‘ಅವರು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಸ್ಪರ್ಧಿಸುವುದಕ್ಕೆ ಇಷ್ಟೆಲ್ಲಾ ಮಾಡುತ್ತಿದ್ದಾರೆ’ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಮಂಗಳವಾರ ವ್ಯಂಗ್ಯವಾಡಿದ್ದಾರೆ.
‘ಬಿಜೆಪಿಯ ಆಜ್ಞೆಯ ಮೇರೆಗೆ ರಾಜ್ಯಪಾಲರು ಪಿಣರಾಯಿ ವಿಜಯನ್ ಸರ್ಕಾರದ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ. ಖಾನ್ ಅವರು ಚುನಾವಣೆ ಮೂಲಕ ನೇರವಾಗಿ ರಾಜಕೀಯಕ್ಕೆ ಬರಬೇಕು’ ಎಂದು ಹೇಳಿದರು.
ವಿಶ್ವವಿದ್ಯಾಲಯದ ಮಸೂದೆಗಳು ಬಾಕಿ ಉಳಿದಿರುವ ಕುರಿತು ರಾಜ್ಯ ಸರ್ಕಾರದೊಂದಿಗೆ ದೀರ್ಘ ಕಾಲದಿಂದ ತಿಕ್ಕಾಟ ನಡೆಸುತ್ತಿರುವ ರಾಜ್ಯಪಾಲರ ವಿರುದ್ಧ ಸಿಪಿಐ (ಎಂ) ಮತ್ತು ಎಸ್ಎಫ್ಐ ವಾಗ್ದಾಳಿ ನಡೆಸಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅವರ ಸರ್ಕಾರವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವ ಆರಿಫ್ ಮೊಹಮ್ಮದ್ ಖಾನ್, ‘ಎಡ ಸಂಘಟನೆಗಳ ಕಾರ್ಯಕರ್ತರಿಂದ ಬೆದರಿಕೆ ಇದೆ’ ಎಂದು ಹೇಳಿದ್ದಾರೆ.
‘ಗೌರವಾನ್ವಿತ ರಾಜ್ಯಪಾಲರು ನೇರವಾಗಿ ರಾಜಕೀಯಕ್ಕೆ ಬರಲು ತುಂಬಾ ಆಸಕ್ತಿ ಹೊಂದಿದ್ದರೆ, ಅವರು ಹಾಗೆ ಮಾಡಬೇಕು. ಏಕೆಂದರೆ, 2024 ರ ಲೋಕಸಭೆ ಚುನಾವಣೆಯನ್ನು ನಿಗದಿಪಡಿಸಲಾಗಿದೆ. ಆದ್ದರಿಂದ ಅದು ಅವರ ರಾಜಕೀಯ ತಿಳುವಳಿಕೆಯ ಭಾಗವಾಗಿರುತ್ತದೆ’ ಎಂದು ಕಾರಟ್ ಹೇಳಿದ್ದಾರೆ.
‘ಕೇರಳ ರಾಜ್ಯಪಾಲರು ನೇರವಾಗಿ ಚುನಾವಣಾ ರಾಜಕೀಯಕ್ಕೆ ಬರುವುದು ಹೆಚ್ಚು ಸೂಕ್ತವೆನಿಸುತ್ತದೆ. ಬಿಜೆಪಿಯಿಂದ ಟಿಕೆಟ್ ತೆಗೆದುಕೊಂಡು ಕೇರಳದ ಯಾವುದೇ ಕ್ಷೇತ್ರದಿಂದ ಹೋರಾಡಿ. ದೂಧ್ ಕಾ ದೂಧ್ ಪಾನಿ ಕಾ ಪಾನಿ ಹೋ ಜಾಯೇಗಾ’ (ಹಾಲಿಂದು ಹಾಲಿಗೆ, ನೀರಿಂದು ನೀರಿಗೆ ಆಗಿ ಹೋಗಲಿ) ಎಂದು ಅವರು ವ್ಯಂಗ್ಯವಾಡಿದರು.
‘ರಾಜ್ಯಪಾಲರು ದಿನನಿತ್ಯದ ಸಾರ್ವಜನಿಕ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮದೇ ಹುದ್ದೆಗೆ ಅವಮಾನ ಮಾಡುವ ಬದಲು ಮುಖ್ಯಮಂತ್ರಿಯೊಂದಿಗಿನ ಭಿನ್ನಾಭಿಪ್ರಾಯವನ್ನು ನಿವಾರಿಸಬೇಕು. ಎಲ್ಲವೂ ಹಣಕಾಸಿನ ಮಸೂದೆಗಳಾಗಿರುವುದರಿಂದ ರಾಜ್ಯಪಾಲರ ಒಪ್ಪಿಗೆಯಿಲ್ಲದೆ ವಿಧಾನಸಭೆಯಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ’ ಎಂದು ಅವರು ಪ್ರತಿಪಾದಿಸಿದರು.
ಕೇರಳ ವಿಧಾನಸಭೆ ಅಂಗೀಕರಿಸಿರುವ ಮಸೂದೆಗಳನ್ನು ತೆರವುಗೊಳಿಸದಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ರಾಜ್ಯಪಾಲ ಖಾನ್ ಅವರು ರಾಜ್ಯ ಸರ್ಕಾರದೊಂದಿಗೆ ಸಂಘರ್ಷ ನಡೆಸುತ್ತಿದ್ದಾರೆ.
ರಾಜ್ಯಪಾಲರ ಪ್ರತಿಕೃತಿ ದಹಿಸಿದ್ದ ಎಸ್ಎಫ್ಐ ಕಾರ್ಯಕರ್ತರು:
ರಾಜ್ಯಪಾಲರು ರಾಜ್ಯದ ಶೈಕ್ಷಣಿಕ ಕ್ಷೇತ್ರವನ್ನು ಕೇಸರೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಎಸ್ಎಫ್ಐ, ಹೊಸ ವರ್ಷದ ಮುನ್ನಾದಿನದಂದು ಅವರ 30 ಅಡಿ ಎತ್ತರದ ಪ್ರತಿಕೃತಿಯನ್ನು ಕಡಲತೀರದಲ್ಲಿ ದಹಿಸಿದ್ದಾರೆ. ಘಟನೆ ನಂತರ ಕಣ್ಣೂರು ಪಟ್ಟಣ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಯ್ಯಂಬಲಂ ಬೀಚಿನಲ್ಲಿ ಭಾನುವಾರ ಸಂಜೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಬೃಹತ್ ಪ್ರತಿಕೃತಿಯನ್ನು ಪೆಟ್ರೋಲ್ ಬಳಸಿ ದಹಿಸಿದ ಅಪಾಯಕಾರಿ ಕೃತ್ಯಕ್ಕಾಗಿ, ಎಸ್ಎಫ್ಐ ರಾಜ್ಯ ಅಧ್ಯಕ್ಷೆ ಕೆ. ಅನುಶ್ರೀ ಮತ್ತು ಇತರ ಎಂಟು ಜನರ ವಿರುದ್ಧ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
143 (ಕಾನೂನುಬಾಹಿರ ಸಭೆ), 147 (ಗಲಭೆ), ಮತ್ತು 285 (ಬೆಂಕಿ ಅಥವಾ ದಹನಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಸ್ಎಫ್ಐ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಇದನ್ನೂ ಓದಿ; ಬಿಜೆಎ ವತಿಯಿಂದ ಜ.3ರಿಂದ “ಜನ ಗಣ ಮನ ಅಭಿಯಾನ”


