ಲೋಕಸಭೆ ಚುನಾವಣೆಗೆ ಧುಮುಕಲು ಪ್ರಮುಖವಾಗಿ ಎರಡು ಭರವಸೆಗಳೊಂದಿಗೆ ಕಾಂಗ್ರೆಸ್ ಸಿದ್ದತೆ ಮಾಡಿಕೊಳ್ಳುತ್ತಿದೆ. ಪಕ್ಷದ 139ನೇ ಸಂಸ್ಥಾಪನಾ ದಿನದ ಅಂಗವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಗುರುವಾರ ನಡೆದ ಮೆಗಾ ರ್‍ಯಾಲಿಯಲ್ಲಿ ‘ಜಾತಿ ಗಣತಿ ಮತ್ತು ಕನಿಷ್ಠ ಆದಾಯ ಖಾತರಿ’ ಈ ಎರಡು ವಿಷಯಗಳನ್ನು ಕೈ ನಾಯಕರು ತಮ್ಮ ಭಾಷಣಗಳಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.
ಆರೆಸ್ಸೆಸ್‌ನ ಭದ್ರಕೋಟೆ ನಾಗ್ಪುರದ ಆಜಾದ್ ಮೈದಾನದಲ್ಲಿ ನಡೆದ ಕಾಂಗ್ರೆಸ್‌ನ ‘ಹೈನ್ ತೈಯಾರ್ ಹಮ್’ ರ್‍ಯಾಲಿಯಲ್ಲಿ ದೇಶದ ವಿವಿಧ ಭಾಗಗಳಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸೋಲಿನ ಕುರಿತು ಪರಾಮರ್ಶೆ ನಡೆಸಿದ್ದಾರೆ. ಜಾತಿ ಗಣತಿ ವಿಚಾರದಲ್ಲಿ ಪಕ್ಷ ಮರುಚಿಂತನೆ ನಡೆಸಲಿದೆ ಎಂದು ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಜಾತಿ ಗಣತಿಯನ್ನು ಪ್ರಮುಖ ವಿಷಯವಾಗಿ ಮುನ್ನಲೆಗೆ ತಂದಿತ್ತು. ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಇರುವ ಹಿಂದುಳಿದ ವರ್ಗಗಳ ಮತಗಳನ್ನು ಜಾತಿ ಗಣತಿ ಅಸ್ತ್ರದ ಮೂಲಕ ಸೆಳೆಯುವ ಪ್ರಯತ್ನ ನಡೆಸಿತ್ತು. ಆದರೆ, ಕಾಂಗ್ರೆಸ್ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ಹಿಂದಿ ಭಾಷಿಕ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸೋಲನುಭವಿಸಿದೆ. ಹಾಗಾಗಿ, ಕಾಂಗ್ರೆಸ್‌ನ ಜಾತಿ ಗಣತಿ ಅಸ್ತ್ರ ಲೋಕಸಭೆ ಚುನಾವಣೆಯಲ್ಲಿ ಸಹಕಾರಿಯಾಗುತ್ತಾ? ಎಂಬ ಅನುಮಾನ ಮೂಡಿದೆ.
ಆದರೆ, ಗುರುವಾರ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತುರ್ತಾಗಿ ಜಾತಿ ಗಣತಿ ನಡೆಸುವುದಾಗಿ ಘೋಷಿಸಿದ್ದಾರೆ. ಒಬಿಸಿ, ಪರಿಶಿಷ್ಟ ಜಾತಿ ಅಥವಾ ಬುಡಕಟ್ಟು ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ಕಾನೂನು ರೂಪಿಸುವವರಲ್ಲಿ ಈ ಸಮುದಾಯದವರ ಪ್ರಾತಿನಿಧ್ಯ ಬಹಳ ಕಡಿಮೆಯಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ವಿಧಾನಸಭಾ ಚುನಾವಣೆಗೂ ಮುನ್ನ ‘ಜಿತ್ನಿ ಅಬಾದಿ, ಉತ್ನಾ ಹಕ್’ (ಪ್ರಮಾಣಾನುಗುಣ ಮೀಸಲಾತಿ) ಎಂಬ ಘೋಷಣೆಯನ್ನು ರಾಹುಲ್ ಗಾಂಧಿ ಮಾಡಿದ್ದರು. ಇದೇ ವಿಚಾರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಚಾರದ ಪ್ರಮುಖ ಅಂಶವಾಗಲಿದೆ ಎಂದು ವರದಿಗಳು ಹೇಳಿವೆ. ಪಂಚರಾಜ್ಯ ಚುನಾವಣೆಗಳ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲೂ ಜಾತಿಗಣತಿಯನ್ನು ಬಲವಾಗಿ ಬೆಂಬಲಿಸುವ ನಿರ್ಧಾರವನ್ನು ಕಾಂಗ್ರೆಸ್ ಕಾರ್ಯಕಾರಿಣಿ ತೆಗೆದುಕೊಂಡಿತ್ತು. ಈ ವಿಷಯವನ್ನು ಸಿಡಬ್ಲ್ಯುಸಿ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ತಿಳಿಸಿದ್ದರು.
ಗುರುವಾರದ ರ್‍ಯಾಲಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನ್ಯಾಯ್ ಯೋಜನೆ’ ಅಥವಾ ಬಡವರಿಗೆ ಕನಿಷ್ಠ ಆದಾಯವನ್ನು ಒದಗಿಸುವ ಯೋಜನೆಯನ್ನು ಜಾರಿಗೆ ತರಲು ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ನೀಡಿದ್ದ ಪಕ್ಷದ ಚುನಾವಣಾ ಭರವಸೆಯನ್ನು ನೆನಪಿಸಿಕೊಂಡ ಖರ್ಗೆ, ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಬಡ ಕುಟುಂಬಗಳ ಯಜಮಾನಿಗೆ ವಾರ್ಷಿಕವಾಗಿ ಕನಿಷ್ಠ 70,000 ರೂ.ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಿಜೆಪಿಗೆ ದೊಡ್ಡ ಲಾಭವಾಗಿ ಮಾರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಚಾರವನ್ನು ಉಲ್ಲೇಖಿಸಿದ ಮಲ್ಲಿಕಾರ್ಜುನ ಖರ್ಗೆ, ದೇವಸ್ಥಾನದ ವಿಚಾರದಲ್ಲಿ ಬಿಜೆಪಿ ನಾಯಕರು ನಾಟಕವಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಬದಲು, ಸಂಪೂರ್ಣವಾಗಿ ದೇವರ ಭಕ್ತಿಯಲ್ಲಿ ಮುಳುಗಿದ್ದಾರೆ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್‌ನ ಸಿದ್ದಾಂತದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದೆ ಎಂದು ಭಾರತ್ ಜೋಡೋ ಯಾತ್ರೆ ವೇಳೆ ಅವರು ಹೇಳಿದ್ದ ಘೋಷವಾಕ್ಯವನ್ನು ಮತ್ತೊಮ್ಮೆ ಉಲ್ಲೇಖಿಸಿ ವಿಶ್ಲೇಷಿಸಿದ್ದಾರೆ.
ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಬಲವಾಗಿ ನಿಲ್ಲಲಿದೆ ಎಂದು ಈರ್ವರು ನಾಯಕರು ಪುನರುಚ್ಚರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಲೋಕಸಭೆ ಚುನಾವಣೆಗೆ ಮುನ್ನ ಇವಿಎಂ ಸರಿಪಡಿಸದಿದ್ದರೆ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬಹುದು: ಸ್ಯಾಮ್ ಪಿತ್ರೋಡಾ


