Homeಮುಖಪುಟ’ದಿ ಕೇರಳ ಸ್ಟೋರಿ’ ವರ್ಸಸ್ ’ದಿ ಗುಜರಾತ್ ಸ್ಟೋರಿ’!

’ದಿ ಕೇರಳ ಸ್ಟೋರಿ’ ವರ್ಸಸ್ ’ದಿ ಗುಜರಾತ್ ಸ್ಟೋರಿ’!

- Advertisement -
- Advertisement -

’ದಿ ಕೇರಳ ಸ್ಟೋರಿ’ – ಎಂಬುದು ಇತ್ತೀಚೆಗೆ ಬಿಡುಗಡೆಯಾಗಿರುವ ಒಂದು ಸಿನಿಮಾ. ಈ ಕೇರಳ ಸ್ಟೋರಿ ದೇಶದಾದ್ಯಂತ ಭಾರೀ ಚರ್ಚೆಯಲ್ಲಿದೆ. ’ದಿ ಗುಜರಾತ್ ಸ್ಟೋರಿ’ ಯಾವುದೆಂಬ ಪ್ರಶ್ನೆ ಮೂಡುವುದು ಸಹಜ. ಇದು ಸಿನಿಮಾ ಕತೆಯಲ್ಲ; ನಮ್ಮೆಲ್ಲರ ಕಣ್ಣೆದುರಿಗಿರುವ ಕಟು ವಾಸ್ತವ. ಈ ಭಯಾನಕ ಸತ್ಯಕತೆಯ ಬಗ್ಗೆ ಎಲ್ಲಿಯೂ ಚರ್ಚೆಯಿಲ್ಲ. ಎಲ್ಲವೂ ಗಪ್‌ಚುಪ್!ಯಾಕೆ ಹೀಗೆ?

’ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾಗಿದ್ದು ಮೇ 5ನೇ ತಾರೀಖು. ಬಿಡುಗಡೆಯಾದ ಕೆಲವೇ ದಿನಗಳಲ್ಲೇ ವಿವಾದಗಳನ್ನು ಸೃಷ್ಟಿಸಿದೆ. ಸಿನಿಮಾ ಬಿಡುಗಡೆಗೂ ಮುಂಚೆಯೇ ಆರು ತಿಂಗಳ ಹಿಂದೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಟೀಸರ್‌ನಿಂದಲೇ ವಿವಾದಗಳು ಈ ಸಿನಿಮಾವನ್ನು ಸುತ್ತಿದ್ದವು. ಈ ಚಿತ್ರದ ಡೈರೆಕ್ಟರ್ ಸುದಿಪ್ತೊ ಸೇನ್ ಚಿತ್ರಿಸಿರುವ ಪ್ರಕಾರ, “ಕೇರಳದಲ್ಲಿ ಅಮಾಯಕ ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ, ಐಸಿಸ್ ಉಗ್ರವಾದಿ ಸಂಘಟನೆಗೆ ಸೇರಿಸುವ ನಿಗೂಢವಾದ ಸಂಚೊಂದು ನಡೆಯುತ್ತಿದೆ. ಇದುವರೆಗೆ ಹಿಂದೂ ಮತ್ತು ಕ್ರೈಸ್ತ ಸಮುದಾಯದ 32,000 ಯುವತಿಯರು ಈ ಜಾಲಕ್ಕೆ ಬಲಿಯಾಗಿದ್ದಾರೆ. ಅವರೆಲ್ಲ ಸಿರಿಯಾ ಮತ್ತು ಯೆಮನ್‌ನ ಮರುಭೂಮಿಯಲ್ಲಿ ಮಣ್ಣಾಗಿದ್ದಾರೆ” ಅಂತ ಈ ಟೀಸರ್‌ನಲ್ಲಿ ತೋರಿಸಲಾಗಿತ್ತು!

ಕೇರಳದ ಸಾಮಾಜಿಕ ಸಂಘಟನೆಗಳು, ಸಾರ್ವಜನಿಕರು ಈ ಟೀಸರ್‌ಅನ್ನು ತೀವ್ರವಾಗಿ ವಿರೋಧಿಸಿದರು. ’ಈ ಟೀಸರ್ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶ ಹೊಂದಿದೆ, ಇದು ಸಮಾಜದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುವ ಉದ್ದೇಶ ಹೊಂದಿದೆ, ಅಲ್ಲದೆ ಕೇರಳದ ಅಭಿವೃದ್ಧಿಯನ್ನು ಮತ್ತು ಸೌಹಾರ್ದ ಸಂಸ್ಕೃತಿಯನ್ನು ಸಹಿಸದ ಶಕ್ತಿಗಳು ಈ ಸಿನಿಮಾ ಮೂಲಕ ಅಪಪ್ರಚಾರ ಕೈಗೊಂಡಿದ್ದಾರೆ’ ಎಂಬ ಟೀಕೆಗಳನ್ನು ಸಿನಿಮಾ ತಂಡ ಎದುರಿಸಿತು. ಇದರ ಬೆನ್ನಲ್ಲೇ ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತು. ಸಿನಿಮಾ ಬಿಡುಗಡೆಯೂ ಆಯಿತು; ಸಿನಿಮಾ ನಂತರದಲ್ಲಿ ನಡೆದ ನ್ಯಾಯಾಲಯ ವಿಚಾರಣೆಯಲ್ಲಿ ಈ ಸಿನಿಮಾದ ನಿರ್ದೇಶಕ 32,000 ಯುವತಿಯರ ಕತೆ ಅನ್ನೋದನ್ನು ತಿದ್ದುಪಡಿ ಮಾಡಿ 3 ಯುವತಿಯರ ಕತೆ ಅಂತ ಟೀಸರ್‌ನಲ್ಲಿ ಬದಲಾಯಿಸುವುದಾಗಿ ಹೇಳಿದರು.

ಸುದಿಪ್ತೊ ಸೇನ್

ಹಾಗಿದ್ರೆ, 32,000 ಯುವತಿಯರ ನಾಪತ್ತೆ ಅಂತ ಯಾಕೆ ಅಪಪ್ರಚಾರ ಮಾಡುತ್ತಿದ್ದರು? ಈ ತಪ್ಪು ಮಾಹಿತಿಯನ್ನು ಪ್ರಚಾರ ಮಾಡಿದ್ದರ ಹಿಂದಿನ ಉದ್ದೇಶ ಏನು? ಮೊದಲು ಕೆಲವು ಅಧಿಕೃತ ಅಂಕಿಅಂಶಗಳನ್ನು ನೋಡೋಣ.

ವಿಶ್ವಸಂಸ್ಥೆಯ ಭಾಗವಾಗಿರುವ ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ಕೌಂಟರ್ ಟೆರರಿಸಂ, ಅಂದರೆ ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಸಮಿತಿಯ ಅಂದಾಜಿನ ಪ್ರಕಾರ, ಜಗತ್ತಿನ 110 ದೇಶಗಳಿಂದ ಒಟ್ಟು ಸುಮಾರು 40 ಸಾವಿರ ಉಗ್ರರು ಐಸಿಸ್‌ಗೆ ಸೇರ್ಪಡೆಯಾಗಿದ್ದಾರೆ. ನೆನಪಿಡಿ, ಒಟ್ಟು 110 ದೇಶಗಳಿಂದ. ಹಾಗಿದ್ದರೆ ಅದರಲ್ಲಿ ಭಾರತದಿಂದ ಹೋದವರೆಷ್ಟು? ಅದರಲ್ಲಿ ಕೇರಳ ರಾಜ್ಯದ ಪಾಲೆಷ್ಟು? ಈ ಯಾವ ಲೆಕ್ಕಾಚಾರವೂ ಈ ಕೇರಳ ಸ್ಟೋರಿ ಹೇಳಲು ಹೊರಟಿರುವ ಮಂದಿಗೆ ಬೇಕಾಗಿರಲಿಲ್ಲ. ಅವರಿಗೆ ತಮ್ಮ ಅಜೆಂಡಾ ಮಾತ್ರ ಬೇಕಿತ್ತು ಅನಿಸುತ್ತೆ.

2019ರಲ್ಲಿ ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಲೋಕಸಭೆಯಲ್ಲಿ ಕೊಟ್ಟ ಲಿಖಿತ ಉತ್ತರ ಈ ವಿಷಯದ ಮೇಲೆ ಇನ್ನಷ್ಟು ಬೆಳಕು ಚೆಲ್ಲುತ್ತದೆ: “ಇದುವರೆಗೆ ದೇಶದಲ್ಲಿ ಐಸಿಸ್ ಜಾಲದ ಸಹಾನುಭೂತಿದಾರರನ್ನು ಒಳಗೊಂಡು ಒಟ್ಟು 155 ಸದಸ್ಯರನ್ನು ಬಂಧಿಸಲಾಗಿದೆ” ಎಂದು. ಹಾಗಿದ್ದರೆ ಈ ನಿರ್ದೇಶಕ ಹೇಳುವ ಕೇರಳದ 32,000 ಮಂದಿಯ ಉಲ್ಲೇಖ ಎಲ್ಲಿಂದ ಬಂತು?

2020ರಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಬಿಡುಗಡೆಗೊಳಿಸಿರುವ ವರದಿ ನೋಡೋಣ. ಈ ಮಾಹಿತಿ ಪ್ರಕಾರ ಭಾರತದಿಂದ ಐಸಿಸ್ ಸೇರಿಕೊಂಡಿರುವವರ ಒಟ್ಟು ಸಂಖ್ಯೆ 66. ಅದರಲ್ಲಿ ಮಹಿಳೆಯರ ಸಂಖ್ಯೆ 13. ಕೇರಳದಿಂದ ಹೋದ ಮಹಿಳೆಯರು 6 ಮಂದಿ. ಅದರಲ್ಲೂ ಮತಾಂತರಗೊಂಡಿದ್ದ ಮಹಿಳೆಯರು ಕೇವಲ 3. ಅವರಲ್ಲಿ ಇಬ್ಬರು ಕ್ರಿಶ್ಚಿಯನ್, ಒಬ್ಬಾಕೆ ಮಾತ್ರ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದಳು ಎಂಬ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ವಿಶ್ವಸಂಸ್ಥೆಯ ದಾಖಲೆಗಳಾಗಲಿ, ಅಮೆರಿಕದ ವಿದೇಶಾಂಗ ಇಲಾಖೆಯ ದಾಖಲೆಗಳಾಗಲಿ, ಅಥವಾ ನಮ್ಮ ದೇಶದ ಗೃಹ ಇಲಾಖೆಯ ಅಂಕಿಅಂಶಗಳಾಗಲಿ, ಎಲ್ಲಿಯೂ ಈ 32,000 ಮಹಿಳೆಯರ ಉಲ್ಲೇಖವೇ ಇಲ್ಲ. ನಮ್ಮ ಗೃಹ ಇಲಾಖೆಯ ಅಂಕಿಅಂಶಗಳ ಪ್ರಕಾರವೂ ಹೀಗೆ ಐಸಿಸ್ ಜಾಲಕ್ಕೆ ಸಿಲುಕಿದ ಮಹಿಳೆಯರ ಸಂಖ್ಯೆ 13 ಮಾತ್ರ. ಅದರಲ್ಲಿ ಹಿಂದೂ ಧರ್ಮದಿಂದ ಮತಾಂತರ ಆದವರು ಒಬ್ಬರು ಮಾತ್ರ.

ಹಾಗಿದ್ದರೆ ಈ ಸುದೀಪ್ತೊ ಸೇನ್ ಎಂಬ ನಿರ್ದೇಶಕ 32,000 ಮಹಿಳೆಯರು ಅಂತ ಸುಳ್ಳನ್ನು ಹಬ್ಬಿಸುತ್ತಿರುವುದು ಏಕೆ? ನಮ್ಮ ಗೃಹ ಇಲಾಖೆಗೆ, ಗುಪ್ತಚರ ಇಲಾಖೆಗೆ ಇಲ್ಲದ ಮಾಹಿತಿ ಈತನಿಗೆ ಸಿಕ್ಕಿದ್ದಾದರೂ ಎಲ್ಲಿಂದ ಎಂಬುದು ಚಿದಂಬರ ರಹಸ್ಯ. ತಾವು ಹೇಳಿದ್ದ 32,000 ಸಂಖ್ಯೆಯ ಬಗ್ಗೆ ದಾಖಲೆಗಳನ್ನು ಒದಗಿಸಿ ಎಂದು ಈ ಡೈರೆಕ್ಟರ್ ಬಳಿ ಮಾಧ್ಯಮದವರು ಪ್ರಶ್ನಿಸಿದಾಗ, “ಸಿನಿಮಾ ಬಿಡುಗಡೆ ಆಗಲಿ, ನಂತರ ಕೊಡುತ್ತೇನೆ” ಅಂತ ಹೇಳಿದ್ದರು. ಈಗ ಸಿನಿಮಾ ರಿಲೀಸ್ ಆಗಿ ವಾರಗಳೇ ಕಳೆದರೂ ಏನೇನೋ ಸಬೂಬು ಹೇಳಿ ಜಾರಿಕೊಳ್ತಾ ಇದ್ದಾರೆ ಈ ಡೈರೆಕ್ಟರ್ ಮಹಾಶಯ.

ಜಿ. ಕಿಶನ್ ರೆಡ್ಡಿ

ಈ ಸಿನಿಮಾಗೆ ಬಿಜೆಪಿ ಅಧಿಕಾರವಿರುವ ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ನಮ್ಮದೇ ರಾಜ್ಯದ ಬಾಗಲಕೋಟೆಯಿಂದ ಒಂದು ಸುದ್ದಿ ಬಂದಿದೆ. ಬಿಜೆಪಿ ನಾಯಕ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು “ಹಿಂದೂಗಳಿಗಾಗಿ ಉಚಿತ ಶೋ” ಏರ್ಪಾಟು ಮಾಡಿದ್ದಾರೆ. ಅಲ್ಲಿನ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಸುತ್ತೋಲೆ ಹೊರಡಿಸಿ, ’ತರಗತಿಗಳನ್ನು ರದ್ದುಮಾಡಿದ್ದೇವೆ, ಕೇರಳ ಸಿನಿಮಾ ಫ್ರೀ ಶೋ ಇರುತ್ತದೆ, ವಿದ್ಯಾರ್ಥಿಗಳು ಸಿನಿಮಾ ನೋಡತಕ್ಕದ್ದು’ ಎಂದು ಆದೇಶ ಹೊರಡಿಸಿದ್ದಾರೆ. ಪ್ರತಿರೋಧ ಬಂದ ನಂತರ ಆದೇಶ ಹಿಂಪಡೆಯಲಾಗಿದೆ.

ಈ ಎಲ್ಲಕ್ಕಿಂತ ಬಹಳ ಗಂಭೀರವಾದ ವಿಚಾರ ಎಂದರೆ ಖುದ್ದು ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ’ದ ಕೇರಳ ಸ್ಟೋರಿ’ ಸಿನಿಮಾವನ್ನು ಹೊಗಳಿದ್ದು. ಆ ಸಿನಿಮಾ ಬಿಡುಗಡೆಯಾದ ಮೇ 5ನೇ ತಾರೀಖು, ಅವರು ಕರ್ನಾಟಕದ ಚುನಾವಣಾ ಪ್ರಚಾರ ಸಭೆಗಳಲ್ಲಿ ಬ್ಯುಸಿಯಾಗಿದ್ದರು. ಒಂದು ಭಾಷಣದಲ್ಲಿ “ಈ ಸಿನಿಮಾ ಭಯೋತ್ಪಾದಕರ ಛದ್ಮವೇಷವನ್ನು ಬಯಲು ಮಾಡಿದೆ” ಎಂದು ಬಣ್ಣಿಸಿದ್ದರು!

ಏನಿದು? ಪ್ರಧಾನಿ ಆದಿಯಾಗಿ ಈ ಬಿಜೆಪಿ ನಾಯಕರು ಕೇರಳ ಸ್ಟೋರಿ ಸಿನಿಮಾ ಪ್ರೊಮೋಟ್ ಮಾಡಲಿಕ್ಕೆ ಯಾಕೆ ಇಷ್ಟೊಂದು ಶ್ರಮ ವಹಿಸ್ತಾ ಇದಾರಲ್ಲಾಅಂತ ಆಶ್ಚರ್ಯವಾಗಬಹುದು. ಇದರಲ್ಲಿ ಆಶ್ಚರ್ಯ ಪಡುವಂಥದ್ದು ಏನೂ ಇಲ್ಲ. ಇದೊಂದು ಪ್ರೊಪಗಂಡಾ ಸಿನಿಮಾ. ಆರೆಸ್ಸೆಸ್-ಬಿಜೆಪಿಗಳ ರಾಜಕೀಯ ಅಜೆಂಡಾವನ್ನು ಈ ಸಿನಿಮಾ ಬಹಳ ಪರಿಣಾಮಕಾರಿಯಾಗಿ ತೆರೆಮೇಲೆ ತಂದಿದೆ. ಹಿಂದೂಗಳಲ್ಲಿ ಅನಗತ್ಯ ಭೀತಿ, ಆತಂಕದ ಭಾವನೆಗಳನ್ನು ಹುಟ್ಟಿಸೋದು, ಮುಸ್ಲಿಮರನ್ನು ಭಯೋತ್ಪಾದಕರು ಅಂತ ಚಿತ್ರಿಸಿ ಇಸ್ಲಮಾಫೋಬಿಯಾ ಹರಡುವುದೇ ಈ ಸಿನಿಮಾದ ಅಜೆಂಡಾ. ಒಟ್ಟಾರೆ ಕೋಮು ಧ್ರುವೀಕರಣದ ಮೂಲಕ ರಾಜಕೀಯ ದುರ್ಲಾಭ ಪಡೆದುಕೊಳ್ಳೋದೇ ಈ ವಿಷ ಪ್ರಚಾರದ ಹಿಂದಿನ ಲೆಕ್ಕಾಚಾರ.

ಇದನ್ನೂ ಓದಿ: ಸಿನಿಮಾ ವಿಮರ್ಶೆ: ಮತ್ತೊಂದು ಇಸ್ಲಮಾಫೋಬಿಕ್ ಸಿನಿಮಾ ’ದ ಕೇರಳ ಸ್ಟೋರಿ’

*****

ಇದಿಷ್ಟು ಕೇರಳ ಸ್ಟೋರಿ ಆಯ್ತು. ಇನ್ನು ಗುಜರಾತ್ ಸ್ಟೋರಿ ಕಥೆ; ಇದು ಸಿನಿಮಾ ಸ್ಟೋರಿಯೂ ಅಲ್ಲ; ಕಟ್ಟುಕತೆಯೂ ಅಲ್ಲ. ಭಯಾನಕ ಸತ್ಯ ಕತೆ.

ಮೋದಿಯವರ ತವರಾದ ಗುಜರಾತ್ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 40,000ಕ್ಕೂ ಅಧಿಕ ಮಹಿಳೆಯರ ನಾಪತ್ತೆ ಪ್ರಕರಣಗಳು ದಾಖಲಾಗಿವೆ. ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ಇದು ಸುದೀಪ್ತೋ ಸೇನ್ ಹೇಳುತ್ತಿರುವ ಕಟ್ಟುಕತೆ ಅಲ್ಲ. ಗುಜರಾತ್‌ನ ಕಟು ವಾಸ್ತವದ ಕತೆ. ಇದು ವಿರೋಧ ಪಕ್ಷಗಳ ರಾಜಕೀಯ ಆರೋಪ ಮಾತ್ರವೇ ಅಲ್ಲ; ಎನ್‌ಸಿಆರ್‌ಬಿ, ಅಂದರೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಕ್ರಿಮಿನಲ್ ದಾಖಲೆಗಳು ಗುಜರಾತ್‌ನ ಈ ಕರಾಳ ಕತೆಯನ್ನು ಬಿಚ್ಚಿಟ್ಟಿವೆ.

ಈ ದಾಖಲೆಗಳ ಪ್ರಕಾರ 2016ರಲ್ಲಿ 7,105 ಮಹಿಳೆಯರು, 2017ರಲ್ಲಿ 7,712 , 2018ರಲ್ಲಿ 9246, 2019ರಲ್ಲಿ 9,268 ಹಾಗೂ 2020ರಲ್ಲಿ 8,290 ಮಹಿಳೆಯರು ನಾಪತ್ತೆಯಾಗಿದ್ದಾರೆ. ಅಂದರೆ 5 ವರ್ಷದಲ್ಲಿ 41,621 ಮಹಿಳೆಯರು ಕಾಣೆಯಾಗಿದ್ದಾರೆ.

ಇನ್ನೊಂದು ಶಾಕಿಂಗ್ ಸುದ್ದಿಯಿದೆ. ಗುಜರಾತ್‌ನ ರಾಜಧಾನಿ ಅಹಮದಾಬಾದ್ ಹಾಗೂ ಮತ್ತೊಂದು ಪ್ರಮುಖ ನಗರ ವಡೋದರ, ಈ ಎರಡು ನಗರಗಳಿಂದಲೇ 2019-20ನೇ ಇಸವಿ ಒಂದೇ ವರ್ಷದಲ್ಲಿ 4,722 ಮಹಿಳೆಯರು ಕಾಣೆಯಾಗಿದ್ದಾರೆ! ಈ ಮಾಹಿತಿಯನ್ನು ಆಡಳಿತಾರೂಢ ಬಿಜೆಪಿ ಸರ್ಕಾರವೇ ಅಲ್ಲಿನ ವಿಧಾನಸಭೆಯಲ್ಲಿ ತಿಳಿಸಿತ್ತು.

ವಿಶೇಷ ಏನೆಂದರೆ ’ಕೇರಳ ಸ್ಟೋರಿ’ ಸಿನಿಮಾ ಪ್ರೊಮೋಷನ್ ಮಾಡಲು ಬಿಜೆಪಿ ಸರ್ಕಾರಗಳು ಹಾಗೂ ಅದರ ನಾಯಕರು ಅಂಕೆ ಮೀರಿ ಶ್ರಮಿಸುತ್ತಿರುವಾಗಲೇ ’ಗುಜರಾತ್‌ನ ಈ ಕರಾಳ ಸ್ಟೋರಿ’ ಹೊರಬಂದಿದೆ. ಈ ಸುದ್ದಿ ವೈರಲ್ ಆದ ಕೂಡಲೇ ಎಚ್ಚೆತ್ತ ಗುಜರಾತ್ ಪೊಲೀಸರು, ಈ ಪೈಕಿ 95% ಮಹಿಳೆಯರು, ಅಂದರೆ 39,497 ಮಹಿಳೆಯರು ತಮ್ಮ ಕುಟುಂಬಗಳನ್ನು ಸೇರಿಕೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿ ಡ್ಯಾಮೇಜ್ ಕಂಟ್ರೋಲ್‌ಗೆ ಇಳಿದಿದ್ದಾರೆ. ವಾದಕ್ಕೋಸ್ಕರ, ಗುಜರಾತ್ ಪೊಲೀಸರ ಮಾತು ಸತ್ಯವೆಂದು ಒಪ್ಪಿಕೊಂಡರೂ, 2,124 ಮಹಿಳೆಯರು ಇನ್ನೂ ನಾಪತ್ತೆಯಾಗಿದ್ದಾರೆ ಮತ್ತು ಪೊಲೀಸರಿಗೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸರೇ ಒಪ್ಪಿಕೊಂಡಂತಾಗುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಚಾರವೆಂದರೆ, ಗುಜರಾತ್ ಸರ್ಕಾರ 2021 ಮತ್ತು 2022ರ ಅಂಕಿ-ಅಂಶಗಳನ್ನು ಇನ್ನೂ ಬಹಿರಂಗಗೊಳಿಸಿಲ್ಲ. ಬಹಿರಂಗವಾದಲ್ಲಿ ಮತ್ತಷ್ಟು ಶಾಕಿಂಗ್ ಸುದ್ದಿಗಳು ಹೊರಬೀಳಬಹುದು.

ಈ ಮಹಿಳೆಯರು ನಾಪತ್ತೆಯಾಗಿದ್ದಾದರೂ ಯಾಕೆ?

ಗುಜರಾತ್ ರಾಜ್ಯದ ಮಾನವ ಹಕ್ಕು ಆಯೋಗದ ಸದಸ್ಯ ಸುಧೀರ್ ಸಿನ್ಹಾ ಹೇಳುವಂತೆ, ’ನಾಪತ್ತೆಯಾದ ಮಹಿಳೆಯರು ಹಾಗೂ ಬಾಲಕಿಯರ ಪೈಕಿ ಕೆಲವರನ್ನು ವೇಶ್ಯಾವಾಟಿಕೆಗಾಗಿ ಗುಜರಾತ್‌ನ ಹೊರಗೆ ಸಾಗಿಸಲಾಗಿದೆ’. ಕೆಲವು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯ ಪಡುವಂತೆ, ನಾಪತ್ತೆಯಾದ ಕೆಲವು ಮಹಿಳೆಯರು ಅಂತರ್ಜಾತಿ ಪ್ರೇಮ ಪ್ರಕರಣದಿಂದ ಮನೆಬಿಟ್ಟು ಓಡಿಹೋದವರಾಗಿದ್ದರು. ಬಹುತೇಕರು ಬಿಹಾರ, ಒರಿಸ್ಸಾ ಮುಂತಾದ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರಾಗಿ ಬಂದವರು ಅಥವಾ ಗುಜರಾತಿನ ಅತಿ ಹಿಂದುಳಿದ ಪ್ರದೇಶಗಳ ಆದಿವಾಸಿ ಮಹಿಳೆಯರಾಗಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ಈ ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚಾಗಿವೆ.

ನಿಜಕ್ಕೂ ಈ ಮಾಹಿತಿಗಳು ಆಘಾತಕಾರಿ. ಗುಜರಾತ್‌ನಲ್ಲಿ ಕಾಣೆಯಾದ ಈ ನತದೃಷ್ಟ ಮಹಿಳೆಯರ ಬಗ್ಗೆ ಯಾವ ಮೀಡಿಯಾಗಳು ಮಾತನಾಡುತ್ತಿಲ್ಲ ಯಾಕೆ? ಈ ಮಹಿಳೆಯರು ಭಾರತದ ಮಾತೆಯರಲ್ಲವೆ? ಅಂದರೆ ಭಾರೀ ಪ್ರಚಾರದಲ್ಲಿರುವ ಗುಜರಾತ್ ಮಾದರಿಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವೆ?

ಮತ್ತೊಂದು ವಿಷಯ ಗಮನಿಸಿ. ’ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಪಕ ವಿಪುಲ್ ಶಾ ಗುಜರಾತಿನವರು. ಅವರಿಗೆ ಕೇರಳದಲ್ಲಿ ಮಹಿಳೆಯರು ನಾಪತ್ತೆಯಾಗಿದ್ದಾರೆ ಅನ್ನೋದರ ಬಗ್ಗೆ ಬಹಳ ಕಳವಳ ಆಗಿ ಸಿನಿಮಾ ಮಾಡಿದ್ದಾರೆ. ಅದೂ 3 ಜನರನ್ನು, 32,000 ಅಂತ ತಿರುಚಿ ಕತೆಕಟ್ಟಿದ್ದಾರೆ. ಆದರೆ, ತನ್ನದೇ ಸ್ವಂತ ರಾಜ್ಯ ಗುಜರಾತಿನಲ್ಲಿ ನಾಪತ್ತೆಯಾಗಿರುವ ಸಾವಿರಾರು ಅಸಹಾಯಕ ಹೆಣ್ಣುಮಕ್ಕಳ ಕತೆ ಇವರ ಕಣ್ಣಿಗೆ ಯಾಕೆ ಬೀಳುತ್ತಿಲ್ಲ? ಗುಜರಾತಿನಿಂದ ನಾಪತ್ತೆಯಾಗಿ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟ ಹೆಣ್ಣು ಮಕ್ಕಳ ಕತೆ ಯಾಕೆ ಇವರಿಗೆ ಸಿನಿಮಾ ವಸ್ತು ಆಗೋದಿಲ್ಲ?

ವಿಪುಲ್ ಶಾ

ವಿಷಯ ಹಗಲಿನಷ್ಟು ಸ್ಪಷ್ಟ. ಒಂದು ಸಮುದಾಯವನ್ನು ರಾಕ್ಷಸೀಕರಿಸಿ ಜನಾಂಗ ದ್ವೇಷ ಬೆಳೆಸುವ ಅಜೆಂಡಾ ಮನರಂಜನೆಯ ಹೆಸರಿನಲ್ಲಿ ಜಾರಿಯಲ್ಲಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದಲೇ ಈ ಸಿನಿಮಾದಲ್ಲಿ 3 ಜನ, 32,000 ಆಗಿ ಚಿತ್ರಣಗೊಂಡಿದೆ. ಇದೇ ತರದ ಪ್ರಚಾರ ತಂತ್ರವನ್ನು ಜರ್ಮನಿಯ ನಾಝಿ ಹಿಟ್ಲರ್ ಅನುಸರಿಸಿದ್ದ ಎಂಬುದು ಐತಿಹಾಸಿಕ ಸತ್ಯ.

ಒಂದು ಸುಳ್ಳನ್ನು ನೂರಾರು ಬಾರಿ, ಹತ್ತಾರು ರೂಪದಲ್ಲಿ ಪುನರಾವರ್ತಿಸುತ್ತಾ ಹೋದರೆ ಜನಮಾನಸದಲ್ಲಿ ಅದೇ ಸತ್ಯವಾಗಿ ನೆಲೆಗೊಳ್ಳುತ್ತದೆ. ಹಿಟ್ಲರ್‌ನ ಈ ಸಿದ್ಧಾಂತ ಮನುಕುಲ ಎಂದಿಗೂ ಮರೆಯಲಾಗದಂಥ ದುರಂತಗಳನ್ನು ಸೃಷ್ಟಿಸಿತ್ತು ಎಂಬುದನ್ನು ನೆನಪಿನಲ್ಲಿಡಬೇಕು.

ವರ್ತಮಾನದಲ್ಲಿ ಗುಜರಾತ್‌ನಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ ಸಾವಿರಾರು ಮಹಿಳೆಯರ ದುರಂತ ಕತೆ ನೇಪಥ್ಯಕ್ಕೆ ಸರಿದುಬಿಟ್ಟಿದೆ. ತದ್ವಿರುದ್ಧವಾಗಿ, ಕೇರಳದ ಮೂರು ಮಹಿಳೆಯರ ಕತೆ 32,000 ಆಗಿ, ಬಣ್ಣಬಣ್ಣದ ರೆಕ್ಕೆಪುಕ್ಕ ಜೋಡಿಸಿಕೊಂಡು ದೇಶಾದ್ಯಂತ ಪ್ರದರ್ಶನ ಆಗ್ತಾ ಇದೆ. ಬಿಜೆಪಿ ಪಕ್ಷ ತನ್ನ ಅಧಿಕಾರ ಇರೋ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಿ ಕೇರಳ ಸ್ಟೋರಿಗೆ ಪ್ರೋತ್ಸಾಹ ಕೊಡುತ್ತಿದೆ. ಪ್ರಧಾನಿ ಒಳಗೊಂಡು ಹಲವು ಬಿಜೆಪಿ ನಾಯಕರು ಈ ಸಿನಿಮಾದ ಬ್ರಾಂಡ್ ಅಂಬಾಸಡರ್‌ಗಳಾಗಿದ್ದಾರೆ. ಈ ಯಶಸ್ವಿ ಸಿನಿಮಾ ಈಗಾಗಾಲೇ 200 ಕೋಟಿಗೂ ಹೆಚ್ಚು ಹಣ ಮಾಡಿದೆ ಎಂದು ಹೇಳಲಾಗುತ್ತಿದೆ.

ಈ ವಿದ್ಯಮಾನಕ್ಕೆ ವಿರೋಧ ಪಕ್ಷಗಳ ಪ್ರತಿಕ್ರಿಯೆ ಹೇಗಿದೆ?

ತಮಿಳುನಾಡಿನಲ್ಲಿ, ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಈ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಈ ಸಿನಿಮಾವನ್ನು ನಿಷೇಧಿಸಿತ್ತು. ಹಾಲಿ ಸುಪ್ರೀಂ ಕೋರ್ಟ್ ಈ ನಿಷೇಧ ಹೇರಿಕೆಗೆ ತಡೆಯಾಜ್ಞೆ ಕೊಟ್ಟಿದೆ. ಸಿನಿಮಾ ಪ್ರದರ್ಶನಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ಆದರೆ ಇದೇ ವೇಳೆ, ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಯವರನ್ನೊಳಗೊಂಡ ನ್ಯಾಯಪೀಠವು, ’32,000 ಮಂದಿ ಮತಾಂತರಗೊಂಡಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳಿಲ್ಲ. ಈ ಸಿನಿಮಾ ಒಂದು ಕಾಲ್ಪನಿಕ ಕಥೆಯಾಗಿದೆ’ ಎಂದು ಸಿನಿಮಾದ ಆರಂಭದಲ್ಲೇ ಡಿಸ್‌ಕ್ಲೇಮರ್ ಹಾಕಿ ಸ್ಪಷ್ಟಪಡಿಸಿ ಎಂದು ನಿರ್ಮಾಪಕರಿಗೆ ಖಡಕ್ ಸೂಚನೆ ನೀಡಿದೆ. ಈ ಕೇಸಿನ ವಿಚಾರಣೆ ಮತ್ತೆ ಜುಲೈ 18ಕ್ಕೆ ಮುಂದೂಡಲಾಗಿದೆ. ಅಷ್ಟರಲ್ಲಿ ಒಂದು ಸಿನಿಮಾದ ಆಯಸ್ಸೇ ಮುಗಿದಿರುತ್ತೆ. ಆದರೆ ಅದು ಜನಮಾನಸದಲ್ಲಿ ಬಿತ್ತುವ ವಿಷದ ಕಳೆ ಬೆಳೆಯುತ್ತಲೇ ಹೋಗುತ್ತದೆ.

ಸಿನಿಮಾ ನಿಷೇಧ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಗಳ ಬಗ್ಗೆ ಮಾತಾಡೋವಾಗ ಇತ್ತೀಚಿನ ಮತ್ತೊಂದು ಪ್ರಮುಖ ವಿವಾದವನ್ನು ಇಲ್ಲಿ ಉಲ್ಲೇಖ ಮಾಡೋದು ಒಳ್ಳೇದು. ಅದೂ ಪ್ರಧಾನಿ ಮೋದಿಯವರ ಗುಜರಾತ್ ರಾಜ್ಯಕ್ಕೆ ಸಂಬಂಧಿಸಿದ್ದು. ಮಾತ್ರವಲ್ಲ, ಈ ವಿವಾದದಲ್ಲಿ ಪ್ರಧಾನಿ ಮೋದಿಯವರೇ ಕೇಂದ್ರ ವ್ಯಕ್ತಿ. 2002ರಲ್ಲಿ ನಡೆದ ಗುಜರಾತ್ ದಂಗೆಗೆ ಸಂಬಂಧಿಸಿದಂತೆ ಬಿಬಿಸಿ ಸಂಸ್ಥೆ ನಿರ್ಮಿಸಿ ಇದೇ ಜನವರಿಯಲ್ಲಿ ಬಿಡುಗಡೆ ಮಾಡಿದ “ಇಂಡಿಯಾ: ದಿ ಮೋದಿ ಕ್ವಶ್ಚನ್” ಎಂಬ ಡಾಕ್ಯುಮೆಂಟರಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆ ಡಾಕ್ಯುಮೆಂಟರಿಯನ್ನು ಭಾರತ ಸರ್ಕಾರ ಕೂಡಲೇ ನಿಷೇಧಿಸಲು ಹಲವು ಕ್ರಮಗಳಿಗೆ ಮುಂದಾಯಿತು. ನೆನಪಿಡಿ, ಇದು ಕಟ್ಟುಕತೆಯ ಸಿನಿಮಾ ಆಗಿರಲಿಲ್ಲ. ಹೇಳಿಕೇಳಿ ಇದೊಂದು ಡಾಕ್ಯುಮೆಂಟರಿ. ವಾಸ್ತವ ಘಟನೆಗಳು, ಅಧಿಕೃತ ಆಧಾರಗಳು, ಹಲವಾರು ಗಣ್ಯರ ಸಂದರ್ಶನಗಳನ್ನು ಆಧರಿಸಿ ಈ ಡಾಕ್ಯುಮೆಂಟರಿ ತಯಾರಿಸಲಾಗಿದೆ. ಇದರಲ್ಲಿ ಪರ-ವಿರೋಧದ ಅಭಿಪ್ರಾಯಗಳನ್ನು ಪ್ರತಿನಿಧಿಸಲಾಗಿದೆ. ಅಧಿಕಾರದಲ್ಲಿದ್ದ ಬಿಜೆಪಿ ನಾಯಕರ ಹೇಳಿಕೆಗಳನ್ನೂ ದಾಖಲಿಸಲಾಗಿದೆ. ಅಷ್ಟೇ ಏಕೆ? ಆಗ ಮುಖ್ಯಮಂತ್ರಿಯಾಗಿದ್ದ ಮೋದಿಯವರ ಸಂದರ್ಶನವನ್ನೂ ಒಳಗೊಂಡಿತ್ತು.

ಹೀಗಿದ್ದ ಈ ಜರ್ನಲಿಸ್ಟಿಕ್ ಡಾಕ್ಯುಮೆಂಟರಿಯನ್ನು ಯಾವ ವೇದಿಕೆಯೂ ಸ್ಕ್ರೀನ್ ಮಾಡದಂತೆ ಭಾರತ ಸರ್ಕಾರ ನಿಷೇಧಿಸಿದೆ. ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದೆ. ಕೇಸುಗಳನ್ನು ಜಡಿಯಲಾಗಿದೆ. ಈ ಡಾಕ್ಯುಮೆಂಟರಿ “ಭಾರತದ ವಿರುದ್ಧ ಅಪಪ್ರಚಾರ” ಮಾಡ್ತಾ ಇದೆ ಅನ್ನೋ ಪ್ರೊಪಗಂಡ ಬಹಳ ಜೋರಾಗಿ ನಡೆಯಿತು. ಅಷ್ಟು ಮಾತ್ರವಲ್ಲ, ಕೆಲವು ದಿನಗಳ ಹಿಂದೆ ಗುಜರಾತ್ ಮೂಲದ ಎನ್‌ಜಿಓ ಒಂದು ಬಿಬಿಸಿ ವಿರುದ್ಧ 10,000 ಕೋಟಿಗಳ ಮಾನನಷ್ಟ ಮೊಕದ್ದಮೆ ಹೂಡಿದೆ.

ಸಮುದಾಯಗಳ ನಡುವೆ ದ್ವೇಷ ಬಿತ್ತುವ, ಕಟ್ಟುಕತೆಗಳ ಮೂಲಕ ಒಂದು ಸಮುದಾಯವನ್ನು ವಿಲನ್‌ಗಳಂತೆ ಚಿತ್ರಿಸುವ ಸಿನಿಮಾ ಒಂದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರದರ್ಶನ ಮಾಡಬಹುದು ಎಂದಾದರೆ, ವಾಸ್ತವಗಳನ್ನು, ಅಧಿಕೃತ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ ಡಾಕ್ಯುಮೆಂಟರಿ ಫಿಲ್ಮ್‌ಗೆ ನಿಷೇಧ ಹೇರಿದ್ದು ಎಷ್ಟು ಸರಿ? ಅದು ಹೇಗೆ ಸಮರ್ಥನೀಯ?

ಇವೆಲ್ಲಾ ಒಂದು ಕಡೆಗಿರಲಿ, ಮೋದಿ ಆಡಳಿತ ಮಾದರಿಯನ್ನು ಕಟುವಾಗಿ ಟೀಕಿಸುವ ವಿರೋಧ ಪಕ್ಷಗಳು ಅದೇ ಮೋದಿ ಮಾದರಿಯನ್ನು ಅನುಸರಿಸಿ ಸಿನಿಮಾ ನಿಷೇಧ ಮಾಡಿದ್ರೆ ಸಮಸ್ಯೆ ಬಗೆಹರಿಯುತ್ತಾ? ಖಂಡಿತಾ ಇಲ್ಲ. ಈ ವಿರೋಧ ಪಕ್ಷಗಳಿಗೆ ಈ ದೇಶದಲ್ಲಿ ಸಾಮರಸ್ಯವನ್ನು ನೆಲೆಗೊಳಿಸುವ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಲ್ಲಿ, ನಿಷೇಧ ಹೇರಿ ಕೈತೊಳೆದುಕೊಳ್ಳುವ ಸುಲಭದ ಆಯ್ಕೆಯನ್ನು ನಿಲ್ಲಿಸಬೇಕು. ಸಮಾಜದಲ್ಲಿ ಇಂಥ ಪ್ರಾಪಗಂಡಾಗಳು ಉಂಟುಮಾಡುತ್ತಿರುವ ಪರಿಣಾಮವನ್ನು ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಮಾತ್ರ ಎದುರುಗೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದು ಬಹಳ ಪ್ರಯಾಸದ ಕೆಲಸ. ಈ ಗುರಿಯನ್ನು ಸಾಧಿಸಲು ಅಚಲವಾದ ಬದ್ಧತೆ ಮತ್ತು ಸುದೀರ್ಘ ಕಾಲದ ಪರಿಶ್ರಮ ಬೇಕಾಗುತ್ತದೆ. ವಿರೋಧ ಪಕ್ಷಗಳ ಸದ್ಯದ ಪರಿಸ್ಥಿತಿಯಲ್ಲಿ ಅವರಿಂದ ಇಂಥದ್ದನ್ನು ನಿರೀಕ್ಷಿಸಲಾಗದು.

ಕನಿಷ್ಟ ಪಕ್ಷ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಕೇರಳ ಸ್ಟೋರಿ ಸಿನಿಮಾದ ಕಟ್ಟುಕತೆಯ ಬಗ್ಗೆ, ಇದರ ದುಷ್ಪರಿಣಾಮದ ಬಗ್ಗೆ ಎಚ್ಚರಿಸುವ ಒಂದು ಪರಿಣಾಮಕಾರಿಯಾದ ಪುಟ್ಟ ಸರ್ಕಾರಿ ಜಾಹಿರಾತನ್ನಾದರೂ ತಯಾರಿಸಲಿ. ಅದನ್ನು ಸಿನಿಮಾ ಪ್ರದರ್ಶನಕ್ಕೆ ಮೊದಲು ಕಡ್ಡಾಯವಾಗಿ ಪ್ರದರ್ಶನ ಮಾಡುವಂತೆ ನೋಡಿಕೊಳ್ಳಲಿ. ಇದು ಸುದೀರ್ಘ ಪ್ರಯಾಣದಲ್ಲಿನ ಒಂದು ಖಚಿತ ಹೆಜ್ಜೆಯಾಗುತ್ತದೆ.

ಸಮಾಜವನ್ನು ಒಡೆಯುವ ವಿಷಪ್ರಚಾರದ ಜಾಲ ಎಷ್ಟೊಂದು ಸಂಘಟಿತವಾಗಿದೆ ಮತ್ತು ಅದಕ್ಕಾಗಿ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಪ್ರಧಾನಿಯವರೆಗೆ ಆ ಜಾಲ ಹೇಗೆ ಸಜ್ಜುಗೊಂಡಿದೆ ಎಂಬುದನ್ನು ಈ ಸಿನಿಮಾದ ಪ್ರಕರಣ ನಮ್ಮ ಮುಂದೆ ತೆರೆದಿಟ್ಟಿದೆ. ನಾಗರಿಕ ಸಮಾಜ ಎಚ್ಚೆತ್ತುಕೊಳ್ಳುವುದೊಂದೇ ದಾರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...