ಅಮೆರಿಕ ಪ್ರವಾಸ ಮುಗಿಸಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಂದು ಇಸ್ಲಾಮಾಬಾದ್ ಗೆ ಬಂದಿಳಿದರು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಆದ ಅವಮಾನವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು. ಅಮೆರಿಕ ಪ್ರವಾಸ ಮುಗಿಸಿ ತೆರಳಿದ ಪ್ರಧಾನಿ ಇಮ್ರಾನ್ ಖಾನ್ ಗೆ ಭರ್ಜರಿ ಸ್ವಾಗತ ಕೋರಲಾಯ್ತು. ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕು ಎಂಬುದಾಗಿ ಪ್ರತಿಪಾದಿಸಿ, ಕೊನೆಗೆ ಸೋತು ಸ್ವದೇಶಕ್ಕೆ ತೆರಳಿದ ಇಮ್ರಾನ್ ಪ್ರಯತ್ನಕ್ಕೆ ಪಕ್ಷದ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ವಿರುದ್ಧ ಆರೋಪ ಮಾಡಿದ ಪಾಕಿಸ್ತಾನಕ್ಕೆ ತೀವ್ರ ಮುಜುಗರ ಉಂಟಾಗಿದೆ. ಇದೆಲ್ಲದರ ಮಧ್ಯೆಯೂ ವಿವಿಧ ರಾಷ್ಟ್ರಗಳ ಗಮನ ಸೆಳೆದ ಇಮ್ರಾನ್ ಪರ ನೆರೆದಿದ್ದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಜಯಘೋಷ ಮೊಳಗಿಸಿದರು.

ಇಸ್ಲಾಮಾಬಾದ್ ನಲ್ಲಿ ಮಾತನಾಡಿದ ಇಮ್ರಾನ್ ಖಾನ್, ಕಾಶ್ಮೀರಕ್ಕಾಗಿ ಜಿಹಾದ್. ಸಂಯುಕ್ತ ರಾಷ್ಟ್ರಗಳು ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲಿ ಅಥವಾ ಬಿಡಲಿ ಆದರೆ ನಾವು ಎಂದೆಂದಿಗೂ ಕಾಶ್ಮೀರವನ್ನು ಬಿಟ್ಟು ಕೊಡುವುದಿಲ್ಲ. ಜಗತ್ತು ಕಾಶ್ಮೀರಿಗಳನ್ನು ಬೆಂಬಲಿಸಲಿ ಅಥವಾ ಬೆಂಬಲಿಸದಿರಲಿ. ಪಾಕಿಸ್ತಾನ ಎಂದೆಂದೂ ಕಾಶ್ಮೀರಿಗಳ ಜತೆಗಿದೆ ಎಂದು ತಹ್ರೀಕ್-ಇ-ಇನ್ಸಾಫ್ ಪಕ್ಷದ ಕಾರ್ಯಕರ್ತರ ಮಧ್ಯೆ ಘೋಷಣೆ ಮೊಳಗಿಸಿದರು.
ಕಾಶ್ಮೀರಕ್ಕಾಗಿ ಹೊಡೆದಾಡುವುದು ಜಿಹಾದ್. ಕಾಶ್ಮೀರಿಗಳ ಪರವಾಗಿ ನಾವು ನಿಲ್ಲುವುದರಿಂದ ದೇವರು ಅಲ್ಲಾಹ್ ನನ್ನು ಖುಷಿ ಪಡಿಸಬಹುದು. ಈಗ ನಮ್ಮ ಸಮಯ ಕೆಟ್ಟದ್ದಾಗಿದೆ. ಹದಗೆಟ್ಟ ಪರಿಸ್ಥಿತಿಯಲ್ಲಿ ನಾವು ಹೆದರುವ ಹಾಗೂ ನಿರಾಶರಾಗುವ ಅವಶ್ಯಕತೆ ಇಲ್ಲ. ನಾವು ಕಂಗಾಲಾದರೆ ಕಾಶ್ಮೀರಿಗಳು ಮತ್ತಷ್ಟು ಭಯಭೀತರಾಗುತ್ತಾರೆ. ಮನುಷ್ಯ ಪ್ರಯತ್ನಿಸುತ್ತಾನೆ ಅದಕ್ಕೆ ತಕ್ಕ ಪ್ರತಿಫಲವನ್ನು ಭಗವಂತ ನೀಡುತ್ತಾನೆ ಎಂದು ಹೇಳಿದರು.


