‘ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ತಪ್ಪು ಎಂಬ ನಿಲುವು ನೀವು ಹೊಂದಿರುವುದಾದರೆ ಕಾಲೋನಿಯಿಂದ ಹೊರ ನಡೆಯಿರಿ’ ಎಂದು ದೆಹಲಿಯ ಜಂಗ್‌ಪುರ ವಿಸ್ತರಣೆ ಪ್ರದೇಶದ ಕಾಲೋನಿ ಕ್ಷೇಮಾಭಿವೃದ್ದಿ ಸಂಘ, ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮತ್ತು ಅವರ ಪುತ್ರಿ ಸುರಣ್ಯಾ ಅಯ್ಯರ್ ಅವರಿಗೆ ನೋಟಿಸ್ ನೀಡಿದೆ.
ವರದಿಗಳ ಪ್ರಕಾರ, “ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವಿರೋಧಿಸಿ ಉಪವಾಸ ಕೈಗೊಂಡಿದ್ದೇನೆ. ಮುಸ್ಲಿಂ ನಾಗರಿಕರಿಗೆ ಉಪವಾಸ ಪ್ರೀತಿ ಮತ್ತು ದುಃಖದ ಅಭಿವ್ಯಕ್ತಿಯಾಗಿದೆ” ಸುರಣ್ಯಾ ಅಯ್ಯರ್ ಜನವರಿ 20ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಜನವರಿ 27ರಂದು ಸುರಣ್ಯಾ ಅವರಿಗೆ ನೋಟಿಸ್ ಬಂದಿದ್ದು, ಕಾಲೋನಿ ಬಿಡುವಂತೆ ಸೂಚಿಸಲಾಗಿದೆ. ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕಪಿಲ್ ಕಕ್ಕರ್ ಅವರ ಸಹಿ ಇರುವ ನೋಟಿಸ್‌ನಲ್ಲಿ “ನಿಮ್ಮ ವರ್ತನೆ ಕಾಲೋನಿ ನಿವಾಸಿಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.
“ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವಿರೋಧಿಸಿ ನೀವು ಧರಣಿ ನಡೆಸಿರುವ ಬಗ್ಗೆ ಕಾಲೋನಿ ನಿವಾಸಿಗಳು ನಮಗೆ ದೂರು ನೀಡಿದ್ದಾರೆ. ಕಾಲೋನಿಯಲ್ಲಿ ಶಾಂತಿ ಕದಡುವ ಮತ್ತು ನಿವಾಸಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಇಂತಹ ವರ್ತನೆಯನ್ನು ಸಂಘ ಖಂಡಿಸುತ್ತದೆ. ಒಂದು ವೇಳೆ ಪ್ರಾಣ ಪ್ರತಿಷ್ಠಾಪನೆ ನಡೆದುದರ ಬಗ್ಗೆ ನಿಮಗೆ ಅಸಮಾಧಾನವಿದ್ದರೆ ಕೋರ್ಟ್‌ಗೆ ಹೋಗಬಹುದು. ಧರಣಿ ನಡೆಸಿದ್ದು ಸರಿ ಎಂದು ಭಾವಿಸುದಾದರೆ, ಇಂಥ ನಡವಳಿಕೆಗಳನ್ನು ಸಹಿಸಿಕೊಳ್ಳುವ ಇನ್ನೊಂದು ಕಾಲೋನಿಗೆ ತೆರಳಬಹುದು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಸುರಣ್ಯಾ ಅಯ್ಯರ್, “ವಿದೇಶ ಅಧ್ಯಯನಕ್ಕೆ ಹೋಗಿದ್ದ ಅವಧಿ ಹೊರತುಪಡಿಸಿ, ನನ್ನ ಜೀವನದ ಉಳಿದ ಸಮಯ ನಾನು ಇಲ್ಲೇ ಕಳೆದಿದ್ದೇನೆ. ನಾನು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ನೋವನ್ನು ಮನೆಯಲ್ಲೇ ಶಾಂತಿಯುತ ಧರಣಿ ಮಾಡುವ ಮೂಲಕ ಹೊರ ಹಾಕಿದ್ದೇನೆ. ಇಂತಹ ನೋಟಿಸ್ ನೀಡುವುದನ್ನು ತಡೆಯಬೇಕು ಎಂದು ನಿಮಗೆ ಅನ್ನಿಸುವುದಿಲ್ಲವೇ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಿಪಕ್ಷಗಳ ಹೆಸರು ಹೇಳಲು ಪೊಲೀಸರಿಂದ ಒತ್ತಡ: ಸಂಸತ್ ಭದ್ರತಾ ಲೋಪ ಆರೋಪಿಗಳಿಂದ ಹೇಳಿಕೆ



No one supposed to dictate against Constitution, Law is not available in any manner