ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ವಿತರಣೆ ನಿಷೇಧಿಸಿದ ಉತ್ತರ ಪ್ರದೇಶ ಸರ್ಕಾರಕ್ಕೆ ವಿವರಣೆ ಕೋರಿ ಸುಪ್ರೀಂಕೋರ್ಟ್ ನೊಟೀಸ್ ಜಾರಿಗೊಳಿಸಿದೆ.
ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜಮಿಯತ್ ಉಲಮಾ-ಎ-ಮಹಾರಾಷ್ಟ್ರ ಸಂಘಟನೆ, ಉತ್ತರಪ್ರದೇಶ ಸರಕಾರ ಹಲಾಲ್ ಉತ್ಪನ್ನಗಳ ಮಾರಾಟ, ತಯಾರಿಕೆ, ಸಂಗ್ರಹಣೆ ನಿಷೇಧಿಸಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ವಿಚಾರಣೆ ನಡೆಸುತ್ತಿದೆ.
ಹಲಾಲ್-ಪ್ರಮಾಣೀಕೃತ ಉತ್ಪನ್ನಗಳ ಕುರಿತು ನವೆಂಬರ್ 18ರಂದು ಉತ್ತರಪ್ರದೇಶ ಸರಕಾರ ಆದೇಶಿಸಿತ್ತು. ಆದೇಶವು ವಿವಾದಕ್ಕೆ ಕಾರಣವಾಗಿತ್ತು. ಹಲಾಲ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲು ರಾಜ್ಯಾದ್ಯಂತ ಮಾಲ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಹಲಾಲ್ ಉತ್ಪನ್ನಗಳ ನಿಷೇಧವು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ಚಿಲ್ಲರೆ ವ್ಯಾಪಾರಿಗಳಿಗೆ ಗೊಂದಲವನ್ನು ಉಂಟುಮಾಡುವ ಮತ್ತು ಕಾನೂನುಬದ್ಧ ವ್ಯಾಪಾರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿತ್ತು.
ನಾವು ಆರ್ಟಿಕಲ್ 32 ರ ಅಡಿಯಲ್ಲಿ ಅದನ್ನು ಏಕೆ ಪರಿಗಣಿಸಬೇಕು? ಎಂದು ವಿಚಾರಣೆಯ ಆರಂಭದಲ್ಲಿ ನ್ಯಾಯಮೂರ್ತಿ ಗವಾಯಿ ಅವರು ಹಲಾಲ್ ಇಂಡಿಯಾವನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಿದ್ಧಾರ್ಥ್ ಅಗರ್ವಾಲ್ ಅವರಿಗೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲರು ಹಲಾಲ್ ನಿಷೇಧದಿಂದಾಗುವ ವ್ಯಾಪಾರ ಮತ್ತು ವಾಣಿಜ್ಯದ ಮೇಲೆ ಅದರ ಪ್ರಭಾವವನ್ನು ಉಲ್ಲೇಖಿಸಿದ್ದಾರೆ. ಒಂದು ನಿರ್ದಿಷ್ಟ ಆದೇಶವನ್ನು ಉಚ್ಚ ನ್ಯಾಯಾಲಯವು ತಡೆಹಿಡಿದರೆ, ಆ ತಡೆಯಾಜ್ಞೆಯು ದೇಶಾದ್ಯಂತ ಅನ್ವಯಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಈ ಸ್ವರೂಪದ ಅಧಿಸೂಚನೆಯನ್ನು ನೀಡಬಹುದೇ ಮತ್ತು ಎರಡನೆಯದಾಗಿ ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳ ಘಟಕಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬಹುದೇ ಎಂಬುದರ ಕುರಿತು ನಿಮ್ಮ ಗಮನವು ಅಗತ್ಯವಿದೆ ಎಂದು ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ಜಮಿಯತ್ ಉಲಮಾ-ಎ-ಮಹಾರಾಷ್ಟ್ರವನ್ನು ಪ್ರತಿನಿಧಿಸುವ ಹಿರಿಯ ವಕೀಲ ರಾಜು ರಾಮಚಂದ್ರನ್ ಅವರು ಉತ್ತರ ಪ್ರದೇಶ ಸರಕಾರದ ನಿಷೇಧ ಆದೇಶವು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸಿದರು.
ಆರ್ಟಿಕಲ್ 32 ರ ಅಡಿಯಲ್ಲಿ ಅರ್ಜಿಗಳನ್ನು ಪರಿಗಣಿಸಲು ಆರಂಭದಲ್ಲಿ ಕೋರ್ಟ್ ಮುಂದಾಗದಿದ್ದರೂ, ಪೀಠವು ಅಂತಿಮವಾಗಿ ನೋಟಿಸ್ ನೀಡಲು ನಿರ್ಧರಿಸಿತು. ನ್ಯಾಯಮೂರ್ತಿ ಗವಾಯಿ ಅವರು ಈ ಬಗ್ಗೆ ಉತ್ತರಪ್ರದೇಶ ಸರಕಾರಕ್ಕೆ ನೊಟೀಸ್ ಜಾರಿ ಮಾಡಿದ್ದಾರೆ. ಆದರೆ ಆದೇಶಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿದೆ, ಅಂತಹ ಮನವಿಯನ್ನು ಮುಂದಕ್ಕೆ ಪರಿಗಣಿಸಲಾಗುವುದು ಎಂದು ಪೀಠವು ಹೇಳಿದೆ.
ಏನಿದು ಆದೇಶ?
ಉತ್ತರಪ್ರದೇಶ ಸರ್ಕಾರ ಹಲಾಲ್ ಟ್ಯಾಗ್ ಹೊಂದಿರುವ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನ.18ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ರಫ್ತಿಗಾಗಿ ತಯಾರಿಸಿದ ಉತ್ಪನ್ನಗಳು ಈ ನಿರ್ಬಂಧಗಳಿಗೆ ಒಳಪಟ್ಟಿರುವುದಿಲ್ಲ.
ಉತ್ತರಪ್ರದೇಶದೊಳಗೆ ಹಲಾಲ್ ಪ್ರಮಾಣೀಕೃತ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಖರೀದಿ ಮತ್ತು ಮಾರಾಟದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಅಧಿಕೃತ ಆದೇಶ ತಿಳಿಸಲಾಗಿತ್ತು.
ಆಹಾರ ಉತ್ಪನ್ನಗಳ ಹಲಾಲ್ ಪ್ರಮಾಣೀಕರಣವು ಒಂದು ಸಮಾನಾಂತರ ವ್ಯವಸ್ಥೆಯಾಗಿದ್ದು ಅದು ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಗೊಂದಲವನ್ನು ಸೃಷ್ಟಿಸುತ್ತದೆ ಮತ್ತು ಆಹಾರ ಕಾನೂನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯ ಸೆಕ್ಷನ್ 89ರ ಅಡಿಯಲ್ಲಿ ಸಮರ್ಥನೀಯವಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿರ್ಧರಿಸುವ ಹಕ್ಕು ಸೆಕ್ಷನ್ 29ರಲ್ಲಿ ನೀಡಲಾದ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಮಾತ್ರ ಇರುತ್ತದೆ. ಅವರು ಕಾಯಿದೆಯ ನಿಬಂಧನೆಗಳ ಪ್ರಕಾರ ಸಂಬಂಧಿತ ಮಾನದಂಡಗಳನ್ನು ಪರಿಶೀಲಿಸುತ್ತಾರೆ ಎಂದು ಆದೇಶದಲ್ಲಿ ಹೇಳಲಾಗಿತ್ತು.
ಇದಲ್ಲದೆ ಚಿಲ್ಲರೆ ಮಾರಾಟಗಾರರಿಗೆ ನಕಲಿ ಹಲಾಲ್ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಮಾರಾಟವನ್ನು ಹೆಚ್ಚಿಸಲು ಜನರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕಂಪನಿ ಮತ್ತು ಇತರ ಕೆಲವು ಸಂಸ್ಥೆಗಳ ವಿರುದ್ಧ ಲಕ್ನೋ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜಮಿಯತ್ ಉಲ್ಲೆಮಾ ಹಿಂದ್ ಹಲಾಲ್ ಟ್ರಸ್ಟ್, ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಸೇರಿ ಕೆಲವು ಸಂಸ್ಥೆಗಳ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿತ್ತು.
ಇದನ್ನು ಓದಿ: ಪಶ್ಚಿಮ ಬಂಗಾಳ: ಇಡಿ ಅಧಿಕಾರಿಗಳ ಮೇಲೆ ಗುಂಪು ದಾಳಿ; ಮೂವರಿಗೆ ಗಾಯ


