Homeಕರ್ನಾಟಕಜ.22ರಂದು ದೇವಸ್ಥಾನಗಳಲ್ಲಿ 'ವಿಶೇಷ' ಪೂಜೆಗೆ ಸೂಚನೆ; ‘ಮೃದು ಹಿಂದುತ್ವ’ದ ಮೊರೆ ಹೋಯ್ತಾ ಕಾಂಗ್ರೆಸ್?

ಜ.22ರಂದು ದೇವಸ್ಥಾನಗಳಲ್ಲಿ ‘ವಿಶೇಷ’ ಪೂಜೆಗೆ ಸೂಚನೆ; ‘ಮೃದು ಹಿಂದುತ್ವ’ದ ಮೊರೆ ಹೋಯ್ತಾ ಕಾಂಗ್ರೆಸ್?

- Advertisement -
- Advertisement -

‘ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವ ಜ.22 ರಂದು ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಸೂಚನೆ ನೀಡಿದ್ದೇನೆ’ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಮಗಾರೆಡ್ಡಿ ನೀಡಿರುವ ಹೇಳಿಕೆಯು, ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ‘ಮೃದು ಹಿಂದುತ್ವ’ದ ಮೊರೆ ಹೋಯಿತಾ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ರೆಡ್ಡಿ ಅವರ ಎಕ್ಸ್‌ ಪೋಸ್ಟಿಗೆ ಬಿಜೆಪಿ ಬೆಂಬಲಿಗರೆ ಟೀಕೆ ವ್ಯಕ್ತಪಡಿಸಿದ್ದಾರೆ.

‘ರಾಮ ಜನ್ಮ ಭೂಮಿಯ ವಿವಾದವು ಈಗ ಮುಗಿದ ಅಧ್ಯಾಯವಾಗಿರುವುದರಿಂದ ಹೊಸ ರಾಮಮಂದಿರವನ್ನು ತೆರೆಯಲಾಗುತ್ತಿದೆ’ ಎಂದು ಹೇಳಿರುವ ಅವರು, ಜನವರಿ 22 ರಂದು ಮಧ್ಯಾಹ್ನ 12:29 ರಿಂದ 1:32 ರ ನಡುವೆ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಈ ಮಹತ್ವದ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಮಹಾ ಮಂಗಳಾರತಿ ಮತ್ತು ವಿಶೇಷ ಪೂಜೆಗಳನ್ನು ನಡೆಸುವಂತೆ ಸಚಿವ ರೆಡ್ಡಿ ಸೂಚನೆ ನೀಡಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಪಕ್ಷದ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಕಾಂಗ್ರೆಸ್ ಸಂಸದೀಯ ಮಂಡಳಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಳ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ಬಂದಿದೆ ಎಂದು ಪಕ್ಷ ಹೇಳಿದೆ.

ಚುನಾವಣೆ ಹೊಸ್ತಿಲಲ್ಲಿ ಹಿಂದೂ ಮತ ಬ್ಯಾಂಕ್ನ ವಿರೋಧ ಕಟ್ಟಿಕೊಳ್ಳಲು ಸಿದ್ಧವಿಲ್ಲದ ಕಾಂಗ್ರೆಸ್, ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಪಕ್ಷದ ನಾಯಕರಿಗೆ ಯಾವುದೇ ಕಟ್ಟುಪಾಡುಗಳಿಲ್ಲ ಎಂದು ಖರ್ಗೆ ಹೇಳಿದ್ದಾರೆ ಎನ್ನಲಾಗಿದೆ. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಬಯಸುವ ಯಾರಾದರೂ ಅಲ್ಲಿಗೆ ಹೋಗಲು ಸ್ವತಂತ್ರರು ಎಂದು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವರ ಆದೇಶಕ್ಕೆ ರಾಜ್ಯ ಬಿಜೆಪಿ ಟೀಕೆ:

ಸಚಿವ ರಾಮಲಿಂಗಾರೆಡ್ಡಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ‘ಇಲ್ಲ..ಇದು ಡೀಪ್ ಫೇಕ್ ವಿಡಿಯೋ ಅಲ್ಲ, ಪ್ರಭು ಶ್ರೀರಾಮನ ನಿಜವಾದ ಶಕ್ತಿ’ ಎಂದು ಕಾಂಗ್ರೆಸ್ ಪಕ್ಷದ ಕಾಲೆಳೆದಿದೆ.

‘ಪ್ರಭು ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸುವುದಕ್ಕೂ, ಅಪಹಾಸ್ಯ ಮಾಡುವುದಕ್ಕೂ ಹೆಸರಾಗಿರುವ ಕಾಂಗ್ರೆಸ್ ಪಕ್ಷ ಈಗ ರಾಮಜಪ ಮಾಡುತ್ತಿರುವುದು ವಿಪರ್ಯಾಸವೇ ಸರಿ. ರಾಮಸೇನೆಯು ರಾವಣ ಮತ್ತು ಅವನ ಇಡೀ ಸಾಮ್ರಾಜ್ಯವನ್ನು ಹೇಗೆ ನಾಶಮಾಡಿತು ಎಂಬುದನ್ನು ಹಿಂದಿನವರು ಸಾಬೀತುಪಡಿಸಿದ್ದಾರೆ. ಅದೇ ರೀತಿ ಇಂದು ರಾಮಭಕ್ತರು ಕಾಂಗ್ರೆಸನ್ನು ಅಂಚಿಗೆ ತಳ್ಳಿ ತಮ್ಮ ಅಂತ್ಯ ಸಮೀಪಿಸಿದೆ ಎಂದು ಅರಿವಾಗುವಂತೆ ಮಾಡಿದ್ದಾರೆ’ ಎಂದು ಟೀಕಿಸಿದೆ.

‘ರಾಮಾಯಣದ ಕಾಲಾತೀತ ಪಾಠವು ಮುಂದುವರಿಯುತ್ತದೆ “ಕೆಟ್ಟವರು ನಾಶವಾಗುತ್ತಾರೆ”. ಆದ್ದರಿಂದ, ಕಾಂಗ್ರೆಸ್ ಮಾಡುವ ಕುತಂತ್ರಗಳನ್ನು ಲೆಕ್ಕಿಸದೆ, ಅವರ ಅಂತ್ಯವು ಅನಿವಾರ್ಯವಾಗಿದೆ. ಇದು ಶಾಶ್ವತ ಚಕ್ರ, ಧರ್ಮದ ಶಕ್ತಿ’ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಸಚಿವ ರೆಡ್ಡಿ ಸಮರ್ಥನೆ:

ತನ್ನ ನಿರ್ಧಾರದ ಬಗ್ಗೆ ಲೇವಡಿ ಮಾಡಿರುವ ಬಿಜೆಪಿಗೆ ತಿರುಗೇಟು ನೀಡಿರುವ ಸಚಿವ ರಾಮಲಿಂಗಾ ರೆಡ್ಡಿ, ‘ಹಿಂದೂ ದೇವಾಲಯಗಳಲ್ಲಿ ಶುಭ ದಿನಗಳು ಮತ್ತು ಹಬ್ಬಗಳಂದು ವಿಶೇಷ ಪೂಜೆಗಳನ್ನು ವಾಡಿಕೆಯಂತೆ ನಡೆಸಲಾಗಿದೆ. ಜನವರಿ 22ರಂದು ಎಲ್ಲ ಹಿಂದೂಗಳಿಗೆ ಅಂತಹ ಒಂದು ವಿಶೇಷ ದಿನವಾಗಿದೆ; ರಾಮ ಜನ್ಮ ಭೂಮಿಯ ವಿವಾದವು ಈಗ ಮುಗಿದ ಅಧ್ಯಾಯವಾಗಿರುವುದರಿಂದ ಹೊಸ ರಾಮಮಂದಿರವನ್ನು ತೆರೆಯಲಾಗುತ್ತಿದೆ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

‘ಬಿಜೆಪಿಯಲ್ಲಿರುವವರು ಮಾತ್ರ ಶ್ರೀರಾಮನ ಭಕ್ತರು; ಉಳಿದವರು ಭಕ್ತರಲ್ಲ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಬಿಜೆಪಿ ಇದ್ದರೂ ಇಲ್ಲದಿದ್ದರೂ ವಿಶೇಷ ಪೂಜೆ ನಡೆಯುತ್ತಿತ್ತು. ನಾವು ಪ್ರಭು ಶ್ರೀರಾಮಚಂದ್ರನ ತತ್ವಗಳನ್ನು ಪೂಜಿಸುತ್ತೇವೆ. ಪ್ರತಿಯೊಬ್ಬ ಹಿಂದೂ ಅವನನ್ನು ಮರ್ಯಾದಾ ಪುರುಷನಂತೆ ನೋಡುತ್ತಾನೆ. ಕಾಂಗ್ರೆಸ್ ಒಂದು ಪಕ್ಷವಾಗಿ ತಮ್ಮ ನಂಬಿಕೆಗಳ ಜತೆಗೆ, ಇತರ ಧರ್ಮದ ಸದಸ್ಯರ ಭಾವನೆಗಳನ್ನು ಸಹ ಗೌರವಿಸುತ್ತದೆ. ಬಿಜೆಪಿ ಇಲ್ಲಿ ಒಡೆದು ಆಳುವ ರಾಜಕಾರಣ ಮಾಡಲು ಮತ್ತು ಪ್ರಭು ಶ್ರೀರಾಮನ ಮೇಲಿನ ಜನರ ಭಕ್ತಿಯನ್ನು ವ್ಯಾಪಾರ ಮಾಡಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದ್ದಾರೆ.

‘ಭಗವಾನ್ ಶ್ರೀರಾಮನ ಶಕ್ತಿಯನ್ನು ತನ್ನದು ಎಂದು ಹೇಳಿಕೊಳ್ಳುವ ಬಿಜೆಪಿಯ ಬೆತ್ತಲೆ ಪ್ರಯತ್ನಗಳನ್ನು ಜನರು ನೋಡುತ್ತಾರೆ. ದುಷ್ಟರ ಮೇಲೆ ಧರ್ಮ ಮೇಲುಗೈ ಸಾಧಿಸಿದ್ದರಿಂದ ಬಿಜೆಪಿ ಕರ್ನಾಟಕವನ್ನು ಕಳೆದುಕೊಂಡಿತು’ ಎಂದಿದ್ದಾರೆ.

ಇದನ್ನೂ ಓದಿ; ಬಿಲ್ಕಿಸ್ ಬಾನು ಪ್ರಕರಣ; 2 ವಾರಗಳಲ್ಲಿ ಜೈಲಿಗೆ ಮರಳುವಂತೆ 11 ಅಪರಾಧಿಗಳಿಗೆ ಸುಪ್ರೀಂ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read