ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಹತ್ಯೆಯನ್ನು ನಿಲ್ಲಿಸುವಂತೆ ಯುಎನ್ ಸೆಕ್ಯುರಿಟಿ ಕೌನ್ಸಿಲ್ (ಯುಎನ್‌ಎಸ್‌ಸಿ) ಮಂಡಿಸಿದ ಕರಡು ನಿರ್ಣಯವನ್ನು ಮತ್ತೊಮ್ಮೆ ವೀಟೋ ಅಧಿಕಾರವನ್ನು ಬಳಕೆ ಮಾಡುವ ಮೂಲಕ ಅಮೆರಿಕ ತಡೆದಿದ್ದು, ಇದಕ್ಕೆ ಮಿತ್ರರಾಷ್ಟ್ರಗಳು ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾದ ಖಂಡನೆ ವ್ಯಕ್ತವಾಗಿದೆ.
ಗಾಝಾದಲ್ಲಿ ಕದನ ವಿರಾಮವನ್ನು ಒತ್ತಾಯಿಸುವ ಯುಎನ್‌ಎಸ್‌ಸಿ ಮಂಡಿಸಿದ ಮೂರನೇ ನಿರ್ಣಯವನ್ನು ಕೂಡ ಅಮೆರಿಕ ವಿಟೋ ಅಧಿಕಾರವನ್ನು ಬಳಸಿ ತಡೆದಿದೆ. ಇದು ಅಮೆರಿಕಾದ ಅಮಾನವೀಯ ಕೃತ್ಯ, ಇಸ್ರೇಲ್ ನಡೆಸುತ್ತಿರುವ ನರಮೇಧಕ್ಕೆ ಅಮೆರಿಕಾ ಪಾಲುದಾರವಾಗಿದೆ ಎಂದು ವಿಶ್ವದ ಬಹುತೇಖ ರಾಷ್ಟ್ರಗಳು ಖಂಡನೆಯನ್ನು ವ್ಯಕ್ತಪಡಿಸಿದೆ.
ಅಮೆರಿಕ ನಿನ್ನೆ ಪ್ಯಾಲೆಸ್ತೀನ್ ಎನ್‌ಕ್ಲೇವ್‌ನಿಂದ ಎಲ್ಲಾ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ತಾತ್ಕಾಲಿಕ ಕದನ ವಿರಾಮವನ್ನು ಬೆಂಬಲಿಸುವ ನಿರ್ಣಯವನ್ನು ಬೆಂಬಲಿಸಿತ್ತು. ಇದರ ಬೆನ್ನಲ್ಲಿ ಅಮೆರಿಕ ಮತ್ತೆ ಉಲ್ಟಾ ಹೊಡೆದಿದೆ. ಗಾಝಾದಲ್ಲಿ 29,000ಕ್ಕೂ ಅಧಿಕ ಜನರ ಹತ್ಯೆಯ ಬೆನ್ನಲ್ಲಿ ಸಂಘರ್ಷವನ್ನು ಕೊನೆಗೊಳಿಸಲು ಜಗತ್ತಿನಾದ್ಯಂತದ ದೇಶಗಳು ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದೆ. ಯುಎನ್ ‘ಕದನ ವಿರಾಮ’ದ ಕುರಿತ ನಿರ್ಣಯಕ್ಕೆ 15-ಸದಸ್ಯ ಮಂಡಳಿಯಲ್ಲಿನ ಮತವು 13-1 ಆಗಿದ್ದು, ಯುನೈಟೆಡ್ ಕಿಂಗ್‌ಡಮ್ ಮತಗಳಿಂದ ದೂರ ಉಳಿದಿತ್ತು. ಅಮೆರಿಕಾ ವೀಟೋ ಅಧಿಕಾರವನ್ನು ಬಳಸಿ ನಿರ್ಣಯಕ್ಕೆ ವಿರೋಧವನ್ನು ವ್ಯಕ್ತಪಡಿಸಿತ್ತು.
ಅಮೆರಿಕ ನಡೆಗೆ ಚೀನಾ ವಿರೋಧ:
ಯುಎಸ್ ಕದನ ವಿರಾಮವನ್ನು ಬೆಂಬಲಿಸದ ಹಿನ್ನೆಲೆ, ಚೀನಾದ ರಾಯಭಾರಿ ಜಾಂಗ್ ಜುನ್, ಯುಎಸ್ ಬಗ್ಗೆ ಬಲವಾದ ನಿರಾಶೆ ಮತ್ತು ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಯುಎಸ್‌ನ ವೀಟೋ ತಪ್ಪು ಸಂದೇಶವನ್ನು ಕಳುಹಿಸುತ್ತದೆ, ಗಾಝಾದಲ್ಲಿನ ಪರಿಸ್ಥಿತಿಯನ್ನು ಹೆಚ್ಚು ಅಪಾಯಕಾರಿ ಸ್ಥಿತಿಗೆ ತಳ್ಳುತ್ತದೆ ಎಂದು ಜಾಂಗ್ ಹೇಳಿದ್ದಾರೆ. ಗಾಝಾದಲ್ಲಿ ಕದನ ವಿರಾಮಕ್ಕೆ ಆಕ್ಷೇಪಣೆಯು ಮುಂದುವರಿದ ಹತ್ಯೆಗೆ ಹಸಿರು ನಿಶಾನೆ ತೋರುವುದಕ್ಕಿಂತ ಭಿನ್ನವಾಗಿಲ್ಲ. ಗಾಝಾದಲ್ಲಿನ ಯುದ್ಧವನ್ನು ತಡೆಯುವ ಮೂಲಕ ಮಾತ್ರ ಇಡೀ ಪ್ರದೇಶವನ್ನು ಆವರಿಸಿರುವ ನರಕದ ಬೆಂಕಿಯನ್ನು ಜಗತ್ತು ತಡೆಯಬಹುದು ಎಂದು ಚೀನಾ ಹೇಳಿದೆ.
ರಷ್ಯಾ
ಗಾಝಾದಲ್ಲಿ ಕದನ ವಿರಾಮಕ್ಕೆ ಯುಎಸ್ ವೀಟೋ ಅಧಿಕಾರವನ್ನು ಬಳಕೆ ಮಾಡಿ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಕ್ಕೆ ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ಅವರು ಯುಎಸ್ ವೀಟೋ ಅಧಿಕಾರ ಬಳಕೆ ಭದ್ರತಾ ಮಂಡಳಿಯ ಇತಿಹಾಸದಲ್ಲಿ ಮತ್ತೊಂದು ಕಪ್ಪು ಚುಕ್ಕಿ ಎಂದು ಹೇಳಿದ್ದಾರೆ. ಇಸ್ರೇಲ್ ಗಾಝಾದಲ್ಲಿ ಅಮಾನವೀಯ ಯೋಜನೆಗಳನ್ನು ಪೂರ್ಣಗೊಳಿಸಲು ಅಮೆರಿಕ ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಫ್ರಾನ್ಸ್
ಫ್ರಾನ್ಸ್‌ನ ಯುಎನ್ ರಾಯಭಾರಿ ನಿಕೋಲಸ್ ಡಿ ರಿವಿಯೆರ್ ಅವರು ಗಾಝಾದಲ್ಲಿನ ವಿನಾಶಕಾರಿ ಪರಿಸ್ಥಿತಿಯನ್ನು ಗಮನಿಸಿದರೂ, ಯುಎಸ್ ಕದನ ವಿರಾಮ ನಿರ್ಣಯವನ್ನು ಅಂಗೀಕರಿಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ನಿರ್ಣಯಕ್ಕೆ ಮತ ಹಾಕಿದ ಫ್ರಾನ್ಸ್, ಎಲ್ಲಾ ಬಂಧಿತರನ್ನು ಬಿಡುಗಡೆ ಮಾಡಲು ಮತ್ತು ಕದನ ವಿರಾಮವನ್ನು ತಕ್ಷಣ ಕಾರ್ಯಗತಗೊಳಿಸಲು ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ.
ಅಲ್ಜೀರಿಯಾ
ಅಲ್ಜೀರಿಯಾದ ರಾಯಭಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಯುಎನ್‌ಎಸ್‌ಸಿ ಮತ್ತೊಮ್ಮೆ ವಿಫಲವಾಗಿದೆ. ಈ ಕ್ರಮವು ಒಟ್ಟಾರೆಯಾಗಿ ಮಧ್ಯಪ್ರಾಚ್ಯಕ್ಕೆ ಆಳವಾದ ಪರಿಣಾಮಗಳನ್ನು ಉಂಟುಮಾಡಬಹುದು. ಪ್ಯಾಲೆಸ್ತೀನ್ ನಾಗರಿಕರನ್ನು ಹತ್ಯೆಯನ್ನು ಕೊನೆಗೊಳಿಸಲು ಅಂತರಾಷ್ಟ್ರೀಯ ಸಮುದಾಯವು ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವ ಮೂಲಕ ಪ್ರತಿಕ್ರಿಯಿಸಬೇಕು. ಅಂತಹ ಕರೆಗಳಿಗೆ ಅಡ್ಡಿಪಡಿಸುವವರೆಲ್ಲರೂ ತಮ್ಮ ನೀತಿಗಳು ಪರಿಶೀಲಿಸಬೇಕು. ಏಕೆಂದರೆ ಇಂದಿನ ತಪ್ಪು ನಿರ್ಧಾರಗಳು ನಾಳೆ ಬೆಲೆ ತೆರವುಂತೆ ಮಾಡುತ್ತದೆ. ಆದ್ದರಿಂದ ನಿಮ್ಮನ್ನು ಕೇಳಿಕೊಳ್ಳಿ, ನಿಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳಿ. ಇಂದು ನಿಮ್ಮ ನಿರ್ಧಾರಗಳು ಏನನ್ನು ಉಂಟುಮಾಡುತ್ತವೆ? ಇತಿಹಾಸವು ನಿಮ್ಮನ್ನು ಏನೆಂದು ಹೇಳುತ್ತದೆ ಎಂದು ಅಮೆರಿಕದ ನಿರ್ಧಾರವನ್ನು ಉಲ್ಲೇಖಿಸಿ ಅಲ್ಜೀರಿಯಾ ಹೇಳಿದೆ.
ಹಮಾಸ್
ಅಲ್ಜೀರಿಯಾದ ಕರಡು ನಿರ್ಣಯವನ್ನು ನಿರ್ಬಂಧಿಸುವ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ನಿರ್ಧಾರವು, ಇಸ್ರೇಲ್ ಆಕ್ರಮಣದ ಮುಂದುವರಿಕೆಗೆ ಸಹಾಯವನ್ನು ಮಾಡುತ್ತದೆ. ಇದು ಪ್ಯಾಲೇಸ್ತೀನ್ ನಾಗರಿಕರನ್ನು “ಕೊಲ್ಲುವ ಮತ್ತು ಸ್ಥಳಾಂತರಿಸುವ” ಗುರಿಯನ್ನು ಹೊಂದಿದೆ ಎಂದು ಹಮಾಸ್ ಹೇಳಿದೆ.
ಪ್ಯಾಲೆಸ್ತೀನ್
ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಕಚೇರಿಯು ಯುಎಸ್ ವೀಟೋ ಅಂತರಾಷ್ಟ್ರೀಯ ಸಮುದಾಯವನ್ನು ಧಿಕ್ಕರಿಸಿರುವ ಬೆಳವಣಿಗೆಯಾಗಿದೆ ಮತ್ತು ಇಸ್ರೇಲ್‌ಗೆ ಗಾಝಾದ ಜನರ ವಿರುದ್ಧ ತನ್ನ ಆಕ್ರಮಣವನ್ನು ಮುಂದುವರೆಸಲು ಮತ್ತು ರಫಾಹ್ ಮೇಲಿನ ದಾಳಿಗೆ ಹಸಿರು ನಿಶಾನೆ ತೋರಿದಂತಾಗಿದೆ ಎಂದು ಹೇಳಿದೆ.
ಗಾಝಾದಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ವಿರುದ್ಧ ಇಸ್ರೇಲ್‌ನ “ಅನಾಗರಿಕ ದಾಳಿ” ಗಳಿಗೆ “ಬೆಂಬಲಿಸುವ ಮತ್ತು ರಕ್ಷಣೆ ನೀಡುವ” ಜವಾಬ್ದಾರಿಯನ್ನು US ಆಡಳಿತ ಹೊಂದಿದೆ. ಈ ನೀತಿಯು ನರಮೇಧ ಮತ್ತು ಜನಾಂಗೀಯ ಹತ್ಯಾಕಾಂಡದ ಅಪರಾಧಗಳಲ್ಲಿ ಇಸ್ರೇಲ್ ಪಡೆಗಳು ಮಾಡುತ್ತಿರುವ ಯುದ್ಧ ಅಪರಾಧಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಪಾಲುದಾರನನ್ನಾಗಿ ಮಾಡುತ್ತದೆ ಎಂದು ಹೇಳಿದೆ.
ಕತಾರ್
ಕತಾರ್‌ನ ಯುಎನ್ ರಾಯಭಾರಿ ಅಲ್ಯಾ ಅಹ್ಮದ್ ಸೈಫ್ ಅಲ್ ಥಾನಿ ಅವರು ಅಲ್ಜೀರಿಯಾ-ಕರಡು ನಿರ್ಣಯವನ್ನು ಅಂಗೀಕರಿಸುವಲ್ಲಿ ಯುಎನ್‌ಎಸ್‌ಸಿ ವಿಫಲವಾದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಗಾಝಾದಲ್ಲಿ ಕದನ ವಿರಾಮಕ್ಕೆ ಪ್ರಯತ್ನಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದೆ.
ಸೌದಿ ಅರೇಬಿಯಾ
ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯವು ಅಮೆರಿಕ ವೀಟೋದ ಅಧಿಕಾರ ಬಳಸಿ ನಿರ್ಣಯವನ್ನು ವಿರೋಧಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದೆ. ನಾರ್ವೆ ಕೂಡ ತಕ್ಷಣದ ಮಾನವೀಯ ಕದನ ವಿರಾಮದ ಕುರಿತು ನಿರ್ಣಯವನ್ನು ಅಂಗೀಕರಿಸಲು ಯುಎನ್ ಕೌನ್ಸಿಲ್‌ಗೆ ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದೆ ಮತ್ತು ಗಾಜಾದಲ್ಲಿ ಭಯಾನಕತೆಯನ್ನು ಕೊನೆಗೊಳಿಸುವುದು ಅತ್ಯಗತ್ಯ ಎಂದು ಹೇಳಿದೆ.
ಇದನ್ನು ಓದಿ: ಹೆಚ್ಚುವರಿ ಹಣ ಬೇಕಾದರೆ ಸುಪ್ರೀಂಕೋರ್ಟ್‌ನಿಂದ ಮೊಕದ್ದಮೆ ಹಿಂಪಡೆಯಿರಿ: ಕೇರಳ ಸರಕಾರಕ್ಕೆ ಬ್ಲಾಕ್‌ಮೇಲ್ ಮಾಡಿದ ಕೇಂದ್ರ?


