ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವಿರುವ ಉತ್ತರಪ್ರದೇಶದಲ್ಲಿ ವಿವಾಹಕ್ಕೆ ಸಂಬಂಧಿಸಿದ ಬಹುದೊಡ್ಡ ಹಗರಣವೊಂದು ಬೆಳಕಿಗೆ ಬಂದಿದ್ದು, ನೂರಾರು ವಧುಗಳು ವರರಿಲ್ಲದೆ ವಿವಾಹವಾಗಿದ್ದಾರೆ. ‘ಸಿಎಂ ಗ್ರೂಪ್ ಮ್ಯಾರೇಜ್ ಸ್ಕೀಂ’ ಯೋಜನೆಯಡಿ ಕೋಟ್ಯಾಂತರ ರೂ. ಹಗರಣ ನಡೆದಿರುವ ಆರೋಪ ಕೇಳಿ ಬಂದಿದೆ.
ಉತ್ತರಪ್ರದೇಶದ ಬಲಿಯಾ ಪ್ರದೇಶದಲ್ಲಿ ಸುಮಾರು 568 ವಧುಗಳು ಹಣಕ್ಕಾಗಿ ವರರಿಲ್ಲದೆ ವಿವಾಹವಾಗಿದ್ದಾರೆ. ವಿವಾಹ ಸಮಾರಂಭವು ಜನವರಿ 25ರಂದು ನಡೆದಿದೆ ಮತ್ತು ವಧುವಿನಂತೆ ನಟಿಸಿದ ಯುವತಿಯರು ತಮ್ಮ ಭಾವಿ ಪತಿಗಳಿಲ್ಲದೆ ಏಕಾಂಗಿಯಾಗಿ ಮದುವೆಯ ವಿಧಿಗಳನ್ನು ನೆರವೇರಿಸಿದ್ದಾರೆ. ಈ ಕುರಿತ ಅಚ್ಚರಿಯ ವಿಡಿಯೋಗಳು ಕೂಡ ವೈರಲ್ ಆಗಿದೆ.
ಮುಖ್ಯಮಂತ್ರಿಗಳ ವಿವಾಹ ಯೋಜನೆಯಡಿ ನೀಡುವ ಹಣವನ್ನು ಕಬಳಿಸಲು ಸ್ಥಳೀಯ ಆಡಳಿತವು ಈ ನಕಲಿ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ಯೋಜನೆಯಡಿಯಲ್ಲಿ ಸರಕಾರವು ತನ್ನ ಮದುವೆಯ ಸಮಯದಲ್ಲಿ ಪ್ರತಿಯೊಬ್ಬ ಬಡ ವಧುವಿಗೆ 51,000 ರೂ.ನೀಡುತ್ತಾರೆ. ಆದರೆ ವಿವಾಹ ಕಾರ್ಯಕ್ರಮದ ಸಂಘಟಕರು ಯಾದೃಚ್ಛಿಕವಾಗಿ ಹುಡುಗಿಯರನ್ನು ಒಟ್ಟುಗೂಡಿಸಿ ಹಣಕ್ಕಾಗಿ ವಧುವಿನಂತೆ ಪೋಸ್ ನೀಡುವಂತೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಮೊದಲು ಪತ್ರಕರ್ತ ಸಚಿನ್ ಗುಪ್ತಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜನವರಿ 25ರಂದು ಮುಖ್ಯಮಂತ್ರಿಗಳ ಗುಂಪು ವಿವಾಹ ಯೋಜನೆಯಡಿ 568 ಜೋಡಿಗಳು ವಿವಾಹವಾದರು. ವರನಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ವಧುಗಳಿಗೆ ಮಾಲೆ ಹಾಕಲಾಯಿತು. ಅನೇಕರು ಹಲವು ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ವಿವಾಹ ಕಾರ್ಯಕ್ರಮದಲ್ಲಿ ವಧು-ವರರಾಗಿ ಕಾಣಿಸಿಕೊಂಡವರಲ್ಲಿ ಅನೇಕರು ಸಹೋದರ-ಸಹೋದರಿಯರಾಗಿದ್ದರು. ದಂಪತಿಗಳಂತೆ ಪೋಸ್ ಕೊಡಲು ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ಸರ್ಕಾರದ ಹಣವನ್ನು ಹಂಚಿಕೊಳ್ಳಲು ಈ ಎಲ್ಲಾ ನಾಟಕವನ್ನು ಮಾಡಲಾಗಿದೆ ಎಂದು ಪೋಸ್ಟ್‌ನಲ್ಲಿ ಆರೋಪಿಸಿದ್ದರು.
ವೀಡಿಯೊದಲ್ಲಿ ವಧುವಿನ ಉಡುಪಿನಲ್ಲಿರುವ ಯುವತಿಯರು ಧ್ವನಿವರ್ಧಕದಲ್ಲಿ ನೀಡಲಾದ ಸಲಹೆಗಳ ಪ್ರಕಾರ, ತಮ್ಮನ್ನು ತಾವು ಹಾರ ಹಾಕಿಕೊಳ್ಳುತ್ತಿರುವುದು ಕಂಡುಬರುತ್ತದೆ. ಕೆಲವು ಪುರುಷರು ಕೂಡ ಹೂಮಾಲೆಗಳನ್ನು ಹಾಕಿಕೊಂಡಿದ್ದರು. ಆದರೆ ಅವರು ನಿಜವಾಗಿಯೂ ಮದುವೆಯಾಗಲಿಲ್ಲ, ಬರೀ ಡ್ರಾಮ ಮಾಡಿದ್ದರು ಎನ್ನುವುದು ಬಯಲಾಗಿದೆ.
ವಂಚನೆ ಆರೋಪದ ಮೇಲೆ ಎಫ್‌ಐಆರ್:
ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ ವಂಚನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಮತ್ತು ಎಂಟು ಫಲಾನುಭವಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಬುಧವಾರ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಜನವರಿ 25 ರಂದು ಮಣಿಯಾರ್ ಇಂಟರ್ ಕಾಲೇಜಿನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈಗಾಗಲೇ ಮದುವೆಯಾಗಿದ್ದ ಅನೇಕರು ಮತ್ತೆ ಮದುವೆಯಾಗಿದ್ದಾರೆ. ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯು ಸಮಾಜ ಕಲ್ಯಾಣ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಯುವಕ-ಯುವತಿಯರ ವಿವಾಹಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಹಾಯಕ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಯಾದವ್ ಮತ್ತು ಅರ್ಚನಾ, ರಂಜನಾ ಯಾದವ್, ಸುಮನ್ ಚೌಹಾಣ್, ಪ್ರಿಯಾಂಕಾ, ಸೋನಂ, ಪೂಜಾ, ಸಂಜು ಮತ್ತು ರಮಿತಾ ಸೇರಿದಂತೆ ಎಂಟು ಫಲಾನುಭವಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮನಿಯಾರ್ ಎಸ್‌ಎಚ್‌ಒ ಮಂತೋಷ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ದೂರು ದಾಖಲಿಸಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ದೀಪಕ್ ಶ್ರೀವಾಸ್ತವ ಮಾತನಾಡಿ, ಈ ಯೋಜನೆಯಡಿ ಸಾಮೂಹಿಕ ವಿವಾಹ ನಡೆದ ಬಳಿಕ ಈಗಾಗಲೇ ವಿವಾಹವಾಗಿದ್ದ ವಧು-ವರರು ಮತ್ತೆ ವಿವಾಹವಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಜನವರಿ 29ರಂದು ಮುಖ್ಯ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಅನರ್ಹ ಅರ್ಜಿದಾರರು ನೈಜ ಸಂಗತಿಗಳನ್ನು ಮರೆಮಾಚುವ ಮೂಲಕ ಯೋಜನೆಯಡಿ ಲಾಭ ಪಡೆಯಲು ಅಕ್ರಮವಾಗಿ ಅರ್ಜಿ ಸಲ್ಲಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ರವೀಂದ್ರಕುಮಾರ್ ಮಾತನಾಡಿ, ಸಾಮೂಹಿಕ ವಿವಾಹ ಕಾರ್ಯಕ್ರಮದ ಫಲಾನುಭವಿಗಳಿಗೆ ಇನ್ನೂ ಹಣ ವಿತರಣೆಯಾಗಿಲ್ಲ. ಇದುವರೆಗೆ ಸಹಾಯಕ ಅಭಿವೃದ್ಧಿ ಅಧಿಕಾರಿ ಹಾಗೂ ಎಂಟು ಮಂದಿ ಫಲಾನುಭವಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿ ತಪ್ಪಿತಸ್ಥರೆಂದು ತಿಳಿದು ಬಂದಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಆಡಳಿತಾರೂಢ ಬಿಜೆಯ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಅವರು ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಯುವತಿಯರ ಜೀವನದ ಮೇಲೆ ಭಾವನಾತ್ಮಕ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
‘ಸಿಎಂ ಗ್ರೂಪ್ ಮ್ಯಾರೇಜ್ ಸ್ಕೀಂ’ ಯೋಜನೆಯಡಿಯಲ್ಲಿ 51,000ರೂ.ಗಳನ್ನು ಪಾವತಿಸಲಾಗುತ್ತದೆ. ಇದರಲ್ಲಿ 35,000ರೂ.ವಧುವಿಗೆ, 10,000ರೂ.ವೈವಾಹಿಕ ಸಾಮಗ್ರಿಗಳನ್ನು ಖರೀದಿಸಲು ಮತ್ತು 6,000ರೂ. ಕಾರ್ಯಕ್ರಮಕ್ಕೆ ವೆಚ್ಚವಾಗಿ ಪಾವತಿಸಲಾಗುತ್ತದೆ ಎಂದು ಸರ್ಕಾರದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
UP के जिला बलिया में बिना दूल्हों वाली शादी –
मुख्यमंत्री सामूहिक विवाह योजना से 25 जनवरी को 568 जोड़ों की शादी हुई। बड़ी संख्या में दूल्हे के बिना ही दुल्हनों को माला पहना दी गई। कइयों की शादी कई साल पहले हो चुकी थी। कई आपस में भाई-बहन थे। ये सब हुआ सिर्फ कपल्स बनकर फोटो… pic.twitter.com/UNkYDLwj0h
— Sachin Gupta (@SachinGuptaUP) January 31, 2024
ಇದನ್ನು ಓದಿ: ಪನ್ನುನ್ ಹತ್ಯೆ ಸಂಚು ಆರೋಪ: ಭಾರತದ ಜೊತೆಗಿನ 3 ಬಿಲಿಯನ್ ಡಾಲರ್ ವೆಚ್ಚದ ಡ್ರೋನ್ ಮಾರಾಟ ಒಪ್ಪಂದವನ್ನು ತಡೆ ಹಿಡಿದ ಅಮೆರಿಕ!



Gowri for awer SIR