‘ಮುಟ್ಟು ಮತ್ತು ಋತುಚಕ್ರವು ಅಂಗವೈಕಲ್ಯವಲ್ಲ; ಇದು ಮಹಿಳೆಯರ ಜೀವನ ಪಯಣದಲ್ಲಿ ಸಹಜ…’ ಎಂದು ಅಸೂಕ್ಷ್ಮ ಹೇಳಿಕೆ ನೀಡಿ ವಿವಾದ ಮಾಡಿಕೊಂಡಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಇಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರತಿ ತಿಂಗಳು ವೇತನ ಸಹಿತ ರಜೆ ನೀಡುವುದರ ಮೂಲಕ ಉದ್ಯೋಗದಾತರಿಗೆ ಆಕೆಯ ಮುಟ್ಟಿನ ಕುರಿತು ಯಾಕೆ ತಿಳಿದಿರಬೇಕು? ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಅವರ ಮುಟ್ಟಿನ ಸಮಯದಲ್ಲಿ ಕಡ್ಡಾಯ ವೇತನ ಸಹಿತ ರಜೆ ನೀತಿಯನ್ನು ಅಳವಡಿಸಿಕೊಂಡರೆ ಇದೆಲ್ಲಾ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಮುಟ್ಟು ಅಂಗವೈಕಲ್ಯವಲ್ಲ ಮತ್ತು ಕಡ್ಡಾಯವಾಗಿ ವೇತನಸಹಿತ ರಜೆಗಾಗಿ ಸರ್ಕಾರವು ಯಾವುದೇ ನೀತಿಯನ್ನು ತರುತ್ತಿಲ್ಲ ಎಂದು ನಾನು ಸಂಸತ್ತಿನಲ್ಲಿ ಹೇಳಿಕೆ ನೀಡಿದ ನಂತರ ವಿವಾದ ಸ್ವರೂಪ ಪಡೆದುಕೊಂಡಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶದಲ್ಲಿ ಹೇಳಿದ್ದಾರೆ. ‘ಒಂದು ವೇಳೆ ಮಹಿಳೆಯರಿಗೆ ಮುಟ್ಟಿನ ರಜೆ ಮಂಜೂರು ಮಾಡಲು ನಿರ್ಧರಿಸಿದರೆ ಏನಾಗುತ್ತದೆ ಎಂದು ಊಹಿಸಿ. ಅವರು ತಮ್ಮ ಕೆಲಸ ಸ್ಥಳದಲ್ಲಿ ಎದುರಿಸಬೇಕಾದ ಕಿರುಕುಳವನ್ನು ನೀವು ಊಹಿಸಬಹುದೇ? ಅಂತಹ ರಜೆಗಳನ್ನು ಜಾರಿಗೊಳಿಸುವುದು ಎಂದರೆ, ಆಕೆ ತನ್ನ ಮುಟ್ಟಿನ ದಿನಗಳ ಮಾಹಿತಿಯನ್ನು ಮಾನವ ಸಂಪನ್ಮೂಲ (ಹೆಚ್‌ಆರ್) ವಿಭಾಗಕ್ಕೆ ವರದಿ ಮಾಡಬೇಕು’ ಎಂದು ಸಚಿವರು ಹೇಳಿದರು.
‘ಕಾರ್ಖಾನೆಗಳು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಹೆಚ್ಚೆಚ್ಚು ಮಹಿಳೆಯರು ಬಂದು ಸೇರುವ ಅಗತ್ಯವಿದೆ ಎಂದು ನಾವು ಹೇಳುತ್ತಿರುವಾಗ, 20,000 ಮಹಿಳೆಯರಿರುವ ಒಂದು ಕಂಪನಿಯಲ್ಲಿ ಏನಾಗುತ್ತದೆ ಎಂದು ನೀವು ಕಲ್ಪಿಸಿಕೊಳ್ಳಿ. ಆದ್ದರಿಂದ, ಇದರಿಂದ ನಾವು ತಾರತಮ್ಯಕ್ಕೆ ಹೆಚ್ಚಿನ ಅವಕಾಶ ಸೃಷ್ಟಿಸಿದಂತಾಗುತ್ತದೆ’ ಎಂದರು.
ಆರ್‌ಜೆಡಿ ಸಂಸದ ಮನೋಜ್ ಝಾ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ‘ಮುಟ್ಟು ಮಹಿಳೆಯರ ಜೀವನ ಪಯಣದ ಸಹಜ ಭಾಗವಾಗಿದೆ. ಋತುಸ್ರಾವದ ಮಹಿಳೆಯಾಗಿ, ಮುಟ್ಟಿನ ಮತ್ತು ಋತುಚಕ್ರವು ಅಂಗವೈಕಲ್ಯವಲ್ಲ, ಇದು ಮಹಿಳೆಯರ ಜೀವನ ಪಯಣದ ಸ್ವಾಭಾವಿಕ ಭಾಗವಾಗಿದೆ. ಮುಟ್ಟಾಗದ ಯಾರಾದರೂ ಅದರ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ಸಮಸ್ಯೆಗಳನ್ನು ನಾವು ಪ್ರಸ್ತಾಪಿಸಬಾರದು’ ಎಂದು ಸದನದಲ್ಲಿ ಹೇಳಿದ್ದರು.
ಇದನ್ನೂ ಓದಿ; ‘ಮುಟ್ಟು ಅಂಗವೈಕಲ್ಯವಲ್ಲ…’; ವೇತನ ಸಹಿತ ರಜೆಗೆ ವಿರೋಧ ವ್ಯಕ್ತಪಡಿಸಿದ ಸಚಿವೆ ಸ್ಮೃತಿ ಇರಾನಿ


