ಜನತಾದಳ ಸೆಕ್ಯೂಲರ್(ಜೆಡಿಎಸ್) ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ಆಯ್ಕೆಯಾಗಿದ್ದಾರೆ ಎಂದು ಉಚ್ಚಾಟಿತ ಜೆಡಿಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಸಿಎಂ. ಇಬ್ರಾಹಿಂ ಅವರನ್ನು ಉಲ್ಲೇಖಿಸಿ ಡೆಕ್ಕಾನ್ ಹೆರಾಲ್ಡ್ ವರದಿ ಮಾಡಿದೆ.
ಬೆಂಗಳೂರಿನ ಕಾಡುಗೊಂಡನಹಳ್ಳಿಯ ಖಾಸಗಿ ಸಭಾ ಭವನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿದು ಬಂದಿದೆ.
ಸಭೆಯ ಬಳಿಕ ಮಾತನಾಡಿ ಸಿಎಂ ಇಬ್ರಾಹಿಂ “ಜಾತ್ಯತೀತ ಸಿದ್ಧಾಂತದ ಮೇಲೆ ನಿಂತಿರುವ ಜೆಡಿಎಸ್, ಮಹಾತ್ಮಾ ಗಾಂಧೀಜಿ ಅವರ ತತ್ವಗಳನ್ನು ಪಾಲಿಸುವ ಪಕ್ಷವಾಗಿದೆ. ಆದರೆ, ಗಾಂಧೀಜಿ ಅವರನ್ನು ವಿರೋಧಿಸುವವರೊಂದಿಗೆ ಜೆಡಿಎಸ್ ಸಖ್ಯ ಬೆಳೆಸುವುದು ಸರಿಯೇ?’ಎಂದು ಪ್ರಶ್ನಿಸಿದ್ದಾರೆ.
ಪಕ್ಷದಲ್ಲಿನ ಇತರರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ ಬಿಜೆಪಿಯೊಂದಿಗೆ ಹೆಜ್ಜೆ ಹಾಕಿದರೆ ಇದನ್ನು ಪ್ರಶ್ನಿಸುವ ಅಧಿಕಾರ ಪಕ್ಷದಲ್ಲಿರುವ ನಾನೂ ಸೇರಿದಂತೆ ಇತರರಿಗೂ ಇದೆ. ಗಾಂಧೀಜಿಯವರ ತತ್ವಗಳನ್ನು ಬಲಿಕೊಟ್ಟು ಬರೀ ಚುನಾವಣೆಯ ಗೆಲುವಿಗಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಹೆಚ್.ಡಿ.ದೇವೇಗೌಡರ ವರ್ತನೆಯನ್ನು ಇಂದಿನ ಸಭೆಯಲ್ಲಿ ನಾವು ಖಂಡಿಸುತ್ತೇವೆ ಎಂದು ಇಬ್ರಾಹಿಂ ಹೇಳಿದ್ದಾರೆ.
ಎರಡು ಲೋಕಸಭಾ ಸ್ಥಾನ ಮತ್ತು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ದೇವೇಗೌಡರು 92ನೇ ವಯಸ್ಸಿನಲ್ಲಿ ತಮ್ಮ ಸಿದ್ದಾಂತವನ್ನು ತ್ಯಾಗ ಮಾಡಿದ್ದಾರೆ ಎಂದು ಸಿಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ದೇವೇಗೌಡರಿಗೆ ಮೂರು ಅವಕಾಶಗಳನ್ನು ನೀಡಿದ್ದೆವು. ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ಸಭೆ ಮಾಡಿದ್ದೆವು. ಎರಡನೇ ಸಭೆ ನವೆಂಬರ್ 9ರಂದು ಕೇರಳದಲ್ಲಿ ನಡೆಯಿತು. ಈ ಸಭೆ ಬಳಿಕ ಬಿಜೆಪಿ ಬೆಂಬಲಿಸುವ ನಿರ್ಧಾರ ಬದಲಿಸುವಂತೆ ನಾವು ದೇವೇಗೌಡರಿಗೆ ಮನವಿ ಮಾಡಿದ್ದೆವು. ಅವರು ನಿರ್ಧಾರ ಬದಲಿಸಲಿಲ್ಲ. ಹಾಗಾಗಿ, ಇಂದು (ಡಿ.11) ಸಭೆ ನಡೆಸಿ ದೇವೇಗೌಡರನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದೇವೆ. ನೂತನ ಅಧ್ಯಕ್ಷರಾಗಿ ಮಾಜಿ ಉಪಾಧ್ಯಕ್ಷ ಸಿ.ಕೆ ನಾಣು ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.
ನಾವು ಪಕ್ಷದ ಸಂಬಂಧ ಚುನಾವಣಾ ಆಯೋಗದ ಬಳಿ ಹೋಗುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ. ನಮ್ಮದೇ ನಿಜವಾದ ಜೆಡಿಎಸ್ ಪಕ್ಷ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನವೆಂಬರ್ 17ರಂದು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್‌ನಿಂದ ಅಮಾನತು ಮಾಡಲಾಗಿತ್ತು. ಡಿಸೆಂಬರ್ 9ರಂದು ನಡೆದ ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಇಬ್ರಾಹಿಂ ಮತ್ತು ಸಿ.ಕೆ ನಾಣು ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲಾಗಿದೆ ಎಂದು ದೇವೇಗೌಡು ತಿಳಿಸಿದ್ದಾರೆ.
ಇದನ್ನೂ ಓದಿ : ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ, ಸಿ ಕೆ ನಾಣು ಉಚ್ಚಾಟನೆ


