ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಯನ್ನು ಸುಖ್ವಿಂದರ್ ಸಿಂಗ್ ಸುಖು ತಳ್ಳಿ ಹಾಕಿದ್ದಾರೆ. ನಾನು ಹೋರಾಟಗಾರ, ಹೋರಾಟವನ್ನು ಮುಂದುವರೆಸುತ್ತೇನೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಐದು ವರ್ಷಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಲಿದೆ ಎಂದಿದ್ದಾರೆ.
ರಾಜ್ಯಸಭೆ ಚುನಾವಣೆಯ ಬಳಿಕ ಹಿಮಾಚಲ ಪ್ರದೇಶ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಭಿಪ್ರಾಯ ಉಂಟಾಗಿದೆ. ಈ ಬೆನ್ನಲ್ಲೇ ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಅವರ ಜೊತೆ ಆರು ಶಾಸಕರು ಕೂಡ ರಾಜೀನಾಮೆ ನೀಡುವ ಸಾಧ್ಯತೆ ಇದೆ ಹೇಳಲಾಗ್ತಿದೆ. ಆದರೆ, ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ಸುದ್ದಿಯನ್ನು ನಿರಾಕರಿಸಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.
ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯ ನಡುವೆ ಸಿಎಂ ಸುಖ್ವಿಂದರ್ ಸಿಂಗ್ ಕೂಡ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಆದರೆ, ಸುಖ್ವಿಂದರ್ ಸಿಂಗ್ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ.
ಹಿಮಾಚಲ ಕಾಂಗ್ರೆಸ್ ಸರ್ಕಾರದಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಹಿಮಾಚಲ ಕಾಂಗ್ರೆಸ್ ವೀಕ್ಷಕ ಭೂಪಿಂದರ್ ಸಿಂಗ್ ಹೂಡಾ ಬುಧವಾರ ಶಿಮ್ಲಾಕ್ಕೆ ದೌಡಾಯಿಸಿದ್ದಾರೆ. ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ನಿರೀಕ್ಷೆ ಇದೆ. ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿರುವ ಮೂಲಗಳ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರೊಂದಿಗೆ ಹಿಮಾಚಲದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.
ನಿನ್ನೆ (ಫೆ.27) ಹಿಮಾಚಲದ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಒಟ್ಟು 68 ಸದಸ್ಯ ಬಲದ ಹಿಮಾಚಲ ಪ್ರದೇಶ ಸದನದಲ್ಲಿ ಕಾಂಗ್ರೆಸ್‌ನ 40, ಬಿಜೆಪಿಯ 25 ಮತ್ತು ಮೂವರು ಪಕ್ಷೇತರ ಶಾಸಕರಿದ್ದಾರೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಕಣಕ್ಕಿಳಿಸಿತ್ತು. ಬಿಜೆಪಿಯು ಸಂಖ್ಯಾತ್ಮಕವಾಗಿ ಅನನುಕೂಲವಾಗಿದ್ದರೂ ಸಹ, ಹಿರಿಯ ರಾಜಕಾರಣಿ ಹರ್ಷ್ ಮಹಾಜನ್ ಅವರನ್ನು ಕಾಂಗ್ರೆಸ್ ವಿರುದ್ಧ ಕಣಕ್ಕಿಳಿಸುವ ಮೂಲಕ ಸ್ಪರ್ಧೆಗೆ ಒತ್ತಾಯಿಸಿತ್ತು.
ಮತದಾನಕ್ಕೆ ಮುನ್ನ ಮುಖ್ಯಮಂತ್ರಿ ಸುಖು ಅವರು, ಕಾಂಗ್ರೆಸ್ 40 ಶಾಸಕರನ್ನು ಹೊಂದಿದೆ. ಯಾರೂ ಮಾರಾಟವಾಗದಿದ್ದರೆ ಎಲ್ಲಾ ಮತಗಳನ್ನು ಪಡೆಯುತ್ತದೆ ಎಂದು ಹೇಳಿದ್ದರು. ಬಿಜೆಪಿಗೆ ಪ್ಲಾನ್ ಇದೆ ಎಂಬ ಕಾಂಗ್ರೆಸ್‌ನ ಭಯವನ್ನು ಅವರು ಒತ್ತಿ ಹೇಳಿದ್ದರು. ಅದರಂತೆ ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಆ ಬಳಿಕ ಕಾಂಗ್ರೆಸ್‌ನಲ್ಲಿ ಆಂತರಿಕ ಬಿಕ್ಕಟ್ಟು ಉಂಟಾಗಿದೆ.
ಇಂದು ಹಿಮಾಚಲ ವಿಧಾನಸಭೆಯಿಂದ 15 ಬಿಜೆಪಿ ಶಾಸಕರನ್ನು ಘೋಷಣೆಗಳನ್ನು ಕೂಗಿದ ಮತ್ತು ದುರ್ವರ್ತನೆ ಆರೋಪದ ಮೇಲೆ ಉಚ್ಚಾಟಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಬಿಕ್ಕಟ್ಟಿನ ನಡುವೆ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ : ಹಿಮಾಚಲ ರಾಜಕೀಯ ಬಿಕ್ಕಟ್ಟು: 15 ಬಿಜೆಪಿ ಶಾಸಕರನ್ನು ಉಚ್ಚಾಟಿಸಿದ ವಿಧಾನಸಭೆ ಸ್ಪೀಕರ್


