ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪೋಸ್ಟರ್‌ಗಳು “ಮೋದಿ ಕಾ ಅಸಲಿ ಪರಿವಾರ್” (ಮೋದಿಯವರ ನಿಜವಾದ ಕುಟುಂಬ) ಎಂಬ ಶೀರ್ಷಿಕೆಯನ್ನು ಹೊಂದಿದ್ದು, ಕೆಳಭಾಗದಲ್ಲಿ ‘ಭಾರತೀಯ ಯುವ ಕಾಂಗ್ರೆಸ್’ ಎಂದು ಬರೆಯಲಾಗಿದೆ. ಈ ಕುರಿತು ದೆಹಲಿಯ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದಿಲ್ಲಿ ಪ್ರಿವೆನ್ಶನ್ ಆಫ್ ಡಿಫೇಸ್‌ಮೆಂಟ್ ಆಫ್ ಪ್ರಾಪರ್ಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ನವದೆಹಲಿ ಮುನ್ಸಿಪಲ್ ಕೌನ್ಸಿಲ್‌ನ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಪೋಸ್ಟರ್‌ಗಳಲ್ಲಿ ಪ್ರಕಾಶಕರ ಹೆಸರು ಅಥವಾ ಅದನ್ನು ಹಾಕಿದ ವ್ಯಕ್ತಿಯ ಹೆಸರಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಟ್ನಾದಲ್ಲಿ ಕಳೆದ ರವಿವಾರ ನಡೆದ ಸಮಾವೇಶದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಿ ಮೋದಿಗೆ ಕುಟುಂಬವಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಸೋಮವಾರ ಪ್ರತಿಕ್ರಿಯಿಸಿದ್ದ ಪ್ರಧಾನಿ, 140 ಕೋಟಿ ದೇಶವಾಸಿಗಳು ನನ್ನ ಪರಿವಾರ ಎಂದಿದ್ದರು. ಇದರ ಬೆನ್ನಲ್ಲೇ ಹಲವು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳ ಬಯೋದಲ್ಲಿ ʼಮೋದಿ ಕಾ ಪರಿವಾರ್ʼ ಎಂದು ಸೇರಿಸಿದ್ದರು. ಹಲವಾರು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಬಯೋದಲ್ಲಿ “ಮೋದಿ ಕಾ ಪರಿವಾರ್” ಎಂದು ಸೇರಿಸಿರುವುದರಿಂದ, ಪರಾರಿಯಾಗಿರುವ ಉದ್ಯಮಿಗಳಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಕೂಡ ಅವರ ಕುಟುಂಬದಲ್ಲಿದ್ದಾರೆಯೇ ಎಂದು ಕಾಂಗ್ರೆಸ್ ಮಂಗಳವಾರ ಕೇಳಿತ್ತು.
ಈ ಮೊದಲು ‘ಮೋದಿ ಕಾ ಪರಿವಾರ್’ ಅಭಿಯಾನಕ್ಕೆ ಕಾಂಗ್ರೆಸ್ ತಿರುಗೇಟು ನೀಡಿತ್ತು, ‘ಹಣದುಬ್ಬರ, ನಿರುದ್ಯೋಗ, ಆರ್ಥಿಕ ಅಸ್ಥಿರತೆಗಳು ಮತ್ತು ಧ್ರುವೀಕರಣದಿಂದ ಅವರ ಆಡಳಿತದ ಕೊನೆಯ ದಶಕವು ನಿರಂತರ ಸಮಸ್ಯೆಗಳಿಂದಾಗಿ ಅವರ ಸ್ವಂತ ಕುಟುಂಬಕ್ಕೆ (ನಾಗರಿಕರಿಗೆ) ಅನ್ಯಾಯ ಕಾಲ’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದರು.
ನಮ್ಮ ಆದ್ಯತೆಯು ಸಹ ನಮ್ಮ ದೇಶದ ಜನರು; ನಾವು ಹಣದುಬ್ಬರ, ನಿರುದ್ಯೋಗ, ಆರ್ಥಿಕ ಅಸ್ಥಿರತೆ ಮತ್ತು ಧ್ರುವೀಕರಣದ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. 140 ಕೋಟಿ ಭಾರತೀಯರು ಅವರ ಕುಟುಂಬವಾಗಿದ್ದರೆ, ಅವರು ಅವರ ನಂಬಿಕೆಯನ್ನು ಏಕೆ ಮುರಿದರು? ಅವರು ಏಕೆ ಜನರಿಗೆ ಅನ್ಯಾಯ ಮಾಡಿದ್ದಾರೆ? ಕಳೆದ 10 ವರ್ಷಗಳು ಅವರ ಸ್ವಂತ ಕುಟುಂಬಕ್ಕೆ ‘ಅನ್ಯಾಯ ಕಾಲ’ ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದರು. ಪ್ರಧಾನಿಯನ್ನು ವಿಶ್ವಗುರು ಎಂದು ಘೋಷಿಸಿಕೊಳ್ಳುವ ‘ಮಾರ್ಕೆಟಿಂಗ್ ವ್ಯಕ್ತಿ’ ಎಂದು ಲೇವಡಿ ಮಾಡಿದ ರಮೇಶ್, ‘ಒಬ್ಬ ವ್ಯಕ್ತಿಯು ಗೌರವವನ್ನು ಬಯಸಿದರೆ, ಆತ ಗೌರವಯುತವಾಗಿ ವರ್ತಿಸಬೇಕು’ ಎಂದು ಹೇಳಿದ್ದರು. ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ವ್ಯಕ್ತಿ, ಆದರೆ ಅವರ ವ್ಯಕ್ತಿತ್ವ ಮತ್ತು ಅವರ ಕೆಲಸವು ಸಂಪೂರ್ಣವಾಗಿ ಅನ್ಯಾಯವಾಗಿದೆ. ಅವರು ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್‌ಗಾಗಿ ಅಲ್ಲಿ ಕುಳಿತುಕೊಂಡಿದ್ದಾರೆ; ಸ್ವಯಂ ಘೋಷಿತ ವಿಶ್ವಗುರು ಆಗಿದ್ದಾರೆ. ನಾವು ಪ್ರಧಾನಿ ಹುದ್ದೆಯನ್ನು ಗೌರವಿಸುತ್ತೇವೆ. ಆದರೆ ಒಬ್ಬ ವ್ಯಕ್ತಿ ಗೌರವವನ್ನು ಬಯಸಿದರೆ, ಅವರು ಗೌರವಯುತವಾಗಿ ವರ್ತಿಸಬೇಕು’ ಎಂದು ಅವರು ಹೇಳಿದ್ದರು.
ಇದನ್ನು ಓದಿ: ‘ಇಂಡಿಯಾ ಔಟ್’ ಅಭಿಯಾನ: ಏನಿದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ?


