Homeಮುಖಪುಟಮತ್ತೆ ಗರಿಗೆದರಿದ ಇವಿಎಂ ಚರ್ಚೆಯನ್ನು ಕೊನೆಗಾಣಿಸುವುದು ಹೇಗೆ?

ಮತ್ತೆ ಗರಿಗೆದರಿದ ಇವಿಎಂ ಚರ್ಚೆಯನ್ನು ಕೊನೆಗಾಣಿಸುವುದು ಹೇಗೆ?

- Advertisement -
- Advertisement -

ಇಲೆಕ್ಟ್ರಾನಿಕ್ ಮತಯಂತ್ರ ಅಂದರೆ ಇವಿಎಂ ಕುರಿತ ಚರ್ಚೆ ಮತ್ತೆ ಆರಂಭವಾಗಿದೆ. ಅದರಲ್ಲಿ ಹೊಸದೇನು ಇಲ್ಲ- ಸಂದರ್ಭ, ಚರ್ಚೆಗಳು, ಚರ್ಚಿಸುವವರು- ಯಾವುದರಲ್ಲೂ. ದುರದೃಷ್ಟವಶಾತ್, ಈ ವಿವಾದವನ್ನು ಹೇಗೆ ಕೊನೆಗೊಳಿಸಬಹುದು ಅಥವಾ ಅರ್ಥಪೂರ್ಣವಾಗಿ ಚರ್ಚಿಸಬಹುದು ಎಂಬ ಕುರಿತೂ ಸ್ಪಷ್ಟ ದೃಷ್ಟಿಕೋನವಿಲ್ಲ. ಆದರೆ, ಅದೃಷ್ಟವಶಾತ್ ಈ ಕೊನೆಯಿಲ್ಲದ ವಿವಾದವನ್ನು ಕೊನೆಗೊಳಿಸಲು ಒಂದು ದಾರಿಯಿದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಸ್ವಲ್ಪವಾದರೂ ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ಒಂದೇಒಂದು ಅಂಶವನ್ನು ನಾವು ರಕ್ಷಿಸಲು ಬಯಸುವುದೇ ಆದಲ್ಲಿ- ನಾವಲ್ಲಿಗೆ ತಕ್ಷಣವೇ ಸಾಗಬೇಕು.

“ಇಂಡಿಯಾ” (INDIA) ಮೈತ್ರಿಕೂಟದ ಇತ್ತೀಚಿನ ಸಭೆಯು ಈ ಚರ್ಚೆಯನ್ನು ಮರಳಿ ಮುನ್ನಲೆಗೆ ತಂದಿದೆ. ಬಹಳಷ್ಟು ನಿರೀಕ್ಷೆಗಳಿದ್ದ ಈ ಶಿಖರ ಸಮಾವೇಶದಲ್ಲಿ ವಿಚಿತ್ರ ಎಂಬಂತೆ ಹೊರಬಂದ ಒಂದೇ ಒಂದು ಸರ್ವಾನುಮತದ ಗೊತ್ತುವಳಿಯು ಇದನ್ನು ಹೇಳುವುದಕ್ಕೆ ತನ್ನನ್ನು ಸೀಮಿತಗೊಳಿಸಿತ್ತು: “ಇವಿಎಂಗಳ ಕಾರ್ಯಾಚರಣೆಯ ಇಂಟೆಗ್ರಿಟಿ (ಸಮಗ್ರತೆ, ವಿಶ್ವಾಸಾರ್ಹತೆ, ದೃಢತೆ, ಪ್ರಾಮಾಣಿಕತೆ…) ಕುರಿತು ಹಲವಾರು ಸಂಶಯಗಳಿವೆ. ಹಲವಾರು ತಜ್ಞರು ಮತ್ತು ವೃತ್ತಿಪರರು ಕೂಡಾ ಈ ಪ್ರಶ್ನೆಯನ್ನು ಎತ್ತಿದ್ದಾರೆ” ಎಂದು. ಆದರೆ, ಮತ್ತೆ ಹಿಂದಿನ ಮತಪತ್ರಗಳಿಗೆ ಮರಳಬೇಕು ಎಂದು ಒತ್ತಾಯಿಸುವ ಬದಲು ಅವರೊಂದು ಬೇರೆಯೇ ರೀತಿಯ ಸಲಹೆಯನ್ನೀಗ ಮಾಡಿದ್ದಾರೆ; ಗೊತ್ತುವಳಿಯು ಹೇಳುತ್ತದೆ: “ನಮ್ಮ ಸಲಹೆಯು ಸರಳವಾಗಿದೆ. ಓಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್ (VVPAT) (ಮತದಾರನೇ ಪರಿಶೀಲಿಸಿದ ಕಾಗದ ಲೆಕ್ಕತಪಾಸಣೆಯ ಜಾಡು) ಅಂದರೆ, ಪೆಟ್ಟಿಗೆಯಲ್ಲಿ ಬೀಳುವ ಕಾಗದದ ಚೀಟಿಯನ್ನು ಮತದಾರರ ಕೈಗೇ ಕೊಡಬೇಕು. ಮತದಾರರು ಅದನ್ನು- ತಾನು ಹಾಕಿದ ಮತ ಸರಿಯಾದ ಪಕ್ಷಕ್ಕೇ ಬಿದ್ದಿದೆಯಾ ಎಂಬುದನ್ನು ಪರಿಶೀಲಿಸಿ ಒಂದು ಪ್ರತ್ಯೇಕ ಮತಪೆಟ್ಟಿಗೆಯಲ್ಲಿ ಹಾಕಬೇಕು. ಮತಯಂತ್ರಗಳ ಜೊತೆಗೆ, ಈ ವಿವಿಪ್ಯಾಟ್ ಕಾಗದದ ತುಣುಕುಗಳ 100 ಶೇಕಡಾ ಎಣಿಕೆ ನಡೆಯಬೇಕು.” ಇದು ಅವರು ಹೇಳಿದ್ದು. ಅದು ಜನರಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೇಲೆ ಸಂಪೂರ್ಣ ವಿಶ್ವಾಸವನ್ನು ಮರುಸ್ಥಾಪಿಸುತ್ತದೆ.

ನಾನು ಈ ವಾದವನ್ನು ಮುಂದುವರಿಸುವ ಮೊದಲು, ಪೂರ್ಣಪ್ರಮಾಣದಲ್ಲಿ ಕೆಲವು ವಿಷಯಗಳನ್ನು ಬಹಿರಂಗಪಡಿಸುವುದು ಅಪೇಕ್ಷಣೀಯ. ಇವಿಎಂನ ಕಟು ಟೀಕಾಕಾರರು ಮತ್ತು ಸಮರ್ಥಕರ ನಡುವೆ ತೀವ್ರವಾಗಿ ಧ್ರುವೀಕರಣಗೊಂಡಿರುವ ರಾಜಕೀಯ ಪ್ರಪಂಚದಲ್ಲಿ ನಾನು ಎರಡನೇ ಗುಂಪಿನಲ್ಲಿ ಉಳಿದಿದ್ದೇನೆ. ಕಳೆದ ಒಂದೂವರೆ ದಶಕಗಳಲ್ಲಿ ನಡೆದ ಕೆಲವು ಪ್ರಮುಖ ಚುನಾವಣೆಗಳ ಫಲಿತಾಂಶಗಳನ್ನು ಏರುಪೇರು ಮಾಡಲಾಗಿದೆ ಎಂಬ ಆರೋಪವನ್ನು ನಂಬದಿರಲು ನಾನು ಗಣನೀಯವಾದ ಶೈಕ್ಷಣಿಕ ಮತ್ತು ಸಾಮಾಜಿಕ ಶಕ್ತಿಯನ್ನು ವ್ಯಯಿಸಿದ್ದೇನೆ. ಮಮತಾ ಬ್ಯಾನರ್ಜಿ ತನ್ನ ಸೋಲಿಗೆ ಇವಿಎಂಗಳನ್ನು ದೂರಿದಾಗ, ಕೆಲವು ಬಿಜೆಪಿ ನಾಯಕರು (ಈಗ ಅವರ ವಕ್ತಾರನಾಗಿರುವ ಜಿವಿಎಲ್ ನರಸಿಂಹ ರಾವ್ ಸೇರಿದಂತೆ) ಇವಿಎಂಗಳ ವಿರುದ್ಧ ಪುಸ್ತಕ ಒಂದನ್ನು ಬರೆದಾಗ, ಕಾಂಗ್ರೆಸ್ ಪಾಳಯದ ಬೆಂಬಲಿಗರು 2014 ಮತ್ತು 2019ರ ಸೋಲಿಗೆ ಇವಿಎಂಗಳು ಕಾರಣವೆಂದು ದೂರಿದಾಗಲೂ, ನಾನು ಅಂತಹ ಕಲ್ಪನೆಯನ್ನು ವಿರೋಧಿಸಿದ್ದೇನೆ. ಈ ಅಚಲವಾದ ನಿಲುವು ನನಗೆ ರಾಜಕೀಯ ಸಮುದಾಯದ ಒಳಗೆ ಹೆಚ್ಚಿನ ಗೆಳೆಯರನ್ನು ಗಳಿಸಿಕೊಟ್ಟಿಲ್ಲ ಎಂಬುದನ್ನು ನೀವು ಊಹಿಸಬಹುದು.

ಇವಿಎಂಗಳ ವಿರುದ್ಧ ಸಂಶಯಗಳು ಮೂರು ಊಹೆಗಳ ಮೇಲೆ ಆಧರಿತವಾಗಿದ್ದು, ಇವುಗಳಲ್ಲಿ ಪ್ರತಿಯೊಂದರಲ್ಲೂ ಹುರುಳಿದೆ. ಮೊದಲನೆಯದಾಗಿ, ಯಂತ್ರದ ಮೇಲೆಯೇ ಅಪನಂಬಿಕೆ ಇದೆ: ಯಾವುದೇ ಇಲೆಕ್ಟ್ರಾನಿಕ್ ಯಂತ್ರವನ್ನು ಮೊದಲೇ ಪ್ರೋಗ್ರಾಂ ಮಾಡಿ, ಏರುಪೇರು ಮಾಡಬಹುದು, ಹೊರಗಿನಿಂದಲೂ ಅದನ್ನು ನಿಯಂತ್ರಿಸಬಹುದು. ಯಂತ್ರವು ಅತ್ಯಾಧುನಿಕವಾದಷ್ಟೂ ಇಂತಹ ಸಾಧ್ಯತೆ ಹೆಚ್ಚುತ್ತದೆ. ಎರಡನೆಯದಾಗಿ, ಈಗಿನ ಸರ್ಕಾರದ ಆಡಳಿತದ ಪ್ರಾಮಾಣಿಕತೆಯ ಕುರಿತು ಇರುವ ರಾಜಕೀಯ ಅಪನಂಬಿಕೆಯು ಎದ್ದು ಕಾಣುವಂತೆ ಮಾಡಿರುವ ಸಂಶಯ. ಅತ್ಯಂತ ಪೆದ್ದ ರಾಜಕೀಯ ಪ್ರಾಣಿಯೂ- ಈಗ ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುವ ಇಬ್ಬರು ಉನ್ನತ ನಾಯಕರಿಗೆ ಯಾವುದೇ ರೀತಿಯ ನೈತಿಕ ಬದ್ಧತೆಯ ಬಗ್ಗೆ ಏಳುವ ಪ್ರಶ್ನೆಗಳ ಬಗ್ಗೆ ಹೇವರಿಕೆಯಾಗಲೀ ಹಿಂಜರಿಕೆಯಾಗಲೀ ಇದೆ ಎಂದು ಆರೋಪಿಸಲು ಸಾಧ್ಯವಿಲ್ಲ! ಒಂದು ಚಿಂತನಾ ಪ್ರಯೋಗವನ್ನು ನಿಮ್ಮ ಮನಸ್ಸಿನೊಳಗೆಯೇ ಮಾಡಿನೋಡಿ: ಈ ಯಂತ್ರಗಳನ್ನು ಹ್ಯಾಕ್ ಮಾಡುವ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಿಧಾನ ಇದೆ ಎಂದು ಅವರಿಬ್ಬರಿಗೆ ಯಾರಾದರೂ ಹೇಳಿದರು ಎಂದಿಟ್ಟುಕೊಳ್ಳಿ. ಈ ಲಾಭವನ್ನು ಪಡೆಯಲು ನೈತಿಕತೆಯ ಆಧಾರದಲ್ಲಿ ಅವರು ನಿರಾಕರಿಸಬಹುದೆ?! ಕೊನೆಯದಾಗಿ, ಈ ಸಂಶಯವನ್ನು ಒಂದು ಪೂರ್ಣಪ್ರಮಾಣದ ಸಂಚಾಗಿ ಮಾಡುವಂತಹ ಒಂದು ಸಾಂಸ್ಥಿಕವಾದ ಅಪನಂಬಿಕೆ ಇದೆ. ದುಃಖದ ವಿಷಯವೆಂದರೆ, ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ಅಧಿಕಾರದಲ್ಲಿ ಆಗಿರುವ ತ್ವರಿತವಾದ ಅವನತಿಯಿಂದ, ಆಳುವ ಕೂಟವು ಯಾವುದೇ ಅಕ್ರಮದ ಬೇಡಿಕೆಯೊಂದನ್ನು ಮುಂದಿಟ್ಟರೆ, ಚುನಾವಣಾ ಆಯೋಗವು ಅದಕ್ಕೆ ಪ್ರತಿರೋಧ ತೋರಬಹುದು ಎಂಬ ಭ್ರಮೆಯನ್ನು ಯಾರೂ ಹೊಂದಿರುವುದು ಸಾಧ್ಯವಿಲ್ಲ. ಚುನಾವಣಾ ಆಯೋಗವು ಅಂತಹ ಅಕ್ರಮದಲ್ಲಿ ಆಳುವ ಕೂಟದೊಂದಿಗೆ ಖಂಡಿತವಾಗಿಯೂ ಶಾಮೀಲಾಗುವುದು ಎಂದು ನಂಬುವುದು ಬಹಳ ಸುಲಭ.

ಇಲ್ಲಿ ನನ್ನ ವಾದವೆಂದರೆ, ಈ ಮೂರು ಸಮಂಜಸವಾದ ಊಹೆಗಳು- ಇವಿಎಂಗಳ ಏರುಪೇರು ಒಂದು ವಾಸ್ತವಿಕ ಸಾಧ್ಯತೆ ಎಂಬುದನ್ನು ಸಾಬೀತುಪಡಿಸುತ್ತವೆ. ಆದರೆ ಇದು, ಯಾವುದೇ ಚುನಾವಣೆಯಲ್ಲಿ ಇಂತದ್ದು ನಡೆದಿದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ. ಯಾವುದೇ ಚುನಾವಣೆಯಲ್ಲಿ ಒಟ್ಟು ಫಲಿತಾಂಶವನ್ನೇ ಬುಡಮೇಲು ಮಾಡುವಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಸಾಬೀತು ಮಾಡುವ ಸಾಧ್ಯತೆ ಇನ್ನಷ್ಟು ಕಡಿಮೆ. ವರ್ಷಗಳಿಂದ ನಾನು ಯಾವುದಾದರೂ ಸಾಕ್ಷ್ಯಕ್ಕಾಗಿ ಕೇಳುತ್ತಲೇ ಇದ್ದೇನೆ- ನ್ಯಾಯಾಲಯಗಳಲ್ಲಿ ಮಂಡಿಸಬಹುದಾದ ದೃಢವಾದ ಫೊರೆನ್ಸಿಕ್ ಸಾಕ್ಷ್ಯವನ್ನಲ್ಲ; ಯಾವುದಾದರೂ ಒಂದು ಮೇಲ್ನೋಟದ ಸಾಕ್ಷ್ಯವನ್ನು. ಆದರೆ, ಸಂಶಯಕ್ಕೆ ಎಡೆಯಿಲ್ಲದಂತಹ ಸಾಕ್ಷ್ಯ ಯಾವುದೂ ನನಗೆ ಕಂಡಿಲ್ಲ.

ಈ ನಿಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯೇ ಒಂದು ಉದಾಹರಣೆ. ಫಲಿತಾಂಶವು ಊಹೆಯನ್ನು ಮೀರಿದ್ದಾಗಿತ್ತು. ಯಾವುದೇ ರಾಜಕೀಯ ವೀಕ್ಷಕರು, ಪತ್ರಕರ್ತರು ಅಥವಾ ಒಂದನ್ನು ಹೊರತುಪಡಿಸಿ, ಯಾವುದೇ ಜನಮತಗಣನೆಯು ಒಂಭತ್ತು ಶೇಕಡಾವಾರು ಮತಗಳಿಂದ ಬಿಜೆಪಿಯ ಜಯವನ್ನು ನಿರೀಕ್ಷಿಸಿರಲಿಲ್ಲ. ನಾನು ರಾಜ್ಯದಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದೇನೆ. ಆದರೆ, ಯಾವುದೇ ರೀತಿಯ ಅಲೆಯನ್ನು ಕಾಣಲು ನನಗೆ ಸಾಧ್ಯವಾಗಲಿಲ್ಲ. ಫಲಿತಾಂಶವನ್ನು ನಂಬಲು ನನಗೆ ಸಾಧ್ಯವೇ ಆಗಲಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳಬೇಕು; ಈ ಫಲಿತಾಂಶದಲ್ಲಿ ಏನೋ ಮೋಸದಾಟ ಇರಬಹುದು ಎಂದು ನನಗೆ ಇನ್ನೂ ಅನಿಸುತ್ತಿದೆ. ಆದರೆ, ಇದನ್ನು ಇವಿಎಂಗಳ ವಿರುದ್ಧ ಸಾಕ್ಷ್ಯ ಎಂದು ಪರಿಗಣಿಸಲು ಕಷ್ಟ. ಅಂಚೆ ಮತಗಳು ಮತ್ತು ಇವಿಎಂಗಳ ಎಣಿಕೆಗಳ ನಡುವೆ ಹೊಂದಾಣಿಕೆ ಇಲ್ಲದೇ ಇರುವುದನ್ನು ಕಾಂಗ್ರೆಸ್ ಬೊಟ್ಟುಮಾಡಿ ತೋರಿಸಿತು. ಇದು ವಿಚಿತ್ರ ಆದರೆ, ಹಿಂದೆ ನಡೆಯದಂತದ್ದು ಏನೂ ಅಲ್ಲ. ಸಣ್ಣ ಪಕ್ಷಗಳ ಮತ್ತು ಪಕ್ಷೇತರರ ಮತಗಳ ಪಾಲಿನಲ್ಲಿ ಗಮನಾರ್ಹವಾದ ಇಳಿಕೆಯಾಗಿರುವುದರಲ್ಲಿ ಏನೋ ವಿಚಿತ್ರವಾದುದು ಇದೆ. ಆದರೆ, ಅದೇ ಪ್ರಮಾಣದ ಮತಗಳ ಪಾಲಿನಷ್ಟೇ ಬಿಜೆಪಿಯ ಮತಗಳ ಪಾಲು ನಿರ್ದಿಷ್ಟವಾಗಿ ಏರಿಕೆಯಾಗಿರುವುದು ಮಾತ್ರ ನಂಬಲು ಸಾಧ್ಯವಿಲ್ಲದಂತದ್ದು. ಇದು ವಿಚಿತ್ರ ನಿಜ, ಆದರೆ ಅಸಾಧ್ಯವಾದುದೇನಲ್ಲ.

ಇದನ್ನೂ ಓದಿ: ಇವಿಎಂ ಜನರ ಮನಸ್ಸಿನಲ್ಲಿ ಅಪನಂಬಿಕೆ ಸೃಷ್ಟಿಸಿದೆ: ಅಖಿಲೇಶ್ ಯಾದವ್

ಅದುವೇ ಈ ಚರ್ಚೆಯಲ್ಲಿರುವ ಸಮಸ್ಯೆ. ಇವಿಎಂಗಳಲ್ಲಿ ನಂಬಿಕೆ ಇರುವವರು ವಾಸ್ತವದಲ್ಲಿ ಏರುಪೇರು ಮಾಡಲಾಗಿರುವುದರ ಸಾಕ್ಷ್ಯ ಕೇಳುತ್ತಾರೆ; ಮತ್ತದು ಸುಲಭದಲ್ಲಿ ಸಿಗುವಂಥದ್ದಲ್ಲ. ಇವಿಎಂಗಳ ಟೀಕಾಕಾರರು ತಾಂತ್ರಿಕವಾಗಿ ಈ ಯಂತ್ರಗಳನ್ನು ಏರುಪೇರು ಮಾಡಲು ಸಾಧ್ಯವೇ ಇಲ್ಲ ಎಂದು ಸಂಶಯಕ್ಕೆ ಎಡೆಯೇ ಇಲ್ಲದಂತೆ ತೋರಿಸಿಕೊಡುವ ಪ್ರಾತ್ಯಕ್ಷಿಕೆ ಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಚುನಾವಣಾ ಆಯೋಗ ಇದಕ್ಕೆ ಮುಂದೆ ಬಂದಿಲ್ಲ ಮತ್ತು ಬಹುಶಃ ಮುಂದೆ ಬರುವುದು ಅದಕ್ಕೆ ಸಾಧ್ಯವೂ ಇಲ್ಲ.

ಹೀಗಿದ್ದರೂ, ಈ ಚರ್ಚೆಯು ಇಲ್ಲಿಗೇ ನಂದಿಹೋಗಲು ಬಿಡಬಾರದು. ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳು ತೀವ್ರವಾದ ಕುಸಿತವನ್ನು ಕಾಣುತ್ತಿವೆ. ಆಳುವ ಪಕ್ಷವು ಬೆಟ್ಟದಷ್ಟು ಪ್ರಮಾಣದ, ಅಸಮಾನ ಮಟ್ಟದ ಅನುಕೂಲತೆಗಳನ್ನು ಅನುಭವಿಸುತ್ತಿರುವಾಗ, ನಮ್ಮ ಚುನಾವಣೆಗಳು ಸಮಾನಾವಕಾಶಗಳ ಮೈದಾನವನ್ನು ಒದಗಿಸುವುದರ ಹತ್ತಿರವೂ ಇಲ್ಲ! ಈ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಉಳಿದಿರುವ ಒಂದೇಒಂದು ನ್ಯಾಯೋಚಿತ ಅಂಶ ಎಂದರೆ, ಮತದಾನ ಮತ್ತು ಮತಗಳ ಎಣಿಕೆ. ಈ ಚರ್ಚೆಯಲ್ಲಿ ಇರುವುದು ಇದೇ ಒಂದು ಕೊನೆಯ ಅಂಶ.

ಆದುದರಿಂದ, ಇಲ್ಲಿ ಚುನಾವಣಾ ಆಯೋಗದ ಪರಿಗಣನೆಗಾಗಿ ಒಂದು ಪ್ರಸ್ತಾಪವಿದೆ. ಇದಕ್ಕಾಗಿ ಹಳೆಯ ಮತಪತ್ರಗಳಿಗೆ ಮರಳಿ ಹೋಗಬೇಕಾದ ಅಗತ್ಯವೇ ಇಲ್ಲ. ಅದು ಪರಿಹಾರ ನೀಡುವುದಕ್ಕಿಂತಲೂ ಹೆಚ್ಚಿನ ಹೊಸ ಸಮಸ್ಯೆಗಳನ್ನು ಉಂಟುಮಾಡಬಹುದು. ಇನ್ನು ಪ್ರತಿಪಕ್ಷಗಳು ಬೇಡಿಕೆ ಸಲ್ಲಿಸಿರುವಂತೆ ವಿವಿಪ್ಯಾಟ್ ಚೀಟಿಯನ್ನು ಮತದಾರರ ಕೈಗೆ ಕೊಡುವುದೂ ಬೇಕಾಗಿಲ್ಲ. ಇಂಥ ಕ್ರಮಕ್ಕೆ ಇನ್ನಷ್ಟು ಜಾಗರೂಕತೆಯ ಚಿಂತನೆ ಅಗತ್ಯವಿದೆ; ಇದು ಕನಿಷ್ಟ 2024ರ ಲೋಕಸಭಾ ಚುನಾವಣೆಯ ವೇಳೆಗೆ ಸಾಧ್ಯವಾಗದು. ಬದಲಾಗಿ ಚುನಾವಣಾ ಫಲಿತಾಂಶದ ಕುರಿತು ಸಾರ್ವಜನಿಕರ ವಿಶ್ವಾಸವನ್ನು ಮತ್ತೆ ಬಲಪಡಿಸುವ ಸಲುವಾಗಿ ಚುನಾವಣಾ ಆಯೋಗವು ಮುಂದಿನ ನಾಲ್ಕು ಕ್ರಮಗಳನ್ನು ಕೈಗೊಳ್ಳಬಹುದು. ಒಂದು: ಚುನಾವಣಾ ಆಯೋಗವು ನಿಯಂತ್ರಣ ಘಟಕ, ವಿವಿಪ್ಯಾಟ್ ಮತ್ತು ಚಿಹ್ನೆಗಳನ್ನು ಲೋಡ್ ಮಾಡುವ ಘಟಕಗಳಲ್ಲಿ ಬಳಸಲಾಗುವ ಸಾಫ್ಟವೇರ್‌ನ ಸೋರ್ಸ್‌ಕೋಡ್‌ಅನ್ನು ಸಾರ್ವಜನಿಕ ಡೊಮೇನ್‌ನಲ್ಲಿ (Public Domain) ಇರಿಸಬೇಕು ಮತ್ತು ಚುನಾವಣೆಗಳ ಸಂದರ್ಭದಲ್ಲಿ ಅದರ ಸಾಚಾತನ ಅಥವಾ ಅಧಿಕೃತತೆಯನ್ನು ಪರಿಶೀಲಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಡಬೇಕು. ಎರಡು: ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮಾನ್ಯತೆ ಪಡೆದಿರುವ ರಾಜಕೀಯ ಪಕ್ಷಗಳು ನೇಮಿಸುವ ತಾಂತ್ರಿಕ ತಜ್ಞರಿಗೆ ಈ ಇವಿಎಂಗಳು ನಿಜವಾಗಿಯೂ ಪ್ರತ್ಯೇಕ (Stand Alone) ಘಟಕಗಳು ಮತ್ತು ಅವುಗಳನ್ನು ಭೌತಿಕವಾಗಿ ಅಥವಾ ವರ್ಚುವಲ್ ಆಗಿ- ಚುನಾವಣೆಯ ಘೋಷಣೆ ಆದ ಬಳಿಕ ಯಾವುದೇ ರೀತಿಯ ಇತರ ಬಾಹ್ಯ ಸಾಧನಗಳ ಜೊತೆಗೆ ಸಂಪರ್ಕಿಸಲು ಸಾಧ್ಯವಿಲ್ಲ ಎಂಬ ದಾವೆಯನ್ನು ಪರಿಶೀಲಿಸಲು ಅವಕಾಶ ಒದಗಿಸಬೇಕು. ಮೂರನೆಯದು: ನಿರ್ದಿಷ್ಟ ಮತಗಟ್ಟೆಗಳಿಗೆ ಒದಗಿಸಲಾಗುವ ಇವಿಎಂಗಳನ್ನು- ಚಿಹ್ನೆಗಳನ್ನು ಲೋಡ್ ಮಾಡಿ ಅವುಗಳನ್ನು ಕಾರ್ಯಾಚರಣೆಗೆ ಜೀವಂತಗೊಳಿಸಿದ ನಂತರ- ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಡ್ರಾ ಎತ್ತುವ ಮೂಲಕ ರ್‍ಯಾಂಡಮ್ ಆಗಿ ಆಯ್ಕೆ ಮಾಡಬೇಕು. ನಾಲ್ಕನೆಯದು: ಎಲ್ಲಕ್ಕಿಂತಲೂ ಬಹಳ ಮುಖ್ಯವಾಗಿ, ಮತದಾರರು ನೀಡಿದ ಮತಗಳನ್ನು- ಅಂದರೆ, ವಿವಿಪ್ಯಾಟ್ ಚೀಟಿಗಳಲ್ಲಿ ದಾಖಲಾದ ಮತಗಳನ್ನು ಲೆಕ್ಕ ಹಾಕಿ, ಅವುಗಳನ್ನು ಮತಯಂತ್ರಗಳ ತ್ವರಿತ ಲೆಕ್ಕಾಚಾರದ ಜೊತೆಗೆ ತಾಳೆಹಾಕಿ, ಅವು ತಾಳೆಯಾಗುತ್ತವೆ ಎಂದು ಖಾತರಿಪಡಿಸಿದ ನಂತರವಷ್ಟೇ ಚುನಾವಣಾ ಫಲಿತಾಂಶವನ್ನು ಘೋಷಿಸಬೇಕು. ಒಂದು ವೇಳೆ ತಾಳೆಯಾಗದೇ ಹೋದಲ್ಲಿ ಚುನಾವಣಾ ನಿರ್ವಹಣಾ ನಿಯಮ 56ಡಿ(4) (ಡಿ) ಪ್ರಕಾರ ವಿವಿಪ್ಯಾಟ್ ಚೀಟಿಗಳ ಎಣಿಕೆಯೇ ಮೇಲುಗೈ ಪಡೆಯುವುದು.

ಇದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಲ್ಲಿ ಕೆಲವೇ ಗಂಟೆಗಳ ವಿಳಂಬಕ್ಕೆ ಕಾರಣವಾಗಬಹುದು. ಆದರೆ, ಚುನಾವಣೆ ಎಂದರೆ, ಟಿ-20 ಕ್ರಿಕೆಟ್ ಪಂದ್ಯವಲ್ಲ ಎಂಬುದನ್ನು ನಾವು ಮರೆಯದಿರೋಣ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್ 
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...