ಬಿಜೆಪಿ ಮುಖಂಡ ಚಿನ್ಮಯಾನಂದ್ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದ 23 ವರ್ಷದ ಉತ್ತರ ಪ್ರದೇಶದ ಕಾನೂನು ವಿದ್ಯಾರ್ಥಿಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತಂಡವು ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ.
ಬಂಧನದ ವಿರುದ್ಧ ರಕ್ಷಣೆಗಾಗಿ ಕಾನೂನು ವಿದ್ಯಾರ್ಥಿ ಸ್ಥಳೀಯ ನ್ಯಾಯಾಲಯವನ್ನು ಕೋರಿದ್ದರೂ ತಕ್ಷಣದ ಪರಿಹಾರ ಸಿಗಲಿಲ್ಲ. ನ್ಯಾಯಾಲಯವು ಬುಧವಾರಕ್ಕೆ ವಿಚಾರಣೆಯನ್ನು ಮೂಂದೂಡಿತ್ತು.
”ಮಹಿಳೆಯನ್ನು ತನ್ನ ನಿವಾಸದಿಂದ ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾವು ನಂತರ ಅವಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುತ್ತೇವೆ ಮತ್ತು ಆಕೆಯನ್ನು ವಶಕ್ಕೆ ಪಡೆಯುತ್ತೇವೆ ”ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಪೊಲೀಸ್ ಇನ್ಸ್‌ಪೆಕ್ಟರ್ ನವೀನ್ ಅರೋರಾ ತಿಳಿಸಿದ್ದಾರೆ.
ಕಳೆದ ವಾರ, ಬಿಜೆಪಿ ನಾಯಕನ ಮೇಲೆ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಮಾಡಿದ ಕಾನೂನು ವಿದ್ಯಾರ್ಥಿಯ ದೂರಿನ ಮೇರೆಗೆ ವಿಶೇಷ ತನಿಖಾ ತಂಡ ಚಿನ್ಮಯಾನಂದ್ ಅವರನ್ನು ಬಂಧಿಸಿತ್ತು. ಈಗ ಚಿನ್ಮಯಾನಂದ್ ನೀಡಿದ ದೂರಿನ ಮೇಲೆ ಆಕೆಯನ್ನು ಬಂಧಿಸಿರುವುದು ಸೇಡಿನ ಕ್ರಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅತ್ಯಾಚಾರದ ಆರೋಪದಲ್ಲಿ ಬಿಜೆಪಿ ಮುಖಂಡ ಚಿನ್ಮಯಾನಂದ್ ಬಂಧನ..
ಕಳೆದ ತಿಂಗಳು ಆಗಸ್ಟ್ 24 ರಂದು ಆ ವಿದ್ಯಾರ್ಥಿನಿಯು “ಸಮುದಾಯದ ಹಿರಿಯ ಮುಖಂಡ” ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಕಾಣೆಯಾಗಿದ್ದಳು.
ಚಿನ್ಮಯಾನಂದ್ ಅವರ ಆಶ್ರಮ ನಡೆಸುತ್ತಿರುವ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಕಾನೂನು ವಿದ್ಯಾರ್ಥಿನಿಯು, ಒಂದು ವರ್ಷದಿಂದ ಅತ್ಯಾಚಾರ ಮತ್ತು ದೈಹಿಕವಾಗಿ ಶೋಷಣೆಗೆ ಒಳಗಾಗಿದ್ದೆ ಎಂದು ಆರೋಪಿಸಿದ್ದಾಳೆ.
ಆಕೆಯ ವಿರುದ್ಧ ಸುಲಿಗೆ ಪ್ರಕರಣವನ್ನು ದಾಖಲಿಸಿರುವ ಚಿನ್ಮಯಾನಂದ್ ಪರ ವಕೀಲ ಓಂ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾನೂನು ವಿದ್ಯಾರ್ಥಿ ತನ್ನ ಮೂವರು ಸ್ನೇಹಿತರಾದ ಸಚಿನ್ ಸೆಂಗಾರ್, ಶಿವಂ ಸಿಂಗ್ ಮತ್ತು ವಿಕಾರಂ ಸಿಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಚಿನ್ಮಯಾನಂದ್ ಬಳಿ 5 ಕೋಟಿ ನೀಡುವಂತೆ ಒತ್ತಾಯ ಹಾಕಿದ್ದಳು ಎಂದು ಆರೋಪಿಸಿದ್ದಾರೆ.
ಚಿನ್ಮಯಾನಂದ್ ವಿರುದ್ಧದ ಪ್ರಕರಣವನ್ನು ದುರ್ಬಲಗೊಳಿಸಲು ತನ್ನ ವಿರುದ್ಧ ಸುಲಿಗೆ ಪ್ರಕರಣವನ್ನು ಹಾಕಲಾಗಿದೆ ಎಂದು ಕಾನೂನು ವಿದ್ಯಾರ್ಥಿನಿ ಹೇಳಿದ್ದಾಳೆ.


