ಇಸ್ರೇಲ್ ಮಿಲಿಟರಿ ದಾಳಿಯಿಂದ ಇದುವರೆಗೆ 20,000ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಿಯಂತ್ರಿತ ಎನ್‌ಕ್ಲೇವ್ ಪ್ರದೇಶದ ಆರೋಗ್ಯಾಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಮೃತರ ಸಂಖ್ಯೆ ಗಾಝಾದ ಯುದ್ಧ ಪೂರ್ವ ಜನಸಂಖ್ಯೆಯ ಸುಮಾರು 1% ರಷ್ಟಿದೆ. ಯುದ್ದದ ಪರಿಣಾಮ ಗಾಝಾದ ಶೇ. 85ರಷ್ಟು ಜನರನ್ನು ಸ್ಥಳಾಂತರಿಸಲಾಗಿದೆ. ಇಸ್ರೇಲ್ ದಾಳಿಯಲ್ಲಿ ಗಾಝಾ ನಿಯಂತ್ರಿತ ಸಣ್ಣ ಕರಾವಳಿ ಎನ್‌ಕ್ಲೇವ್‌ನ ವಿಶಾಲ ಪ್ರದೇಶಗಳು ಯುದ್ಧ ಭೂಮಿಯಾಗಿ ಮಾರ್ಪಟ್ಟಿವೆ.
ಇಸ್ರೇಲ್ ದಾಳಿಯಿಂದ ಇದುವರೆಗೆ 20,057 ಗಾಝಾ ನಾಗರಿಕರು ಮೃತಪಟ್ಟಿದ್ದಾರೆ. ಸುಮಾರು 53,320 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಸರಿಸುಮಾರು ಮೂರನೇ ಎರಡರಷ್ಟು ಮಂದಿ ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಹಮಾಸ್ ಗುಂಪಿನವರು ಮತ್ತು ನಾಗರಿಕರು ಎಂಬ ವ್ಯತ್ಯಾಸವಿಲ್ಲದೆ ಸಾವಿರಾರು ಜನರನ್ನು ಇಸ್ರೇಲ್ ನಿರ್ಧಯವಾಗಿ ಹತ್ಯೆ ಮಾಡಿದೆ. ಹಮಾಸ್ ನಮ್ಮ ಗುರಿ ಎಂದು ಇಸ್ರೇಲ್ ಹೇಳುತ್ತಿದ್ದು, ಅಮಾಯಕ ನಾಗರಿಕರ ಮಾರಣ ಹೋಮ ನಡೆಸುತ್ತಿದೆ.
ಅಕ್ಟೋಬರ್ 7ರಂದು ಗಾಝಾದ ಹಮಾಸ್ ಗುಂಪು ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 1,200 ಮಂದಿ ಇಸ್ರೇಲ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಿರಂತರ ದಾಳಿ ನಡೆಸುತ್ತಾ ಬಂದಿದ್ದು, ಇದರಿಂದ 20 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.
ಇದುವರೆಗೆ ಸುಮಾರು 7 ಸಾವಿರ ಹಮಾಸ್ ಸದಸ್ಯರನ್ನು ಕೊಂದಿದ್ದೇವೆ ಎಂದು ಇಸ್ರೇಲ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ, ಇದನ್ನು ಖಚಿತಡಿಸುವ ಯಾವುದೇ ಪುರಾವೆಗಳು ದೊರೆತಿಲ್ಲ.
ಕದನ ವಿರಾಮದ ಕರೆಗಳ ಹೊರತಾಗಿಯೂ, 16 ವರ್ಷಗಳಿಂದ ಗಾಝಾವನ್ನು ಆಳುತ್ತಿರುವ ಹಮಾಸ್ ಅನ್ನು ಸಂಪೂರ್ಣ ನಾಶಪಡಿಸುವವರೆಗೂ ತಾನು ಸುಮ್ಮನಿರುವುದಿಲ್ಲ ಎಂದು ಇಸ್ರೇಲ್ ಹೇಳಿದೆ.
“ಹಮಾಸ್‌ನ ನಿರ್ಮೂಲನೆ, ನಮ್ಮ ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಝಾದಿಂದ ಬೆದರಿಕೆಯನ್ನು ಕೊನೆಗೊಳಿಸುವುದು ಈ ಎಲ್ಲಾ ಉದ್ದೇಶಗಳನ್ನು ಸಾಧಿಸುವವರೆಗೆ ನಾವು ಯುದ್ಧ ನಿಲ್ಲಿಸುವುದಿಲ್ಲ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಬೆಂಬಲದೊಂದಿಗೆ ಅಥವಾ ಇಲ್ಲದೆ ಇಸ್ರೇಲ್ ಯುದ್ಧ ಮುಂದುವರೆಸಲಿದೆ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವ ಎಲಿ ಕೊಹೆನ್ ತಿಳಿಸಿದ್ದಾರೆ.
ಇದನ್ನೂ ಓದಿ : ಮಣಿಪುರ ಹಿಂಸಾಚಾರ: 87 ಮೃತದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರ


