ತಮ್ಮ ಬೇಡಿಕೆಗಳು ಈಡೇರುವವರೆಗೂ ‘ದಿಲ್ಲಿ ಚಲೋ’ ಪ್ರತಿಭಟನೆ ಮುಂದುವರಿಯಲಿದೆ ಎಂದು ಶನಿವಾರ ಪುನರುಚ್ಚರಿಸಿರುವ ರೈತರು, ಫೆಬ್ರವರಿ 21ರಂದು ಖಾನೌರಿ ಗಡಿಯಲ್ಲಿ ಹರಿಯಾಣ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ ಶುಭಕರನ್ ಸಿಂಗ್ ಅವರ ಕೊನೆಯ ಪ್ರಾರ್ಥನಾ ಸಭೆ ಮಾರ್ಚ್ 3ರಂದು ನಡೆಯಲಿದೆ. ಆ ಬಳಿಕ ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಪಂಜಾಬ್-ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲಾಗುವುದು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
“ಗಡಿಯಲ್ಲಿ ಹರಿಯಾಣ ಪೊಲೀಸರು ಯಾವುದೇ ದಬ್ಬಾಳಿಕೆ ನಡೆಸದಿದ್ದರೆ ನಾವು ಶಾಂತಿಯುತ ರೀತಿಯಲ್ಲಿ ದೆಹಲಿಗೆ ಮೆರವಣಿಗೆ ನಡೆಸುತ್ತೇವೆ. ಇಲ್ಲದಿದ್ದರೆ, ಪ್ರಸ್ತುತ ಗಡಿಗಳಲ್ಲಿ ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲಾಗುವುದು. ಪಂಜಾಬ್ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಗ್ಗೂಡಿಸುತ್ತೇವೆ” ಎಂದು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಸದಸ್ಯ ರಮಣದೀಪ್ ಸಿಂಗ್ ಮಾನ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಶಂಭು ಮತ್ತು ಖಾನೌರಿಯಲ್ಲಿ ನಮ್ಮ ಒಕ್ಕೂಟಗಳು ಹೋರಾಟ ಮುಂದುವರೆಸಿದೆ. ನಾವು ಹೆಚ್ಚಿನ ಟಾರ್ಪಾಲಿನ್ ಶೀಟ್‌ಗಳು ಮತ್ತು ತಾತ್ಕಾಲಿಕ ಟೆಂಟ್‌ಗಳನ್ನು ಹಾಕಿದ್ದೇವೆ. ಭಾನುವಾರ ಮಧ್ಯಾಹ್ನ ಶುಭಕರನ್ ಅವರ ಪ್ರಾರ್ಥನಾ ಸಭೆಯ ನಂತರ ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು. ಪಂಜಾಬ್‌ನ ಪ್ರತಿಯೊಬ್ಬ ವ್ಯಕ್ತಿಯೂ ಶುಭಕರನ್ ಅವರ ಊರು ಬಟಿಂಡಾ ಜಿಲ್ಲೆಯ ಬಲ್ಲೋಹ್‌ನಲ್ಲಿ ಕೊನೆಯ ಪ್ರಾರ್ಥನಾ ಸಭೆಗೆ ಸೇರುವಂತೆ ನಾನು ಮನವಿ ಮಾಡುತ್ತೇನೆ” ಎಂದು ಕೆಎಂಎಂ ಸಂಯೋಜಕ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.
ಎಸ್‌ಕೆಎಂ (ರಾಜಕೀಯೇತರ) ಮತ್ತು ಕೆಎಂಎಂ ನೇತೃತ್ವದಲ್ಲಿ ಭಾನುವಾರ ಪ್ರಾರ್ಥನಾ ಸಭೆ ನಡೆಯಲಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶುಭಕರನ್ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಗುರುವಾರ ಅವರ ಸ್ವಗ್ರಾಮ ಬಲ್ಲೋಗೆ ಕೊಂಡೊಯ್ಯಲಾಗಿದೆ.
“ಮುಂದಿನ ದಿನಗಳಲ್ಲಿ ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು, ರಾಜಸ್ಥಾನ ಮುಂತಾದ ರಾಜ್ಯಗಳ ಪ್ರತಿಭಟನಾಕಾರರು ದೆಹಲಿಯತ್ತ ಮೆರವಣಿಗೆ ನಡೆಸಲಿದ್ದಾರೆ. ಅವರನ್ನು ಎಲ್ಲಿ ತಡೆದು ನಿಲ್ಲಿಸಲಾಗುತ್ತದೋ, ಅಲ್ಲಿಯೇ ಕುಳಿತುಕೊಂಡು ಪ್ರತಿಭಟನೆ ನಡೆಸಲಿದ್ದಾರೆ” ಎಂದು ರಮಣದೀಪ್ ಸಿಂಗ್ ಮಾನ್ ಹೇಳಿದ್ದಾರೆ.
ಬಿಕೆಯು (ಕ್ರಾಂತಿಕಾರಿ) ಪ್ರಧಾನ ಕಾರ್ಯದರ್ಶಿ ಬಲದೇವ್ ಸಿಂಗ್ ಝಿರಾ ಅವರು, “ನಮ್ಮ ದಿಲ್ಲಿ ಚಲೋ ಕರೆ ಮುಂದುವರೆಯಲಿದೆ. ಆದರೆ, ಭದ್ರತಾ ಪಡೆಗಳ ಕೈಯಲ್ಲಿ ಇನ್ನು ಮುಂದೆ ಯಾವುದೇ ಶುಭಕರನ್‌ಗಳು ಸಾಯುವುದನ್ನು ನಾವು ಬಯಸುವುದಿಲ್ಲ. ಅವರು ನಮಗೆ ಶಾಂತಿಯುತವಾಗಿ ದೆಹಲಿಗೆ ತೆರಳಲು ಅವಕಾಶ ನೀಡಿದರೆ, ನಾವು ದೆಹಲಿಗೆ ಮೆರವಣಿಗೆ ಮಾಡುತ್ತೇವೆ. ಇಲ್ಲದಿದ್ದರೆ ಗಡಿಯಲ್ಲಿ ನಮ್ಮ ಧರಣಿ ತೀವ್ರಗೊಳಿಸುತ್ತೇವೆ” ಎಂದಿದ್ದಾರೆ.
“ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ದಬ್ಬಾಳಿಕೆಯ ವಿಧಾನಗಳನ್ನು ಬಳಸುತ್ತಿರುವ ಕೇಂದ್ರ ಮತ್ತು ಹರಿಯಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಕೆಯು-ಏಕ್ತಾ (ಆಜಾದ್) ಅಧ್ಯಕ್ಷ ಜಸ್ವಿಂದರ್ ಸಿಂಗ್ ಲೊಂಗೊವಾಲ್, “ಇದು ಕೇವಲ ಅಶ್ರುವಾಯು ಅಥವಾ ಲಘು ಲಾಠಿ ಚಾರ್ಜ್ ಅನ್ನು ಬಳಸುವ ಪ್ರಶ್ನೆಯಲ್ಲ. ಪೊಲೀಸರು ವಿಷಕಾರಿ ಅನಿಲಗಳನ್ನು ಬಳಸಿರುವುದನ್ನು ನಾವು ನೋಡಿದ್ದೇವೆ. ನಾವು ಶುಭಕರನ್ ಅನ್ನು ಹೇಗೆ ಕಳೆದುಕೊಂಡೆವು ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪ್ರತಿಭಟನಾ ನಿರತ ರೈತರ ಪಾಸ್‌ಪೋರ್ಟ್ ರದ್ದತಿಗೆ ಮುಂದಾದ ಹರಿಯಾಣ ಸರ್ಕಾರ; ಕಾನೂನು ಏನು ಹೇಳುತ್ತದೆ?


