ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಂದಿಸಿದ ಆರೋಪದ ಮೇಲೆ ಹಿಂದುತ್ವವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಲಬುರಗಿಯಲ್ಲಿ ದೂರು ದಾಖಲಾಗಿದೆ. ಕಲಬುರಗಿ ಪೊಲೀಸ್ ಆಯುಕ್ತ ಆರ್ ಚೇತನ್ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಯಚೂರಿನ ಶಿರವಾದಲ್ಲಿ ಇತ್ತೀಚೆಗೆ ನಡೆದ ‘ನಮೋ ಭಾರತ’ ಎಂಬ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ವಿರುದ್ದ ಆಕ್ಷೇಪಾರ್ಹ ಪದ ಬಳಸಿ, ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. “ಕಲಬುರಗಿಯಲ್ಲಿ ಖರ್ಗೆ ಸಾಹೇಬರ ಕಾಲದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆಸ್ಪತ್ರೆ ಮೇಲ್ಭಾಗವನ್ನು ಡ್ರೋನ್ ಕ್ಯಾಮರಾ ಮೂಲಕ ನೋಡಿದರೆ ಕಟ್ಟಡಗಳ ಆಕಾರದಲ್ಲಿ ‘ಮೊದಲ ಅಕ್ಷರ ಖ, ಎರಡನೇ ಅಕ್ಷರ ಗೆ, ಮೂರನೆಯದು ಅರ್ಕವತ್ತು’ ಕಾಣಿಸುತ್ತದೆ. ಆ ಕಟ್ಟಡ ಖರ್ಗೆ ಅಂತಾ ಇದೆ. ಕಟ್ಟಡ ಇರೋವರೆಗೆ ಅವರ ಹೆಸರು ಉಳಿಯಬೇಕೆಂದು ಹೀಗೆ ಮಾಡಲಾಗಿದೆ. ಆಸ್ಪತ್ರೆಯನ್ನು ಅವರ ಸ್ವಂತ ದುಡ್ಡಿಂದ, ಪಕ್ಷ ದುಡ್ಡಿಂದ ಕಟ್ಟಿಲ್ಲ. ಜನರ ತೆರಿಗೆ ದುಡ್ಡಲ್ಲಿ ತಮ್ಮ ಹೆಸರು ಶಾಶ್ವತಗೊಳಿಸುವಂತ ಅಯೋಗ್ಯರಿದ್ದಾರೆ” ಎಂದಿದ್ದರು.
ಈ ಹೇಳಿಕೆಯ ವಿರುದ್ದ ಜಗದೇವ್ ಗುತ್ತೇದಾರ್ ದೂರು ದಾಖಲಿಸಿದ್ದು, ಸೂಲಿಬೆಲೆ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸೂಲಿಬೆಲೆ ಗಡಿಪಾರಿಗೆ ಕಾಂಗ್ರೆಸ್ ಆಗ್ರಹ:
“ಅಯೋಗ್ಯ ಚಕ್ರವರ್ತಿ ಸೂಲಿಬೆಲೆ ಎನ್ನುವ ಸಮಾಜದ ಕೊಳಕು ಕ್ರಿಮಿಯೊಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಬಾಡಿಗೆ ಭಾಷಣ ಮಾಡಿಕೊಂಡು ಬದುಕುವ ಪರಾವಲಂಬಿ ಜೀವಿಗಳಿಗೆ ಶೋಷಿತ ಸಮುದಾಯದ ನಾಯಕರೊಬ್ಬರು ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಸುಳ್ಳುಗಳನ್ನು ಹಬ್ಬಿಸುತ್ತಾ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂತಹ ಕ್ರಿಮಿಗಳನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಲ್ಲಿ ಮನವಿ ಮಾಡುತ್ತೇವೆ” ಎಂದು ಕಾಂಗ್ರೆಸ್ ಎಕ್ಸ್ ಮೂಲಕ ಹೇಳಿದೆ.
ಅಯೋಗ್ಯ @astitvam ಎನ್ನುವ ಸಮಾಜದ ಕೊಳಕು ಕ್ರಿಮಿಯೊಂದು ಎಐಸಿಸಿ ಅಧ್ಯಕ್ಷರಾದ @kharge ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ.
ಬಾಡಿಗೆ ಭಾಷಣ ಮಾಡಿಕೊಂಡು ಬದುಕುವ ಪರಾವಲಂಬಿ ಜೀವಿಗಳಿಗೆ ಶೋಷಿತ ಸಮುದಾಯದ ನಾಯಕರೊಬ್ಬರು ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.…
— Karnataka Congress (@INCKarnataka) January 19, 2024
ಇದನ್ನೂ ಓದಿ : ಶಾಸಕ ರಮೇಶ್ ಜಾರಕಿಹೊಳಿಯಿಂದ ವಂಚನೆ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್


