ನಾಗ್ಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎನ್‌ಡಿಸಿಸಿಬಿ)ನ ಹಣ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ಕೇದಾರ್ ಮತ್ತು ಇತರ ಐವರಿಗೆ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶುಕ್ರವಾರ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜೆ ವಿ ಪೆಖ್ಲೆ-ಪುರ್ಕರ್ ಅವರು 20 ವರ್ಷ ಹಳೆಯ ಪ್ರಕರಣದ ತೀರ್ಪು ಪ್ರಕಟಿಸಿದ್ದು, ಆರು ಮಂದಿಗೆ ತಲಾ ₹10ಲಕ್ಷ ದಂಡ ವಿಧಿಸಿದ್ದಾರೆ.
ಸುನಿಲ್ ಕೇದಾರ್ ಜೊತೆಗೆ ಎನ್‌ಡಿಸಿಸಿಬಿಯ ಜನರಲ್ ಮ್ಯಾನೇಜರ್, ನಿರ್ದೇಶಕ, ಹೂಡಿಕೆ ಸಂಸ್ಥೆಯಾದ ಹೋಮ್ ಟ್ರೇಡ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿದ್ದ ಇತರ ಮೂವರನ್ನು ಖುಲಾಸೆಗೊಳಿಸಲಾಗಿದೆ.
ಶಾಸಕ ಸುನಿಲ್ ಕೇದಾರ್ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಹೋಮ್ ಟ್ರೇಡ್ ಪ್ರೈವೇಟ್ ಲಿಮಿಟೆಡ್ ಮೂಲಕ ಹಣ ಹೂಡಿಕೆ ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿದ್ದ ಪರಿಣಾಮ ಎನ್‌ಡಿಸಿಸಿಬಿ 2002 ರಲ್ಲಿ ಸರ್ಕಾರಿ ಭದ್ರತೆಗಳಲ್ಲಿ ₹125 ಕೋಟಿ ಕಳೆದುಕೊಂಡಿದೆ. ಆಗ ಸುನೀಲ್ ಕೇದಾರ್ ಬ್ಯಾಂಕಿನ ಅಧ್ಯಕ್ಷರಾಗಿದ್ದರು.
ಸುನಿಲ್ ಕೇದಾರ್ ಮತ್ತು ಇತರ ಆರೋಪಿಗಳಿಗೆ ಬ್ಯಾಂಕಿನ ಸಂಪೂರ್ಣ ಪಾಲನ್ನು ವಹಿಸಿಕೊಡಲಾಗಿತ್ತು. ಈ ನಿಧಿಯು ಬ್ಯಾಂಕ್‌ನ ಮೇಲೆ ಜನರು ನಂಬಿಕೆಯಿಂದ ಇಟ್ಟ, ಕಷ್ಟಪಟ್ಟು ಗಳಿಸಿದ ಹಣ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ವೇಳೆ ಹೇಳಿದೆ.
ಬ್ಯಾಂಕ್ ಅಧ್ಯಕ್ಷರಾಗಿದ್ದ ಸುನಿಲ್ ಕೇದಾರ್ ಮತ್ತು ಆಗಿನ ಜನರಲ್ ಮ್ಯಾನೇಜರ್ ಅಶೋಕ್ ಚೌಧರಿ ಅವರಿಗೆ ಕಾನೂನು ಸೂಚಿಸಿದ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಿಸಲು ಅವಕಾಶ ನೀಡಲಾಗಿತ್ತು. ಆದರೆ, ಅವರು ನಿಯಮ ಉಲ್ಲಂಘಿಸುವ ಮೂಲಕ ನಂಬಿಕೆಯಯನ್ನು ಉಳಿಸಿಕೊಂಡಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ : ಬಿಹಾರ: ತೋಟದಿಂದ ಸೊಪ್ಪು ಕಿತ್ತ ಆರೋಪದಲ್ಲಿ ದಲಿತ ಬಾಲಕಿಯನ್ನು ಥಳಿಸಿ ಹತ್ಯೆ


