Homeರಾಜಕೀಯಮಾಧ್ಯಮಗಳ ನಡವಳಿಕೆ : ಸಿದ್ದು ಥರಾ ಸುಮ್ಮನಿರಲ್ಲವೆಂಬ ಸಂದೇಶ ರವಾನಿಸಿದ ಕುಮಾರಸ್ವಾಮಿ

ಮಾಧ್ಯಮಗಳ ನಡವಳಿಕೆ : ಸಿದ್ದು ಥರಾ ಸುಮ್ಮನಿರಲ್ಲವೆಂಬ ಸಂದೇಶ ರವಾನಿಸಿದ ಕುಮಾರಸ್ವಾಮಿ

- Advertisement -
- Advertisement -

ಗಾಂಧಿಭವನದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ವೇದಿಕೆಯ ಮೇಲೂ ಧೀಮಂತ ಪತ್ರಿಕೋದ್ಯಮ ನಡೆಸಿದ ಮೂವರು ಹಿರಿಯರೂ ಕೂತಿದ್ದಾಗ, ಮುಖ್ಯಮಂತ್ರಿಯೋರ್ವರು ಮಾಧ್ಯಮಗಳಿಗೆ ಮನವಿಯ ರೂಪದಲ್ಲಿ ಎಚ್ಚರಿಕೆ ಸಂದೇಶ ರವಾನಿಸುತ್ತಾರೆ; ಇಡೀ ಸಭೆ ಅದನ್ನು ಚಪ್ಪಾಳೆಯ ಮೂಲಕ ಅನುಮೋದಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ನೆರೆದಿದ್ದ ಟಿವಿ ಕ್ಯಾಮೆರಾಗಳ ಹಿಂದೆ ನಿಂತಿರುವವರೂ ಹೌದೆನ್ನುವಂತೆ ಮುಗುಳ್ನಗುತ್ತಾರೆ. ಇದು ನಮ್ಮ ಮಾಧ್ಯಮಗಳು ಯಾವ ಮಟ್ಟಕ್ಕೆ ಇಳಿದಿವೆ ಎಂಬುದನ್ನು ತೋರಿಸುವ ಒಂದು ನಿದರ್ಶನವಾಗಿದೆ. ಇಲ್ಲದಿದ್ದರೆ, ಮುಖ್ಯಮಂತ್ರಿಯ ಮಾತನ್ನು ಸ್ಥಳದಲ್ಲೇ ಖಂಡಿಸಬಲ್ಲ ದಿಟ್ಟತೆ ಇದ್ದ ಸ್ವಾತಂತ್ರ್ಯ ಹೋರಾಟಗಾರರು ಅಲ್ಲಿದ್ದರು. ಅವರಿಗೂ ಮಾಧ್ಯಮಗಳ ಕುರಿತು ಅದೇ ಅಭಿಪ್ರಾಯ ಇತ್ತು ಎಂಬುದು ಆ ಸಭೆಯಲ್ಲಿ ಸ್ಪಷ್ಟವಾಗಿ ಎದ್ದು ಕಂಡಿತು. ಜೂನ್ 11ರಂದು ಗಾಂಧಿ ಸ್ಮಾರಕ ಸಂಸ್ಥೆಯು ಮುಖ್ಯಮಂತ್ರಿಯವರನ್ನು ಕರೆದು ಅಭಿನಂದಿಸುವ ಕಾರ್ಯಕ್ರಮ ನಡೆಸಿತು. ಅಲ್ಲಿ ಕುಮಾರಸ್ವಾಮಿಯವರು ಆಡಿದ ಮಾತುಗಳನ್ನು ಯಥಾವತ್ತಾಗಿ ಮುಂದಿಟ್ಟರೆ ವಿಚಾರ ಮತ್ತಷ್ಟು ಸ್ಪಷ್ಟವಾಗುತ್ತದೆ.
‘ಇಲ್ಲಿ ಸೇರಿರುವ ಮಾಧ್ಯಮಗಳಿಗೂ ನಾನು ಒಂದು ಸಂದೇಶ ಕೊಡಬಯಸುತ್ತೇನೆ. ನಮ್ಮ ಸರ್ಕಾರ ತಪ್ಪು ಮಾಡಿದರೆ ಅದನ್ನು ಟೀಕೆ ಮಾಡಿ, ಕಟುವಾದ ಶಬ್ದಗಳಲ್ಲೇ ಅದನ್ನು ಹೇಳಿ ಪರವಾಗಿಲ್ಲ. ಆದರೆ, ನೀವು ಮಾಡುತ್ತಿರುವುದೇನು? ಅಸತ್ಯವನ್ನು ಹೇಳುತ್ತಿದ್ದೀರಿ. ಅದನ್ನು ಮಾಡಬೇಡಿ, ಜನರ ಪರವಾಗಿ ಕೆಲಸ ಮಾಡುವುದಕ್ಕೆ ಸಹಕಾರ ಕೊಡಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.
ಇತ್ತೀಚೆಗೆ ಮಂಗಳೂರಿನಲ್ಲಿ ವಿಪರೀತ ಮಳೆ ಬಂದ ಎರಡು ದಿನಗಳ ನಂತರ ಒಂದು ಕಡೆ ಶವ ಸಿಕ್ಕಿತು. ಆಗ ಕೆಲವು ಚಾನೆಲ್‍ಗಳು ಕೊಲೆ ಶಂಕೆ ಎಂದು ಸುದ್ದಿ ಮಾಡಿದವು. ಆ ವ್ಯಕ್ತಿಯ ಕುಟುಂಬದವರೇ, ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ; ಎರಡು ದಿನಗಳ ಕೆಳಗೆ ಮನೆಯಿಂದ ಕಣ್ಮರೆಯಾಗಿದ್ದ. ನಮಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿದ್ದಾರೆ. ಆದರೂ, ಅದನ್ನೊಂದು ಸೆನ್ಸೇಷನಲ್ ವಿಷಯ ಮಾಡೋಕೆ ನೀವು ಹೊರಟಿದ್ದೀರಿ. ಇದಕ್ಕೇ ಕಾಯುತ್ತಿರುವ ಹಿಂದೂ ಕಾರ್ಯಕರ್ತನ ಕೊಲೆ ಅಂತ ಬಿಜೆಪಿಯವರು ಕೂಗಾಡಲಿ ಅಂತ. ನಿಮ್ಮ ಉದ್ದೇಶ ಏನು? ನಿಮಗೆ ಟಿಆರ್‍ಪಿಯೇ ಮುಖ್ಯವಾ? ಬೆಂಕಿ ಬಿದ್ದರೂ ಪರವಾಗಿಲ್ವಾ? ಹಾಗಾಗಿಯೇ ನಾನು ಆ ಚಾನೆಲ್‍ನ ಮುಖ್ಯಸ್ಥರಿಗೆ ಮತ್ತು ವರದಿಗಾರನಿಗೆ ನೋಟೀಸ್ ಕೊಡಿ, ಕೊಲೆಯ ಕುರಿತು ಅವರಿಗೇನೋ ಮಾಹಿತಿ ಇರಬೇಕು ಅಂತ ಹೇಳಿದ್ದೇನೆ. ಈ ಥರ ನೀವು ನಡೆದುಕೋಬಾರದು ಎಂದು ನಾನು ಹೇಳಲು ಬಯಸ್ತೀನಿ.
ಇನ್ನೂ ಒಂದು ಸುದ್ದಿಯನ್ನು ನಾನು ಕೇಳಿದೆ. ದೇವೇಗೌಡರಿಗೆ ಸರ್ಕಾರದಲ್ಲಿ ಮೂಗು ತೂರಿಸಬೇಡಿ, ಮನೆಯಲ್ಲೇ ಕೂರಿ ಎಂದು ಕುಮಾರಸ್ವಾಮಿ ತಾಕೀತು ಅಂತ. ನೀವು ಏನು ತಿಳಿದುಕೊಂಡಿದ್ದೀರಿ? ದೇವೇಗೌಡರನ್ನು ಏನೆಂದುಕೊಂಡಿದ್ದೀರಿ? ಅವರು ಒಬ್ಬರು ನಾಡಿನ ಹಿರಿಯ ರಾಜಕಾರಣಿ. ನನ್ನ ತಂದೆ ಅಂತ ಮಾತ್ರ ಅಲ್ಲದೇ, ಅವರ ಅನುಭವದ ಅನುಕೂಲ ಪಡೆದುಕೊಳ್ಳಬೇಕು ಅಂತಾನಾದ್ರೂ ನನಗೆ ಇರಲ್ವಾ? ಈ ಥರಾ ಒಂದು ಸುದ್ದಿ ಮಾಡಬಹುದಾ?
ನೀವು ಸರ್ಕಾರ ನಡೆಸೋಕೆ ಸಹಕಾರ ಕೊಡದೇ ಇದ್ದರೆ, ನಾನೊಬ್ಬನೇ ಎಲ್ಲವನ್ನೂ ಮಾಡೋಕಾಗುತ್ತಾ? ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಪಲಾಯನವಾದಿಯಲ್ಲ. ಮಾಡಿಯೇ ಮಾಡ್ತೀನಿ. ಆದರೆ ಅದಕ್ಕೆ 15 ದಿನ ಸಮಯ ಕೊಡಿ ಎಂದಿದ್ದೀನಿ. ಇದನ್ನೇ ದೊಡ್ಡ ವಿಷಯ ಮಾಡ್ತೀರಲ್ವಾ? ಸುಮ್‍ಸುಮ್ನೆ 20 ಜನ ಶಾಸಕರ ಬಂಡಾಯ; ಅವರು ಹೊರಗೆ ಹೋಗ್ತಾರೆ ಅಂತ ಸುದ್ದಿ ಮಾಡ್ತೀರ. ಇಪ್ಪತ್ತೂ ಇಲ್ಲ, ಒಬ್ಬರೂ ಇಲ್ಲ. ಸಮ್ಮಿಶ್ರ ಸರ್ಕಾರ ನಡೆಸುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತೀವಿ. ಆದ್ರೆ ನಿಮ್ಮ ಉದ್ದೇಶವೇ ಅರ್ಥವಾಗ್ತಿಲ್ಲ. ನೀವ್ಯಾರೂ ಸತ್ಯ ಹರಿಶ್ಚಂದ್ರರಲ್ಲ, ಅದು ನನಗ್ಗೊತ್ತು.
ನೀವು ಎಂಥವರೆಂದ್ರೆ, ನೋಡೀ.. ನಾನಿನ್ನೂ ಜನತಾದರ್ಶನ ಅಧಿಕೃತವಾಗಿ ಶುರೂನೇ ಮಾಡಿಲ್ಲ. ಆದರೂ ಜನರು ಕುಮಾರಸ್ವಾಮಿ ಮನೆಗೆ ಹೋದ್ರೆ ಏನೋ ಕೆಲಸ ಆಗುತ್ತೆ ಅಂತ ಬರ್ತಾರೆ. ಅವತ್ತು ನಾವು ಬೆಂಗಳೂರಿನಲ್ಲಿ ಇರಲಿಲ್ಲ. ಜೆಪಿ ನಗರದ ಮನೆಗೆ ಪಾಪ ಕೆಲವರು ಹೋಗಿದ್ದಾರೆ. ಅಲ್ಲಿ ಸಿಎಂ ಇಲ್ಲಾ… ಕೃಷ್ಣಾಗೆ ಹೋಗಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ಕುಮಾರಸ್ವಾಮಿಯವರೇ ಎರಡನೇ ದಿನಕ್ಕೇ ಮುಗಿದು ಹೋಯ್ತಾ ಜನತಾದರ್ಶನಾ ಅಂತ ಸುದ್ದಿ. ಭಾಳ ದೂರದಿಂದ ಒಬ್ಬರು ಹೆಣ್ಣು ಮಗಳು ಬಂದಿದ್ದಾರೆ, ಅವರ ಹತ್ರ ಪಾಪ ಬಸ್‍ಚಾರ್ಜ್‍ಗೆ ದುಡ್ಡಿಲ್ಲ. ಇದಕ್ಕೇನು ಮಾಡ್ತೀರಾ ಅಂತ ಟೀವಿಯಲ್ಲಿ ಕೇಳ್ತಿದ್ದಾರೆ. ನಾನು ಹೇಳೋದು, ಸ್ವಲ್ಪ ಮಾನವೀಯತೆಯಿಂದ ವರ್ತಿಸಿ. ಆ ವರದಿಗಾರ ತನ್ನ ಜೇಬಿನಿಂದ 50 ರೂ. ಕೊಟ್ಟು ಆಕೆಗೆ ಕಳಿಸಿ, ಆ ಮೇಲೆ ಆಕೆ ಹತ್ರ ದುಡ್ಡಿರ್ಲಿಲ್ಲ ಕೊಟ್ಟಿದೀನಿ ಕೊಡಿ ಅಂದಿದ್ರೆ ಕೊಡ್ತಿದ್ದೆ. ಅದನ್ನು ಬಿಟ್ಟು ಈ ಥರಾ ಸ್ಟೋರಿ ಮಾಡಿ ಟೀಕೆ ಮಾಡಿದ್ರೆ ಏನು ಮಾಡೋಕಾಗುತ್ತೆ?
ಇನ್ನೂ ಒಂದು ಸಾರಿ ಕೇಳ್ತಿದ್ದೀನಿ. ಸಹಕಾರ ಕೊಡಿ, ಜನರ ಪರವಾಗಿ ಕೆಲಸ ಮಾಡ್ತೀವಿ.’
ಕುಮಾರಸ್ವಾಮಿಯವರು ಮನವಿಯನ್ನೇ ಮಾಡಿದರು. ಆದರೆ, ಅದರಲ್ಲಿ ಒಂದು ಸಂದೇಶವೂ ಇತ್ತು. ಅದು ಎಚ್ಚರಿಕೆ. ಇದಕ್ಕೆ ಮುಂಚೆಯೇ ಒಂದು ಸಾರಿ ಹೇಳಿದ್ದರು. ‘ನಾನು ವಾಸ್ತವಾಂಶ ಏನು ಹೇಳ್ತೀನಿ ಅದನ್ನು ರಿಪೋರ್ಟ್ ಮಾಡಿ, ಟ್ವಿಸ್ಟ್ ಮಾಡಿ ಸುದ್ದಿ ಮಾಡಬೇಡಿ. ನಾನು ಏನೋ ಒಂದು ಹೇಳಿರೋದನ್ನು ನೀವು ಯಾಕೆ ತಿರುಚುತ್ತೀರಿ? ನಿಮಗೆ ನಿಮ್ಮಿಷ್ಟ ಬಂದಂತೆಯೇ ಹೇಳಬೇಕೆಂದಾದರೆ, ನಿಮ್ಮ ಸ್ಟೋರಿ ಮಾಡಿಕೊಳ್ಳಿ. ನನ್ನ ಮಾತನ್ನು ತಿರುಚಿ, ಮಿಸ್‍ಯೂಸ್ ಮಾಡಬೇಡಿ. ದಿನಕ್ಕೆ ಹತ್ತತ್ತು ಸಾರಿ ನೀವು ಮೈಕ್ ಹಿಡಿದುಕೊಂಡು ಬಂದರೆ ಏನು ಹೇಳೋದಿರುತ್ತೆ? ಏನಾದ್ರೂ ಪಾಲಿಸಿ ಡಿಸಿಷನ್ ತಗೊಂಡರೆ ಆಗ ಮಾತಾಡಬಹುದು. ಅದನ್ನು ಬಿಟ್ಟು ನೀವೇ ಎಲ್ಲಾ ಮಾಡ್ತೀರಿ. ಮಂತ್ರಿಗಳ್ಯಾರು ಅಂತಲೂ ತೀರ್ಮಾನಿಸ್ತೀರಿ. ಖಾತೇನೂ ನೀವೇ ಹಂಚ್ತೀರಿ. ಇಂಥದನ್ನೆಲ್ಲಾ ನಿಲ್ಲಿಸಿ.’
ಅತ್ಯಂತ ಪಕ್ಷಪಾತದಿಂದ ಸುದ್ದಿ ಮಾಡುವ, ಖಚಿತವಾಗಿ ಬಿಜೆಪಿ ಪರವಾಗಿ ನಿಂತಿರುವ ಕೆಲವು ಚಾನೆಲ್‍ಗಳು ಮತ್ತು ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದು, ಕುಮಾರಸ್ವಾಮಿಯವರನ್ನು ದುರ್ಬಲಗೊಳಿಸಲು ಹೋದರೆ ಮತ್ತೂ ಕೆಳಗೆ ಕುಸಿಯುತ್ತವೆ. ನೇರವಾಗಿ ಮಾತನಾಡುವ, ಜನಸಾಮಾನ್ಯರ ಲಾಜಿಕ್‍ಅನ್ನು ಸಹಜವಾಗಿ ಬಳಸುವ ಕುಮಾರಸ್ವಾಮಿಯವರ ಮಾತೇ ಜನರಿಗೆ ಹೆಚ್ಚು ಸರಿ ಎನಿಸುವ ಸಾಧ್ಯತೆ ಇದೆ. ಈಗಲಾದರೂ ಸದರಿ ಮಾಧ್ಯಮಗಳು ತಿದ್ದಿಕೊಂಡರೆ, ಪಾತಾಳ ಮುಟ್ಟಿರುವ ಪತ್ರಿಕೋದ್ಯಮದ ಘನತೆ ಸ್ವಲ್ಪ ಮಟ್ಟಿಗಾದರೂ ಉಳಿದುಕೊಂಡೀತು.
ಇವೇ ಮಾಧ್ಯಮಗಳು ಸತತವಾಗಿ 5 ವರ್ಷಗಳ ಕಾಲ ಸಿದ್ದರಾಮಯ್ಯ ವಿರೋಧಿ ಪ್ರಚಾರವನ್ನು ನಡೆಸಿದವು. ಡಿ.ಕೆ.ರವಿ ಪ್ರಕರಣವೂ ಸೇರಿದಂತೆ ಹಲವು ಸಾರಿ ಸುಳ್ಳು ಎಂದು ಗೊತ್ತಿದ್ದರೂ, ಒಂದೇ ಸಮನೆ ಅಪಪ್ರಚಾರಕ್ಕಿಳಿದವು. ನಂತರ ಬಿಜೆಪಿ ಸರ್ಕಾರದ ಅಧೀನದಲ್ಲಿದ್ದ ಸಿಬಿಐ ನಡೆಸಿದ ತನಿಖೆಯೂ ಅದನ್ನು ಆತ್ಮಹತ್ಯೆ ಎಂದು ವರದಿ ನೀಡಿದಾಗ, ಅದಕ್ಕೆ ಪ್ರಚಾರ ನೀಡಲಿಲ್ಲ. ಈ ಪ್ರಮಾಣದ ಏಕಪಕ್ಷೀಯತೆ ಸಾಧ್ಯವಾಗಿರುವುದು ಬಿಜೆಪಿ ಪರಿವಾರದ ಮತೀಯತೆಯನ್ನು ಮೈಗೂಡಿಸಿಕೊಂಡ ವರ್ಗವೇ ಇಲ್ಲೆಲ್ಲಾ ಹಿಡಿತ ಸಾಧಿಸಿರುವುದರಿಂದ. ಆದರೆ ಸಿದ್ದರಾಮಯ್ಯನವರು ಒಮ್ಮೆಯೂ ಮಾಧ್ಯಮಗಳಿಗೆ ಎಚ್ಚರಿಕೆ ನೀಡುವ ಅಥವಾ ಟೀಕೆ ಮಾಡುವ ಸಾಹಸಕ್ಕೆ ಕೈ ಹಾಕಲಿಲ್ಲ. ಇದರಲ್ಲಿ ಒಟ್ಟಾರೆ ಮಾಧ್ಯಮ ಸ್ವಾತಂತ್ರ್ಯದ ಕುರಿತಂತೆ ಅವರ ನಿಲುವು ಒಂದು ಪಾತ್ರ ವಹಿಸಿದ್ದರೆ, ಜಾತಿಯೂ ಇನ್ನೊಂದು ಕಾರಣವಾಗಿದೆ. ಕುಮಾರಸ್ವಾಮಿಯವರ ಪರವಾಗಿ ಒಂದು ಬಲಾಢ್ಯವಾದ ಜಾತಿಯು ನಿಂತಿರುವುದರಿಂದ, ಮಾಧ್ಯಮಗಳನ್ನೂ ಎದುರಿಸಿ ನಿಲ್ಲಬಲ್ಲೆ ಎನ್ನುವ ಧೈರ್ಯ ಅವರಿಗಿದೆ. ಇದನ್ನು ನಮ್ಮ ಸಾಮಾಜಿಕ ವ್ಯವಸ್ಥೆಯ ದುರಂತ ಎನ್ನಬೇಕೋ, ಅದೇ ಜಾತಿಯ ಕಾರಣದಿಂದ ಮತಾಂಧ ಶಕ್ತಿಗಳ ಪರವಾಗಿ ನಿಂತಿರುವ ಮಾಧ್ಯಮಗಳಿಗೆ ಎಚ್ಚರಿಕೆ ಕೊಟ್ಟಿದ್ದಕ್ಕೆ ಸಂತಸ ಕೊಡಬೇಕೋ ತಿಳಿಯದ ವಿಪರ್ಯಾಸದ ಸ್ಥಿತಿಯಲ್ಲಿ ನಾವಿದ್ದೇವೆ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...