Homeಮುಖಪುಟವಿರೋಧ ಪಕ್ಷವೂ ಬೇಡ, ಜನರ ಪ್ರತಿರೋಧವೂ ಬೇಡ..

ವಿರೋಧ ಪಕ್ಷವೂ ಬೇಡ, ಜನರ ಪ್ರತಿರೋಧವೂ ಬೇಡ..

- Advertisement -
- Advertisement -

ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕಂಡುಕೇಳರಿಯದಂಥ ವಿದ್ಯಮಾನಗಳು ಘಟಿಸುತ್ತಿವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಂತಹಂತವಾಗಿ ಮುಗಿಸಿಹಾಕುವ ಕಾರ್ಯ ಸಂವಿಧಾನದ ಹೆಸರಿನಲ್ಲೇ ನಡೆಯುತ್ತಿದೆ. ಆಳುವ ಸರ್ಕಾರದ ನಡೆಯನ್ನು ತೀವ್ರವಾಗಿ ಪ್ರಶ್ನಿಸಿದ, ಸದನದಲ್ಲಿ ಪ್ರತಿಭಟಿಸಿದ ಕಾರಣಕ್ಕೆ ವಿರೋಧ ಪಕ್ಷಗಳ ಒಟ್ಟು 146 ಸಂಸದರಿಗೆ ಅಮಾನತ್ತು ಶಿಕ್ಷೆ ವಿಧಿಸಿ, ಸಂಸತ್ತಿನಿಂದ ಹೊರಗೆ ಹಾಕಲಾಗಿದೆ. ಅಷ್ಟು ಮಾತ್ರವಲ್ಲ, ತಮಗೆ ಬೇಕಾದ ಕಾನೂನುಗಳನ್ನು ಬೇಕಾಬಿಟ್ಟಿಯಾಗಿ ಪಾಸು ಮಾಡಿಕೊಳ್ಳಲಾಗಿದೆ. ಹೌದು, ಇವೆಲ್ಲವೂ ಸಂಸತ್ತು, ಪ್ರಜಾತಂತ್ರಗಳ ಘನತೆಯನ್ನು ಕಾಪಾಡುವ ಹೆಸರಿನಲ್ಲಿ, ನಮ್ಮ ಕಾನೂನು, ಸಂವಿಧಾನಗಳ ಅಡಿಯಲ್ಲೇ ನಡೆದಿವೆ. ಈ ವಿದ್ಯಮಾನ ದೇಶದ ಪ್ರಜಾತಂತ್ರದ ಭವಿಷ್ಯದ ಮೇಲೆ ಬಹಳ ಮಾರಣಾಂತಿಕ ಪರಿಣಾಮ ಬೀರುವಂಥವು.

ಈಗ ಒಂದು ಪ್ರಶ್ನೆ ಹಾಕಿಕೊಳ್ಳೋಣ. ಯಾವುದೇ ಸರ್ವಾಧಿಕಾರಿಯ ಅಥವಾ ಸರ್ವಾಧಿಕಾರಿಯಾಗುವ ಹಾದಿಯಲ್ಲಿರುವವನ ಪ್ರಾಥಮಿಕ ಅವಶ್ಯಕತೆ ಏನಾಗಿರುತ್ತದೆ? ಉತ್ತರ ಬಹಳ ಸರಳ ಮತ್ತು ನೇರ: ವಿರೋಧ ಪಕ್ಷವೇ ಇಲ್ಲದ ಸಂಸತ್ತು ಹಾಗೂ ಪ್ರತಿರೋಧವೇ ಇಲ್ಲದ ಬೀದಿಗಳು.

ಆದರೆ ಭಾರತದಂಥ ಬಹುಭಾಷೆ, ಬಹುಸಂಸ್ಕೃತಿಯ ನಾಡಿನಲ್ಲಿ, ವೈವಿಧ್ಯಮಯ ಐಡೆಂಟಿಟಿಗಳಿರುವ ದೇಶದಲ್ಲಿ ಬಹುಪಕ್ಷೀಯ ಪ್ರಜಾತಂತ್ರ ಅನಿವಾರ್ಯವಾಗಿ ಅಸ್ತಿತ್ವದಲ್ಲಿದೆ. ಹೀಗಾಗಿ ವಿರೋಧ ಪಕ್ಷಗಳ ಅಸ್ತಿತ್ವವೇ ಇಲ್ಲದಂತಾಗುವುದು ಸಾಧ್ಯವಿಲ್ಲದ ಮಾತು. ಹಾಗೆಯೇ ಬೀದಿಯಲ್ಲಿ ಜನತೆಯ ಪ್ರತಿರೋಧವೇ ಇಲ್ಲದಂತಾಗುವುದು ಕೂಡ ಊಹೆಗೆ ನಿಲುಕದ್ದು.

ಇಂಥಾ ಸನ್ನಿವೇಶದಲ್ಲಿ ಸರ್ವಾಧಿಕಾರವನ್ನು ಸ್ಥಾಪಿಸಬಯಸುವ ಪಟ್ಟಭದ್ರ ಶಕ್ತಿಗಳು ಅನುಸರಿಸಬೇಕಾದ ತಂತ್ರ-ಕುತಂತ್ರಗಳು ಹೇಗಿರುತ್ತವೆ? ಪ್ರಸ್ತುತ ದೇಶದಲ್ಲಿ ಕಣ್ಣಿಗೆ ರಾಚುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ತಂತ್ರ-ಕುತಂತ್ರಗಳ ಬಗ್ಗೆ ಕಣ್ಣಿಗೆ ಕಟ್ಟುವಂಥ ಚಿತ್ರಣ ಸಿಗುತ್ತದೆ.

ವಾರದ ಘಟನಾವಳಿ

ಡಿಸೆಂಬರ್ 13ನೇ ತಾರೀಖು ಸಂಸತ್‌ನಲ್ಲಿ ನಡೆದ ಒಂದು ವಿಚಿತ್ರ ಘಟನೆಯನ್ನು ನೆನಪಿಸಿಕೊಳ್ಳೋಣ. ಇಬ್ಬರು ’ನಿರುದ್ಯೋಗಿ’ ಯುವಕರು ಸಂಸತ್ ಭವನಕ್ಕೆ ನುಸುಳಿ ’ಹೊಗೆ ಡಬ್ಬಿ ಸಿಡಿಸಿದ ದೃಶ್ಯಾವಳಿಗಳನ್ನು ಇಡೀ ದೇಶ ನೋಡಿದೆ. ಒಟ್ಟು ಈ ಗುಂಪಿನಲ್ಲಿದ್ದ ನಾಲ್ವರು ಯುವಕರನ್ನು ಬಂಧಿಸಿ, ಅವರ ಮೇಲೆ ಯುಎಪಿಎಯಂಥ ಘನಗಂಭೀರ ಕೇಸು ದಾಖಲಿಸಿ, ಜೈಲಿಗೆ ಹಾಕಲಾಗಿದೆ. ನಂತರವೂ ಈ ಘಟನೆಯ ಜೊತೆ ಸಂಬಂಧ ಹೊಂದಿದ್ದ ಇನ್ನೂ ಕೆಲವರನ್ನು ಬಂಧಿಸಲಾಗಿದೆ. ಮಾಧ್ಯಮಗಳು ಎಂದಿನಂತೆ ಟಿಆರ್‌ಪಿ ಬೇಟೆಯಲ್ಲಿ ನಿರತವಾಗಿವೆ; ಆಳುವವರಿಗ ಜೈಕಾರ ಹಾಕುತ್ತಾ ವಿರೋಧ ಪಕ್ಷಗಳನ್ನು ಟೀಕಿಸುತ್ತಾ ಕೃತಾರ್ಥವಾಗಿವೆ.

ಆದರೆ, ಈ ಪ್ರಕರಣದಲ್ಲಿ ದೇಶದ ಪ್ರಜೆಗಳಾದ ನಾವು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಯಾವುವು?

  1. ಆ ಯುವಕರು ಸಂಸತ್‌ನ ಆವರಣದಲ್ಲಿ ಕೂಗಿದ ಘೋಷಣೆಗಳು. ಸರ್ವಾಧಿಕಾರಕ್ಕೆ ಧಿಕ್ಕಾರ, ನಿರುದ್ಯೋಗ ಕೊನೆಯಾಗಲಿ, ರೈತರಿಗೆ ನ್ಯಾಯ ಸಿಗಲಿ, ಮಹಿಳೆಯರ ಮೇಲೆ, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕೊನೆಯಾಗಲಿ ಇತ್ಯಾದಿ.
  2. ತಮ್ಮ ’ಆಕ್ರೋಶವನ್ನು ಹೊರಹಾಕುವ’ ಉದ್ದೇಶದಿಂದ ತಪ್ಪು ಹಾದಿ ಹಿಡಿದು ಪಾರ್ಲಿಮೆಂಟ್‌ನಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ ಆ ಹಾದಿತಪ್ಪಿದ ಯುವಕರ ಮೇಲೆ ಯುಎಪಿಎಯಂತ ಕರಾಳ ಕಾನೂನನ್ನು ಬಳಸುವುದು ಸೂಕ್ತವೇ?
  3. ಅತ್ಯಂತ ಬಿಗಿಭದ್ರತೆ ಹೊಂದಿರುವ ಸಂಸತ್ ಭವನಕ್ಕೆ ಯಾರೋ ಆಗಂತುಕರು ಹೊಗೆಡಬ್ಬಿ ಜೊತೆಗೆ ನುಸುಳಿ, ಸಂಸತ್ ಸಭಾಭವನದಲ್ಲೇ ಅವನ್ನು ಸಿಡಿಸುತ್ತಾರೆಂದರೆ, ಇಂತಹ ಗಂಭೀರ ಭದ್ರತಾ ಲೋಪ ಹೇಗಾಯಿತು? ಯಾರು ಹೊಣೆ ? ರಾಜಧಾನಿಯ ಹೃದಯಭಾಗದಲ್ಲಿರುವ ಸಂಸತ್ ಭವನದ ಸುರಕ್ಷತೆಯನ್ನು ಕಾಪಾಡಲು ವಿಫಲವಾದ ಸರ್ಕಾರ 140 ಕೋಟಿ ಜನರ ವಿಶಾಲ ಭಾರತವನ್ನು ರಕ್ಷಿಸಲು ಸಮರ್ಥರೆ?

ಮೊದಲ ಅಂಶ ನೋಡೋಣ. ಆ ಯುವಕರು ಎತ್ತಿದ ಪ್ರಶ್ನೆಗಳು ಪ್ರಸ್ತುತ ನಮ್ಮ ದೇಶ ಎದುರಿಸುತ್ತಿರುವ ಅತ್ಯಂತ ಗಂಭೀರವಾದ ಸಮಸ್ಯೆಗಳು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲಲ್ಲಿ ಈ ಪ್ರಶ್ನೆಗಳು ಕಾಣಸಿಗುತ್ತವೆ. ಇದನ್ನು ಹೊರತುಪಡಿಸಿದರೆ ಮಾರಿಕೊಂಡ ಮಾಧ್ಯಮಗಳಿಂದ ದೇಶದ ಜನತೆಗೆ ಉಪಯುಕ್ತವಾದ ಯಾವುದೇ ಸುದ್ದಿ ವಿಶ್ಲೇಷಣೆ ಅಥವಾ ಚರ್ಚೆ ನಿರೀಕ್ಷಿಸುವಂತಿಲ್ಲ. ವಿರೋಧ ಪಕ್ಷಗಳಿಂದಲೂ ಅಂಥಾ ಪರಿಣಾಮಕಾರಿ ಪ್ರತಿರೋಧ ಕಾಣುತ್ತಿಲ್ಲ. ಬರಲಿರುವ ಲೋಕಸಭಾ ಚುನಾವಣೆಗಾದರೂ ಈ ವಿಷಯಗಳು ಮುನ್ನಲೆಗೆ ಬಂದರೆ ಅದೇ ನಮ್ಮ ಪುಣ್ಯ.

ಎರಡನೇ ಅಂಶ ಒಂದು ನಾಗರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನುಕಟ್ಟಳೆಗಳನ್ನು ವಿವೇಚನಾಯುತವಾಗಿ, ನ್ಯಾಯೋಚಿತವಾಗಿ ಬಳಸಬೇಕೆಂಬ ಪ್ರಶ್ನೆ. ಆ ಯುವಕರು ಎಸಗಿದ ತಪ್ಪಿಗೆ ತಕ್ಕನಾದ ಶಿಕ್ಷೆಯಾಗಬೇಕು. ’ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂಬಂತಾಗಬಾರದು. ಆದರೆ ಅವರ ಮೇಲೆ ಯುಎಪಿಎ ಜಡಿಯಲಾಗಿದೆ. ಇದು ಮೇಲುನೋಟಕ್ಕೆ ನ್ಯಾಯಸಮ್ಮತ ಎನಿಸುತ್ತಿಲ್ಲ. ನಮ್ಮ ಕಾನೂನು ಆಡಳಿತದಲ್ಲಿ ಹಲವು ಅಂತರ್ಗತ ವೈರುಧ್ಯಗಳಿವೆ. ನಮ್ಮ ಬೊಕ್ಕಸದಿಂದ ಸಾವಿರಾರು ಕೋಟಿಗಳನ್ನು ದೋಚಿರುವ ಹೈಪ್ರೊಫೈಲ್ ದರೋಡೆಕೋರರು ವಿದೇಶಗಳಲ್ಲಿ ಐಷಾರಾಮಿಯಾಗಿದ್ದಾರೆ. ಈ ಹೈಫೈ ಕ್ರಿಮಿನಲ್‌ಗಳಿಗೆ ಆಳುವವರ ಕೃಪಾಶೀರ್ವಾದ ಕೂಡ ಇದೆ. ಹಣಬಲ, ಅಧಿಕಾರ ಬಲವಿಲ್ಲದ ಸಣ್ಣಪುಟ್ಟ ಅಪರಾಧಿಗಳು, ಜೇಬುಗಳ್ಳರು ಜೈಲಿನಲ್ಲಿದ್ದಾರೆ. ಹೀಗೆ ಪಟ್ಟಭದ್ರರ ಪರವಾಗಿ ಕೆಲಸ ಮಾಡುವ ವ್ಯವಸ್ಥೆಯ ಅಂಗಿಪಟ್ಟಿ ಹಿಡಿದು ಪ್ರಜೆಗಳು ದಂಡಿಸುವಂತಾಗಬೇಕು. ಅಂಥ ಪ್ರಜಾತಾಂತ್ರಿಕ ಮೌಲ್ಯಗಳು ಭಾರತೀಯ ಸಮಾಜದಲ್ಲಿ ಇನ್ನೂ ಅಷ್ಟಾಗಿ ರಕ್ತಗತವಾಗಿಲ್ಲ. ಅದಕ್ಕೆ ತಕ್ಕಂತೆಯೇ ಸಾಮಾಜಿಕ ಪ್ರತಿರೋದ ಕೂಡ ದುರ್ಬಲವಾಗಿದೆ. ಈ ನಿಟ್ಟಿನಲ್ಲಿ ನಾವಿನ್ನೂ ಕ್ರಮಿಸಬೇಕಾದ ದಾರಿ ಬಹಳ ದೂರ ಇದೆ.

ಮೂರನೆಯ ಮತ್ತು ಬಹುಮುಖ್ಯವಾದ ಅಂಶ ಭದ್ರತೆಗೆ ಸಂಬಂಧಿಸಿದ್ದು. ಸಹಜವಾಗಿ ಇಲ್ಲಿ ಹಲವು ಪ್ರಶ್ನೆಗಳು ಏಳುತ್ತವೆ. ಭದ್ರತಾ ಲೋಪ ಯಾಕೆ ನಡೆಯಿತು? ಶೂನಲ್ಲಿ ಸೇರಿಸಲಾಗದಷ್ಟು ದೊಡ್ಡ ಗಾತ್ರದ ಹೊಗೆ ’ಬಾಂಬ್’ ತಪಾಸಣೆ ಇಲ್ಲದೆ ಒಳಗೆ ಪ್ರವೇಶಿಸಿದ್ದಾದರೂ ಹೇಗೆ? ಅವತ್ತಿನ ದಿನ ಭದ್ರತಾ ಸಿಬ್ಬಂದಿ ಅತಿ ಕಡಿಮೆ ಸಂಖ್ಯೆಯಲ್ಲಿ ಇದ್ದದ್ದು ಯಾಕಾಗಿ? ಈ ಘಟನೆ ನಡೆದಾಗ ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಪಾರ್ಲಿಮೆಂಟಿನಲ್ಲಿ ಹಾಜರಿರಲಿಲ್ಲ, ಇರಲಿ. ಇತರೆ ಗುರುತರವಾದ ಕೆಲಸಗಳಿದ್ದಿರಬಹುದು ಅಂದುಕೊಳ್ಳೋಣ. ನಂತರ ನಡೆದ ಸದನದ ಕಲಾಪಕ್ಕೂ ಭಾಗವಹಿಸದೆ ದೂರ ಉಳಿದಿದ್ದಾದರೂ ಯಾಕೆ? ಸಂಸತ್ ಭವನ ಪ್ರವೇಶಿಸಿದ ಯುವಕರಿಗೆ ಪಾಸ್ ಒದಗಿಸಿಕೊಟ್ಟ ಬಿಜೆಪಿ ಸಂಸದ ಪ್ರತಾಪ್ ಸಿಂಹನ ಮೇಲೆ ಯಾವುದೇ ಕ್ರಮ ಇಲ್ಲ, ಯಾಕೆ? ಆತನ ಪಾತ್ರ ಪಾಸ್ ಕೊಟ್ಟಿದ್ದಷ್ಟಕ್ಕೆ ಸೀಮಿತವೇ? ಒಂದು ವೇಳೆ ಪಾಸ್ ಕೊಟ್ಟವರು ವಿರೋಧ ಪಕ್ಷದವರಾಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಹೊಗೆಡಬ್ಬಿ ಸಿಡಿಸಿದವರ ಹೆಸರು ಮನೋರಂಜನ್ ಬದಲು ಮೊಯಿನುದ್ದಿನ್ ಎಂದೋ, ಸಾಗರ್ ಶರ್ಮ ಬದಲು ಸಾದಿಕ್ ಪಾಷಾ ಅಂತಲೋ ಆಗಿದ್ದಿದ್ದರೆ ಬಿಜೆಪಿ-ಆರ್‌ಎಎಸ್ ಪಟಾಲಂನ ಪ್ರತಿಕ್ರಿಯೆ ಹೇಗಿರುತ್ತಿತ್ತು? ಹೀಗೆ ಸಾಲು ಸಾಲು ಪ್ರಶ್ನೆಗಳು ಏಳುತ್ತವೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನಾ ಸಮಾರಂಭದ ಆಹ್ವಾನ ತಿರಸ್ಕರಿಸಿದ ಸಿಪಿಐ(ಎಂ)

ಸಂಸತ್ ಅಧಿವೇಶನ ನಡೆಯುತ್ತಿದ್ದುದರಿಂದ ವಿರೋಧ ಪಕ್ಷಗಳ ಸದಸ್ಯರು ಸಹಜವಾಗಿ ಈ ಬಗ್ಗೆ ಉಭಯ ಸದನಗಳಲ್ಲೂ ಪ್ರಶ್ನೆಗಳನ್ನೆತ್ತಿದರು. ಚರ್ಚೆಗಾಗಿ ಆಗ್ರಹಿಸಿದರು. ಈ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಖುದ್ದಾಗಿ ಸದನಕ್ಕೆ ಬಂದು ಅಧಿಕೃತ ಹೇಳಿಕೆ ಕೊಡಬೇಕೆಂದು ಆಗ್ರಹಿಸಿದರು. ಆದರೆ ಎಂದಿನಂತೆ ಸಂಖ್ಯಾಬಲದ ದಾರ್ಷ್ಟ್ಯದಲ್ಲಿರುವ ಮೋದಿ ಸರ್ಕಾರ ವಿರೋಧ ಪಕ್ಷಗಳ ಬೇಡಿಕೆಗೆ ಕ್ಯಾರೇ ಅನ್ನಲಿಲ್ಲ. ಬದಲಿಗೆ ಸ್ಪೀಕರ್ ಸ್ಥಾನದಲ್ಲಿ ಕೂತವರು ಸರ್ಕಾರದ ಪರ ವಕಾಲತ್ತು ವಹಿಸಿ ಸಮಜಾಯಿಷಿ ಕೊಡಲು ಶುರುವಿಟ್ಟುಕೊಂಡರು.

ವಿಪಕ್ಷಗಳ ಒಕ್ಕೊರಲಿನ ಆಗ್ರಹಕ್ಕೆ ಸರ್ಕಾರ ಮತ್ತು ಸ್ಪೀಕರ್ ಸ್ಪಂದಿಸದಿದ್ದಾಗ ಮುಂದಿನ ಆವರಣಕ್ಕಿಳಿದು ಪ್ರತಿಭಟನೆ ನಡೆಸಿದರು. ಇದು ಸಂಸದೀಯ ಪ್ರಜಾತಂತ್ರದಲ್ಲಿ ತೀರಾ ಮಾಮೂಲಿ ಸಂಗತಿ. ಆದರೆ ನಂತರ ನಡೆದದ್ದು ಮಾತ್ರ ಮಾಮೂಲಿನಂತಿರಲಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯ ವಿಪಕ್ಷ ಸದಸ್ಯರನ್ನು ಹಿಂಡುಹಿಂಡಾಗಿ ಅಮಾನತ್ತುಗೊಳಿಸಿ ಹೊರಹಾಕಲಾಯ್ತು. ಲೋಕಸಭೆಯ 100 ಮತ್ತು ರಾಜ್ಯಸಭೆಯ 46 ಸಂಸದರನ್ನು ಒಟ್ಟು 146 ಸಂಸದರನ್ನು ಅಶಿಸ್ತಿನ ನಡವಳಿಕೆ, ಕಲಾಪಕ್ಕೆ ಅಡ್ಡಿಪಡಿಸಿದ ಕಾರಣ ನೀಡಿ ಹೊರಹಾಕಲಾಯ್ತು. ಆ ಮೂಲಕ ಉಳಿದ ಇಡೀ ಅಧಿವೇಶನದ ಅವಧಿಗೆ ಈ 146 ಸಂಸದರು ಭಾಗವಹಿಸದಂತೆ ತಡೆಯಲಾಯ್ತು.

ಇಲ್ಲಿ ಒಂದು ಸರಳ ಪ್ರಶ್ನೆ ಹಾಕಿಕೊಳ್ಳೋಣ. ಇಂತಹ ಬಿಕ್ಕಟ್ಟಿನ ಸನ್ನಿವೇಶ ಸೃಷ್ಟಿಯಾಗಲು ಏನು ಕಾರಣ? ವಿಪಕ್ಷಗಳ ಬೇಡಿಕೆ ನ್ಯಾಯೋಚಿತವಾಗಿರಲಿಲ್ಲವೆ? ಕಾರ್ಯಸಾಧುವಾಗಿರಲಿಲ್ಲವೆ? ಸರ್ಕಾರ ಈಡೇರಿಸಲು ಅಸಾಧ್ಯವಾದ ಬೇಡಿಕೆಯಾಗಿತ್ತೆ ಅದು?

ಇಂಥಾ ಗಂಭೀರ ಭದ್ರತಾ ಲೋಪದ ಬಗ್ಗೆ ಗೃಹಸಚಿವ ಸದನಕ್ಕೆ ಬಂದು ಹೇಳಿಕೆ ಕೊಡಬೇಕು ಎಂಬುದಷ್ಟೇ ವಿಪಕ್ಷಗಳ ಬೇಡಿಕೆಯಾಗಿತ್ತು. ಗೃಹ ಸಚಿವರೋ, ಪ್ರಧಾನಮಂತ್ರಿಯೋ ಅರ್ಧ ಗಂಟೆಯ ಕಾಲ ಸದನಕ್ಕೆ ಬಂದು ಅಧಿಕೃತ ಹೇಳಿಕೆ ಕೊಟ್ಟಿದ್ದರೆ ಸಮಸ್ಯೆ ಇತ್ಯರ್ಥವಾಗುತ್ತಿತ್ತು. ಆದರೆ ಆ ಮಹಾನುಭಾವರು ಅತ್ತ ತಲೆಹಾಕಲಿಲ್ಲ.

ವಿಷಯ ನೇರ ಮತ್ತು ಸರಳ. ಇಂಥಾ ಸಂದರ್ಭಗಳಲ್ಲಿ ಸಂಸತ್ತಿನಲ್ಲಿ ಸರ್ಕಾರ ಅಧಿಕೃತವಾಗಿ ಹೇಳಿಕೆ ಕೊಡುವುದು, ಚರ್ಚೆಯಲ್ಲಿ ಭಾಗವಹಿಸುವುದು ಸಂಸದೀಯ ಕರ್ತವ್ಯ. ಅದು ಪ್ರಜಾಪ್ರಭುತ್ವದ ಮೂಲ ತತ್ತ್ವ ಎನ್ನಬಹುದು. ಹಿಂದಿನಿಂದಲೂ ಇದೇ ಪರಂಪರೆ ನಡೆದುಬಂದಿದೆ. ಆದರೆ ಈ ಸರ್ಕಾರಕ್ಕೆ ಹಾಗೆ ಅಧಿಕೃತ ಹೇಳಿಕೆ ಕೊಡುವ ಮನಸ್ಸಿಲ್ಲ. ಸಂಸತ್ತಿನಲ್ಲಿ ಅಧಿಕೃತ ಹೇಳಿಕೆ ಕೊಡುವುದೆಂದರೆ ಭದ್ರತಾ ಲೋಪದ ಹೊಣೆಗಾರಿಕೆ ಹೊತ್ತುಕೊಳ್ಳುವುದು ಎಂದರ್ಥ. ಈ ಸರ್ಕಾರದ ಧೋರಣೆ ಪ್ರಜಾತಂತ್ರದ ರೀತಿರಿವಾಜುಗಳಿಗೆ ತದ್ವಿರುದ್ಧವಾದುದು. ಸರಿಯಾದದ್ದೆಲ್ಲವೂ ತಮ್ಮ ಸಾಧನೆ, ತಪ್ಪುಗಳೆಲ್ಲವೂ ಮೊದಲ ಪ್ರಧಾನಿ ನೆಹರೂ ಒಳಗೊಂಡಂತೆ ಈಗಿನ ಅನೇಕ ವಿರೋಧ ಪಕ್ಷಗಳ ನಾಯಕರದ್ದು ಎಂಬುದು ಅವರ ಪ್ರಚಾರ ತಂತ್ರ. ಈ ಲೋಪದ ಹೊಣೆ ಹೊತ್ತುಕೊಂಡರೆ ನೂತನ ಸಂಸತ್ ಭವನ ನಿರ್ಮಿಸಿದ್ದನ್ನು ಒಂದು ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿಯ ವರ್ಚಸ್ಸು ಪ್ರಶ್ನೆಗೊಳಗಾಗುತ್ತದೆ. ಇದೆಲ್ಲಾ ಅವರಿಗೆ ಬೇಕಿಲ್ಲ.

ಅರ್ಧ ಗಂಟೆಯಲ್ಲಿ ಬಗೆಹರಿಸಬಹುದಾಗಿದ್ದ ಇಷ್ಟು ಸರಳ ಮತ್ತು ನೇರ ಬೇಡಿಕೆಯನ್ನು ಮನ್ನಿಸದೆ 146 ಸಂಸದರನ್ನು ಅಮಾನತ್ತು ಗೊಳಿಸುವ ಹೀನ ಪ್ರಜಾತಂತ್ರ ವಿರೋಧಿ ತಂತ್ರವನ್ನು ಅನುಸರಿಸಿದ್ದೇಕೆ? ಈ ಸರಳ ಪ್ರಶ್ನೆಯನ್ನು ದೇಶದ ಯಾವುದಾದರೂ ಮಾಧ್ಯಮ ಕೇಳಿದ್ದುಂಟೆ?

ಮನ್ ಕಿ ಬಾತ್ ಮಾದರಿಯ ಮನ್ ಕಿ ಬಿಲ್‌ಗಳು

ಪಾರ್ಲಿಮೆಂಟಿನಿಂದ ವಿಪಕ್ಷದ 2/3 ರಷ್ಟು ಸಂಸದರನ್ನು ಹೊರಹಾಕಿದ್ದರ ಹಿಂದಿನ ಹುನ್ನಾರ ನಂತರದ ದಿನದಲ್ಲಿ ಬೆಳಕಿಗೆ ಬಂತು. ಏನೆಂದರೆ ಮೋದಿ ಸರ್ಕಾರ ಅತ್ಯಂತ ಮಹತ್ವದ ಮಸೂದೆಗಳನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿ ಯಾವುದೇ ಚರ್ಚೆಗಳಿಲ್ಲದೆ, ವಿರೋಧ ವ್ಯಕ್ತಪಡಿಸಲಿಕ್ಕೆ ವಿಪಕ್ಷಗಳ ಶಕ್ತಿಯೂ ಇಲ್ಲದೆ ಸಲೀಸಾಗಿ ಪಾಸು ಮಾಡಿಕೊಂಡಿದೆ. ಅದರಲ್ಲಿ ಭಾರತೀಯ ದಂಡಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್- ಈ ಮೂರೂ ಮಹತ್ವದ ಕಾಯ್ದೆಗಳನ್ನು ಅವುಗಳ ಹೆಸರುಗಳ ಸಮೇತ ಬದಲಾಯಿಸಿ, ತರಾತುರಿಯಲ್ಲಿ ಪಾಸು ಮಾಡಲಾಗಿದೆ. ಬ್ರಿಟಿಷರ ಪಳೆಯುಳಿಕೆಯಂತಿದ್ದ ಈ ಕಾನೂನುಗಳನ್ನು ಬದಲಾಯಿಸಿ, ಭಾರತೀಕರಣ ಮಾಡಿದ್ದೇವೆಂದು ಸರ್ಕಾರ ಹೇಳಿಕೊಂಡಿದೆ. ಆದರೆ ಹಿಂದಿನ ಕಾನೂನಿನಲ್ಲಿದ್ದ ಪ್ರಜಾತಂತ್ರ ವಿರೋಧಿ, ಜನ ವಿರೋಧಿ ಅಂಶಗಳು ಈ ಹೊಸ ’ಭಾರತೀಯ’ ಕಾನೂನಿನಲ್ಲಿ ಹತ್ತು ಪಟ್ಟು ಹೆಚ್ಚಾಗಿವೆ ಎಂಬ ಟೀಕೆಗಳು ಕೇಳಿ ಬಂದಿವೆ. ಇದರ ಜೊತೆಗೆ ಟೆಲಿಕಾಂ ಮಸೂದೆಯೊಂದನ್ನು ಪಾಸ್ ಮಾಡಲಾಗಿದೆ. ಈ ಹೊಸ ಕಾನೂನಿನ ಮೂಲಕ ಸಾರ್ವಜನಿಕರ ಅಂತರ್ಜಾಲ ಸಂಪರ್ಕ, ಟೆಲಿಫೋನ್ ಸಂಪರ್ಕ ಮುಂತಾದ ಸೇವೆಗಳನ್ನು ಮನಸೋ ಇಚ್ಛೆ ನಿಯಂತ್ರಿಸುವ, ಬೇಕೆಂದಾಗ ಬರಖಾಸ್ತುಗೊಳಿಸುವ ಅಪರಿಮಿತ ಅಧಿಕಾರ ಸರ್ಕಾರ ಕೈಗೆತ್ತಿಕೊಂಡಿದೆ ಎಂಬ ಟೀಕೆಗಳು ಕೇಳಿಬಂದಿವೆ.

ಭಾರತೀಯತೆ ಹೆಸರಿನಲ್ಲಿ ಸರ್ಕಾರ ಈ ಹೊಸ ಅಸ್ತ್ರಗಳನ್ನು ಯಾಕೆ ಕೈಗೆತ್ತಿಕೊಂಡಿದೆ? ತನ್ನ ಜನವಿರೋಧಿ, ದೇಶ ವಿರೋಧಿ ನೀತಿಗಳ ವಿರುದ್ಧ ದನಿಯೆತ್ತುವ ಸಾರ್ವಜನಿಕರ ಮೇಲೆ ದಂಡ ಚಲಾಯಿಸುವ ಉದ್ದೇಶವಲ್ಲದೆ ಬೇರೇನಿಲ್ಲ. ಬಹುತೇಕ ಮಾಧ್ಯಮಗಳು ಒಂದೋ ಭಾರೀ ಕಾರ್ಪೊರೇಟ್ ಕುಳಗಳ ಕೈಯಲ್ಲಿ ಅಥವಾ ಮೋದಿ ಸರ್ಕಾರದ ಹಿಡಿತದಲ್ಲಿರುವುದು ಜನಜನಿತ. ಹಾಗಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಜನರಿಗೆ ಸರಿಯಾದ ಮಾಹಿತಿಯನ್ನು ರವಾನಿಸುತ್ತಿರುವುದು ಸಣ್ಣಸಣ್ಣ ಸ್ವತಂತ್ರ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಬಿಡಿಬಿಡಿ ಯೂಟ್ಯೂಬರ್‌ಗಳು. ಪ್ರತಿಯೊಬ್ಬರ ಕೈಯಲ್ಲೂ ಇರುವ ಮೊಬೈಲ್ ಫೋನ್ ಕೆಲವು ಸಂದರ್ಭಗಳಲ್ಲಿ ಪರಿಣಾಮಕಾರಿ ಮಾಧ್ಯಮವಾಗಿ ಆಳುವವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಹೀಗಿರುವಾಗಜನರ ಪ್ರತಿರೋಧವನ್ನು ನಿಯಂತ್ರಿಸಲು ಈ ಕಾಯ್ದೆಯ ಮೂಲಕ ಹೊಸ ಅಸ್ತ್ರವನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ ಎಂಬ ಗುಮಾನಿ ದಟ್ಟವಾಗಿದೆ.

ಈಗ ನಾವು ಮೊದಲಿನ ಪ್ರಶ್ನೆಗೆ ಬರೋಣ. ಯಾವುದೇ ಸರ್ವಾಧಿಕಾರಿಗೆ ಅತ್ಯವಶ್ಯಕವಾಗಿರುವ ಅಂಶಗಳೆಂದರೆ ವಿರೋಧ ಪಕ್ಷಗಳಿಲ್ಲದ ಸಂಸತ್ತು ಹಾಗೂ ಪ್ರತಿರೋಧವಿಲ್ಲದ ಬೀದಿಗಳು. ಮೋದಿ ಸರ್ಕಾರ ಒಂದೇ ಕಲ್ಲಿನಲ್ಲಿ ಈ ಎರಡೂ ಹಕ್ಕಿಗಳನ್ನು ಹೊಡೆದಿದೆ. ಪ್ರಜಾಪ್ರಭುತ್ವದ ಮುಸುಕಿನಲ್ಲಿಯೇ ಸರ್ವಾಧಿಕಾರಿ ಆಡಳಿತ ಹೇರಲು ಹೊಸಹೊಸ ಅಸ್ತ್ರಗಳೊಂದಿಗೆ ಸಜ್ಜಾಗಿದೆ.

ಸುಳ್ಳು ಕಥಾನಕಗಳು ಹೇಗೆ ಹುಟ್ಟುತ್ತವೆ?

ಸಂಸದರನ್ನು ಅಮಾನತುಗೊಳಿಸಿದ ಸಭಾಧ್ಯಕ್ಷರ ಆತುರದ ಹಾಗೂ ಅಪ್ರಜಾತಾಂತ್ರಿಕ ನಡೆ ಸಹಜವಾಗಿ ಟೀಕೆಗೆ ಒಳಗಾಗುತ್ತಿತ್ತು. ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದವು. ಅಷ್ಟರಲ್ಲಿ ಬಿಜೆಪಿ ಐಟಿ ಸೆಲ್ ಜಾಗೃತಗೊಂಡು ಹೊಸ ಕಟ್ಟುಕತೆಯೊಂದನ್ನು ಹೆಣೆದು ಮತ್ತೆ ವಿರೋಧ ಪಕ್ಷಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲಿಸಿಬಿಟ್ಟಿತು.

ನಡೆದದ್ದಿಷ್ಟು. ಅಮಾನತುಗೊಂಡ ಸಂಸದರು ಪಾರ್ಲಿಮೆಂಟ್ ಭವನದ ಹೊರಗಡೆ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ತೃಣಮೂಲ ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿಯವರು, ರಾಜ್ಯಸಭಾ ಅಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಮಾತಿನ ಭಂಗಿಯನ್ನು ಅನುಕರಣೆ ಮಾಡಿ ಮಿಮಿಕ್ರಿ ಮಾಡಿದರು. ಈ ದೃಶ್ಯವನ್ನು ರಾಹುಲ್ ಗಾಂಧಿ ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡರು. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯ್ತು. ಸದನದ ಹೊರಗಡೆ ನಡೆದ ಈ ಘಟನೆಯನ್ನು ಇಟ್ಟುಕೊಂಡು ಉಪರಾಷ್ಟ್ರಪತಿ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ತಾನು ಮಾನಸಿಕವಾಗಿ ನೊಂದುಹೋಗಿದ್ದೇನೆ ಎಂದರು. ಮಾತ್ರವಲ್ಲ, ಇದು ತನ್ನ ಜಾಟ್ ಜಾತಿಗೆ ಮಾಡಿದ ಅವಮಾನ, ನಾನು ರೈತ ಹಿನ್ನೆಲೆಯಿಂದ ಬಂದಿರುವುದರಿಂದ ಉದ್ದೇಶಪೂರ್ವಕವಾಗಿ ರೈತರಿಗೆ ಅವಮಾನ ಎಸಗಿದ್ದಾರೆ ಎಂದು ಆರೋಪಿಸಿದರು. ಅವರೇ ಟ್ವೀಟ್‌ನಲ್ಲಿ ಹೇಳಿಕೊಂಡಂತೆ ಪ್ರಧಾನಿ ಮೋದಿಯವರು ಫೋನ್ ಕರೆ ಮಾಡಿ ಉಪರಾಷ್ಟ್ರಪತಿಗೆ ಆಗಿರುವ ’ಅವಮಾನ’ದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರಂತೆ. ಅಲ್ಲಿಗೆ ನಡೆದದ್ದೇನು ಅಂತ ಯಾರಾದರೂ ಊಹಿಸಬಹುದು.

ಮಾರಿಕೊಂಡ ಮಾಧ್ಯಮಗಳು ಈ ಸುದ್ದಿಯನ್ನು ದೊಡ್ಡ ಗಂಟಲಲ್ಲಿ ಪ್ರಚಾರ ಮಾಡಿದವು. ವಿರೋಧ ಪಕ್ಷಗಳಿಗೆ, ನಿರ್ದಿಷ್ಟವಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಜಾಟ್ ಜಾತಿಯನ್ನು ಅವಮಾಸಿವೆ ಎಂಬ ಸುಳ್ಳು ಕಥಾನಕ ಶುರುವಾಯ್ತು. ಬಿಜೆಪಿ ಕೃಪಾಪೋಷಿತ ಜಾಟ್ ಸಂಘಟನೆ ರಾಹುಲ್ ಗಾಂಧಿಯ ವಿರುದ್ಧ ಪ್ರತಿಭಟನೆ ನಡೆಸಿತು. ’ಕಾಂಗ್ರೆಸ್ ವಿರುದ್ಧ ಸಮರ ಸಾರಿದ ಜಾಟರು’ ಎಂಬ ತಲೆಬರಹದಡಿ ಪುಂಗಿ ಊದಿದರು.

ಜಗದೀಪ್ ಧನಕರ್

ಆದರೆ ನಾವು ಮರೆಯಲಾರದ ಕಟು ವಾಸ್ತವ ಬೇರೆಯೇ ಇದೆ. ಈ ಪ್ರಸಂಗದಲ್ಲಿ ರಾಹುಲ್ ಗಾಂಧಿಯಾಗಲಿ, ಮಿಮಿಕ್ರಿ ಮಾಡಿದ ಕಲ್ಯಾಣ್ ಆಗಲಿ ಜಾಟ್ ಜಾತಿಯ ಬಗ್ಗೆ ಅಪಮಾನಿಸುವುದಿರಲಿ ಕನಿಷ್ಟ ಆ ಜಾತಿಯ ಹೆಸರನ್ನೂ ಬಳಕೆ ಮಾಡಿರಲಿಲ್ಲ. ಸದನದ ಹೊರಗಡೆ ನಡೆದ ಈ ಕ್ಷುಲ್ಲಕ ವಿಚಾರವನ್ನು ಸುಳ್ಳು ಕಥಾನಕ ಕಟ್ಟಿದ್ದು ಬೇರೆ ಯಾರೂ ಅಲ್ಲ, ಈ ದೇಶದ ಸಾಂವಿಧಾನಿಕ ಸ್ಥಾನದಲ್ಲಿ ಆಸೀನರಾಗಿರುವ ಮಾನ್ಯ ಉಪರಾಷ್ಟ್ರಪತಿಗಳು!

ಮಲ್ಲಿಕಾರ್ಜುನ ಖರ್ಗೆಯವರ ಪ್ರತಿಕ್ರಿಯೆ ಇಲ್ಲಿ ಉಲ್ಲೇಖನಾರ್ಹ. “ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ಕೊಡುತ್ತಿಲ್ಲ, ನಾನು ಮಾತಾಡುವಾಗ ಮೈಕ್ ಬಂದ್ ಮಾಡುತ್ತೀರಿ. ನಿಮ್ಮ ಲಾಜಿಕ್ ಪ್ರಕಾರ ನಾನು ದಲಿತ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದೀರಿ ಎಂದು ನಾನು ಆರೋಪ ಮಾಡಬಹುದಲ್ಲವೆ?” ಈ ಪ್ರಶ್ನೆಗೆ ಮೋದಿ ಬಳಿಯೂ ಉತ್ತರವಿಲ್ಲ. ಗೋದಿ ಮೀಡಿಯಾನೂ ಉತ್ತರಿಸೋಲ್ಲ.

ನೆನಪಿಡಲೇಬೇಕಾದ ಅಂಶವೊಂದಿದೆ. ಮಾನ್ಯ ಪ್ರಧಾನಿ ಮೋದಿಯವರು ಸದನದ ಒಳಗೂ ಹೊರಗೂ ಎಲ್ಲೆಂದರಲ್ಲಿ ಯಾರನ್ನೆಲ್ಲಾ ಮಿಮಿಕ್ರಿ ಮಾಡಿದ್ದಾರೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಎಲ್ಲರಿಗೂ ತಿಳಿದ ಸಂಗತಿ. ಮೋದಿಯವರಿಗೆ ಸದನದ ಘನತೆ ಗೊತ್ತಿಲ್ಲವೆ? ಪ್ರಧಾನಿಯ ಸ್ಥಾನದ ಘನತೆಯ ಅರಿವಿಲ್ಲವೆ? ಈ ಬಗ್ಗೆ ಯಾವುದಾದರೂ ಮಾಧ್ಯಮ ಗಂಭೀರವಾದ ಚರ್ಚೆ ನಡೆಸಿದೆಯೆ?

ನೋಡಿ, ಹೀಗೆ ಸುಳ್ಳು ಕಥಾನಕಗಳು ಹುಟ್ಟುತ್ತಿವೆ. ಪ್ರಜಾಪ್ರಭುತ್ವವನ್ನು ಇಂಚಿಂಚಾಗಿ ಕೊಲ್ಲುತ್ತಿವೆ. ಈ ಕಟ್ಟುಕತೆಗಳು ಇನ್ನೆಷ್ಟು ದಿನ ನಮ್ಮನ್ನು ದಿಕ್ಕು ತಪ್ಪಿಸುತ್ತಲೇ ಇರುತ್ತವೆ?

ಸಂಖ್ಯಾಬಲ ಮತ್ತು ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವದ ತಿರುಳನ್ನು ಅರ್ಥ ಮಾಡಿಕೊಳ್ಳಲು ಮತ್ತೊಂದು ಮಹತ್ವದ ಅಂಶವನ್ನು ಗಮನಿಸಬೇಕು. ಮೋದಿ ಸರ್ಕಾರಕ್ಕೆ ಸಂಸತ್ತಿನಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಿದೆ ಎಂಬುದೇನೋ ನಿಜ. ಅಂದರೆ ಅದರರ್ಥ ದೇಶದ ಬಹುಸಂಖ್ಯಾತ ಪ್ರಜೆಗಳು ಮೋದಿ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದು ಅರ್ಥವಲ್ಲ. ಇದು ವಿಚಿತ್ರ ಎನಿಸಿದರೂ ಸತ್ಯ. 2014ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗಳಿಸಿದ ಮತ ಗಳಿಕೆಯ ಪ್ರಮಾಣ ಶೇ.31% ಮಾತ್ರ. ಹಾಗೆಯೇ 2019ರಲ್ಲಿ ಪುಲ್ವಾಮಾ-ಬಾಲಾಕೋಟ್ ಹವಾದಲ್ಲಿ ಮತ್ತಷ್ಟು ಹೆಚ್ಚಿನ ಮತಗಳು ಇದ್ದರೂ ಮೋದಿ ಪಕ್ಷ ಗಳಿಸಿದ್ದು ಶೇ.39% ಮಾತ್ರ. ಇದು ಕೂಡ ಚಲಾವಣೆಯಾದ ಮತಗಳಲ್ಲಿ ಪ್ರಮಾಣ ಮಾತ್ರ. ಅಂದರೆ ಚಲಾವಣೆಯಾದ ಮತಗಳಲ್ಲಿ ಸುಮಾರು 61% ಮತಗಳು ಇತರೆ ಪಕ್ಷಗಳಲ್ಲಿ ಹಂಚಿಹೋಗಿವೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಈ ಅಂಶ ಅಂತರ್ಗತವಾಗಿರುವುದರಿಂದಲೇ ನಮ್ಮ ಸಂವಿಧಾನಕರ್ತರು ವಿರೋಧ ಪಕ್ಷಗಳಿಗೂ ಮಹತ್ವದ ಸ್ಥಾನವನ್ನು ಕಲ್ಪಿಸಿದ್ದಾರೆ. ಪ್ರತಿ ದುರ್ಬಲ ಸಮುದಾಯದ ದನಿಗೂ ಮಾನ್ಯತೆ ಸಿಗಬೇಕು ಎಂಬುದು ಪ್ರಜಾಪ್ರಭುತ್ವದ ನಿಜವಾದ ಸಾರ.

ವಿಷಯ ಹೀಗಿರುವಾಗ ಸಂಖ್ಯಾಬಲ ಇದ್ದ ಮಾತ್ರಕ್ಕೆ 39% ಮತಗಳಿಸಿರುವ ಪಕ್ಷವೊಂದು 61% ಮತಗಳನ್ನು ಪ್ರತಿನಿಧಿಸುವ ಅಧಿಕೃತ ಅಥವಾ ಅನಧಿಕೃತ ಪ್ರತಿಪಕ್ಷಗಳ ದನಿಗಳನ್ನು ನಿರ್ಲಕ್ಷಿಸಬಾರದು. ಆಳುವ ಪಕ್ಷ ವಿರೋಧಿ ದನಿಯನ್ನು ಹೊಸಕಿಹಾಕಲು ಪ್ರಯತ್ನಿಸುತ್ತಿದೆ ಎಂದರೆ ಅದು ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. 146 ಸಂಸತ್ ಸದಸ್ಯರನ್ನು ಕುಂಟುನೆಪ ನೀಡಿ ಸಂಸತ್ತಿನಿಂದ ಹೊರದಬ್ಬಿ ಮಹತ್ವದ ಮಸೂದೆಗಳನ್ನು ಅಂಗೀಕಾರ ಮಾಡಿದ ಈ ಸರ್ಕಾರದ ನಡೆಯನ್ನು ನಾವು ಏನೆಂದು ಕರೆಯಬೇಕು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಿಡಿಪಿ

ತುರ್ತುಪರಿಸ್ಥಿತಿಯನ್ನು ಇಂದಿರಾ ಗಾಂಧಿ ತಪ್ಪು ಎಂದು ಒಪ್ಪಿಕೊಂಡಿದ್ದರು, ಬಿಜೆಪಿ ಹಿಂದಿನದನ್ನು ಮರೆಯಬೇಕು: ಪಿ. ಚಿದಂಬರಂ

0
ತುರ್ತು ಪರಿಸ್ಥಿತಿ ಕಹಿ ನೆನಪಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನೇತೃತ್ವದ ಕೇಂದ್ರವು ಜೂನ್ 25 (ಗುರುವಾರ) ಆಚರಿಸುವುದಾಗಿ ಘೋಷಿಸಿದ ನಂತರ, ತಮ್ಮ ನಿರ್ಧಾರ ತಪ್ಪು ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ...