ಸಂಸತ್ತಿನ ಮೇಲ್ಮನೆಯಲ್ಲಿ ಪಕ್ಷದ ಹಂಗಾಮಿ ನಾಯಕರಾಗಿ ರಾಘವ್ ಚಡ್ಡಾ ಅವರನ್ನು ನೇಮಿಸುವಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಕೋರಿಕೆಯನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ನಿರಾಕರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಾಜ್ಯಸಭೆಯಲ್ಲಿ ಪಕ್ಷದ ಹಂಗಾಮಿ ನಾಯಕರಾಗಿ ಚಡ್ಡಾ ಅವರನ್ನು ನೇಮಿಸುವಂತೆ ಕೋರಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಧನ್ಖರ್, ‘ಈ ಅಂಶವು ಸಂಸತ್ತಿನಲ್ಲಿ ಮಾನ್ಯತೆ ಪಡೆದ ಪಕ್ಷಗಳು, ಗುಂಪುಗಳ ನಾಯಕರು ಮತ್ತು ಮುಖ್ಯ ಸಚೇತಕರು (ಸೌಲಭ್ಯಗಳು)-1998 ಕಾಯಿದೆಗೆ ಒಳಪಟ್ಟಿರುತ್ತದೆ. ಅದರ ಅಡಿಯಲ್ಲಿ ತಮ್ಮ ವಿನಂತಿಯು ಅನ್ವಯವಾಗುವ ಕಾನೂನು ಆಡಳಿತಕ್ಕೆ ಅನುಗುಣವಾಗಿಲ್ಲ, ಮನವಿಯನ್ನು ಅಂಗೀಕರಿಸಲಾಗುವುದಿಲ್ಲ’ ಎಂದು ಹೇಳಿದ್ದಾರೆ ಎನ್ನಲಾಗಿದೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಬಂಧನದಲ್ಲಿದ್ದು, ಅವರು ಬಿಡುಗಡೆಯಾಗುವವರೆಗೆ ಹಂಗಾಮಿ ನಾಯಕರಾಗಿ ಚಡ್ಡಾ ನೇಮಕ್ಕೆ ಎಎಪಿ ನಾಯಕರು ಮುಂದಾಗಿದ್ದಾರೆ. ಆದರೆ, ಸಂಸತ್ತಿನ ಮೇಲ್ಮನೆಯಲ್ಲಿ ಪಕ್ಷದ ಹಂಗಾಮಿ ನಾಯಕರಾಗಿ ರಾಘವ್ ಚಡ್ಡಾ ಅವರನ್ನು ನೇಮಿಸುವಂತೆ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ತಿರಸ್ಕರಿಸಿದ್ದಾರೆ ಎಂಬ ವರದಿಗಳನ್ನು ಆಮ್ ಆದ್ಮಿ ಪಕ್ಷ ನಿರಾಕರಿಸಿದೆ.
‘ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ನೇಮಿಸಲು ಸಲ್ಲಿಸಿರುವ ಕೋರಿಕೆಯನ್ನು ತಿರಸ್ಕರಿಸಲಾಗಿಲ್ಲ. ಕೆಲವು ತಿದ್ದುಪಡಿಗಳನ್ನು ಕೋರಲಾಗಿದೆ, ಅದನ್ನು ಪರಿಹರಿಸಲಾಗುವುದು’ ಎಂದು ಎಎಪಿ ಮೂಲದಿಂದ ತಿಳಿದುಬಬಂದಿದೆ.
ಈ ತಿಂಗಳ ಆರಂಭದಲ್ಲಿ ಎಎಪಿ ನಾಯಕರು ಧನ್ಖರ್ಗೆ ಬರೆದ ಪತ್ರವೊಂದರಲ್ಲಿ, ಸಂಜಯ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಸಂಸತ್ತಿನ ಮೇಲ್ಮನೆಯಲ್ಲಿ ಪಕ್ಷದ ನಾಯಕರಾಗಿ ಚಡ್ಡಾ ಅವರನ್ನು ನೇಮಿಸುವಂತೆ ವಿನಂತಿಸಿದೆ.
‘ಮುಂದಿನ ಬದಲಾವಣೆಗಳು ಅಗತ್ಯವೆಂದು ಪರಿಗಣಿಸುವವರೆಗೆ ನಾನು ರಾಜ್ಯಸಭೆಯಲ್ಲಿ ಹಂಗಾಮಿ ಪಕ್ಷದ ನಾಯಕರಾಗಿ ರಾಘವ್ ಚಡ್ಡಾ ಅವರ ಹೆಸರನ್ನು ಪ್ರಸ್ತಾಪಿಸಲು ಬಯಸುತ್ತೇನೆ. ರಾಜ್ಯಸಭೆಯ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಈ ಬದಲಾವಣೆಯನ್ನು ಅನುಮತಿಸಬೇಕೆಂದು ನಾವು ವಿನಂತಿಸುತ್ತೇವೆ’ ಎಂದು ಅರವಿಂದ್ ಕೇಜ್ರಿವಾಲ್ ಪತ್ರ ಬರೆದಿದ್ದರು.
ಪಂಜಾಬ್ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭೆಯ ಕಿರಿಯ ಸದಸ್ಯರಲ್ಲಿ ಚಡ್ಡಾ ಒಬ್ಬರು. ಪ್ರಸ್ತುತ ಮೇಲ್ಮನೆಯಲ್ಲಿ ಎಎಪಿ ಒಟ್ಟು 10 ಸಂಸದರನ್ನು ಹೊಂದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ನಂತರ ಎಎಪಿ ರಾಜ್ಯಸಭೆಯಲ್ಲಿ ನಾಲ್ಕನೇ ಅತಿದೊಡ್ಡ ಬಲವನ್ನು ಹೊಂದಿದೆ.
ಇದನ್ನೂ ಓದಿ; ‘ಇದು ನನ್ನ ಕೊನೆ ಚುನಾವಣೆಯಾಗಬಹುದು..’; ರಾಜಕೀಯ ನಿವೃತ್ತಿ ಘೋಷಿಸಿದ್ರಾ ತರೂರ್!


