ಮುಜಾಫರ್‌ನಗರದ ಶಾಲೆಯೊಂದರಲ್ಲಿ ಶಿಕ್ಷಕಿ ತೃಪ್ತಿ ತ್ಯಾಗಿ ಮುಸ್ಲಿಂ ವಿದ್ಯಾರ್ಥಿಯೋರ್ವನಿಗೆ ಸಹಪಾಠಿಗಳಿಂದ ಕಪಾಳಮೋಕ್ಷ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ನಿರೀಕ್ಷಿತ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ಸುಪ್ರೀಂಕೋರ್ಟ್ ಉತ್ತರಪ್ರದೇಶ ಸರಕಾರವನ್ನು ಟೀಕಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ತುಷಾರ್ ಗಾಂಧಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆ ನಡೆಸುತ್ತಿದೆ. ಉತ್ತರಪ್ರದೇಶದ ಮುಜಾಫರ್‌ನಗರದ ಪ್ರಾಥಮಿಕ ಶಾಲಾ ಶಿಕ್ಷಕಿ ತೃಪ್ತಿತ್ಯಾಗಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಸಹಪಾಠಿಗೆ ಶಾಲಾ ಮಕ್ಕಳಿಗೆ ಸೂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಆಗಸ್ಟ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಕಳೆದ ವಿಚಾರಣೆಯ ಸಂದರ್ಭದಲ್ಲಿ, ಸಂತ್ರಸ್ತ ಬಾಲಕನಿಗೆ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್‌ಎಸ್) ಶಿಫಾರಸುಗಳನ್ನು ಹೇಗೆ ಅನುಷ್ಠಾನಗೊಳಿಸಲು ಉದ್ದೇಶಿಸಿದೆ ಎಂಬುದರ ಕುರಿತು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರವನ್ನು ಕೇಳಿತ್ತು. ಆದರೆ ಇಲಾಖೆಯ ಪ್ರತಿಕ್ರಿಯೆ ಅಸಮರ್ಪಕವಾಗಿದೆ ಎಂದು ವಕೀಲ ಶದನ್ ಫರಾಸತ್ ಕೋರ್ಟ್‌ನಲ್ಲಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಓಕಾ, ಅರ್ಜಿದಾರರ ಸಲಹೆಗಳನ್ನು ಉತ್ತರಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಅವರಿಗೆ ಲಿಖಿತವಾಗಿ ಕಳುಹಿಸುವಂತೆ ವಕೀಲರನ್ನು ಕೇಳಿದರು. ನಿಮ್ಮ ಸಲಹೆಗಳು ಏನೇ ಇರಲಿ ಅದನ್ನು ಅವರಿಗೆ ಲಿಖಿತವಾಗಿ ನೀಡಿ. ಅಗತ್ಯವಿದ್ದರೆ ನಾವು ಆದೇಶವನ್ನು ರವಾನಿಸುತ್ತೇವೆ. ಶಿಫಾರಸುಗಳನ್ನುಅನುಸರಿಸಲಾಗಿದೆಯೆ ಎಂದು ನಾವು ಖಚಿತಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಓಕಾ ಅವರು ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದು, ಈ ಅಪರಾಧದ ನಂತರ ರಾಜ್ಯವು ನಿರೀಕ್ಷಿಸಿದ್ದನ್ನು ಮಾಡದ ಕಾರಣ ಇದೆಲ್ಲವೂ ಸಂಭವಿಸುತ್ತದೆ. ಈ ಘಟನೆ ಸಂಭವಿಸಿದ ರೀತಿಯ ಬಗ್ಗೆ ರಾಜ್ಯವು ತುಂಬಾ ಕಾಳಜಿ ವಹಿಸಬೇಕು. ಆದ್ದರಿಂದ, ನಾವು ಆರ್‌ಟಿಇ ಕಾಯಿದೆಯ ಅನುಷ್ಠಾನದ ಬಗ್ಗೆ ಇತರ ಸಮಸ್ಯೆಗಳನ್ನು ಸಹ ಪ್ರಸ್ತಾಪಿಸಿದ್ದೇವೆ. TISS ನ ಶಿಫಾರಸುಗಳನ್ನು ಅನುಸರಿಸಿ, ಇತರ ನಿರ್ದೇಶನಗಳನ್ನು ಅನುಸರಿಸಲಾಗಿದೆಯೇ ಎಂದು ನಾವು ಪರಿಶೀಲಿಸುತ್ತೇವೆ ಎಂದು ಹೇಳಿದ ಕೋರ್ಟ್ ಈ ಕುರಿತ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿದೆ.
ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯವು ಮುಜಫರ್‌ನಗರ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿ ಮಾಡುವಾಗ ತನಿಖೆಯ ಪ್ರಗತಿ ಮತ್ತು ಅಪ್ರಾಪ್ತ ಸಂತ್ರಸ್ತನನ್ನು ರಕ್ಷಿಸಲು ತೆಗೆದುಕೊಂಡ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸುವಂತೆ ಸೂಚಿಸಿತು. ಪೊಲೀಸ್ ಅಧೀಕ್ಷಕರ ವರದಿಯನ್ನು ಪರಿಶೀಲಿಸಿದ ನಂತರ, ಪೀಠವು ಉತ್ತರ ಪ್ರದೇಶ ಪೊಲೀಸರ ಪ್ರಕರಣದ ನಿರ್ವಹಣೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತ್ತು. ವಿಶೇಷವಾಗಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವಲ್ಲಿ ವಿಳಂಬ ಮತ್ತು ಅದರಿಂದ ಕೋಮು ದ್ವೇಷದ ಆರೋಪಗಳನ್ನು ಕೈಬಿಟ್ಟಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಹಿರಿಯ ಪೊಲೀಸ್ ಅಧಿಕಾರಿಗೆ ವಹಿಸುವಂತೆ ನ್ಯಾಯಾಲಯ ಆದೇಶಿಸಿತ್ತು.
ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಮತ್ತು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವ ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ ಕುರಿತು ಬದ್ಧತೆ ಬಗ್ಗೆ ರಾಜ್ಯದ ಕಡೆಯಿಂದ ಪ್ರಾಥಮಿಕ ವೈಫಲ್ಯವನ್ನು ನ್ಯಾಯಾಲಯವು ಗಮನಿಸಿದೆ. ಈ ಆರೋಪಗಳು ನಿಜವಾಗಿದ್ದರೆ ಅದು ರಾಜ್ಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸಬೇಕು ಎಂದು ಪೀಠ ಹೇಳಿತ್ತು. ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ದಂಡ ವಿಧಿಸಲು ಪ್ರಯತ್ನಿಸಿದರೆ ಶಿಕ್ಷಣದಲ್ಲಿ ಯಾವುದೇ ಗುಣಮಟ್ಟ ಇರಲು ಸಾಧ್ಯವಿಲ್ಲ ಎಂದು ಕೋರ್ಟ್ ಗಮನಿಸಿದೆ. ಸಂತ್ರಸ್ತೆ ಮತ್ತು ಇತರ ಮಕ್ಕಳಿಗೆ ತಜ್ಞರ ಸಮಾಲೋಚನೆಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಘಟನೆಯ ವಿವರ:
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿರುವ ಖಾಸಗಿ ಶಾಲೆಯ ಶಿಕ್ಷಕಿ ತ್ರಿಪ್ತಾ ತ್ಯಾಗಿ, ಏಳು ವರ್ಷದ ಮುಸ್ಲಿಂ ವಿದ್ಯಾರ್ಥಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುವಂತೆ ಇತರ ವಿದ್ಯಾರ್ಥಿಗಳಿಗೆ ಸೂಚನೆ ನೀಡುವ ವಿಡಿಯೋ ವೈರಲ್ ಅಗಿತ್ತು.
ಮಗುವಿಗೆ ಕಪಾಳಮೋಕ್ಷ ಮಾಡಿದಾಗ ಅಳುತ್ತಿದ್ದಂತೆ ತ್ಯಾಗಿ ‘ಮೊಹಮ್ಮದೀಯ ಮಕ್ಕಳ’ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ದೇಶಸಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಗಸ್ಟ್ 26ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ) ಮತ್ತು ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತ್ಯಾಗಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಈ ಘಟನೆಯ ಬಗ್ಗೆ ಯುಪಿ ಮೂಲದ ವಕೀಲ ಎಸ್‌ಎಂ ಹೈದರ್ ರಿಜ್ವಿ ಅವರು ದೂರು ಸಲ್ಲಿಸಿದ ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಯುಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು. ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಶಿಕ್ಷಕಿ ವಿರುದ್ಧ ತೆಗೆದುಕೊಂಡ ಕ್ರಮಗಳು, ಎಫ್‌ಐಆರ್‌ನ ಸ್ಥಿತಿಗತಿ, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಕೋರಿತ್ತು. ಸೆಪ್ಟೆಂಬರ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಮತ್ತು ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು.
ಇದನ್ನು ಓದಿ: ತಮಿಳುನಾಡು: ದಲಿತ ಯುವಕನನ್ನು ಮದುವೆಯಾದ ಯುವತಿ; ಪೋಷಕರಿಂದ ಮಾರ್ಯಾದೆಗೇಡು ಹತ್ಯೆ!


