‘ಅನ್ನಪೂರಣಿ’ ತಮಿಳು ಚಲನಚಿತ್ರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಹಿಂದೂ ಬಲಪಂಥೀಯ ಗುಂಪುಗಳು ವಿವಾದ ಸೃಷ್ಟಿಸಿದ ಬೆನ್ನಲ್ಲಿ ನಯನತಾರಾ ಅವರ ‘ಅನ್ನಪೂರಣಿ’ ಚಲನ ಚಿತ್ರವನ್ನು ನೆಟ್‌ಫ್ಲಿಕ್ಸ್ ತೆಗೆದು ಹಾಕಿದ್ದು, ‘ಅನ್ನಪೂರಣಿ’ ಚಲನಚಿತ್ರದ ನಿರ್ಮಾಪಕರು ಮತ್ತು ಝೀ ಸ್ಟುಡಿಯೊ ಕ್ಷಮೆಯಾಚಿಸಿ ವಿಹೆಚ್‌ಪಿಗೆ ಪತ್ರವನ್ನು ಬರೆದಿದೆ.
ಪತ್ರದಲ್ಲಿ Zee ಸ್ಟುಡಿಯೋ, ನಾವು ಹಿಂದೂ ಮತ್ತು ಬ್ರಾಹ್ಮಣ ಸಮುದಾಯಗಳಿಗೆ ಉಂಟಾದ ಅನಾನುಕೂಲತೆ ಮತ್ತು ನೋವಿಗೆ ಈ ಮೂಲಕ ಕ್ಷಮೆಯಾಚಿಸಲು ಬಯಸುತ್ತೇವೆ ಎಂದು ಹೇಳಿದೆ. ಝೀ ಸ್ಟುಡಿಯೋ ಸಹ-ನಿರ್ಮಾಪಕರಾದ ಟ್ರೈಡೆಂಟ್ ಆರ್ಟ್ಸ್‌ನೊಂದಿಗೆ ಚಲನಚಿತ್ರವನ್ನು ಎಡಿಟ್ ಮಾಡುವವರೆಗೆ ನೆಟ್‌ಫ್ಲಿಕ್ಸ್‌ನಿಂದ ತೆಗೆದುಹಾಕಲು ಕೆಲಸ ಮಾಡುತ್ತಿದೆ ಎಂದು ಪತ್ರದಲ್ಲಿ ತಿಳಿಸಿತ್ತು.
ಚಿತ್ರದ ವಿವಾದಾತ್ಮಕ ಅಂಶಗಳನ್ನು ತಕ್ಷಣವೇ ತೆಗೆದುಹಾಕಲು ಸಹ-ನಿರ್ಮಾಪಕರಾದ ಟ್ರೈಡೆಂಟ್ ಆರ್ಟ್ಸ್‌ಗೆ Zee ಸ್ಟುಡಿಯೋಸ್ ಮನವಿ ಮಾಡಿದೆ ಎಂದು ಪತ್ರವು ಬಹಿರಂಗಪಡಿಸಿದೆ. ಹೆಚ್ಚುವರಿಯಾಗಿ ಅಗತ್ಯ ಬದಲಾವಣೆಗಳನ್ನು ಮಾಡುವವರೆಗೆ ತನ್ನ OTT ಪ್ಲಾಟ್‌ಫಾರ್ಮ್‌ನಿಂದ ‘ಅನ್ನಪೂರಣಿ’ ಯನ್ನು ತಾತ್ಕಾಲಿಕವಾಗಿ ತೆಗೆದುಹಾಕುವಂತೆ ಸ್ಟುಡಿಯೋ ನೆಟ್‌ಫ್ಲಿಕ್ಸ್‌ಗೆ ಒತ್ತಾಯಿಸಿತ್ತು.
ಇಂದು ನೆಟ್‌ಫ್ಲಿಕ್ಸ್ ಚಲನಚಿತ್ರವನ್ನು ತೆಗೆದುಹಾಕಿದೆ, ಚಲನಚಿತ್ರವನ್ನು ಆವರಿಸಿರುವ ವಿವಾದವನ್ನು ಗಂಭೀರವಾಗಿ ಪರಿಗಣಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮಿಳುನಾಡಿನಲ್ಲಿ ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಅಂದರೆ ಅದು ಈಗಾಗಲೇ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ ಅನುಮತಿ ಪಡೆದಿದೆ.
ಜನವರಿ 8 ರಂದು ಶಿವಸೇನೆಯ ಮಾಜಿ ಕಾರ್ಯಕರ್ತ ರಮೇಶ್ ಸೋಲಂಕಿ ಮುಂಬೈನಲ್ಲಿ ‘ಅನ್ನಪೂರಣಿ’ ತಮಿಳು ಚಲನ ಚಿತ್ರದ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಚಲನಚಿತ್ರವು ಲವ್ ಜಿಹಾದ್‌ನ್ನು ಉತ್ತೇಜಿಸುತ್ತದೆ ಮತ್ತು ಅದರ ಒಂದು ಪಾತ್ರವು ವಾಲ್ಮೀಕಿ ರಾಮಾಯಣವನ್ನು ತಪ್ಪಾಗಿ ಅರ್ಥೈಸುತ್ತದೆ, ಭಗವಾನ್ ರಾಮನನ್ನು ‘ಮಾಂಸ ಭಕ್ಷಕ’ ಎಂದು ಚಿತ್ರಿಸುತ್ತದೆ ಎಂದು ಆರೋಪಿಸಿ ಮುಂಬೈನ ಎಲ್‌ಟಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಿಸಿದ್ದಾರೆ.
ಅನ್ನಪೂರಣಿ’ ನಯನತಾರಾ ಅಭಿನಯಿಸುತ್ತಿರುವ 75ನೇ ಸಿನಿಮಾ. ಈ ಚಿತ್ರಕ್ಕೆ ನಿಲೇಶ್ ಕೃಷ್ಣ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಯುವತಿಯೊಬ್ಬಳು ಸಮಾಜದ ವಿರೋಧದ ನಡುವೆ ಹೇಗೆ ಶೆಫ್ ಆಗುವ ಕನಸನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸುತ್ತಾಳೆ ಎನ್ನುವುದರ ಸುತ್ತ ಕಥೆ ಸಾಗುತ್ತದೆ. ಬ್ರಾಹ್ಮಣರ ಮನೆತನದ ಯುವತಿ ಮಾಂಸಾಹಾರ ತಯಾರಿಸುವ ಸವಾಲನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವುದು ಸಿನಿಮಾದ ಕಥೆಯಾಗಿದೆ.
ನಟಿ ನಯನತಾರಾ, ನಿರ್ದೇಶಕರಾದ ನೀಲೇಶ್ ಕೃಷ್ಣ ಮತ್ತು ನಿರ್ಮಾಪಕರಾದ ಜತಿನ್ ಸೇಥಿ, ಆರ್ ರವೀಂದ್ರನ್ ಮತ್ತು ಪುನಿತ್ ಗೋಯೆಂಕಾ, ಜೀ ಸ್ಟುಡಿಯೋಸ್, ಶಾರಿಕ್ ಪಟೇಲ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾದ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್ ವಿರುದ್ಧ ದೂರು ದಾಖಲಿಸಲಾಗಿತ್ತು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ರಮೇಶ್ ಸೋಲಂಕಿ, ನಾನು AntiHinduZee ಮತ್ತು #AntiHinduNetflix ವಿರುದ್ಧ ದೂರು ದಾಖಲಿಸಿದ್ದೇನೆ. ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ನಿರೀಕ್ಷೆಯಲ್ಲಿ ಇಡೀ ವಿಶ್ವವೇ ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ಝೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಾಣದ ಈ ಹಿಂದೂ ವಿರೋಧಿ ಸಿನಿಮಾ ಅನ್ನಪೂರಣಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದೆ. ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡಲು ನಮಾಜ್ ಮಾಡುತ್ತಾಳೆ, ಈ ಚಿತ್ರದಲ್ಲಿ ಲವ್ ಜಿಹಾದ್ ಪರ ಪ್ರಚಾರ ಮಾಡಲಾಗಿದೆ. ಫರ್ಹಾನ್ (ನಟ) ಭಗವಾನ್ ಶ್ರೀ ರಾಮ್ ಕೂಡ ಮಾಂಸಾಹಾರಿ ಎಂದು ನಟಿಯನ್ನು ಮಾಂಸ ತಿನ್ನಲು ಮನವೊಲಿಸುವುದು ಚಿತ್ರದಲ್ಲಿದೆ. @NetflixIndia
ಮತ್ತು @ZeeStudios_ ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಈ ಸಿನಿಮಾ ಮಾಡಿ ಮಂದಿರದ ಪ್ರಾಣ ಪ್ರತಿಷ್ಠೆಯ ವೇಳೆ ಬಿಡುಗಡೆ ಮಾಡಿದೆ ಎಂದು ಆರೋಪಿಸಿದ್ದರು.
ಇದನ್ನು ಓದಿ: ‘ಎಲ್ಲಾ ಮಹಿಳೆಯರ ಗೆಲುವು’: ಬಿಲ್ಕಿಸ್ ಬಾನು ತೀರ್ಪಿನ ಬಗ್ಗೆ ಕುಸ್ತಿಪಟು ವಿನೇಶ್ ಫೋಗಟ್ ಪ್ರತಿಕ್ರಿಯೆ


