ಆಶ್ರಮದಲ್ಲಿದ್ದವರ ನಾಪತ್ತೆ ಪ್ರಕರಣ ಸಂಬಂಧ ಮತ್ತು ಅತ್ಯಾಚಾರದ ಆರೋಪದ ಮೇಲೆ ಬುದ್ಧನ ಪುನರ್ಜನ್ಮ ಎಂದು ನಂಬಲಾಗಿದ್ದ ನೇಪಾಳದ ವಿವಾದಾತ್ಮಕ ಧಾರ್ಮಿಕ ನಾಯಕ ‘ಬುದ್ಧ ಬಾಲಕ’ನನ್ನು ಪೊಲೀಸರು ಬಂಧಿಸಿದ್ದಾರೆ.
ಅನುಯಾಯಿಗಳಿಂದ ಬುದ್ದ ಬಾಯ್ (ಬುದ್ದ ಬಾಲಕ) ಎಂದು ಕರೆಯಲ್ಪಡುವ ವಿವಾದಾತ್ಮಕ ಧಾರ್ಮಿಕ ನಾಯಕ ರಾಮ್ ಬಹದ್ದೂರ್ ಬೊಮ್ಜಾನ್ ನೀರು, ಆಹಾರ ಸೇವಿಸದೆ, ನಿದ್ದೆ ಮಾಡದೆ ತಿಂಗಳುಗಟ್ಟಲೆ ಚಲನರಹಿತ ಧ್ಯಾನಸ್ಥನಾಗಿ ಇರಬಲ್ಲ ಎಂದು ಅನುಯಾಯಿಗಳು ಹೇಳಿದ ನಂತರ ಸಣ್ಣ ವಯಸ್ಸಿನಲ್ಲೇ ಪ್ರಸಿದ್ದಿ ಪಡೆದಿದ್ದ.
ಪ್ರಸ್ತುತ 33 ವರ್ಷ ವಯಸ್ಸಿನ ಬೊಮ್ಜಾನ್ ಮೇಲೆ, ತನ್ನ ಅನುಯಾಯಿಗಳಿಗೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ನೀಡಿದ ಆರೋಪದವಿದೆ. ಈ ಆರೋಪ ಬಹಳ ಹಿಂದೆಯೇ ಕೇಳಿ ಬಂದಿದ್ದರೂ, ಬೊಮ್ಜಾನ್ ತನ್ನ ಪ್ರಭಾವ ಬಳಸಿ ಸುದೀರ್ಘ ಸಮಯದಿಂದ ಕಾನೂನಿಂದ ತಪ್ಪಿಸಿಕೊಂಡಿದ್ದ ಎಂದು ವರದಿಗಳು ಹೇಳಿವೆ.
“ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬೊಮ್ಜಾನ್‌ನನ್ನು ಬಂಧಿಸಲಾಗಿದೆ” ಎಂದು ಕಠ್ಮಂಡು ಪೊಲೀಸ್ ವಕ್ತಾರ ಕುಬೇರ್ ಕಡಯತ್ ಎಪಿಎಫ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಬೊಮ್ಜಾನ್ ಮೇಲೆ ಹಲವು ಆರೋಪಗಳಿದ್ದರೂ, ನೇಪಾಳದ ರಾಜಧಾನಿ ಕಠ್ಮಂಡುವಿನ ದಕ್ಷಿಣ ಜಿಲ್ಲೆಯ ಸರ್ಲಾಹಿಯ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹೊರಡಿಸಲಾದ ವಾರಂಟ್‌ನ ಸಂಬಂಧ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿಸುವ ವೇಳೆ ಬೊಮ್ಜಾನ್‌ನ ನಿವಾಸದಿಂದ 30 ದಶಲಕ್ಷಕ್ಕೂ ಅಧಿಕ ರೂಪಾಯಿ (ನೇಪಾಳಿ ರೂಪಾಯಿ) ಗಳನ್ನು ವಶಕ್ಕೆ ಪಡೆಯಲಾಗಿದೆ. ಬೊಮ್ಜಾನ್ ವಿರುದ್ಧ ಹಣ ದುರುಪಯೋಗ ಮತ್ತು ದುಷ್ಕೃತ್ಯದ ಆರೋಪಗಳು ಒಂದು ದಶಕಕ್ಕೂ ಹಿಂದಿನಿಂದ ಇದೆ ಎಂದು ವರದಿಗಳು ಹೇಳಿವೆ.
2010ರಲ್ಲಿ ಬೊಮ್ಜಾನ್ ವಿರುದ್ಧ ಹತ್ತಾರು ಹಲ್ಲೆ ದೂರುಗಳು ದಾಖಲಾಗಿತ್ತು. ತನ್ನ ಧ್ಯಾನಕ್ಕೆ ಭಂಗ ತಂದಿದ್ದಾರೆ ಎಂದು ಅನುಯಾಯಿಗಳಿಗೆ ಆತ ಥಳಿಸಿದ್ದ ಎಂದು ಆರೋಪಿಸಲಾಗಿತ್ತು. 2018ರಲ್ಲಿ ಆಶ್ರಮದಲ್ಲಿ ಬೊಮ್ಜಾನ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು 18 ವರ್ಷದ ಸನ್ಯಾಸಿನಿಯೊಬ್ಬರು ಆರೋಪಿಸಿದ್ದರು.
ಬೊಮ್ಜಾನ್‌ನ ಆಶ್ರಮವೊಂದರಿಂದ ಆತನ ನಾಲ್ವರು ಭಕ್ತರು ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ ನಂತರ, ಕಳೆದ ವರ್ಷ ಪೊಲೀಸರು ಆತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ನಾಪತ್ತೆಯಾದ ನಾಲ್ವರು ಎಲ್ಲಿ ಹೋಗಿದ್ದಾರೆ ಎಂಬುವುದು ಇನ್ನೂ ಗೊತ್ತಾಗಿಲ್ಲ ಎಂದು ನೇಪಾಳದ ಕೇಂದ್ರ ತನಿಖಾ ದಳದ ಮುಖ್ಯಸ್ಥ ದಿನೇಶ್ ಆಚಾರ್ಯ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
16 ವರ್ಷ ವಯಸ್ಸಿನವನಾಗಿದ್ದಾಗ ಬೊಮ್ಜಾನ್ ಒಂದು ದಿನ ಪೂರ್ವ ನೇಪಾಳದ ದಟ್ಟ ಅರಣ್ಯಕ್ಕೆ ತೆರಳಿದ್ದವ ಸುಮಾರು 9 ತಿಂಗಳ ಕಾಲ ನಾಪತ್ತೆಯಾಗಿದ್ದ. ಆತನ ಸುರಕ್ಷಿತ ಮರಳುವಿಕೆಗೆ ಬೌದ್ಧ ಬಿಕ್ಕುಗಳು ನಿರಂತರವಾಗಿ ಪ್ರಾರ್ಥಿಸಿದ್ದರು. 9 ತಿಂಗಳ ಬಳಿಕ ಆತನ ಕಾಡಿನಿಂದ ವಾಪಸ್ ಬಂದಾಗ ಪ್ರಸಿದ್ದಿ ಹೆಚ್ಚಾಗಿತ್ತು.
ಇದನ್ನೂ ಓದಿ : ಎನ್ನೋರ್ ಅನಿಲ ಸೋರಿಕೆ ದುಷ್ಪರಿಣಾಮ ಮುಚ್ಚಿಡಲು ಯತ್ನ? ಸಂತ್ರಸ್ತರು ಹೇಳುವುದೇನು?


