ಮಧ್ಯಪ್ರದೇಶದ ಭೋಪಾಲ್‌ನ ಮಕ್ಕಳ ಆಶ್ರಯ ಧಾಮದಿಂದ 26 ಬಾಲಕಿಯರು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಭೋಪಾಲ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ಸಿನ್ಹಾ, ಇದುವರೆಗಿನ ತನಿಖೆಯಲ್ಲಿ ಬಾಲಕಿಯರು ಮನೆಗೆ ಹೋಗಲು ಇಚ್ಚಿಸಿದ್ದರಿಂದ ಪರ್ವಾಲಿಯಾ ಪ್ರದೇಶದ ಆಂಚಲ್ ಮಕ್ಕಳ ಆಶ್ರಯ ಧಾಮ ತೊರೆದಿರುವುದಾಗಿ ತಿಳಿದು ಬಂದಿದೆ ಎಂದಿದ್ದಾರೆ.
ಆಶ್ರಯ ಧಾಮದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮತ್ತು ಮನೆ ನೆನಪಾದ ಹಿನ್ನೆಲೆ, ಹಲವು ಬಾಲಕಿಯರು ಬಿಟ್ಟು ಹೋಗಿದ್ದಾರೆ ಎಂದು ಇದುವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ. ಈ ಕುರಿತು ಕೂಲಕುಂಷವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಅಕ್ರಮವಾಗಿ ಆಶ್ರಯ ಧಾಮ ನಡೆಸುತ್ತಿದ್ದ ಆರೋಪದ ಮೇಲೆ ಅನಿಲ್ ಮ್ಯಾಥ್ಯೂ ಎಂಬಾತನ ವಿರುದ್ಧ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ರಾಮಗೋಪಾಲ್ ಯಾದವ್ ನೀಡಿದ ದೂರಿನ ಮೇರೆಗೆ ಪೊಲೀಸರು ಗುರುವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಭೋಪಾಲ್ ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಮಕ್ಕಳ ಆಶ್ರಯಧಾಮದಲ್ಲಿ 68 ಹುಡುಗಿಯರು ವಾಸವಿದ್ದರು. ಈ ಪೈಕಿ 26 ಮಂದಿ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಆಶ್ರಯಧಾಮದ ಮುಖ್ಯಸ್ಥ ಮ್ಯಾಥ್ಯೂ ವಿರುದ್ದ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015 ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮ್ಯಾಥ್ಯೂ ತನ್ನ ಆಶ್ರಯಧಾಮದ ನೋಂದಣಿ ಪ್ರಮಾಣಪತ್ರವನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಯರ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಅಪ್ರಾಪ್ತರು ಸೇರಿದಂತೆ ಐವರ ಬಂಧನ


