ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಅಟಲ್ ಸೇತುವೆಯನ್ನು (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್) ವಾಹನ ಸವಾರರು ಪಿಕ್ನಿಕ್ ಸ್ಪಾಟ್ ಆಗಿ ಪರಿವರ್ತಿಸಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಿಮಿಸಿದೆ.
ಜನರು ಫೋಟೋ ತೆಗೆಸಿಕೊಳ್ಳುವುದಕ್ಕಾಗಿಯೇ ಸೇತುವೆಯ ಮೇಲೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದು, ಕೆಲವರು ನಿಯಮಗಳನ್ನು ಉಲ್ಲಂಘಿಸಿ ಹಳಿಗಳನ್ನು ಹತ್ತುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳಲ್ಲಿ ಜನರು ಎಲ್ಲೆಂದರಲ್ಲಿ ಕಸ ಹಾಕಿರುವುದು ಕಾಣಬಹುದಾಗಿದೆ. ಜೊತೆಗೆ, ಸೆಲ್ಫಿಗಾಗಿ ರೇಲಿಂಗ್ಸ್‌ಗಳನ್ನು ಹತ್ತುವುದು, ವೀಕ್ಷಣಾ ಗೋಪುರ ತಲುಪಲು ದಂಪತಿಗಳು ಸೇತುವೆಯ ಏಣಿಯನ್ನು ದಾಟುತ್ತಿರುವ ವಿಡಿಯೋಗಳು ವೈರಲ್ ಆಗಿದೆ.
ಈ ಬಗ್ಗೆ ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಅಟಲ್ ಸೇತು ಮೇಲೆ ವಾಹನ ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮದ ಸೂಚನೆ ನೀಡಿದ್ದಾರೆ. ಅಟಲ್ ಸೇತು ವೀಕ್ಷಿಸಲು ಯೋಗ್ಯವಾಗಿದ್ದರೂ, ಫೋಟೋಗಳಿಗಾಗಿ ವಾಹನ ನಿಲ್ಲಿಸುವುದು ಕಾನೂನುಬಾಹಿರವಾಗಿದೆ. ಹಾಗೆ ಮಾಡುವ ವ್ಯಕ್ತಿಗಳು ಎಫ್ಐಆರ್‌ಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.
We agree that Atal Setu is definitely 'worth a watch' but it's also illegal to stop on it & click photos. You will face a FIR if you stop on MTHL. #MumbaiTransHarbourLink #MTHL #AtalSetu#FaceFIRIfYouStop pic.twitter.com/582CLgA72W
— Mumbai Traffic Police (@MTPHereToHelp) January 15, 2024
‘ಅಟಲ್ ಸೇತು ಖಂಡಿತವಾಗಿಯೂ ವೀಕ್ಷಣೆಗೆ ಯೋಗ್ಯವಾಗಿದೆ. ಆದರೆ, ಅದಕ್ಕಾಗಿ ವಾಹನ ನಿಲ್ಲಿಸುವುದು ಮತ್ತು ಫೋಟೋಗಳನ್ನು ಕ್ಲಿಕ್ ಮಾಡುವುದು ಕಾನೂನುಬಾಹಿರವಾಗಿದೆ. ನೀವು ಎಂಟಿಎಚ್ಎಲ್ ನಲ್ಲಿ ವಾಹನ ನಿಲ್ಲಿಸಿದರೆ ಎಫ್ಐಆರ್ ಅನ್ನು ಎದುರಿಸಬೇಕಾಗುತ್ತದೆ’ ಎಂದು ಮುಂಬೈ ಟ್ರಾಫಿಕ್ ಪೊಲೀಸರು ಎಕ್ಸ್ ನಲ್ಲಿ ಬರೆದಿದ್ದಾರೆ.
“ಅಟಲ್ ಸೇತು, 21.8 ಕಿಮೀ ಉದ್ದದ ಪಿಕ್ನಿಕ್ ಸ್ಪಾಟ್ ಅಲ್ಲ” ಎಂಬ ಶೀರ್ಷಿಕೆಯೊಂದಿಗೆ ಜನರು ನಿಯಮಗಳನ್ನು ಉಲ್ಲಂಘಿಸುವ ಚಿತ್ರಗಳನ್ನು ಸಹ ಪೊಲೀಸರು ಹಂಚಿಕೊಂಡಿದ್ದಾರೆ. ಮುಂಬೈ ಮತ್ತು ನವಿ ಮುಂಬೈ ನಡುವೆ ವೇಗವಾಗಿ ಪ್ರಯಾಣಿಸಲು ಅನುಕೂಲಕ್ಕಾಗಿ ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾದ ಎಂಟಿಎಚ್ಎಲ್ ಅನ್ನು ನಿರ್ಮಿಸಲಾಗಿದೆ ಎಂದು ಪೊಲೀಸರು ಪ್ರಯಾಣಿಕರಿಗೆ ನೆನಪಿಸಿದ್ದಾರೆ.

₹17,840 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಎಂಟಿಎಚ್ಎಲ್, ಸಮುದ್ರದ ಮೇಲೆ 16.5 ಕಿಮೀ ವ್ಯಾಪಿಸಿದೆ ಮತ್ತು ಎರಡು ದಡಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ; ಮಥುರಾ: ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್


