಧುನಿಕ ನಾಟಕಗಳು ಹೆಚ್ಚಿನದಾಗಿ ನಡೆಯುತ್ತಿವೆ. ಆದರೆ ಇತ್ತಿಚಿಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾದ ತುಮಕೂರು ಜಿಲ್ಲೆಯ ರಂಗಭೂಮಿ ಸಾಕಷ್ಟು ಸಾಧ್ಯತೆಗಳನ್ನು ಕಳೆದುಕೊಳ್ಳುತ್ತಿದೆ ಎಂದು ಕಲಾವಿದರ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.
ಗುಬ್ಬಿ ವೀರಣ್ಣ, ನರಸಿಂಹರಾಜು ಅಂತಹ ಹಲುವು ರಂಗಭೂಮಿ ಮತ್ತು ಸಿನೆಮಾ ದಿಗ್ಗಜರ ಜಿಲ್ಲೆ ಇನ್ನಷ್ಟು ಹೆಚ್ಚು ಪ್ರತಿಭಾವಂತರನ್ನು ಹೊರತರುವ ವಾತವಾರಣವನ್ನು ಸರ್ಕಾರ ಸೃಷ್ಟಿಸುವ ಅವಶ್ಯಕತೆಯಿದೆ. ಆದರೆ ಇಲ್ಲಿನ ಕೆಲವು ಪಟ್ಟಭದ್ರ ಹಿತಾಸಕ್ತಿಯ ಜನ ಇಲ್ಲಿ ರಂಗಭೂಮಿ ಚಟುವಟಿಕೆಗಳು ಇನ್ನಷ್ಟು ಚಿಗುರಲು ತಡೆಯಾಗಿದ್ದಾರೆ. ನಗರದ ಗುಬ್ಬಿ ವೀರಣ್ಣ ರಂಗಮಂದಿರವನ್ನು ಇಲಾಖೆ ಪ್ರತಿವರ್ಷ ಲಕ್ಷ ಲಕ್ಷ ಖರ್ಚು ಮಾಡಿ ರಿಪೇರಿ ಮಾಡುತ್ತಿದ್ದರು ಸಹ ಇದುವರೆಗೂ ಆಧುನಿಕ ರಂಗಭೂಮಿಯ ನಾಟಕಗಳನ್ನು ಪ್ರದರ್ಶಿಸಲು ಯೋಗ್ಯವಾಗಿಲ್ಲ ಎಂದು ಹಲವಾರು ಆರೋಪಗಳು ಬಂದಿವೆ.
ಇದೇ ಅಲ್ಲದೇ ಎಲ್ಲಾ ತಾಲ್ಲೂಕುಗಳಲ್ಲೂ ಉತ್ತಮವಾದ ರಂಗ ಮಂದಿರಗಳಿಲ್ಲ. ಇರುವ ರಂಗಮಂದಿರಗಳು ಬಳಸಲು ಯೋಗ್ಯವಲ್ಲದ ರೀತಿಯಲ್ಲಿ ಹಾಳಾಗಿವೆ. ಜಿಲ್ಲೆಯಲ್ಲಿ ಹೀಗಾಗಲೆ ಇರುವ ಹಲವು ರಂಗ ನಿರ್ದೇಶಕರು, ವಿನ್ಯಾಸಕಾರು, ನಟರು, ತಂತ್ರಜ್ಞರನ್ನು ಬಳಸಿಕೊಂಡು ಉತ್ತಮವಾದ ರಂಗಕಾರ್ಯ ಮಾಡಬಹುದಾಗಿದೆ. ಈ ಕುರಿತು ರಂಗಭೂಮಿ ಕಲಾವಿದರ ಒಕ್ಕೂಟ ಈ ಕೆಳಗಿನ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ.
1. ಜಿಲ್ಲೆಗೆ ರಂಗಾಯಣ : ರಾಜ್ಯದ ಹಾಗೂ ರಾಷ್ಟ್ರದ ರಂಪ್ರಯೋಗಗಳನ್ನು ನೋಡುವ, ಚರ್ಚಿಸುವ ಮೂಲಕ ಜಿಲ್ಲೆಯಲ್ಲಿಯೇ ಒಂದು ರೀತಿಯ ರಂಗ ಸಂವೇದನೆ ಬರುತ್ತದೆ. 20 ಜನ ಕಲಾವಿದರಿಗೆ ಕೆಲಸ ಸಿಗುತ್ತದೆ. ತುಮಕೂರು ಜಿಲ್ಲೆಯ ಘನತೆ ಹೆಚ್ಚಾಗುತ್ತದೆ. ಹಾಗಾಗಿ ಜಿಲ್ಲೆಗೆ ‘ಬಯಲು ಸೀಮೆ ರಂಗಾಯಣ’ ಒದಗಿಸಬೇಕು.
2. ಡಾ. ಗುಬ್ಬಿ ವೀರಣ್ಣ ಕ್ಯಾಂಪಸ್ : ಇಲ್ಲಿ ಸಮಾರು 500 ಜನ ಕುಳಿತುಕೊಳ್ಳುವ ರಂಗಮಂದಿರ, ಬಯಲು ರಂಗಮಂದಿರ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರ, ತಾಲೀಮು ಕೊಠಡಿ, ಮಕ್ಕಳ ರಂಗಭೂಮಿ ಚಟುವಟಿಕೆಗಳಿಗೆ ಸ್ಥಳ ರಂಗ ಗ್ರಂಥಾಲಯ, ಕ್ಯಾಂಟೀನ್, ಹೊರಗಿನಿಂದ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ಅತಿಥಿ ಗೃಹ , ಆಡಿಯೋ , ವಿಷುವಲ್ ಸ್ಟುಡಿಯೋ, ಇದಕ್ಕಾಗಿ 3 ರಿಂದ 5 ಎಕರೆಯಲ್ಲಿ ಬೆಂಗಳೂರಿನ ಕಲಾಗ್ರಾಮ ಮಾದರಿಯಲ್ಲಿ ಡಾ. ಗುಬ್ಬಿ ವೀರಣ್ಣ ಕ್ಯಾಂಪಸ್ ಸ್ಥಾಪಿಸಬೇಕು. ಸ್ಮಾರ್ಟ್ ಸಿಟಿಯ ಯೋಜನೆಯ ಒಳಗೆ ಈ ಯೋಜನಯನ್ನೂ ತರಬಹುದು.
3. ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರ : ಆಧುನಿಕ ಸವಲತ್ತುಗಳು ಮತ್ತು ಅದರ ಉಸ್ತುವಾರಿ ಸಮಿತಿಯಲ್ಲಿ ರಂಗತಜ್ಞರನ್ನು ಸೇರಿಸುವುದು. ರಂಗಮಂದಿರದ ನಿರ್ವಹಣೆಗೆ ರಂಗಭೂಮಿಯ ಪದವೀದರರನ್ನು ನೇಮಿಸುವುದು.
4. ತುಮಕೂರಿನ 10 ತಾಲೂಕುಗಳಿಗೂ ಒಂದೊಂದು ಪುಟ್ಟ ರಂಗಮಂದಿರ : ಈಗಾಗಲೇ ಕೆಲವು ತಾಲ್ಲೂಕಿನಲ್ಲಿ ರಂಗಮಂದಿರ ಕಟ್ಟುತ್ತಿದ್ದರೆ ಅದರ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲು ನೆರವು ಕೂಡುವುದು.
5. ಪ್ರತಿವರ್ಷ ಬಯಲುಸೀಮೆ ನಾಟಕೋತ್ಸವ : ತಾಲ್ಲೂಕಿನ ಆಯ್ದ ನಾಟಕಗಳ ಜೊತೆ ರಾಜ್ಯ ಹಾಗೂ ಹೊರ ರಾಜ್ಯದ ಅಪರೂಪದ ನಾಟಕಗಳನ್ನೊಳಗೊಂಡ ನಾಟಕೋತ್ಸವ ಏರ್ಪಡಿಸುವುದು. ಒಂದೊಂದು ವರ್ಷ ಒಂದೊಂದು ತಾಲ್ಲೂಕಿನಲ್ಲಿ ಏರ್ಪಡಿಸುವುದು.
ಈ ಬೇಡಿಕೆಗಳಿಗೆ ಸ್ಮಂದಿಸಿ ನಮ್ಮ ತುಮಕೂರು ಜಿಲ್ಲೆಯ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಶ್ರೀಮಂತಗೊಳಿಸಲು ಒತ್ತಾಸೆಯಾಗಿ ನಿಲ್ಲಬೇಕೆಂದು ಕಲಾವಿದರ ಒಕ್ಕೂಟ ಒತ್ತಾಯಿಸಿದೆ. ರಂಗಭೂಮಿ ಕಲಾವಿದರ ಒಕ್ಕೂಟದ ಪರವಾಗಿ ಅಪರ ಜಿಲ್ಲಾಧಿಕಾರಿಗಳಾದ ಕೆ.ಚನ್ನಬಸಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಒಕ್ಕೂಟದ ಸಂಚಾಲಕರಾದ ನಟರಾಜ್ ಹೊನ್ನವಳ್ಳಿ, ರಂಗಕರ್ಮಿಗಳಾದ ಗೋಮಾರದಹಳ್ಳಿ ಮಂಜನಾಥ್, ಉಗಮ ಶ್ರೀನಿವಾಸ್, ನಾಟಕ ಮನೆ ಮಹಲಿಂಗು, ಚನ್ನಬಸಯ್ಯ ಗುಬ್ಬಿ, ದಿನೇಶ್ ಕುಮಾರ್, ಚೇತನ್, ಸುನೀಲ ಜಾರಂದಗುಡ್ಡೆ, ರಂಗಾಯಣ ರವಿಶಂಕರ್, ನಿಜಲಿಂಗಪ್ಪ ಮತ್ತು ಹೋರಾಟಗಾರರಾದ ಉಜ್ಜಜಿ ರಾಜಣ್ಣ, ತಿಪಟೂರು ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.


