ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತರಾಟೆಗೆ ತೆಗೆದುಕೊಂಡಿದ್ದಾರೆ.
‘ಬಿಜೆಪಿಯು ಹತಾಶೆಯ ಕಾರ್ಯದಲ್ಲಿ ಜೆಎಂಎಂ ಮುಖ್ಯಸ್ಥರನ್ನು ಬೆದರಿಸಲು ಪ್ರಯತ್ನಿಸುತ್ತಿದೆ’ ಎಂದು ಸ್ಟಾಲಿನ್ ಹೇಳಿದರೆ, ‘ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಎಲ್ಲರನ್ನು ಜೈಲಿಗೆ ತಳ್ಳುತ್ತಿದೆ’ ಎಂದು ಬ್ಯಾನರ್ಜಿ ಕಿಡಿಕಾರಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ‘ಹೇಮಂತ್ ಸೊರೇನ್ ಅವರ ಬಂಧನವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಪ್ರತೀಕಾರದ ಸ್ಪಷ್ಟ ಪ್ರದರ್ಶನವಾಗಿದೆ’ ಎಂದು ಹೇಳಿದ್ದಾರೆ.
‘ಗೌರವಾನ್ವಿತ ಜಾರ್ಖಂಡ್ ಮುಖ್ಯಮಂತ್ರಿ ತಿರು ಹೇಮಂತ್ ಸೊರೇನ್ ಅವರ ಬಂಧನವು ಕೇಂದ್ರ ಬಿಜೆಪಿ ಸರ್ಕಾರದ ರಾಜಕೀಯ ಸೇಡಿನ ಅಬ್ಬರದ ಪ್ರದರ್ಶನವಾಗಿದೆ. ಬುಡಕಟ್ಟು ನಾಯಕನಿಗೆ ಕಿರುಕುಳ ನೀಡಲು ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ. ಈ ಕೃತ್ಯವು ಹತಾಶೆ ಮತ್ತು ಅಧಿಕಾರದ ದುರುಪಯೋಗವನ್ನು ಹೊಂದಿದೆ. ಬಿಜೆಪಿಯ ಕೊಳಕು ತಂತ್ರಗಳು ವಿರೋಧದ ಧ್ವನಿಗಳನ್ನು ಮೌನಗೊಳಿಸುವುದಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.
Outrageous and shameful!
The arrest of Hon'ble Jharkhand Chief Minister Thiru @HemantSorenJMM is a blatant display of political vendetta by Union BJP Govt. Using investigative agencies to harass a tribal leader is a new low. This act reeks of desperation and abuse of power.… pic.twitter.com/X6Mvk0WSXX
— M.K.Stalin (@mkstalin) February 1, 2024
‘ಬಿಜೆಪಿಯ ಸೇಡಿನ ರಾಜಕಾರಣದ ಹೊರತಾಗಿಯೂ, ತಿರು ಹೇಮಂತ್ ಸೋರೆನ್ ಅವರು ದೃಢವಾಗಿ ನಿಂತಿದ್ದು, ತಲೆಬಾಗಲು ನಿರಾಕರಿಸುತ್ತಾರೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಅವರ ಸ್ಥೈರ್ಯವು ಶ್ಲಾಘನೀಯವಾಗಿದೆ. ಬಿಜೆಪಿಯ ಗೂಂಡಾಗಿರಿ ತಂತ್ರಗಳ ವಿರುದ್ಧ ಹೋರಾಡುವ ಅವರ ಸಂಕಲ್ಪವು ಸ್ಫೂರ್ತಿಯಾಗಿದೆ’ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ:
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳುತ್ತಿದೆ ಎಂದು ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಎಲ್ಲರನ್ನೂ ಜೈಲಿಗೆ ಹಾಕುತ್ತಿದೆ ಎಂದು ಹೇಳಿದ್ದಾರೆ.
ಜಾರ್ಖಂಡ್‌ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಹೊತ್ತಿನಲ್ಲಿ ಹೇಮಂತ್ ಸೊರೇನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಬಂಧಿಸಿತ್ತು. ಅವರ ಸರ್ಕಾರದಲ್ಲಿ ಸಚಿವರಾಗಿರುವ ಚಂಪೈ ಸೊರೇನ್ ಅವರು ಜೆಎಂಎಂ-ಕಾಂಗ್ರೆಸ್ ಸರ್ಕಾರದ ಹೊಸ ಮುಖ್ಯಮಂತ್ರಿಯಾಗಲಿದ್ದಾರೆ.
ಇಡಿ ಕ್ರಮಕ್ಕೆ ಹಲವು ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೆಎಂಎಂ ನಾಯಕನ ಬಂಧನದ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸೌಗತ ರಾಯ್, ‘ಇದು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳ ಭಾಗವಾಗಿದೆ. ಇಡಿ ಮತ್ತು ಸಿಬಿಐ (ಕೇಂದ್ರ ತನಿಖಾ ಸಂಸ್ಥೆ) ಸರ್ಕಾರದ ಪ್ರಮುಖ ಅಸ್ತ್ರಗಳಾಗಿವೆ..’ ಎಂದು ಹೇಳಿದ್ದಾರೆ.
‘ಈ ಬಂಧನವು ಬಿಜೆಪಿಯ ಬುಡಕಟ್ಟು ವಿರೋಧಿ ಮನಸ್ಥಿತಿಗೆ ಬಗೆದ ದ್ರೋಹ’ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
Hemant Soren’s arrest is an attempt by the BJP-led Central Govt to attack the opposition before the Lok Sabha elections. Am sure that many more opposition leaders will get arrested in the next one month… https://t.co/2Ew5GCsPo4
— Atishi (@AtishiAAP) February 1, 2024
‘ಹೇಮಂತ್ ಸೊರೇನ್ ಅವರ ಬಂಧನವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಮೇಲೆ ದಾಳಿ ಮಾಡುವ ಪ್ರಯತ್ನವಾಗಿದೆ. ಮುಂದಿನ ಒಂದು ತಿಂಗಳಲ್ಲಿ ಇನ್ನೂ ಅನೇಕ ವಿರೋಧ ಪಕ್ಷದ ನಾಯಕರನ್ನು ಬಂಧಿಸುವುದು ನನಗೆ ಖಚಿತವಾಗಿದೆ…’ ಎಂದು ದೆಹಲಿ ಸಚಿವೆ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ‘ಎಕ್ಸ್’ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಜಾರ್ಖಂಡ್: ನ್ಯಾಯಾಂಗ ಬಂಧನಕ್ಕೆ ಹೇಮಂತ್, ಸರ್ಕಾರ ರಚಿಸುವಂತೆ ಚಂಪೈಗೆ ರಾಜ್ಯಪಾಲರಿಂದ ಆಹ್ವಾನ


