ಕಳೆದ ಮೂರ್ನಾಲ್ಕು ದಶಕಗಳಲ್ಲಿ ರಹಮತ್‍ರಷ್ಟು ಓಡಾಡಿದ ಮತ್ತು ಬರೆದ ಕನ್ನಡದ ಇನ್ನೊಬ್ಬ ಲೇಖಕರು ಇರಲಿಕ್ಕಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಸಮತಳದ ರಹಮತ್ ಶಿವಮೊಗ್ಗದಿಂದ ಹಂಪಿ ವಿವಿಗೆ ಹೋಗಿ ನೆಲೆ ನಿಂತರು. ಕನ್ನಡದಲ್ಲಿ ಬರೆಯುವ ರಹಮತ್ ಅವರು ದೇಶದ ಅತ್ಯಂತ ಮಹತ್ವದ ಸಂಸ್ಕೃತಿ ಚಿಂತಕರಾಗಿದ್ದು ಅಧ್ಯಯನದಿಂದ ಮಾತ್ರವಲ್ಲ; ಹಂಪಿಯಿಂದ ಇಡೀ ಜಗತ್ತನ್ನು ಸುತ್ತಿದ ಅವರು ಅವೈದಿಕ ಪಂಥಗಳ ಮತ್ತು ವಿವಿಧ ಸಾಂಸ್ಕೃತಿಕ ಆಚರಣೆಗಳ ಹುಡುಕಾಟದಲ್ಲಿ ಕರ್ನಾಟಕದ ಪ್ರತಿ ಮೂಲೆಗೂ ಎಡತಾಕಿದ್ದಾರೆ. ಶಿಷ್ಯಕೋಟಿಯ ಪ್ರೀತಿಯ ಮೇಷ್ಟ್ರು, ಚಳವಳಿಗಳ ಸಂಗಾತಿ, ಸಂಶೋಧಕರಿಗೆ ಮಾರ್ಗದರ್ಶಿ, ನಿರಂತರ ಪ್ರವಾಸಿ ಹಾಗೂ ಅವಿರತ ಬರಹಗಾರರಾದ ರಹಮತ್ ಅವರು ಗಂಭೀರವಾಗಿ ಚಿಂತಿಸುವಂತೆ ಕಂಡರೆ, ಒಳಗೇನೋ ತುಂಟ ಆಲೋಚನೆ ನಡೆಯುತ್ತಿದೆ ಎಂದೂ ಭಾವಿಸಬೇಕು. ಸಂಶೋಧನೆಯಲ್ಲದೇ ವಿಮರ್ಶೆ, ಸಾಹಿತ್ಯ ಮೀಮಾಂಸೆ, ಪ್ರವಾಸ ಕಥನವಲ್ಲದೆ ಸಮಕಾಲೀನ ವಿದ್ಯಮಾನಗಳ ಕುರಿತು ಅವರ ಬರಹಗಳ ಸಂಗ್ರಹಗಳ ಹಲವಾರು ಪುಸ್ತಕಗಳು ಹೊರಬಂದಿವೆ.

ನಾವು ನಮ್ಮ ದೈನಿಕ ಮಾತುಕತೆಯಲ್ಲಿ ಎಷ್ಟೋ ನುಡಿಗಟ್ಟುಗಳನ್ನು ಅವುಗಳ ಮೂಲದ ಬಗ್ಗೆ ತಲೆಕೆಡಿಸಿಕೊಳ್ಳದೆ ಬಳಸುತ್ತಿರುತ್ತೇವೆ, ಹಾಸುಹೊಕ್ಕು, ಲಾಳಿಯಾಡು, ಒರೆಗೆಹಚ್ಚು, ಹಣಿ ಇತ್ಯಾದಿ. ಇವು ಮೂಲತಃ ನೇಕಾರಿಕೆ, ಚಿನಿವಾರಿಕೆ, ಕಮ್ಮಾರಿಕೆಯಂತಹ ಕೈಕಸುಬಿನ ಲೋಕದಿಂದ ಬಂದವು. ಜನಬಳಕೆಯ ಭಾಷೆಗೂ ದುಡಿವ ಜಗತ್ತಿಗೂ ಗಾಢ ಕೊಳುಕೊಡೆಯಿದ್ದ ಸನ್ನಿವೇಶದಲ್ಲಿ, ಪರಿಭಾಷೆಗಳು ತಮ್ಮ ಕ್ಷೇತ್ರದ ಮಿತಿಯನ್ನು ದಾಟಿಹೋಗಿ ಇನ್ನೊಂದು ಕ್ಷೇತ್ರದಲ್ಲಿ ಅರ್ಥಕೊಡುತ್ತವೆ.
ಇವುಗಳಲ್ಲೆಲ್ಲ `ಹಾಸುಹೊಕ್ಕು’ ನನಗೆ ಪ್ರಿಯ. ಇದರ ಮೂಲ ಹೀಗಿದೆ: ನೇಕಾರರು ಮಗ್ಗದ ಮೇಲೆ ಉದ್ದಕ್ಕೂ ನೂಲಿನ ಎಳೆಗಳನ್ನು ಹಾಸುವರು. ಒಮ್ಮೆ ಮಗ್ಗದ ಹಗ್ಗ ಜಗ್ಗಿದರೆ, ಲಾಳಿಯು ನೂಲಿನೆಳೆಯನ್ನು ಹಿಡಿದುಕೊಂಡು ಹಾಸಿನೊಳಗೆ ಹೊಕ್ಕು ಇನ್ನೊಮ್ಮೆ ಹಗ್ಗ ಜಗ್ಗಿದರೆ ಮರಳಿಬರುತ್ತದೆ. ಪ್ರತಿಯೊಂದು ಹಾಸುಹೊಕ್ಕಾದ ಬಳಿಕ ಬಾಚಣಿಗೆಯಂತಹ ಸಲಕರಣೆಯಿಂದ ಪೆಟ್ಟುಕೊಟ್ಟು ಅವುಗಳ ಬಂಧ ಗಟ್ಟಿಗೊಳಿಸಲಾಗುವುದು. ಈ ಜಗ್ಗಾಟ ನುಗ್ಗಾಟ ಪೆಟ್ಟುಗಳಿಂದ ವಸ್ತ್ರ ತಯಾರಾಗುವುದು. ಅದರ ಮೇಲೆ ಹೂವು ನವಿಲು ಎಲೆ ಇತ್ಯಾದಿ ಬೂಟ ಬಿಡಿಸಲು ಮತ್ತು ಅಂಚುಕಟ್ಟಲು ಬೇರೆಬೇರೆ ಬಣ್ಣದ ನೂಲುಗಳು ಹೊಕ್ಕಾಡುತ್ತವೆ. ಇದೊಂದು ಅದ್ಭುತ ಕುಶಲಕಲೆ. ಸ್ಥಳೀಯವಾಗಿ ಸಿಗುವ ಮರ ಕಬ್ಬಿಣ ನುಲಿಗಳಿಂದ ತಯಾರಾಗುವ ಮಗ್ಗವು ಮಾನವ ನಾಗರಿಕತೆಯಲ್ಲಿ ಕಂಡುಹಿಡಿಯಲ್ಪಟ್ಟ ಪ್ರತಿಭಾವಂತ ಶೋಧಗಳಲ್ಲಿ ಒಂದು.
ಸೆಣಬು ಹತ್ತಿ ಪ್ರಾಣಿಯ ತುಪ್ಪಟಗಳಿಂದಾಗುವ ನೂಲಿನೆಳೆಗಳು ಎರಡು ದಿಕ್ಕಿನಿಂದ ಪ್ರವೇಶಿಸಿ, ಪರಸ್ಪರ ಕೂಡಿ ಬಟ್ಟೆ ಕಂಬಳಿ ಗೋಣಿಯಾಗುವ ಈ ಪರಿಯೇ ಸೋಜಿಗ. ಇದೇ ವಿನ್ಯಾಸದಲ್ಲಿ ತಾನೇ ಜೇಡ-ಗೀಜಗಗಳು `ಮನೆ’ ಕಟ್ಟಿಕೊಳ್ಳುವುದು? ಈ ಹಾಸುಹೊಕ್ಕಿನ ವಿನ್ಯಾಸವನ್ನು ತೆಂಗಿನಮರಕ್ಕೆ ಗರಿಯನ್ನು ಬಿಗಿಯುವ ನಾರಿನ ಜೀಬಿಯಲ್ಲೂ ಕಾಣಬಹುದು. ಬಹುಶಃ ಮಾನವರು ನೇಕಾರಿಕೆಯನ್ನು ಕೀಟ ಹಕ್ಕಿ ಸಸ್ಯಗಳಿಂದಲೇ ಕಲಿತಿರಬೇಕು. ಎಂತಲೇ ನೇಕಾರರನ್ನು ಜೇಡರು/ಜಾಡರು ಎಂದು ಕರೆಯುವರು. ಶಂಬಾ ಪ್ರಕಾರ ಈ ಹೆಸರು ಜೇಡರ ಹುಳುವಿನಂದ ಬಂದಿದ್ದಲ್ಲ. ಜಾಡದಿಂದ (ಮರ) ಬಂದಿದ್ದು. ನೇಕಾರರ ದೇವತೆ ಮರಗಳ ತೋಪಿನಲ್ಲಿರುವ ಬನಶಂಕರಿ.
ನಾವು ಧರಿಸುವ ಅಂಗಿ ಶರಾಯಿ ಪಂಚೆ ಸೀರೆ ಮೂಲತಃ ಒಂದು ಹೂವಿನ ಉತ್ಪನ್ನವೆಂಬುದು ಹೊಳೆದಾಗೆಲ್ಲ ನನ್ನ ಮನಸ್ಸು ಅರಳುತ್ತದೆ; ಉಣ್ಣೆಯ ಸ್ವೆಟರುಡುವಾಗ ಕಂಬಳಿ ಹೊದೆವಾಗ ಪ್ರಾಣಿಯ ಕೇಶಾಂಬರ ಧರಿಸಿದ್ದೇನೆಂದು ರೋಮಾಂಚನವಾಗುತ್ತದೆ. ಹಸಿರು ಗಿಡದಲ್ಲಿ ಬಿಡುವ ನಸು ಹಳದಿಯ ಹೂವು ಪರಾಗಸ್ಪರ್ಶ ಪಡೆದು, ಹಸಿರು ಕಳಸಗಳಂತಹ ಕಾಯಾಗಿ, ತಗಡಿನಂತಹ ಒರಟಾದ ಕವಚ ಬಿರಿತು, ಅದರೊಳಗಿಂದ ಬಿಳಿಮುಗಿಲಿನ ತುಣುಕೊಂದು ಮೇಲೆದ್ದಂತೆ ಅರಳೆ ಬಿಡುತ್ತದೆ. ಅದು ನೂಲಾಗಿ, ಕುದಿವ ಬಣ್ಣದಲ್ಲಿ ಬೆಂದು ವರ್ಣರಂಜಿತವಾಗಿ, ಮಗ್ಗದಲ್ಲಿ ಹಾಸುಹೊಕ್ಕಾಗಿ ಬಟ್ಟೆಯಾಗುತ್ತದೆ; ಬಳಿಕ ಕತ್ತರಿಗೆ ಸಿಕ್ಕು ತುಂಡಾಗಿ, ಸೂಜಿದಾರಕ್ಕೆ ಸಿಕ್ಕು ಉಡುಪಾಗಿ ನಮ್ಮ ಮೈಯನ್ನು ಆವರಿಸುತ್ತದೆ. ಇದೊಂದು ರೂಪಾಂತರ ಪ್ರಕ್ರಿಯೆ. ಸೂಫಿಗಳು ಸಾಮಾನ್ಯ ಮನುಷ್ಯ ಸಾಧಕನಾಗುವ ಪರಿಗೆ ಗುರುಪಂಥಗಳು ಈ ರೂಪಾಂತರದ ನಿದರ್ಶನವನ್ನು ಕೊಡುವರು. ಅಲ್ಲಿ ಸಾಮಾನ್ಯ ವ್ಯಕ್ತಿಗಳು ಸಾಧನ ಮಾಡಿ ತಮ್ಮೊಳಗಿನ ಚೈತನ್ಯವನ್ನು ತಾವೇ ಕಂಡುಕೊಂಡು ರೂಪಾಂತರ ಪಡೆಯುತ್ತಾರೆ. ಗಾಂಧಿಗೆ ಚರಕವನ್ನು ಸಂಕೇತವಾಗಿಸುವಾಗ ಅದರ ಆರ್ಥಿಕತೆ ಮಾತ್ರವಲ್ಲ, ಅದರೊಳಗಿರುವ ಆಧ್ಯಾತ್ಮಿಕತೆಯೂ ಗೊತ್ತಿತ್ತು.
ಸಸ್ಯ ಮತ್ತು ಪ್ರಾಣಿಜನ್ಯ ಕಚ್ಚಾವಸ್ತುವನ್ನು ಬಟ್ಟೆಯಾಗಿಸುವಲ್ಲಿ ಮಗ್ಗದಂತಹ ಉಪಕರಣ ಜತೆ ಮಾನವ ಶ್ರಮ ಮತ್ತು ಬುದ್ಧಿಗಳು ಸಮರಸಗೊಳ್ಳುತ್ತವೆ. ಎಂತಲೇ ಸರಕು ಮತ್ತು ಸೇವೆಯನ್ನು ಉತ್ಪಾದಿಸುವ ಉಪಕರಣಗಳು ಯಾವಾಗಲೂ ಸೆಳೆಯುತ್ತವೆ. ಉಪಕರಣ ಬಳಸಿ ನೇಕಾರರು, ಕಮ್ಮಾರರು, ಕಲಾಯಿಗಾರರು, ಬಡಗಿಗಳು, ಕ್ಷೌರಿಕರು, ಮೆಕಾನಿಕ್‍ಗಳು, ಗೌಂಡಿಗಳು, ಚಿನಿವಾರರು, ಚರ್ಮಕಾರರು ಮಾಡುವ ಕೆಲಸವು ಕಾವ್ಯಕಟ್ಟುವುದಕ್ಕೆ ಕಮ್ಮಿಯಿಲ್ಲದ ಸೃಷ್ಟಿಶೀಲ ಕಾರ್ಯ. ನಾನು ಪಾಂಚಾಳರಲ್ಲಿ ಚಿನಿವಾರ ಬಡಗಿ ಕಮ್ಮಾರ ಶಿಲ್ಪಿಗಳ ಕುಶಲತೆಯನ್ನು ಕಂಡಿದ್ದೆ. ಕಂಚುಗಾರಿಕೆ ನೋಡಿರಲಿಲ್ಲ. ಅವರ ಕಮ್ಮಟ ಕಾಣಲು ಹನಗಂಡಿ ಗ್ರಾಮಕ್ಕೆ ಹೋದೆ. ಅವರು ಮೊಹರಮ್ಮಿನ ಪಂಜಾ ಆಂಜನೇಯ ಇತ್ಯಾದಿ ಸಮಸ್ತ ಧರ್ಮಗಳ ಚಿಹ್ನೆಗಳನ್ನೂ ವಿವಿಧ ಲೋಹಗಳನ್ನು ಕಾಸಿ ಎರಕಹೊಯ್ದು ತಯಾರಿಸಿ ಒಟ್ಟಿಗೇ ಇಟ್ಟಿದ್ದರು. ಕಸುಬುದಾರಿಕೆಗೆ ಧರ್ಮ ಜಾತಿಯಿಲ್ಲ. ಅದು ನಿಜವಾಗಿ ಜಾತ್ಯತೀತ. ಮಂಟೆಸ್ವಾಮಿ ಕಾವ್ಯದಲ್ಲಿ ಹಲಗೂರ ಪಾಂಚಾಳರು `ದೇವರು ನಮ್ಮನ್ನು ಸೃಷ್ಟಿಸಿದ್ದಲ್ಲ. ನಾವು ದೇವರನ್ನು ಸೃಷ್ಟಿಸುವವರು’ ಎನ್ನುವುದು ನೆನಪಾಯಿತು. ನಾರು ಲೋಹ ಅರಳೆ ಕಟ್ಟಿಗೆ ಕೂದಲು ಮಣ್ಣುಗಳನ್ನು ರೂಪಾಂತರ ಮಾಡಿ ಹೊಸವಸ್ತು ಸೃಷ್ಟಿಸುವ ಕಸುಬುದಾರರು ಒಂಟಿಯಲ್ಲ. ಅವರು ರೈತಾಪಿ ಪಶುಪಾಲನೆ ವ್ಯಾಪಾರದಂತಹ ಎಕಾನಮಿಗಳಿಗೆ ಕೊಂಡಿ ಮತ್ತು ಕೇಂದ್ರಗಳಿದ್ದಂತೆ. ಶಿಲ್ಪಿಗಳು ಚರ್ಮಕಾರರು ಕಮ್ಮಾರರು ಸೇನೆಗೆ ಬೇಕಾದ ತಿತ್ತಿ ಒರೆ ಲಗಾಮು, ಕತ್ತಿಕಠಾರಿ ಕಿಂಕಾಪು, ಶಿರಸ್ತ್ರಾಣ, ಮಂಟಪದ ಬೋದಿಗೆ ತೊಲೆ ಕಂಬಗಳನ್ನು ಹುಟ್ಟಿಸಿಕೊಡದಿದ್ದರೆ, ಗತಕಾಲದ ಯಾವ ಸಾಮ್ರಾಜ್ಯಗಳೂ ಇರುತ್ತಿರಲಿಲ್ಲ.
ವಿಶೇಷವೆಂದರೆ, ಜಗತ್ತಿನ ಬಹುತೇಕ ಸಂತರು ಕಸುಬುದಾರರು. ತಿಂತಿಣಿ ಮೋನಪ್ಪ ಕಮ್ಮಾರ; ವೀರಬ್ರಹ್ಮಯ್ಯ ಚಿನಿವಾರ; ಗೋರನು ಕುಂಬಾರ; ಭೀಮಾಂಬಿಕೆ ನೂಲುತ್ತಿದ್ದಳು; ಸೂಫಿ ಮನಸೂರ್ ಹಲ್ಲಾಜ್, ಬನಾರಸ್ಸಿನ ಕಬೀರದಾಸ, ಜೇಡರ ದಾಸಿಮಯ್ಯ ನೇಕಾರರು. ಅನುಭಾವಿಗಳು ತಮ್ಮ ಕಸುಬಿನ ಲೋಕದ ಪರಿಭಾಷೆಯಲ್ಲೇ ಸಾಹಿತ್ಯ ರಚಿಸಿದರು. ದುಡಿಮೆಗೂ ಕಾವ್ಯಕ್ಕೂ ಆಪ್ತನಂಟಿದ್ದ ಕಾಲದಲ್ಲಿ ಈ ಪರಿಭಾಷೆಗಳು ಸಹಜವಾಗಿ ವಿನಿಮಯವಾದವು. ನನಗಂತೂ ಮಗ್ಗವನ್ನು ಕಣ್ಣಾರೆ ಕಂಡ ಬಳಿಕವೇ ದಾಸಿಮಯ್ಯನ ವಚನಗಳು ಚೆನ್ನಾಗಿ ಅರ್ಥವಾಗಿದ್ದು:
ಉಂಕಿಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೊಳು ಏಳಮೆಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು
ಈ ಸೀರೆಯ ನೆಯ್ದವ ನಾನೊ ನೀನೊ ರಾಮನಾಥ
ಉಂಕಿ ಸರಿಗೆ ಸಮಗಾಲು ಲಾಳಿ ಮುಳ್ಳು ಕಂಡಿಕೆ ಇವು ಮಗ್ಗದ ಬಿಡಿಭಾಗಗಳು. ನಿಗುಚು ಸಮಗೊಳಿಸು ಸಮಗಾಲನಿಡು ಮೆಟ್ಟು ಹಿಡಿ ನೇಯು ಇವು ಕ್ರಿಯಾಪದಗಳು. ಉಪಕರಣಗಳ ಜತೆ ಮನುಷ್ಯರ ಅಂಗಾಂಗಗಳು ಜತೆಗೂಡಿ, ಶ್ರಮ ಮತ್ತು ಬುದ್ಧಿಯ ಮೂಲಕ ಬಟ್ಟೆಯನ್ನು ಸೃಷ್ಟಿಸಿದವು. ಇದು ಗಂಡುಹೆಣ್ಣಿನ ಮಿಲನದಿಂದ ಕೂಸು ಹುಟ್ಟುವಂತೆ. ಸಮಸ್ಯೆಯೆಂದರೆ, ತೆರಣಿಯ ಹುಳು ತನ್ನ ನೂಲು ಸುತ್ತಿಸುತ್ತಿ ಸಾವ ತೆರನಂತೆ, ನೇಕಾರರು ಚರಿತ್ರೆಯುದ್ದಕ್ಕೂ ಹೊಡೆತ ತಿನ್ನುತ್ತ ಬಂದಿದ್ದು. ಬ್ರಿಟಿಷರು ಭಾರತಕ್ಕೆ ಬಂದು ಇಲ್ಲಿನ ನೇಕಾರಿಕೆಯನ್ನು ಕಂಡು ಚಕಿತರಾದರು. ಲಂಕಾಶೈರಿನ ಬಟ್ಟೆಗಳಿಗೆ ಭಾರತದ ಮಾರುಕಟ್ಟೆ ಸಿಗಬೇಕಾದರೆ, ನೇಕಾರರ ಮಗ್ಗುಲು ಮುರಿಯಬೇಕೆಂದು ನಿರ್ಧರಿಸಿದರು. ಪ್ರಭುತ್ವಗಳು ದೊಡ್ಡ ಉದ್ದಿಮೆದಾರರ ಗುಲಾಮಗಿರಿ ಮಾಡುತ್ತವೆ. ಕುಶಲಕರ್ಮಿಗಳತ್ತ ಕಷ್ಟಗಳಿವೆ ಮಿಡಿಯುವುದಿಲ್ಲ. ಈಚೆಗೆ ಉತ್ತರ ಕರ್ನಾಟಕದ ಪ್ರವಾಹದಲ್ಲಿ ಮಗ್ಗ ಹಾಳಾಗಿದ್ದಕ್ಕೆ ನೇಕಾರನೊಬ್ಬ ಆತ್ಮಹತ್ಯೆ ಮಾಡಿಕೊಂಡನು.
ಒಮ್ಮೆ ಗಜೇಂದ್ರಗಡದಲ್ಲಿ ಲೇಖಕ ರಂಗಕರ್ಮಿ ಪ್ರಸನ್ನ ಅವರು, ನೇಕಾರರ ಸಮಾವೇಶಕ್ಕೆ ನನ್ನನ್ನು ಕರೆದರು. ಗಾಂಧಿಜಯಂತಿಯ ದಿನ ಅದು. ಮಗ್ಗ ಮತ್ತು ಚರಕಗಳ ಜತೆ ಸಂಬಂಧವಿದ್ದ ಬನಾರಸ್ಸಿನ ಕಬೀರ, ಇಟಗಿಯ ಭೀಮಾಂಬಿಕೆ, ಜೇಡರ ದಾಸಿಮಯ್ಯ ಪೋರಬಂದರದ ಗಾಂಧೀಜಿಯರ ಪಟಗಳಿಂದ ವೇದಿಕೆ ಹಾಸುಹೊಕ್ಕಾಗಿತ್ತು. ನೇಕಾರ ಗಲ್ಲಿಯಲ್ಲಿ ಅಡ್ಡಾಡಿದೆ. ಎಲ್ಲೆಡೆ ಚಟಾಚಟ್ ಶಬ್ದ. ಅದು ಬಟ್ಟೆ ನೇಯ್ಗೆಗೊಳ್ಳುತ್ತಿರುವ ಸದ್ದು. ಅಡಿಗಲ್ಲಿನ ನಾದವನ್ನು ಕೇಳಿಕೊಂಡು ಬೆಳೆದ ನನಗೆ ಯಾವುದೇ ಉಪಕರಣದ ಶಬ್ದ ಇಂಪಾಗಿ ಕೇಳಿಸುತ್ತದೆ. ನೇಕಾರಿಕೆಯಲ್ಲಿ ಹೆಚ್ಚಿನವರು ಮಹಿಳೆಯರು. ಗಂಡಸರು ನೇದರೂ ಅದಕ್ಕೆ ಬೇಕಾದ ಹಾಸುವ ಸಿದ್ಧತೆ ಮಾಡುವವರಿವರು. ಸಾಂಪ್ರದಾಯಿಕ ಕೃಷಿಯಂತೆ ನೇಕಾರಿಕೆಯನ್ನೂ ಹೆಂಗಸರಿಲ್ಲದೆ ಕಲ್ಪಿಸಿಕೊಳ್ಳಲಾಗದು. ಎಂತಲೇ ದಾಸಿಮಯ್ಯ `ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ’; `ಮೊಲೆಮುಡಿ ಬಂದಡೆ ಹೆಣ್ಣೆಂಬರು ಗಡ್ಡೆಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ’ ಎನ್ನಲು ಸಾಧ್ಯವಾಯಿತು. ಈ ಹೇಳಿಕೆ ಕಲ್ಪನೆಯಿಂದ ಬಂದಿದ್ದಲ್ಲ. ಕಸುಬಿನ ಮೂರ್ತಾನುಭವದಿಂದ ಹುಟ್ಟಿದ್ದು. ಹಾಸುಹೊಕ್ಕು ಎಂಬ ಪರಿಭಾಷೆಯಲ್ಲಿ ನೂಲಿನ ಎಳೆಗಳು ಮಾತ್ರವಲ್ಲ, ಶ್ರಮಸೂಚಕ ಕ್ರಿಯಾಪದಗಳೂ ಇವೆ. ಸ್ತ್ರೀ-ಪುರುಷರ, ದೇವರು-ಭಕ್ತರ, ದೇಹ ಮತ್ತು ಚೈತನ್ಯದ, ಉತ್ಪಾದಕ-ಬಳಕೆದಾರರ ಸಂಗಾತ ಪರಿಕಲ್ಪನೆಗಳೂ ಹೌದು. ನೇಯ್ಗೆಯಲ್ಲಿರುವಾಗ ಕೆಲವೊಮ್ಮೆ ನೂಲು ಗಂಟಾಗಿ ಸಿಕ್ಕಿಕೊಳ್ಳುತ್ತದೆ. ಆಗ ನೇಕಾರರು ಗಂಟನ್ನು ಸಡಲಿಸಿ ಹುಶಾರಾಗಿ ಬಿಡಿಸುವರು. ಬಿಡಿಸಲಾಗದಂತೆ ಗಂಟುಬಿದ್ದರೆ, ಕತ್ತರಿಸಿ ಮತ್ತೆ ಜೋಡಿಸಿ ನೇಯ್ಗೆ ಮುಂದುವರೆಸುವರು. ಹೀಗಾಗಿಯೇ ದುಡಿಮೆ ಸಂಸ್ಕೃತಿಯನ್ನು ಅರಿಯಲು ಹಾಸುಹೊಕ್ಕು ಒಂದು ರೂಪಕವಾಗಿದೆ.
ಭಾರತದ ಭಾಷೆ ಸಾಹಿತ್ಯ ಸಂಗೀತ ಧರ್ಮ ಸಂಸ್ಕೃತಿಗಳು ಈ ದೇಶದ ಬೇರೆಬೇರೆ ಸಮುದಾಯ ತಾತ್ವಿಕತೆ ಆಲೋಚನಾಕ್ರಮಗಳ ಹಾಸುಹೊಕ್ಕಿನಿಂದ ಸೃಷ್ಟಿಯಾದವು. ಎಲ್ಲಿಂದಲೋ ಬಂದ ಶಬ್ದ, ದೈವ, ಆಚರಣೆ, ಪ್ರೇರಣೆ, ರಾಗ ತನ್ನಂತಲ್ಲದ ಇನ್ನೊಂದರಲ್ಲಿ ಹೊಕ್ಕು ಅರ್ಥವಂತಿಕೆ ಪಡೆದುಕೊಳ್ಳುತ್ತದೆ. ಇಕ್ಬಾಲರ ಕಾವ್ಯ, ಮೊಹರಂ ಹಾಡು, ಹಿಂದೂಸ್ತಾನಿ ಸಂಗೀತ, ಹಿಂದಿ ಸಿನಿಮಾ, ಗಜಲ್ ಎರಡನೇ ಇಬ್ರಾಹಿಮನ `ಕಿತಾಬೆ ನವರಸ್’ ಅಕಬರನ `ದೀನೆ ಇಲಾಹಿ’, ಬಾಲಿವುಡ್ ಸಿನಿಮಾ-ಎಲ್ಲವೂ ಹಾಸುಹೊಕ್ಕಿನ ತತ್ವದಲ್ಲಿ ನೇದ ಪತ್ತಲಗಳೇ. `ಮದರ್ ಇಂಡಿಯಾ’ `ನಿಕಾ’ `ಮೊಗಲೆ ಆಜಂ’ ಸಿನಿಮಾಗಳಿಗೆ ಕತೆ ಚಿತ್ರಕತೆ ಸಂಗೀತ ನಟನೆ ನಿರ್ದೇಶನ ಚಿತ್ರಗ್ರಹಣ ಧ್ವನಿಗ್ರಹಣದಲ್ಲಿ ಭಾಗಿಯಾದ ಜನ ಭಾರತದ ಯಾವೆಲ್ಲ ಭಾಗದಿಂದ ಬಂದವರು ಎಂದು ನೋಡಿದರೆ ಅದರ ಹಾಸುಹೊಕ್ಕು ಸೋಜಿಗವಾಗುತ್ತದೆ. ಟಾಗೂರರು ಪಾಶ್ಚಾತ್ಯ ದೇಶಗಳ ಅತ್ಯುತ್ತಮ ನಾಗರಿಕ ಮೌಲ್ಯಗಳನ್ನು ಭಾರತದ ಮೌಲ್ಯ ಜಗತ್ತಿನೊಂದಿಗೆ ಬೆಸೆದರು. ಪಂಪ ಮತ್ತು ಬೇಂದ್ರೆಯವರ ಕಾವ್ಯ ಹುಟ್ಟಿದ್ದು, ಮಾರ್ಗ-ದೇಶಿಗಳ, ಅಭಿಜಾತ-ಜಾನಪದಗಳ ಹಾಸುಹೊಕ್ಕಿನಿಂದ. ನಮ್ಮ ಕಲೆ ಕಸುಬು ಧರ್ಮ ಸಾಹಿತ್ಯ ಸಂಸ್ಕøತಿಗಳಲ್ಲಿರುವ ಈ ಹಾಸುಹೊಕ್ಕಿನ ಕುಶಲತೆಯು ಒಂದು ಸೃಜನಶೀಲ ರೂಪಕ.
ಬಹುಧರ್ಮ ಜನಾಂಗ ಭಾಷೆ ಸಂಸ್ಕೃತಿಗಳಿರುವ ಸಮಾಜದಲ್ಲಿ ಫ್ಯಾಸಿಸ್ಟ್ ಮನೋಭಾವದಿಂದ ದೇಶವನ್ನು ಕೆಡಹಬಹುದು. ಕಟ್ಟುವುದು ಸಾಧ್ಯವಿಲ್ಲ. ನಾಜಿಗಳು ಬರ್ಬಾದು ಮಾಡಿಹೋದ ಜರ್ಮನಿಯನ್ನು, ಕೂಡಿಬದುಕುವ ತತ್ವದ ಮೇಲೆ ಮತ್ತೆಕಟ್ಟಲು ಅರ್ಧಶತಮಾನ ಬೇಕಾಯಿತು. ಆಗ ನಾಸ್ತಿಕರನ್ನು ದಮನಿಸುತ್ತಾನೆಂದು ಹಿಟ್ಲರನನ್ನು ಬೆಂಬಲಿಸಿದ್ದ ಪಾದ್ರಿ ಮಾರ್ಟಿನ್, ಬಾಳಿನ ಕೊನೇ ದಿನಗಳಲ್ಲಿ, ಡಕಾವ್ ಕ್ಯಾಂಪಿನಲ್ಲಿ ಸೆರೆಯಾಳಾಗಿದ್ದಾಗ ರಚಿಸಿದ `ಅವರು ಕಮ್ಯುನಿಸ್ಟರನ್ನು ಹುಡುಕಿ ಬಂದರು’ ಎಂಬ ಪ್ರಸಿದ್ಧ ಕವನದ ಪ್ರತಿಗಳನ್ನು ಬಂದವರಿಗೆಲ್ಲ ಹಂಚುತ್ತ ಪಶ್ಚಾತ್ತಾಪ ಪಟ್ಟನು. ಭಾರತದ ಫ್ಯಾಸಿಸ್ಟರು ಧರ್ಮರಕ್ಷಣೆ ರಾಷ್ಟ್ರನಿರ್ಮಾಣ ಭಾರತೀಯ ಸಂಸ್ಕೃತಿ ಮುಂತಾದ ಪರಿಕಲ್ಪನೆಗಳ ಮೂಲಕ, ಸಮಾಜವನ್ನು ಕತ್ತರಿಸುವ ಸೀಳುವ ಕೆಡಹುವ ಬೇರ್ಪಡಿಸುವ ಮೂಲಕ ಹೊಸದೇಶದ ಕಲ್ಪನೆಯನ್ನು ಮುಂದಿಡುತ್ತಿದ್ದಾರೆ. ಇವರ ಸೋದರರು ಪಕ್ಕದ ಆಫಘಾನಿಸ್ತಾನ ಬಾಂಗ್ಲಾದೇಶ ಪಾಕಿಸ್ತಾನ ಮ್ಯಾನ್ಮಾರುಗಳಲ್ಲೂ ಇದ್ದಾರೆ. ಅವರನ್ನು ಕರೆದುಕೊಂಡು ಹೋಗಿ ಮಗ್ಗದ ಇಲ್ಲವೇ ಗೀಜಗದ ಗೂಡಿನ ಮುಂದೆ ಕೂರಿಸಬೇಕು ಅನಿಸುತ್ತದೆ. ಕಾರಣ, ಅವು ಅರ್ಥಪೂರ್ಣ ದೇಶವನ್ನು ಹೇಗೆ ಕಟ್ಟಬೇಕೆಂದೂ, ಚೆಲುವಾಗಿರುವ ಹೆಣಿಗೆಗಳನ್ನು ಹರಿಯಬಾರದೆಂದೂ ಮಾರ್ಮಿಕವಾಗಿ ಸೂಚಿಸುತ್ತವೆ.



ಸರ್. ಲೇಖನ ಓದುತ್ತಾ ಓದುತ್ತಾ ಹೋದಂತೆ ದೇಶ ಸಾಗುತ್ತಿರುವ ಚಿತ್ರ ಕಣ್ಣುಗಳಲ್ಲಿ ಮೂಡಿ ಕಣ್ಣಾಗ ನೀರು ಬಂತು. ಕಟ್ಟುವ ಕೈಗಳು ; ಕೆಡುವ ಕೈಗಳಿಂತ ತುಂಬಾ ದೊಡ್ಡವ ಎಂಬ ತತ್ವ ಅಂತರಾಳಕ್ಕೆ ಮುಟ್ಟಿತು. ಎಲ್ಲದರಲ್ಲೂ ಮೇಲತನವನ್ನು ಪ್ರತಿಪಾದಿಸುವ ಸಮುದಾಯಗಳು ಒಗ್ಗಟ್ಟಿನ – ಹಾಸುಹೊಕ್ಕುವ ವಿಷಯದಲ್ಲಿ ಮಾತ್ರ ಕೇಟಸಣ್ಣತನ ತೋರಿಸುವ ಹಿಂದಿನ ಅಧಿಕಾರದ ರಾಜಕಾರಣ ಹೇಸಿಗೆ ತರಿಸುತ್ತಿದೆ.