‘ಬಿ. ಬಸವಲಿಂಗಪ್ಪ ಮತ್ತು ಪ್ರೊ. ಬಿ. ಕೃಷ್ಣಪ್ಪ ಅವರು ಈ ರಾಜ್ಯದ ತಳಸಮದಾಯಗಳ ಎರಡು ಪ್ರಮುಖ ಶಕ್ತಿಗಳು. ಇಬ್ಬರನ್ನೂ ‘ಕರ್ನಾಟಕ ರತ್ನ’ ಎಂದು ಘೋಷಣೆ ಮಾಡಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
‘ಶೋಷಿತ ಸಮುದಾಯಗಳ ಮಹಾ ಒಕ್ಕೂಟ’ದಿಂದ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಶೋಷಿತ ಸಮುದಾಯಗಳ ರಾಜ್ಯ ಮಟ್ಟದ ಜಾಗೃತಿ ಸಮಾವೇಶದಲ್ಲಿ ಆಶಯ ಮಾತುಗಳನ್ನಾಡಿದ ಅವರು, ‘ಈ ಸಮಾವೇಶವನ್ನು ಯಾಕೆ ಆಯೋಜನೆ ಮಾಡಿದ್ದೇವೆ ಎಂಬುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲಾ ಇಲ್ಲಿಗೆ ಬಂದಿರುವ ಉದ್ದೇಶವನ್ನು ಅರ್ಥ ಮಾಡಿಕೊಳ್ಳದೆ ಇದ್ದರೆ, ಈ ಕಾರ್ಯಕ್ರಮ ಅರ್ಥಪೂರ್ಣ ಆಗುವುದಿಲ್ಲ’ ಎಂದು ಹೇಳಿದರು.
‘ನಮ್ಮ ಪೂರ್ವಿಕರ ಮಾತುಗಳನ್ನು ನಾವು ಸರಿಯಾಗಿ ಕೇಳಿಸಿಕೊಳ್ಳದೇ ಇದ್ದಿದ್ದಕ್ಕೆ ನಾವು ಈ ರೀತಿಯ ಶೋಷಣೆಗೆ ಒಳಗಾಗಿದ್ದೇವೆ. ನಮ್ಮ ಪೂರ್ವಿಕರು ಮಾಡಿದ ಮಹಾನ್ ಹೋರಾಟಗಳನ್ನು ಚರಿತ್ರಕಾರರು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಶಾಹು ಮಹಾರಾಜರು ಈ ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿಯನ್ನು ಕೊಟ್ಟಾಗ, ಸಾಮಾಜಿಕ ನ್ಯಾಯವನ್ನು ಜಾರಿ ಮಾಡಿದಾಗ, ಅವರ ಉದ್ದೇಶ ತುಳಿತಕ್ಕೆ ಒಳಗಾಗಿದ್ದವರ ಪರವಾಗಿತ್ತು. ಅವರು ಶಿಕ್ಷಣ, ಉದ್ಯೋಗಗಳಲ್ಲಿ ಸಾಮಾಜಿಕ ನ್ಯಾಯ ಜಾರಿ ಮಾಡ್ತಾರೆ. ಆಗ ಒಬ್ಬರು ಸ್ವಾತಂತ್ರ್ಯ ಹೋರಾಟಗಾರರು ಪ್ರತಿಕ್ರಿಯಿಸಿ, ಶಾಹು ಮಹಾರಾಜರು ದನ ಕಾಯುವವರಿಗೆ, ಕುರಿ ಕಾಯುವವರಿಗೆ, ಬೀದಿ ಗುಡಿಸುವವರಿಗೆ ಮೀಸಲಾತಿ ಕೊಟ್ಟಿದ್ದಾರೆ. ಇವರೆಲ್ಲಾ ಶಿಕ್ಷಣ ಪಡೆದು ಸಾಧಿಸುವುದಾದರೂ ಏನು ಎಂದು ಕೇಳಿದವರು ಚರಿತ್ರೆಯಲ್ಲಿ ‘ಲೋಕಮಾನ್ಯ’ರಾದರು; ಶಾಹು ಮಹಾರಾಜರು ಚರಿತ್ರೆಯಲ್ಲಿ ಖಳನಾಯಕರಾದರು; ಅದಕ್ಕೆಲ್ಲಾ ಕಾರಣ ನಾವು ನೀವು’ ಎಂದು ಹೇಳಿದರು.
‘ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಮೀಸಲಾತಿ ಕೊಟ್ಟಾಗ ಇದೇ ಜನ ನಾಲ್ವಡಿಯವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಶಾಹು ಮಹಾರಾಜರು, ತಂದೆ ಪೆರಿಯಾರ್, ಜ್ಯೋತಿ ಬಾಪುಲೆ, ನಾರಾಯಣಗುರು ಅವರ ವಿಚಾರಗಳನ್ನು ಓದಿ ಬೆಳೆದವರು ಅಂಬೇಡ್ಕರ್; ನಾವೆಲ್ಲಾ ಅವರ ಕುಡಿಗಳು. ಬಹುಸಂಖ್ಯಾತ ತಳಸಮುದಾಯಗಳು ರಾಜ್ಯಾಧಿಕಾರ ಹಿಡಿಯಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ನಮಗೆ ಅಧಿಕಾರ ಸಿಕ್ಕಿದೆಯಾ? ನಮ್ಮಲ್ಲಿರುವ ಜಾತಿ ವೈಶಮ್ಯದಿಂದ ಸಾಧ್ಯವಾಗಿಲ್ಲ. ವೈದಿಕ ಧರ್ಮ ನಮ್ಮ ವಿರುದ್ಧ ನಮ್ಮನ್ನೇ ಎತ್ತಿಕಟ್ಟಿ ಆಟವಾಡುತ್ತಿದೆ’ ಎಂದರು.
‘ದೇಶದಲ್ಲಿ ಇಂದು ಮನುವಾದ ಮತ್ತು ಅಂಬೇಡ್ಕರ್ ವಾದ ಇದೆ. ಮನುವಾದ ದೇಶದ ಬಹುಜನರನ್ನು ಒಡೆಯುತ್ತಾ, ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಅಂಬೇಡ್ಕರ್ ವಾದ ದೇಶದ ಬಹುಸಂಖ್ಯಾತರಿಗೆ ರಾಜಕೀಯ ಅಧಿಕಾರವನ್ನು ನೀಡುತ್ತಿದೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಕೊಡುವಾಗ ಇದೇ ಸಂಘಪರಿವಾರ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದರು. ನಾವು ಅದಕ್ಕೆಲ್ಲಾ ಉತ್ತರ ಕೊಡುತ್ತೇವೆ. ಇನ್ನು ಮುಂದೆ ಅವರ ವಿರುದ್ಧ ಹಗುರವಾಗಿ ಮಾತನಾಡಿದರೆ ನಿಮ್ಮ ಬಾಯಿಗೆ ಬೀಗ ಹಾಕಬೇಕುತ್ತದೆ. ಸಂಸತ್ ಸದಸ್ಯ ಅನಂತ್ ಕುಮಾರ್ ಹೆಗಡೆಗೆ ತಲೆಯಲ್ಲಿ ಮಿದುಳು ಇದೆಯಾ’ ಎಂದು ಕಿಡಿಕಾರಿದರು.
‘ರಾಜ್ಯದಲ್ಲಿ ಜನನಾಯಕ ಎಂದು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಶೋಷಿತ ಸಮುದಾಯಗಳ ಪರವಾದ ನಾಯಕರನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಮುಖ್ಯಮಂತ್ರಿಗಳೆ ನೀವು ಯಾವುದೇ ಕಾರಣಕ್ಕೂ ಅಂಜಿಕೊಳ್ಳಬೇಡಿ; ನಿಮ್ಮ ಜತೆ ಇಡೀ ರಾಜ್ಯದ ಸಮಸ್ತ ಶೋಷಿತ ಸಮುದಾಯ ಇದೆ’ ಎಂದು ವೇದಿಕೆಯಲ್ಲೆ ಹೇಳಿದರು.
‘ಕಾಂತರಾಜು ಆಯೋಗದ ಸಮೀಕ್ಷೆ ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಇಲ್ಲ. ಅದು ಬಹಿರಂಗವಾಗಿ, ಸತ್ಯ ಏನಿದೆ ಎಂಬುದು ಗೊತ್ತಾಗಬೇಕು. ತಾಯಿಯ ಗರ್ಭದಲ್ಲೆ ಮಗುವನ್ನು ಕೊಲ್ಲುವ ಪ್ರಯತ್ನವನ್ನು ಈ ರಾಜ್ಯದ ಮೇಲ್ಜಾತಿಗಳು ಮಾಡಿದರೆ, ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಬಸವಣ್ಣನವರನ್ನು ಸಾಂಸ್ಕೃತಿ ನಾಯಕ ಎಂದು ಸಿದ್ದರಾಮಯ್ಯ ಸರ್ಕಾರ ಘೋಷಣೆ ಮಾಡಿದೆ; ಅವರಿಗೆ ಧನ್ಯವಾದಗಳು. ಬಿ. ಬಸವಲಿಂಗಪ್ಪ ಮತ್ತು ಪ್ರೊ. ಬಿ. ಕೃಷ್ಣಪ್ಪ ಅವರು ಈ ರಾಜ್ಯದ ತಳ ಸಮದಾಯಗಳ ಎರಡು ಪ್ರಮುಖ ಶಕ್ತಿಗಳು. ಇಬ್ಬರನ್ನೂ ‘ಕರ್ನಾಟಕ ರತ್ನ’ ಎಂದು ಘೋಷಣೆ ಮಾಡಬೇಕು’ ಎಂದು ಮಾವಳ್ಳಿ ಶಂಕರ್ ಮುಖ್ಯಮಂತ್ರಿಗಳ ಮುಂದೆ ಬೇಡಿಕೆ ಇಟ್ಟರು.
ಇದನ್ನೂ ಓದಿ; ಹಿಂದುಳಿದವರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ: ಡಿ.ಕೆ. ಶಿವಕುಮಾರ್


